ಗುರುವಾರ, ಡಿಸೆಂಬರ್ 6, 2018

ಟಿ. ಎನ್. ಸೀತಾರಾಂ



ಟಿ. ಎನ್. ಸೀತಾರಾಂ

ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ  ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು  ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ  ಮಾತಾಗಿರುವ ಟಿ. ಎನ್. ಸೀತಾರಾಂ. 

ತಳಗವಾರ ನಾರಾಯಣರಾವ್ ಸೀತಾರಾಂ ಅವರು ಜನಿಸಿದ್ದು ಡಿಸೆಂಬರ್ 6, 1948ರ ವರ್ಷದಲ್ಲಿ.  ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಅವರು ಪತ್ರಕರ್ತ,  ಕತೆಗಾರ, ನಾಟಕಕಾರ, ಚಿತ್ರ ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಹರಡಿಕೊಂಡವರು.   ಮೂಲತಃ ಗೌರಿಬಿದನೂರಿನವರಾದ ಸೀತಾರಾಂ ಅವರ ಹೆಸರಿನ ಪ್ರಾರಂಭದಲ್ಲಿರುವ  ‘ತಳಗವಾರ’ ಅವರ  ತಂದೆಯವರ ಸ್ಥಳ. ತಂದೆಯವರು  ನಾರಾಯಣರಾಯರು ಮತ್ತು  ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು.  ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು.  ಬಿ.ಎಸ್ಸಿ, ಬಿ.ಎಲ್ ಓದಿದ ಅವರು ತಾವು ತಮ್ಮ ಹಲವು ಧಾರಾವಾಹಿಗಳಲ್ಲಿ ಕಂಡಂತೆಯೇ ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು.    ಲೋಹಿಯಾ ತತ್ತ್ವಗಳನ್ನು ನಂಬಿದವರಾದ ಸೀತಾರಾಂ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದ ಅಪೂರ್ವ ವ್ಯಕ್ತಿತ್ವದವರು.


1969ರ ಸುಮಾರಿನಲ್ಲಿ ಟಿ. ಎನ್. ಸೀತಾರಾಂ ಅವರ ಪ್ರಥಮ ಬರಹ ಪ್ರಕಟಗೊಂಡಿತು.  ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಚಿಗುರಿದ ಅವರ ಪ್ರಥಮ ನಾಟಕ ‘ಯಾರಾದರೇನಂತೆ?’. ನಂತರದ ದಿನಗಳಲ್ಲಿ ಮೂಡಿ ಬಂದಿದ್ದ ‘ಮನ್ನಿಸು ಪ್ರಭುವೆ’. ಈ ಎರಡೂ ನಾಟಕಗಳು  ಅವರಿಗೆ ಹೆಸರು ಮತ್ತು ಪ್ರಶಸ್ತಿಗಳನ್ನು ತಂದಿತು. ಮುಂದೆ ಬಂದ ಅವರ  ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು  ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ.  ಈ ನಾಟಕಗಳು  ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಷ್ಟು ವ್ಯಾಪ್ತಿ ಪಡೆದಂತಹವು.   300ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡ ‘ಆಸ್ಪೋಟ’ ನಾಟಕ,    ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದ ಕೃತಿಯೂ ಹೌದು. ಅದು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿ, ದೂರದರ್ಶನದ ಟೆಲಿ ಧಾರಾವಾಹಿಯಾಗಿ ಸಹಾ ಹೆಸರಾಗಿತ್ತು. ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರವಾದ ಕೃತಿ.

ಸೀತಾರಾಂ ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಕ್ರೌರ್ಯ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಆ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಎಲ್ಲೆಲ್ಲಿಯೂ ಸಂದ ಸೀತಾರಾಂ ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟರಾಗಿಯೂ  ಸಾಕಷ್ಟು ಹೆಸರು ಮಾಡಿದವರು. ಆದ್ದಾಗ್ಯೂ ಪಿ. ಲಂಕೇಶರನ್ನು ಗುರುಗಳನ್ನಾಗಿ ಭಾವಿಸಿದ್ದ ಸೀತಾರಾಂ, ಲಂಕೇಶರ ಮಾರ್ಗದರ್ಶನದಂತೆ ತಮ್ಮನ್ನು  ವ್ಯಾಪಾರೀ ಚಲನಚಿತ್ರಗಳಲ್ಲಿ  ಕಳೆದುಹೋಗದಂತೆ  ಎಚ್ಚರವಹಿಸಿಕೊಂಡವರು. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ‘ಪಲ್ಲವಿ’ ಚಿತ್ರದ ನಾಯಕರಾಗಿ ಅಭಿನಯಿಸಿದ್ದ  ಸೀತಾರಾಂ, ಆ ಚಿತ್ರಕ್ಕೆ ಲಂಕೇಶರೊಂದಿಗೆ ಚಿತ್ರಕತೆ ಮತ್ತು ಸಂಭಾಷಣೆ ರಚನೆಯಲ್ಲೂ ಕಾರ್ಯನಿರ್ವಹಿಸಿದ್ದರು.

ಸೀತಾರಾಂ ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ  ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು.  ಟಿ.ಎಸ್. ನಾಗಾಭರಣ ಅವರ ನಿರ್ದೇಶನದ  ಆರ್. ಕೆ ನಾರಾಯಣ್ ಅವರ  ಇಂಗ್ಲಿಷ್ ಕಾದಂಬರಿ ಆಧಾರಿತ  ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ಅವರ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು.

ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಎಸ್. ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ – ಪ್ರಶಸ್ತಿಗೆ ಪಾತ್ರವಾಯಿತು. ಅವರ ನಿರ್ದೇಶನದ ಮತ್ತೊಂದು ಸದಭಿರುಚಿಯ ಚಲನಚಿತ್ರ ‘ಮೀರಾ, ಮಾಧವ, ರಾಘವ’.

ಮುಂದಿನದು  ಸೀತಾರಾಂ ಅವರು ಎಲ್ಲೆಲ್ಲೂ ಹೆಸರಾಗಿರುವ  ಕಿರುತೆರೆಯ ಬೃಹತ್ ಕ್ಷೇತ್ರ.  ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿದಂತಹವು.
ಸೀತಾರಾಂ ಅವರು ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ‘ಮಾಯಾಮೃಗ’  ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿದೆ.  ಇಂದಿನ ದಿನಗಳಲ್ಲೂ ಪುನಃ ಪ್ರದರ್ಶನಗೊಳ್ಳುವಷ್ಟು ಜನಪ್ರಿಯ ಧಾರಾವಾಹಿ ಇದಾಗಿದೆ.

ಮುಂದೆ ಖಾಸಗಿ ವಾಹಿನಿಯಲ್ಲಿ ಹಲವು ನೂರು  ಕಂತುಗಳಲ್ಲಿ ಪ್ರಸಾರಗೊಂಡು ಜನಪ್ರಿಯವಾದಂತಹವು  ‘ಮನ್ವಂತರ’, ‘ಮುಕ್ತ’, ‘ಮಹಾಪರ್ವ’  ಧಾರಾವಾಹಿಗಳು. ಪ್ರಸಕ್ತದಲ್ಲಿ ಅವರ ‘ಮಗಳು ಜಾನಕಿ’ ಧಾರಾವಾಹಿ ಜನಪ್ರಿಯ ಪ್ರಸಾರ ಕಾಣುತ್ತಿದೆ.  ಈ ಧಾರಾವಾಹಿಗಳಲ್ಲಿನ ಚುರುಕಿನ ಸಂಭಾಷಣೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವ ವಿಧಾನ ವೀಕ್ಷಕರನ್ನು ಸಾಮಾಜಿಕ ಸಮಸ್ಯೆಗಳತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಸೀತಾರಾಂ ಅವರು ನ್ಯಾಯಾಲಯದ ದೃಶ್ಯಗಳನ್ನು ಜೋಡಿಸುವ ವಿಧಾನ, ಜಾಣ್ಮೆಯ ಮಾತುಗಳು ಪ್ರಜ್ಞಾವಂತರಲ್ಲಿ ಸಹಾ  ಸಂಚಲನೆಯನ್ನು ತರುವಂಥವು.

ಇಂದು ಕಲಾರಂಗದಲ್ಲಿರುವ ಅನೇಕರು ಟಿ.ಎನ್. ಸೀತಾರಾಂ ಅವರ ಗರಡಿಯಲ್ಲಿ ಬೆಳೆದಂತಹವರು.  ತಾವಿರುವ ಸಮಾಜಕ್ಕೆ ಸದಭಿರುಚಿಯಲ್ಲಿ ಮತ್ತು ಸೃಜನಶೀಲತೆಯಲ್ಲಿ ಬದ್ಧರಾಗಿರುವ ನಮ್ಮ ಟಿ. ಎನ್. ಸೀತಾರಾಂ ಅವರ ಕಾರ್ಯ ನಮ್ಮ ಬದುಕನ್ನು ನಿರಂತರ ಪ್ರೇರಿಸುತ್ತಿರಲಿ ಮತ್ತು  ಅವರ ಬದುಕು ಸುಂದರವಾಗಿರಲಿ ಎಂದು ಆಶಿಸುತ್ತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

Tag: T.N. Seetharam

ಕಾಮೆಂಟ್‌ಗಳಿಲ್ಲ: