ಶನಿವಾರ, ಸೆಪ್ಟೆಂಬರ್ 29, 2018

ಎನ್. ಎಸ್. ಚಿದಂಬರರಾವ್


ಎನ್. ಎಸ್. ಚಿದಂಬರರಾವ್

ಕನ್ನಡ ಸಾಹಿತ್ಯಲೋಕದ ಮಹತ್ವದ ಕತೆಗಾರರಲ್ಲಿ ಎನ್. ಎಸ್. ಚಿದಂಬರರಾವ್ ಅವರ ಹೆಸರು ರಾರಾಜಿಸುವಂತದ್ದು.  ಚಿದಂಬರರಾವ್ ಅವರು  1936ವರ್ಷದ ಸೆಪ್ಟೆಂಬರ್ 28ರ ದಿನದಂದು ದಾವಣಗೆರೆ ಬಳಿಯ ಹದಡಿ ಎಂಬಲ್ಲಿ ನೂಲೇನೂರು ಶಂಕರಪ್ಪ ಮತ್ತು ಸೀತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. 

ಚಿದಂಬರರಾವ್ ಅವರ ಪ್ರಾರಂಭಿಕ ಶಿಕ್ಷಣ ಚನ್ನಗಿರಿಯಲ್ಲಿ ಏರ್ಪಟ್ಟಿತು.  ಶಾಲೆಯ ಓದಿನಲ್ಲಿ ಸದಾ ಮುಂದಿದ್ದ ಅವರದ್ದು ಎಲ್ಲ ಪ್ರಮುಖ ಘಟ್ಟಗಳ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಸಾಧನೆ.  ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ,  ಬಿ.ಎಡ್, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಹಿಂದೀ ರಾಷ್ಟ್ರಭಾಷಾ ಪ್ರಾವೀಣ್ಯತೆ ಮುಂತಾದವು ಚಿದಂಬರ ರಾವ್ ಅವರ ಶೈಕ್ಷಣಿಕ ಸಾಧನೆಗಳು.    

ಚಿಕ್ಕಜಾಜೂರು ಎಂಬಲ್ಲಿ ಹಿಂದೀ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಚಿದಂಬರ ರಾಯರು, ರಾಘವೇಂದ್ರ ಗುರೂಜಿ ಅವರ ಅಪೇಕ್ಷೆಯ ಮೇರೆಗೆ, ಸರ್ಕಾರಿ ಕೆಲಸವನ್ನು ತೊರೆದು, ಮಲ್ಲಾಡಿಹಳ್ಳಿಯ ಶಿಕ್ಷಣ ಸಂಸ್ಥೆಯ ಸೇವೆಗೆ ನಿಂತರು. ಅಲ್ಲಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಮುಖ್ಯಸ್ಥರಾಗಿ  ನಿಷ್ಟಾವಂತ ಸೇವೆ ಸಲ್ಲಿಸಿದ್ದಲ್ಲದೆ, ನಿವೃತ್ತಿಯ ನಂತರವೂ ಆ ಸಂಸ್ಥೆಯ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 

ಅಪಾರ ಓದಿನ ಅಭಿರುಚಿಯಿದ್ದ  ಚಿದಂಬರ ರಾವ್ ಅವರ ಅಧ್ಯಯನ ವ್ಯಾಪ್ತಿ ಎಲ್ಲ ಎಲ್ಲೆಗಳನ್ನೂ ಮೀರಿದ್ದಾಗಿದ್ದು ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅನ್ಯ ಭಾರತೀಯ ಭಾಷಾ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ ಹೀಗೆ ಎಲ್ಲವನ್ನೂ ಒಳಗೊಂಡಿತ್ತು. 

‘ಸುಧಾ’ ವಾರಪತ್ರಿಕೆಯಲ್ಲಿ ‘ಶಾಂತಿ' ಎಂಬ ಕಥೆ ಪ್ರಕಟಗೊಂಡಾಗ ಸಿಕ್ಕ ವ್ಯಾಪಕ ಜನಪ್ರಿಯತೆಯಿಂದ  ಎಲ್ಲ ನಿಯತಕಾಲಿಕೆಗಳಲ್ಲೂ  ಅವರ  ಕಥೆಗಳಿಗಾಗಿನ ಅಪೇಕ್ಷಣೆ ತೀವ್ರವಾಗಿರುತ್ತಿತ್ತು.  ಹೀಗೆ ಅವರು ಬರೆದ ಕತೆಗಳ ಸಂಖ್ಯೆ 500ಕ್ಕೂ ಹೆಚ್ಚಿನದು.  ಇವೆಲ್ಲ  ಸರಳ ಕತೆಗಾರಿಕೆಯ  ವೃತ್ತಿ ಮನೋಧರ್ಮದಲ್ಲಿ ಮೂಡಿದ ಕಾಟಾಚಾರವಾಗಿರದೆ ಮೌಲ್ಯಯುತ ಬರಹಗಳಾಗಿದ್ದವು.  ಚಿದಂಬರ ರಾವ್ ಅವರ ಈ ಕತೆಗಳು ‘ಸರಿಯುವ ತೆರೆಗಳು, ಸಂದಿಗ್ಧ, ಶರನ್ನವರಾತ್ರಿ, ಸಿಗ್ನಲ್ ಬೀಳಲಿಲ್ಲ’ ಮುಂತಾದ ಕಥಾಸಂಕಲನಗಳಲ್ಲಿಮೂಡಿವೆ. ‘ಅಲೆಗಳು’ ಅವರ ಸಂಪಾದಿತ ಕೃತಿ.  ‘ಬೆಂಕಿಯ ನೆರಳು’ ಮತ್ತು  ನಿರ್ದೇಶನ’ ಅವರ ಕಾದಂಬರಿಗಳು.  ರಾಷ್ಟ್ರೋತ್ತಾನಕ್ಕಾಗಿ ‘ಎಚ್ಚಮ್ಮ ನಾಯಕ’  ಜೀವನ ಚರಿತ್ರೆಯಾಗಿ  ಮೂಡಿಬಂದಿದೆ. ಇದಲ್ಲದೆ ಮಲ್ಲಾಡಿಹಳ್ಳಿ ರಾಘವೇಂದ್ರ ಗುರೂಜಿಯವರ ಆತ್ಮಕಥೆಯನ್ನೂ ನಿರೂಪಿಸಿದ್ದಾರೆ.

ಚಿದಂಬರ ರಾವ್ ಅವರು ತಮ್ಮ ಸಿರಿಕಂಠದಿಂದ ನೂರಾರು ಗಮಕವಾಚನ ಕಾರ‍್ಯಕ್ರಮಗಳನ್ನೂ ನಡೆಸಿಕೊಡುತ್ತಿದ್ದರು. ನೂರಾರು ಭಕ್ತಿ ಗೀತೆಗಳಿಗೆ ರಾಗ ಸಂಯೋಜನೆ ಹಾಗೂ ಗಾಯನವನ್ನೂ ಮಾಡಿದ್ದರು. ನಾಟಕಾಭಿನಯ ಭಾಷಣಕಲೆಯಲ್ಲೂ ಅವರದ್ದು ಗಣನೀಯ ಪ್ರತಿಭೆಯಾಗಿತ್ತು.   

ಈ ಮಹಾನ್ ಸಾಧಕರು ಜನವರಿ 6, 2001ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮಸಾಷ್ಟಾಂಗ ನಮನ.  

Tag: N.S. Chidambara Rao

1 ಕಾಮೆಂಟ್‌:

Unknown ಹೇಳಿದರು...

ಅಣ್ಣ ನ ನೆನಪು ನಿರಂತರ....🙏🙏🙏