ಶನಿವಾರ, ಆಗಸ್ಟ್ 11, 2018

ಯತಿರಾಜ ವೀರಾಂಬುಧಿ


ಚಿತ್ರ: ಯತಿರಾಜ ವೀರಾಂಬುಧಿ ಅವರು ಯಂಡಮೂರಿ ವೀರೇಂದ್ರನಾಥ್ ಅವರೊಂದಿಗೆ


ಯತಿರಾಜ ವೀರಾಂಬುಧಿ

ಇಂದು ನಮ್ಮೆಲ್ಲರ ಆತ್ಮೀಯರೂ,  ವಿಭಿನ್ನ ನೆಲೆಗಳ ವಿಶಿಷ್ಟ ಬರಹಗಾರರಲ್ಲಿ ಒಬ್ಬರೂ ಆದ ಯತಿರಾಜ ವೀರಾಂಬುಧಿ ಅವರ ಜನ್ಮದಿನ.  ಅವರು ಜನಿಸಿದ ದಿನ ಆಗಸ್ಟ್ ೧೧, ೧೯೫೭. 

ಮೈಸೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ  ಎಲೆಕ್ಟ್ರಿಕಲ್ ಇಂಜಿನಿಯರ್.   ಅವರು ಬೆಂಗಳೂರು ಮತ್ತು ಒಮಾನ್ ದೇಶದ ಮಸ್ಕತ್ನಲ್ಲಿ ಒಟ್ಟಾರೆ ಸುಮಾರು ಮೂರೂವರೆ ದಶಕಗಳ ಕಾಲ  ವೃತ್ತಿ ಜೀವನವನ್ನು ನಡೆಸಿದವರು.  ಬದುಕನ್ನು ಕೇವಲ ವೃತ್ತಿ ಮತ್ತು ಗಳಿಕೆಗೆ ಸೀಮಿತಗೊಳಿಸಿದ  ವೀರಾಂಬುಧಿ, ಸಾಹಿತ್ಯದ ಓದು, ಸಂಗೀತದ ಆಲಿಕೆ ಹೀಗೆ ವಿಭಿನ್ನ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮ ಆಸಕ್ತಿ ಮತ್ತು ಅಭಿವ್ಯಕ್ತಿಗಳನ್ನು ಅರಸಿ ಹೊರಟವರು.   

ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ  ಸೃಜನಶೀಲ  ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ’ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ!.  ಅವರ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಮಂಗಳ  ಕೃತಿಯಲ್ಲಿ   ಪ್ರಕಟಗೊಂಡಿತು. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿಯಾಗಿ ಮೂಡಿಬಂತು.  ಅವರ ಅನೇಕ ಕತೆ, ಕಾದಂಬರಿಗಳು ಕನ್ನಡದ ಎಲ್ಲ ಜನಪ್ರಿಯ ನಿಯತಕಾಲಿಕಗಳಲ್ಲಿ ನಿರಂತರವಾಗಿ ಹರಿದಿದೆ.   ಅವರ ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿರುವುದು ವಿಶೇಷವಾಗಿದ್ದು, ಓದುಗ ಬಳಗದಲ್ಲಿ ಗಳಿಸಿಕೊಂಡಿರುವ ಜನಪ್ರಿಯತೆಗೂ  ನಿದರ್ಶನವಾಗಿದೆ.   ಇದುವರೆವಿಗೆ ಯತಿರಾಜ ವೀರಾಂಬುಧಿ ಅವರ   ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು ಪ್ರಕಟಗೊಂಡಿವೆ.  ಇದಲ್ಲದೆ ಜನಪ್ರಿಯ ಲೇಖಕರಾದ ಯಂಡಮೂರಿ ವೀರೇಂದ್ರನಾಥ್ ಅವರ ವ್ಯಕ್ತಿತ್ವ ವಿಕಸನದ ಕೃತಿಯ  ಕನ್ನಡ ಅನುವಾದವಾದ ’ಕವೆಯಿಂದ ಶಿಖರಕ್ಕೆ’ ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ ಪ್ರಕಟಗೊಂಡಿತ್ತಲ್ಲದೆ,  ಪುಸ್ತಕವಾಗಿ ಸಹಾ ಬಹು ಜನಪ್ರಿಯಗೊಂಡಿದೆ.

ಅಂಕಣಕಾರರಾಗಿಯೂ ಹೆಸರು ಮಾಡಿರುವ ಯತಿರಾಜ ವೀರಾಂಬುಧಿ ಅವರ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿರುವ   ’ಮನೆ ಮಾತು’, ’ಮಾಸದ ಮಾತು’, ’ಮಾಸದ ಸುಖ’, ’ಮಾಸದ ದಾಸವಾಣಿ’, ’ಮನೋಲ್ಲಾಸ’ ಮುಂತಾದವು  ಓದುಗರಿಗೆ ಪರಿಚಿತವಾಗಿವೆ.   ಸದಾ ನಗೆಮೊಗದ ಯತಿರಾಜ ವೀರಾಂಬುಧಿ ಅವರ ಹಾಸ್ಯ ಬರಹಗಳು   ’ವೀರಾಂಬುಧಿ ಜೋಕ್ಸ್’  ಕೃತಿಯಲ್ಲಿ ಲಭ್ಯ.  ಅಂತರಜಾಲದಲ್ಲಿ  ’ಯತೀ ಸ್ವಂತಿ’ ಎಂಬ ಶೀರ್ಷಿಕೆಯಲ್ಲಿ  ಅವರು ತಮ್ಮ   ಬದುಕಿನ ವಿವಿಧ ನೆಲೆಗಳನ್ನು  ಸುದೀರ್ಘವಾಗಿ ಪರಿಚಯಿಸುತ್ತಿದ್ದಾರೆ.   

ಹೀಗೆ ನಿರಂತರವಾಗಿ ತಮ್ಮ ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಗಳಿಂದ ಎಲ್ಲೆಡೆ ಆತ್ಮೀಯವಾಗಿ ಸಲ್ಲುತ್ತಿರುವ ಯತಿರಾಜ ವೀರಾಂಬುಧಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

Tag: Yathiraj Veerambudhi

ಕಾಮೆಂಟ್‌ಗಳಿಲ್ಲ: