ಬುಧವಾರ, ಡಿಸೆಂಬರ್ 5, 2018

ಗಿರೀಶ್ ಕಾಸರವಳ್ಳಿಗಿರೀಶ್ ಕಾಸರವಳ್ಳಿ

ಗಿರೀಶ್ ಕಾಸರವಳ್ಳಿ ಅಂದರೆ ಕನ್ನಡಿಗರ ಹೃದಯ ಉಬ್ಬುತ್ತದೆ.  ಅವರ ಚಿತ್ರಗಳನ್ನು ಜನ ಸಾಮಾನ್ಯರು ನೋಡಿದ್ದಾರೋ ಇಲ್ಲವೋ ಅವರ ಹೆಸರಂತೂ ಜನಮಾನಸದಲ್ಲಿ ಇನ್ನ್ಯಾರದೂ ಇಲ್ಲದಷ್ಟು ಉಕ್ಕಿ ಹರಿಯುತ್ತದೆ.  ಯಾರು ತನ್ನ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾರೋ, ಪ್ರೀತಿಯಿಂದ ಮಾಡುತ್ತಾರೋ ಅವರ ಹೆಸರು ಲೋಕಮಾನ್ಯ.  ಅವರ ಸಿನಿಮಾಗಳೆಲ್ಲಾ ರಾಷ್ಟ್ರೀಯ ಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದಿವೆ.  ಸತ್ಯಜಿತ್ ರೇ, ಮೃಣಾಲ್ ಸೇನ್, ಅಡೂರು ಗೋಪಾಲಕೃಷ್ಣನ್ ಅಂತಹ ಶ್ರೇಷ್ಠರ ಹೆಸರುಗಳ ಜೊತೆಯಲ್ಲಿ ನಿರಂತರವಾಗಿ ಉದ್ಘರಿಸಲ್ಪಡುವ ಪ್ರಶಸ್ತಿ ವಿಜೇತರ ಹೆಸರುಗಳ ಸಾಲಿನಲ್ಲಿ  ಗಿರೀಶ್ ಕಾಸರವಳ್ಳಿಯವರ ಹೆಸರು ಚಿರವಿರಾಜಿತ.  ಈಗಾಗಲೇ ನಾಲ್ಕು ಬಾರಿ ಅವರ ಚಿತ್ರಗಳು ಸ್ವರ್ಣಕಮಲ ಪ್ರಶಸ್ತಿ ಗಳಿಸಿವೆ.

ಗಿರೀಶ್ ಕಾಸರವಳ್ಳಿ ಅವರು ಹುಟ್ಟಿದ ದಿನ ಡಿಸೆಂಬರ್ 3, 1950.  ಅವರ ಊರು ಮಲೆನಾಡಿನ ಒಂದು ಹಳ್ಳಿ.  ಗಿರೀಶರು ಮೂಲತಃ ವಿಜ್ಞಾನದ ವಿದ್ಯಾರ್ಥಿ. ಚಿಕ್ಕಂದಿನಲ್ಲಿ ಅವರಿಗೆ  ಸಿನೆಮಾದಲ್ಲಿ ಅಂಥಾ ಒಲವೇನೂ ಇರಲಿಲ್ಲ.  ಓದಿದ್ದು ಫ಼ಾರ್ಮಸಿ.  1970ರ ದಶಕದಲ್ಲಿ  ಕನ್ನಡ ಸಾಹಿತ್ಯ ಮತ್ತು ಉಳಿದ ಕಲಾಕ್ಷೇತ್ರಗಳಲ್ಲಿ ಹೊಸ ತರಹದ ಪ್ರಯೋಗಗಳು ಪ್ರಾರಂಭಗೊಂಡು  ‘ಸಂಸ್ಕಾರ’, ‘ವಂಶವೃಕ್ಷ’ದಂತಹ ಚಿತ್ರಗಳು; ರಂಗಭೂಮಿಯಲ್ಲಿ ಬಿ.ವಿ.ಕಾರಂತರಿಂದ ಹೊಸ ಪ್ರಯೋಗಗಳು, ನವ್ಯ ಚಳುವಳಿಗಳನ್ನು  ನೋಡಿದ ಗಿರೀಶರಿಗೆ ಆ ವಿಷಯಗಳ ಕಡೆ  ಆಸಕ್ತಿ ಬಂತು.  ನೀನಾಸಂ ಕೆ. ವಿ. ಸುಬ್ಬಣ್ಣನವರ ಸಂಬಂಧಿಯಾದ ಗಿರೀಶರು ಸುಬ್ಬಣ್ಣನವರಿಂದ ಚಲನಚಿತ್ರ ತರಬೇತಿ ಸಂಸ್ಥೆಗಳ  ಬಗ್ಗೆ  ಸ್ವಲ್ಪ ತಿಳಿದುಕೊಂಡು, ಪೂನಾದ ರೀಜನಲ್ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರವೇಶ ಪಡೆದರು.  ಫಿಲ್ಮ್ ಇನ್ಸ್ಟಿಟ್ಯೂಟಿನಲ್ಲಿದ್ದಾಗಲೇ ಕಾರಂತರ ಜೋಮನದುಡಿ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು.

ಸದಾ ತೇಜಸ್ಸಿನಿಂದ ಹೊಳೆಯುವ ಗಿರೀಶರು,  ರಾಜಾಜಿನಗರದ ಬೀದಿಗಳಲ್ಲಿ ಹಮ್ಮು ಬಿಮ್ಮುಗಳಿಲ್ಲದೆ  ಸಹಜವಾಗಿ ತಿರುಗುತ್ತಿದ್ದುದನ್ನು ಗಮನಿಸುತ್ತಿದ್ದ ನಮಗೆ, ಇವರೇಕೆ ಸಿನಿಮಾ ಹೀರೋ ಆಗುತ್ತಿಲ್ಲ ಅನಿಸುತ್ತಿತ್ತು.  ಗಿರೀಶರಿಗೆ ಸಿನೆಮಾ ಅಂದರೆ ನಿರ್ದೇಶಕನ ಕ್ಷೇತ್ರ ಅನ್ನೋ ಭಾವನೆ. ಹಾಗಾಗಿ ಅವರಿಗೆ ಒಬ್ಬ ನಟನಾಗುವುದಾಗಲೀ  ಅಥವಾ ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಲೀ  ರುಚಿಸಲಿಲ್ಲ.  ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಪ್ರೀತಿ ಉಳ್ಳ ಗಿರೀಶರಿಗೆ,  ಕನ್ನಡದಲ್ಲಿ ಇಷ್ಟು ಅದ್ಭುತವಾದ ಸಾಹಿತ್ಯ ಇದ್ದೂ ಅವನ್ನು  ಸಿನೆಮಾ ಮಾಡುತ್ತಿಲ್ಲ ಎಂಬ ಕೊರತೆ ಕಾಡುತ್ತಿತ್ತು.  ಹೀಗಾಗಿ ತಮಗೆ  ಇಷ್ಟವಾದ ಕಾದಂಬರಿಗಳನ್ನು,  ಕಥೆಗಳನ್ನ ಸಿನೆಮಾ ಮಾಡಬೇಕು ಎನ್ನುವುದು ಗಿರೀಶ್ ಕಾಸರವಳ್ಳಿಯವರ ಪ್ರಮುಖ ಆದ್ಯತೆಯಾಗುತ್ತಾ ಬಂತು.

ಗಿರೀಶ್ ಕಾಸರವಳ್ಳಿಯವರು ಮೊದಲು ಆಯ್ದುಕೊಂಡದ್ದು ಯು.ಆರ್. ಅನಂತಮೂರ್ತಿಯವರ ‘ಘಟಶ್ರಾದ್ಧ’ ಕಥೆಯನ್ನು.  ಅಂದಿನ ದಿನದಲ್ಲಿ ಆ ಚಿತ್ರ ಪ್ರೇಕ್ಷಕರಿಂದ ಮಾತ್ರವಲ್ಲದೆ  ‘ಸ್ವರ್ಣ ಕಮಲ ಪ್ರಶಸ್ತಿ’ ಒಳಗೊಂಡಂತೆ  ವಿವಿಧ  ರಾಷ್ಟ್ರೀಯ ಪ್ರಶಸ್ತಿಗಳು, ರಾಜ್ಯಮಟ್ಟದ ಪ್ರಶಸ್ತಿಗಳು, ಅಂತರರಾಷ್ಟ್ರೀಯ ಮಟ್ಟದ ಗೌರವಗಳನ್ನು ತನ್ನದಾಗಿಸಿಕೊಂಡು ಕನ್ನಡ ಚಿತ್ರರಂಗದ ಗೌರವಕ್ಕೆ ವಿಶೇಷ ಕೋಡು ತರಿಸಿತು. 

ಘಟಶ್ರಾದ್ಧ ಬಂದ ಹತ್ತು  ವರ್ಷದ ಮೇಲೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಮತ್ತೊಂದು ಚಿತ್ರ ‘ತಬರನ ಕಥೆ’ ಬಂತು.  ಈ ಮಧ್ಯದಲ್ಲಿ ಆಕ್ರಮಣ, ಮೂರು ದಾರಿಗಳು ಚಿತ್ರಗಳನ್ನು ನಿರ್ದೇಶಿಸಿದ್ದರು.  ಮುಂದೆ ಎರಡು ಮೂರು ವರ್ಷಕ್ಕೊಮ್ಮೆ ಚಿತ್ರ ಮಾಡಿಕೊಂಡು ಅವರು ಕನ್ನಡಕ್ಕಾಗಿ ಪ್ರಶಸ್ತಿ ಗೌರವಗಳನ್ನು ನಿರಂತರವಾಗಿ ತರುತ್ತಲೇ ಇದ್ದಾರೆ.  ದ್ವೀಪ, ತಾಯಿ ಸಾಹೇಬ, ನಾಯಿ ನೆರಳು, ಹಸೀನ, ಗುಲಾಬಿ ಟಾಕೀಸ್, ಕೂರ್ಮಾವತಾರ ಮುಂತಾದ ಚಿತ್ರಗಳು ಅವರಿಗೆ ಬೇರೆ ಬೇರೆ ಕಾರಣಗಳಿಗಾಗಿ ಖುಶಿ ಕೊಟ್ಟಿವೆ. “ಘಟಶ್ರಾದ್ಧ ಪ್ರಾಯಶಃ ಚೊಚ್ಚಲ ಕೃತಿಯಾಗಿದ್ದಕ್ಕೆ ನೆನಪಿನಲ್ಲಿ ಉಳಿದಿದ್ದರೆ. ‘ದ್ವೀಪ’ ದಲ್ಲಿ ಅದರ ಓಟ, ಒಟ್ಟಾರೆ ಆಕೃತಿ ಒಂಥರ ಖುಶಿ ಕೊಡ್ತು. ‘ತಾಯಿ ಸಾಹೇಬ’ ಕಥಾವಸ್ತುವಿನ ನಿರ್ವಹಣೆಯಾದ ದೃಷ್ಟಿಯಲ್ಲಿ ಖುಶಿ ಕೊಡ್ತು. ‘ನಾಯಿ ನೆರಳು’ ಅದರ ಮುಂಚಿನ ಚಿತ್ರಗಳಿಗಿಂತ ಭಿನ್ನವಾಗಿ ಒಬ್ಬ ವ್ಯಕ್ತಿಯ ನೆಲೆಯ ನಿಟ್ಟಿನಲ್ಲಿ ರಚಿಸಿದ್ದು, ಅದರಿಂದ ತೃಪ್ತಿ ಕೊಡ್ತು.  ‘ಗುಲಾಬಿ ಟಾಕೀಸ್’ ಒಂದು ಪರಿಪೂರ್ಣ ಸಿನೆಮಾ ಅನ್ನುವ ಪ್ರತಿಕ್ರಿಯೆ ಬಂದಾಗ ಇನ್ನೊಂದು ರೀತಿ ಖುಶಿ ಕೊಡ್ತು.” ಹೀಗೆ ತಮ್ಮ ತೃಪ್ತಿಯ ಜಾಡನ್ನು ಗಿರೀಶ್ ಕಾಸರವಳ್ಳಿ  ಗುರುತಿಸಿಕೊಳ್ಳುತ್ತಾ ಹೋಗುತ್ತಾರೆ.  ಅವರ ಒಂದು ಚಿತ್ರ ಇನ್ನೊಂದರಂತಿರುವುದಿಲ್ಲ.  ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ ರಾಮಚಂದ್ರ ಅಂತಹ ಶ್ರೇಷ್ಠ ಛಾಯಾಗ್ರಾಹಕ ಹಾಗೂ ಹಲವಾರು ತಂತ್ರಜ್ಞರು ಪ್ರಶಸ್ತಿ ಪಡೆದ ಹಾಗೆ, ಅವರ ಚಿತ್ರಗಳಲ್ಲಿ ನಟಿಸಿದ ‘ತಬರನ ಕಥೆ’ಯ ಚಾರು ಹಾಸನ್, ‘ತಾಯಿ  ಸಾಹೇಬ’ದ ಜಯಮಾಲಾ, ‘ಹಸೀನಾ’ ಚಿತ್ರದ ತಾರಾ, ‘ಗುಲಾಬಿ’ ಟಾಕೀಸಿನ ಉಮಾಶ್ರೀ ಮುಂತಾದವರು ರಾಷ್ಟ್ರ ಮಟ್ಟದಲ್ಲಿ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.   ಅವಿನಾಶ್, ಸೌಂದರ್ಯ, ಪವಿತ್ರ, ಮಾಳವಿಕಾ, ಜಾಗೀರ್ ದಾರ್  ಮುಂತಾದ ಕಲಾವಿದರು ಕೂಡಾ ಅವರ ನಿರ್ದೇಶನದಲ್ಲಿ ತಮ್ಮ ಕಲೆಯನ್ನು ಮತ್ತಷ್ಟು ಬೆಳಗಿಸಿಕೊಂಡಿದ್ದಾರೆ.  ಅವರ ನಿರ್ಮಾಪಕರೆಲ್ಲ ಒಳ್ಳೆಯ ಚಿತ್ರ ಮಾಡಿದ ತೃಪ್ತಿ, ಪ್ರಶಸ್ತಿ ಗೌರವಗಳ ಜೊತೆಗೆ ತಾವು ಹಾಕಿದ ಬಂಡವಾಳಕ್ಕೆ ಮಿಗಿಲಾದ ಲಾಭವನ್ನೂ ಗಳಿಸಿದ್ದಾರೆ.   

ಗಿರೀಶರಿಗೆ  ಬಾಕ್ಸ್ ಆಫೀಸಿನ ಯಶಸ್ಸು ಎಂಬುದು ಚಿತ್ರದ ಯಶಸ್ಸಿನ ಅಳತೆಗೋಲಲ್ಲ. “ಬಾಕ್ಸ್ ಆಫೀಸಿನ  ಪ್ರಕಾರ ನೋಡೋದಾದ್ರೆ ನನ್ನ ಯಶಸ್ವೀ ಚಿತ್ರ ‘ಆಕ್ರಮಣ’, ಆದರೆ ವೈಯಕ್ತಿಕವಾಗಿ ಹೇಳಬೇಕು ಅಂದ್ರೆ, ಅದೇ ನನ್ನ ವೀಕೆಸ್ಟ್ ಫಿಲ್ಮ್. ಹಾಗಾಗಿ ನನ್ನ ಚಿತ್ರಗಳ ಯಶಸ್ಸಿಗೆ ನಾನು ಯಾವತ್ತೂ ಬಾಕ್ಸ್ ಆಫೀಸ್ ಅನ್ನು  ಮಾನದಂಡವಾಗಿ ಇಟ್ಟುಕೊಂಡಿಲ್ಲ.” ಎನ್ನುವ ಗಿರೀಶ್, ಮನೋರಂಜನೆಯ ಮಾತು ಬಂದಾಗ “ನನಗೆ ನಮ್ಮ ಅರಿವನ್ನು ವಿಸ್ತಾರ ಮಾಡುವುದೇ ಒಂದು ತರಹ ಮನೋರಂಜನೆ; ಸುಮ್ಮನೆ ಸ್ವಲ್ಪ ಹೊತ್ತು ಕುಳಿತು ಏನೋ ನೋಡಿ ನಕ್ಕೋ ಅತ್ತೋ ಮಾಡಿದರೆ ಅದು ಮನೋರಂಜನೆ ಅಂತ ನನಗನ್ನಿಸುವುದಿಲ್ಲ. ಅದು ಮನಸ್ಸನ್ನು ಸ್ವಲ್ಪ ಹೊತ್ತು ಹಿಡಿದಿರುತ್ತೆ ಅಷ್ಟೆ. ಯಾವುದು ನನ್ನ ಅರಿವನ್ನು ಹೆಚ್ಚಿಸುತ್ತೊ ಅಥವ ನನಗೆ ಹೊಸ ಬೆಳಕನ್ನು ತೋರಿಸುತ್ತೊ ಅದು ಮನೋರಂಜನೆ” ಎಂದು ನಾನು ಭಾವಿಸಿದ್ದೇನೆ ಎಂದು  ತಮ್ಮ ನಿಲುವನ್ನು ಸುದೀರ್ಘವಾಗಿ ವ್ಯಾಖ್ಯಾನಿಸುತ್ತಾರೆ

ಕನ್ನಡದಲ್ಲಿ ನಿರಂತರವಾಗಿ ಒಂದು ರೀತಿಯಲ್ಲಿ ಗಂಭೀರವಾದ ಸಿನೆಮಾವನ್ನು ಮಾಡುವ ಚಿಕ್ಕ ಚಳುವಳಿಯೇ ಜೀವಂತವಾಗಿದೆ ಅನ್ನುವುದು ಗಿರೀಶ್ ಕಾಸರವಳ್ಳಿ ಅವರಿಗೆ ಸಂತಸ ನೀಡಿದೆ. ಆದರೆ,  ಕರ್ನಾಟಕದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿರುವುದರ ಬಗ್ಗೆ, ಸೂಕ್ತ ಪ್ರದರ್ಶನ ವ್ಯವಸ್ಥೆಗಳು ಕನ್ನಡ ಚಿತ್ರಗಳಿಗೆ ದೊರಕದೆ ಪರಭಾಷಾ ಚಿತ್ರಗಳ ಪೈಪೋಟಿ ಎದುರಿಸಿ ಕೂಡಾ ಉತ್ತಮ ಚಿತ್ರಗಳನ್ನು ಮಾಡಿ ಉಳಿಯಲು ಇರುವ ತೊಡಕುಗಳ ಬಗ್ಗೆ ಕಾಳಜಿ ಇದೆ. 

ಹಿಂದೆ ಯಶಸ್ಸು ಕಂಡ ಸಂಸ್ಕಾರ, ವಂಶವೃಕ್ಷ, ಕಾಡು, ತಬ್ಬಲಿಯು ನೀನಾದೆ ಮಗನೆ, ಘಟಶ್ರಾದ್ಧ ಅಂತಹ ಚಿತ್ರಗಳು ಇಂದು ಜನರಿಗೆ ರುಚಿಸುವುದಿಲ್ಲ ಎಂಬುದು ಹುಸಿವಾದ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.  ಗಿರೀಶರ ಚಿತ್ರಗಳನ್ನು ಹಲವು ವೇದಿಕೆಗಳಲ್ಲಿ ದೂರದರ್ಶನಗಳಲ್ಲಿ ನೋಡಿದ ಜನರೆಲ್ಲಾ ಅವನ್ನು ಮೆಚ್ಚಿದ್ದಾರೆ.  ಸೂಕ್ತ ಪ್ರದರ್ಶನ ವ್ಯವಸ್ಥೆ ಇದ್ದಲ್ಲಿ ಅದನ್ನು ಚಿತ್ರಮಂದಿರಕ್ಕೂ ಬಂದು ನೋಡುತ್ತಾರೆ.  ಅಂತಹ ವ್ಯವಸ್ಥೆಗಳು ನಿರ್ಮಾಣವಾಗುತ್ತಿಲ್ಲ ಎಂಬ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ ಅಂತಹ ಪ್ರತಿಭೆಗಳ ಮಾತಿಗೆ ಸೂಕ್ತ ಬೆಂಬಲ ಇಂದಿನ ಅವಶ್ಯಕತೆಯಾಗಿದೆ. 

ಕನ್ನಡಕ್ಕೆ ಘಟಶ್ರಾದ್ಧ, ಆಕ್ರಮಣ, ಮೂರು ದಾರಿಗಳು, ತಬರನ ಕಥೆ, ಬಣ್ಣದ ವೇಷ, ಮನೆ, ಕ್ರೌರ್ಯ, ತಾಯಿ ಸಾಹೇಬ, ದ್ವೀಪ, ಹಸೀನ, ನಾಯಿ ನೆರಳು, ಗುಲಾಬಿ ಟಾಕೀಸ್,  ಕನಸೆಂಬ ಕುದುರೆಯನ್ನೇರಿ, ಕೂರ್ಮಾವತಾರ ಮುಂತಾದ ಮಹತ್ವದ ಚಿತ್ರಗಳನ್ನು ಕೊಟ್ಟಿರುವ ಗಿರೀಶ್ ಕಾಸರವಳ್ಳಿ ಅವರು ದೂರದರ್ಶನದಲ್ಲಿ ‘ಗೃಹಭಂಗ’ವನ್ನು ಸಹಾ  ಸುಂದರವಾಗಿ ಮೂಡಿಸಿದರು. ಅವರ ಪತ್ನಿ ವೈಶಾಲಿ ಕಾಸರವಳ್ಳಿ ಅವರು ರಂಗಭೂಮಿ, ಚಲನಚಿತ್ರಗಳಲ್ಲಿ  ನಟಿಯಾಗಿ ದೂರದರ್ಶನದ ಧಾರಾವಾಹಿಗಳ ನಿರ್ಮಾಣ ನಿರ್ದೇಶನಗಳಲ್ಲಿ ಅಪೂರ್ವ ಕಾಣಿಕೆ ನೀಡಿದವರು.  ಅದೇ ಜಾಡಿನಲ್ಲಿ ಅವರ ಪುತ್ರಿ ಅನನ್ಯಾ  ಸಹಾ ಈಗ ಕಾರ್ಯನಿರ್ವಹಿಸುತ್ತಿದ್ದಾರೆ.   ಗಿರೀಶರ ಪುತ್ರ ಅಪೂರ್ವ ಸಹಾ ಚಿತ್ರರಂಗದಲ್ಲಿದ್ದಾರೆ.

ಗಿರೀಶ್ ಕಾಸರವಳ್ಳಿಯವರಿಗೆ ‘ಪದ್ಮಶ್ರೀ ಪ್ರಶಸ್ತಿ ಕೂಡಾ ಸಂದಿದೆ.  ಅವರು ಅದಕ್ಕಿಂತ ಹೆಚ್ಚಿನದಕ್ಕೂ ಅರ್ಹರು ಎಂಬುದು ಅವರ ಸಾಧನೆ, ಸಾಮರ್ಥ್ಯಗಳನ್ನು ಬಲ್ಲವರೆಲ್ಲಾ ಹೇಳುವ ಮಾತು.     ಗಿರೀಶ್ ಕಾಸರವಳ್ಳಿ ಮುಂದೂ ಅನನ್ಯ ಸಾಧನೆಗಳನ್ನು ಮುಂದುವರೆಸಲಿ ಅವರ ಚಿತ್ರಗಳನ್ನು ನೋಡುವ ವ್ಯವಸ್ಥೆಗಳು ನಿರ್ಮಾಣವಾಗಲಿ ಎಂದು ಆಶಿಸುತ್ತಾ ಗಿರೀಶರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭಾಶಯ ಗೌರವಗಳನ್ನು ತಿಳಿಸೋಣ.

Tag: Girish Kasaravalli

ಕಾಮೆಂಟ್‌ಗಳಿಲ್ಲ: