ಶುಕ್ರವಾರ, ಸೆಪ್ಟೆಂಬರ್ 21, 2018

ಸದಾಶಿವ ಬ್ರಹ್ಮಾವರ


ಸದಾಶಿವ ಬ್ರಹ್ಮಾವರ ನಿಧನ
ಸಾತ್ವಿಕ ಹಿರಿಯರ ಪಾತ್ರಗಳಲ್ಲಿ ಪ್ರೀತಿ ಹುಟ್ಟಿಸುವಂತೆ ಕಾಣಬರುತ್ತಿದ್ದ ನಟ ಸದಾಶಿವ ಬ್ರಹ್ಮಾವರ ಅವರು ನಿಧನರಾಗಿದ್ದಾರೆ.

ಇಂದು ಸಾವು ಕೂಡಾ ಮಾಧ್ಯಮಗಳಲ್ಲಿ ಬಣ್ಣ ಬಣ್ಣದ ಸುದ್ಧಿಯಾಗುತ್ತದೆ. ಹೀಗೆ ತಮ್ಮ ಸಾವು ಒಂದು ಸುದ್ಧಿಯಾಗಬಾರದು ಎಂದು ಈ ಹಿರಿಯರು ತಾಕೀತು ಮಾಡಿದ್ದರಂತೆ. ಹೀಗಾಗಿ ಅವರ ಅಂತ್ಯಕ್ರಿಯೆ ಮುಗಿದ ಒಂದು ದಿನದ ನಂತರ ಮಾಧ್ಯಮಗಳಲ್ಲಿ ಸದ್ದಿಲ್ಲದೇ ಈ ಸುದ್ಧಿ ಬಂದಿದೆ. ಬಹುಶಃ ಕೆಲವೇ ತಿಂಗಳುಗಳ ಹಿಂದೆ ಅವರ ದೈಹಿಕ-ಮಾನಸಿಕ-ಆರ್ಥಿಕ-ಕೌಟುಂಬಿಕ ಸ್ಥಿತಿಗತಿಗಳ ಬಗ್ಗೆ ಬಂದ ಕೆಲವು ಸುದ್ಧಿಗಳು ಮತ್ತು ಕೆಲವರ ಮೊಸಳೆ ಕಣ್ಣೀರುಗಳು ಅವರಿಗೆ ಹಿಂಸೆ ಉಂಟು ಮಾಡಿರಲಿಕ್ಕೂ ಸಾಕು.
ಬಹಳ ಚಿತ್ರಗಳಲ್ಲಿ ಅವರನ್ನು ನೋಡಿದ್ದು, ಇಷ್ಟಪಟ್ಟಿದ್ದು ನೆನಪಾಗುತ್ತೆ. ಹೆಚ್ಚಿಗೆ ನನ್ನ ನೆನಪಲ್ಲಿ ಉಳಿದಿರೋದು ಬೆಟ್ಟದ ಹೂವು, ಹಾಲುಂಡ ತವರು. ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದರು.
ವಯಸ್ಸಾದ ಮೇಲೆ ಎಲ್ರೂ ಜಾಗ ಖಾಲಿ ಮಾಡಲೇಬೇಕು. ಬಣ್ಣದ ಪ್ರಚಾರವುಳ್ಳ ಲೋಕದಲ್ಲಿದ್ದೂ,
ಸದ್ದುಗದ್ದಲವಿಲ್ಲದೆ ತಾವು ಬಹುತೇಕವಾಗಿ ಕಲಾಜೀವನದಲ್ಲಿ ಬಿಂಬಿಸಿದ್ದ ಸೌಮ್ಯಗತಿಯಲ್ಲೇ ಈ ಲೋಕದಿಂದ ನಿರ್ಗಮಿಸಿದ ಸದಾಶಿವ ಬ್ರಹ್ಮಾವರ ಎಂಬ ಚೇತನಕ್ಕೆ ಪ್ರೀತಿಯ ನಮಸ್ಕಾರ. ಈ ಕ್ಷಣದಲ್ಲಿ ಹುಟ್ಟುವ ಪ್ರೀತಿ ಅನ್ನೋದು ಬಿಟ್ಟು ಉಳಿದಂತೆ ಏನೇ ಮಾತು ಹೇಳಲಿಕ್ಕೆ ಹೋದರೂ ಅದು ನಮ್ಮ ಬದುಕಿನಂತೆಯೇ ನಶ್ವರ - ವ್ಯರ್ಥ.

Tag: Sadashiva Brahmavar

ಕಾಮೆಂಟ್‌ಗಳಿಲ್ಲ: