ಬುಧವಾರ, ಡಿಸೆಂಬರ್ 5, 2018

ಕೊಂಡಜ್ಜಿ ವೆಂಕಟೇಶ್


ಕೊಂಡಜ್ಜಿ ಕೆ ವೆಂಕಟೇಶ್

ಇಂದು ಕನ್ನಡ ಪ್ರೇಮಿ ಕೊಂಡಜ್ಜಿ ಕೆ. ವೆಂಕಟೇಶ್ ಅವರ ಹುಟ್ಟು ಹಬ್ಬ.  ಕೊಂಡಜ್ಜಿ ವೆಂಕಟೇಶ್ ಅವರು 1982 ವರ್ಷದಿಂದ ನಿರಂತರವಾಗಿ 'ಸಾಮಾನ್ಯ ಜ್ಞಾನ' ಮಾಸ ಪತ್ರಿಕೆಯನ್ನು ಸಂಪಾದಿಸುತ್ತಾ ಬಂದಿದ್ದಾರೆ ಎಂಬುದು ಅವರ ಕನ್ನಡದ  ಬಗೆಗಿನ  ಅಪೂರ್ವ ಪ್ರೀತಿಯನ್ನು ಸಾಕಷ್ಟು ಹೇಳುತ್ತದೆ. ಆದರ್ಶ ಶಿಕ್ಷಕ ಕೊಂಡಜ್ಜಿ ಕೃಷ್ಣ ಮೂರ್ತಿ ಅವರ ಸುಪುತ್ರರಾದ  ಕೊಂಡಜ್ಜಿ ತಮ್ಮ ಓದಿನ ದಿನಗಳಿಂದಲೇ ಸಾಹಿತ್ಯ ಪ್ರೀತಿಯನ್ನು ಮೈಗೂಡಿಸಿಕೊಂಡವರು.  1975 ರ ಸಮಯದಲ್ಲಿ  ಧಾರವಾಡದಲ್ಲಿ ಕ ಸಾ ಪ ಏರ್ಪಡಿಸಿ ಡಾ ದ ರಾ ಬೇಂದ್ರೆ ಉದ್ಘಾಟಿಸಿದ್ದ ಉದಯೋನ್ಮುಖ ಲೇಖಕರ ಶೀಬಿರದಲ್ಲಿ ಭಾಗವಹಿಸಿ ಅದರಿಂದ ಪ್ರೇರಿತರಾಗಿ,  ಕೊಂಡಜ್ಜಿಯಲ್ಲಿ ಶ್ರೀ ಜಯ ಜಯಚಾಮರಾಜೇಂದ್ರ ಸಾಹಿತ್ಯ ಸಂಘವನ್ನು ಗೆಳೆಯರೊಂದಿಗೆ ಸ್ಥಾಪಿಸಿದ ಉತ್ಸಾಹಿ ಈ ಕೊಂಡಜ್ಜಿ ವೆಂಕಟೇಶ್.

ಕೊಂಡಜ್ಜಿಯವರ ವೈವಿಧ್ಯಮಯ ಸಾಧನೆಗಳಲ್ಲಿ  ಕನ್ನಡದ ಅಪೂರ್ವ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪನವರ  ಅಭಿನಂದನಾಪೂರ್ವಕವಾದ 'ಭೈರಪ್ಪಾಭಿನಂದನಾ' ಕೃತಿಯ ಸಂಪಾದಕೀಯವೂ ಒಂದು.  ಸುದೀರ್ಘ ಕಾಲದಿಂದ ಬೆಳಗುತ್ತಿರುವ ಅವರ  'ಸಾಮಾನ್ಯ ಜ್ಞಾನ' ಪತ್ರಿಕೆಯಲ್ಲಿನ ಸಂಪಾದಕೀಯಗಳ ಗ್ರಂಥಗಳೂ ಒಟ್ಟಾಗಿ ಗ್ರಂಥರೂಪ ತಾಳಿವೆ. ಇದಲ್ಲದೆ ಪ್ರತಿಬಿಂಬ,  ಲಕ್ಷ್ಮೀಧರಾಮಾತ್ಯ ಕಾದಂಬರಿಗಳು, ಒಲವು ನಿಲವು ಕವಿತಾ ಸಂಕಲನ ಮುಂತಾದವು ಕೊಂಡಜ್ಜಿ ಅವರ ಪ್ರಕಟಿತ ಕ್ರತಿಗಳು.     ತಮ್ಮ ಜಯಚಾಮರಾಜೇಂದ್ರ ಸಾಹಿತ್ಯ ಸಂಘದಿಂದ ಯುವಬರಹಗಾರರಿಗೆ ಸ್ಪರ್ಧೆ ಏರ್ಪಡಿಸಿ ಅವರುಗಳ ಬರಹಗಳನ್ನು ಒಳಗೊಂಡ    'ಮಂಥನ' ಎಂಬ ಕೃತಿಯನ್ನೂ ಅವರು ಸಂಪಾದಿಸಿ ಪ್ರಕಟಪಡಿಸಿದ್ದರು. 

ಕೊಂಡಜ್ಜಿ ಅವರ ಈ ಕನ್ನಡ ಪ್ರೀತಿ ನಮ್ಮನ್ನು ನಿರಂತರ ಪ್ರೆರಿಸುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ. 

ಚಿತ್ರ:  ನ್ಯಾ. ನಿಟ್ಟೂರು ಶ್ರೀನಿವಾಸ ರಾವ್ ಅವರ ಕುರಿತ ಗ್ರಂಥ ಬಿಡುಗಡೆ ಸಂದರ್ಭ: ಡಾ.ಭೈರಪ್ಪನವರಿಂದ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವ ಕೊಂಡಜ್ಜಿ ವೆಂಕಟೇಶ್ (2004)

Tag: Kondajji Venkatesh

ಕಾಮೆಂಟ್‌ಗಳಿಲ್ಲ: