ಬುಧವಾರ, ಡಿಸೆಂಬರ್ 5, 2018

ಪುಟ್ಟಣ್ಣ ಕಣಗಾಲ್ಪುಟ್ಟಣ್ಣ ಕಣಗಾಲ್

ಚಲನಚಿತ್ರರಂಗದಲ್ಲಿ ಮಹಾನ್ ನಿರ್ದೇಶಕರೆಂದು ಖ್ಯಾತರಾದವರು ಎಸ್. ಆರ್. ಪುಟ್ಟಣ್ಣ ಕಣಗಾಲ್. ಕಣಗಾಲ್ ಎಂದೇ ಜನಮನದಲ್ಲಿ ಹಸಿರಾದ ಪುಟ್ಟಣ್ಣ ಕಣಗಾಲರು ಜನಿಸಿದ್ದು ಡಿಸೆಂಬರ್ 1, 1933ರ ವರ್ಷದಲ್ಲಿ. ಜನಿಸಿದ ಸ್ಥಳ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮ. ಅವರ ಹಿರಿಯ ಸಹೋದರ ಕಣಗಾಲ್ ಪ್ರಭಾಕರಶಾಸ್ತ್ರಿ ಕನ್ನಡ ಚಿತ್ರಲೋಕ ಕಂಡ ಮಹಾನ್ ಚಿತ್ರ ಸಾಹಿತಿ. ಪುಟ್ಟಣ್ಣನವರು ಚಿತ್ರರಂಗಕ್ಕೆ ಬರುವ ಮುಂಚೆ ಹಲವು ನಾಟಕ ಕಂಪನಿಗಳಲ್ಲಿ ಡ್ರೈವರ್ ಕೆಲಸದಿಂದ ಹಿಡಿದು ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.

ಪುಟ್ಟಣ್ಣ ಕಣಗಾಲ್ ಸಾಮಾನ್ಯರಿಂದ ಹಿಡಿದು ಬುದ್ಧಿವಂತ ಜನಾಂಗದವರೆಗೆ ತಮ್ಮ ಅಸಾಮಾನ್ಯ ಸಾಮರ್ಥ್ಯದಿಂದ ಕನ್ನಡ ಚಿತ್ರರಂಗದಲ್ಲಿ ಹೆಸರಾದವರು. ಪ್ರಖ್ಯಾತ ನಟ ನಟಿಯರು ಮಾತ್ರ ಜನ ಮಾನಸದಲ್ಲಿ ಉಳಿಯುವ ಜಗಮಗದ ಚಿತ್ರಜಗತ್ತಿನಲ್ಲಿ ಒಬ್ಬ ಸಿನಿಮಾ ತಂತ್ರಜ್ಞ ಕೂಡ ಅದೇ ಮಟ್ಟಕ್ಕೆ ಅಥವ ಅದಕ್ಕೂ ಮೇಲ್ಮಟ್ಟಕ್ಕೆ ಉಳಿಯಲು ಸಾಧ್ಯವೆಂದರೆ ಆ ತಂತ್ರಜ್ಞನ ಮೌಲ್ಯ ಎಷ್ಟು ಔನ್ನತ್ಯದ್ದು ಎಂದು ಊಹಿಸಬಹುದು. ಭಾರತೀಯ ಚಿತ್ರಜಗತ್ತಿನ ಇತಿಹಾಸದಲ್ಲಿ ಅಂತಹ ಅಪೂರ್ವರ ಸಾಲಿಗೆ ಸೇರತಕ್ಕವರು ಪುಟ್ಟಣ್ಣ. ಚಲನಚಿತ್ರ ನಿರ್ದೇಶನಕ್ಕೆ ಎಲ್ಲ ರೀತಿಯಲ್ಲೂ ಹಿರಿಮೆಯನ್ನು ತಂದುಕೊಟ್ಟ ಅಮೋಘ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಪುಟ್ಟಣ್ಣ ಕಣಗಾಲರ ಚಿತ್ರಗಳಾದ ‘ಬೆಳ್ಳಿ ಮೋಡ’, ‘ಸಾಕ್ಷಾತ್ಕಾರ’, ‘ಗೆಜ್ಜೆ ಪೂಜೆ’, ಶರಪಂಜರ’, ‘ನಾಗರಹಾವು’, ‘ಎಡಕಲ್ಲು ಗುಡ್ಡದ ಮೇಲೆ’, 'ಉಪಾಸನೆ', ‘ಕಥಾಸಂಗಮ’, ‘ಪಡುವಾರ ಹಳ್ಳಿ ಪಾಂಡವರು’, ‘ರಂಗನಾಯಕಿ’, ‘ಮಾನಸ ಸರೋವರ’ ಅಂತಹ ಚಿತ್ರಗಳು ಅವು ತೆರೆಕಂಡ ನಾಲ್ಕೈದು ದಶಕಗಳಿಂದ ಆ ಚಿತ್ರಗಳಲ್ಲಿನ ಚಿತ್ರಕತೆ, ದೃಶ್ಯವೈಭವ, ಸಂಗೀತ, ನಟನೆ, ಹೀಗೆ ಸಮಗ್ರ ಸೊಬಗುಗಳಿಂದ ಜನಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ.

1970ರ ದಶಕದಲ್ಲಿ ಆಗ ತಾನೇ ಒಬ್ಬ ನಟ, ನಟನಾ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಪ್ರಾರಂಭಿಸಿದ್ದ. ಆತ ‘ಕಥಾಸಂಗಮ’ ಎಂಬ ತ್ರಿವಳಿ ಕತೆಗಳ ಚಿತ್ರದಲ್ಲಿ ‘ಮುನಿತಾಯಿ’ಯಲ್ಲಿನ ಒಂದು ಸಣ್ಣ ಪಾತ್ರಕ್ಕೆ ಆಯ್ಕೆಯಾದ. ಆ ಪಾತ್ರದಲ್ಲಿ ಆತನ ಅಭಿನಯ ಎಲ್ಲರ ಬಾಯಿಮಾತಾಗಿ ಹೋಯ್ತು. ಆ ನಟನನ್ನು ಪತ್ರಕರ್ತರು ಹೊಗಳಿದರು, “ಅದೆಂತಹ ಅಧ್ಬುತ ಅಭಿನಯ ನಿಮ್ಮದು!” ಅದಕ್ಕೆ ಆ ನಟ ಉತ್ತರ ನೀಡಿದ್ದು ಹೀಗೆ:ಆ ಅದ್ಭುತ ಎಂಬ ಪ್ರಶಂಸೆ ಸೇರಬೇಕಿದ್ದು ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ. ಅವರು ನನಗೆ ಮಾಡಿ ತೋರಿಸಿದ ಅಭಿನಯದ ಕಾಲು ಭಾಗ ಕೂಡ ನಾನು ಮಾಡಿದ್ದೇನೆಂದು ಎನಿಸುವುದಿಲ್ಲ”. ಆ ಪಾತ್ರಧಾರಿ ಮತ್ತಾರೂ ಅಲ್ಲ. ಇಂದು ಕೂಡ ಭಾರತದ ಚಿತ್ರರಂಗದಲ್ಲಿ ಜನಪ್ರಿಯತೆಯ ತುತ್ತ ತುದಿಯಲ್ಲಿರುವ ರಜನೀಕಾಂತ್. ಒಂದು ರೀತಿಯಲ್ಲಿ ‘ರಜನೀಕಾಂತ್’ ಇಂದು ಆ ಹಂತ ತಲುಪಲಿಕ್ಕೆ ಕಾರಣ ಕೂಡ, ತನ್ನ ಉತ್ತಮತೆಯಲ್ಲಿ ನಿಜವಾದ ಪಾತ್ರಧಾರಿ ಯಾರು ಎಂದು ಕಂಡುಕೊಳ್ಳುವ ಆತನಲ್ಲಿರುವ ಆಂತರ್ಯದಿಂದ ಎಂದು ನನಗನ್ನಿಸುತ್ತದೆ. ಇದು ಪುಟ್ಟಣ್ಣ ಕಣಗಾಲರ ಬಹಳಷ್ಟು ಚಿತ್ರಗಳನ್ನು ನೋಡಿ ಅವರ ಏಳು ಬೀಳುಗಳ ಬಗೆಗೆ ನಿರಂತರವಾಗಿ ಓದುತ್ತಾ ಬಂದಿರುವ ಕನ್ನಡಿಗರಿಗೆ, ಆ ಹೆಸರಿನ ಬಗೆಗೆ ದೊರಕುವ ಒಂದು ಅತ್ಯುತ್ತಮ ವ್ಯಾಖ್ಯಾನ.

ಅಂದು ರಜನೀಕಾಂತ್ ಅವರು ಹೇಳಿದ್ದರಲ್ಲಿ ಅಚ್ಚರಿ ಏನೂ ಇಲ್ಲ ಎಂದು ಕನ್ನಡ ಚಿತ್ರಲೋಕಕ್ಕೆ ಕಣಗಾಲರು ನೀಡಿರುವ ಹೊಚ್ಚ ಹೊಸ ಕೊಡುಗೆಗಳಾದ ವಿಷ್ಣುವರ್ಧನ, ಅಂಬರೀಶ್, ಆರತಿ ಹೆಸರುಗಳು ಪ್ರಧಾನವಾಗಿ ನೆನಪಿಗೆ ಬರುತ್ತವೆ. ಅಷ್ಟೇ ಅಲ್ಲ ಕನ್ನಡ ಚಲನಚಿತ್ರ ರಂಗದಲ್ಲಿ ಅಂದು ವಿಭಿನ್ನ ಸ್ಥರಗಳಲ್ಲಿ ಪ್ರಸ್ತುತರಾಗಿದ್ದ ರಾಜಕುಮಾರ್, ಕಲ್ಯಾಣ ಕುಮಾರ್, ಉದಯ ಕುಮಾರ್, ಗಂಗಾಧರ್, ಶ್ರೀನಾಥ್, ರಾಜೇಶ್, ಬಿ.ಎಸ್. ರಂಗ, ಬಿ ಸರೋಜಾ ದೇವಿ, ಕಲ್ಪನ, ಜಯಂತಿ, ಭಾರತಿ, ಲೀಲಾವತಿ, ಅಶ್ವಥ್, ಸೀತಾರಾಂ, ಬಾಲಕೃಷ್ಣ, ಶಿವರಾಂ, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್, ದಿನೇಶ್, ಉಮೇಶ್, ಎಂ. ಪಿ. ಶಂಕರ್, ರಾಜಾನಂದ್ ಮುಂತಾದ ಕಲಾವಿದರು ಪುಟ್ಟಣ್ಣನವರ ಚಿತ್ರಗಳಲ್ಲಿ ತೋರಿದ ವಿಭಿನ್ನತೆ ಹಾಗೂ ಅಂತಹ ಚಿತ್ರಗಳಿಂದ ಪಡೆದ ಪ್ರಖ್ಯಾತಿ ಕೂಡ ಅಷ್ಟೇ ಪ್ರಮುಖವಾಗಿ ಕಾಣುತ್ತವೆ.

ಪುಟ್ಟಣ್ಣನವರು ‘ಕಪ್ಪು ಬಿಳುಪು’, ‘ಬೆಳ್ಳಿ ಮೋಡ’, ‘ಗೆಜ್ಜೆಪೂಜೆ’, ‘ಶರಪಂಜರ’ ಗಳಲ್ಲಿ ಮೂಡಿಸಿದ ಕಲ್ಪನ; ‘ನಾಗರಹಾವು’ ನಲ್ಲಿ ಮೂಡಿಸಿದ ವಿಷ್ಣುವರ್ಧನ, ಅಂಬರೀಶ್. ಅಶ್ವಥ್; ‘ನಾಗರಹಾವು’, ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರಗಳ ಜಯಂತಿ; ‘ನಾಗರಹಾವು’, ‘ಶುಭ ಮಂಗಳ’, ‘ಮುನಿತಾಯಿ’, ‘ಉಪಾಸನೆ’. ‘ರಂಗನಾಯಕಿ’ ಚಿತ್ರಗಳ ಆರತಿ; ‘ಶುಭ ಮಂಗಳ’, ‘ಮಾನಸ ಸರೋವರ’ಗಳ ಶ್ರೀನಾಥ್; ‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲಿನ ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್; ‘ರಂಗನಾಯಕಿ’ಯಲ್ಲಿ ರಾಜಾನಂದ್; ಹಲವಾರು ಚಿತ್ರಗಳಲ್ಲಿ ಶಿವರಾಂ ಹೀಗೆ ಈ ಕಲಾವಿದರ ನಟನೆಯ ಹಿರಿಮೆಯಲ್ಲೆಲ್ಲ ಪುಟ್ಟಣ್ಣ ಪ್ರಭೆಯಂತೆ ಬೆಳಗುತ್ತಾರೆ. ನಟನೆಯಲ್ಲಷ್ಟೇ ಅಲ್ಲದೆ ಗಾಯನ ಕ್ಷೇತ್ರದಲ್ಲಿ ಸಹಾ ಅವರ ಅಂದಿನ ಹೊಸ ಆಯ್ಕೆಗಳಾದ ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಬಿ. ಆರ್. ಛಾಯಾ ಮುಂತಾದವರು ಕೂಡ ಅಷ್ಟೇ ವಿಶಿಷ್ಟ ಕೊಡುಗೆಗಳು. ವಿಭಿನ್ನತೆ ಬೇಕು ಎಂದೆನಿಸಿದಾಗ ರವಿ, ಸುದರ್ಶನ್ ಅಂತಹ ಸಾಮಾನ್ಯ ದ್ವನಿಗಳನ್ನು ಹಿನ್ನಲೆಗಾಯನದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಳಸಲು ಅವರು ಪ್ರೇರಕರಾದರು. ಅಂಬಿಕಾತನಯ ದತ್ತ, ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯಗಳನ್ನು ಸುಂದರ ಚಿತ್ರಗೀತೆಯಾಗಿಸಿದವರೂ ಕೂಡಾ ಅವರೇ, ಅಂತೆಯೇ ಎಂ. ಎನ್. ವ್ಯಾಸರಾಯರಂತಹ ಯುವಕವಿಗಳನ್ನು ಚಿತ್ರರಂಗದ ಉಪಯೋಗಕ್ಕೆ ತಂದವರೂ ಅವರೇ.

ಹಾಗೆಂದ ಮಾತ್ರಕ್ಕೆ ಪುಟ್ಟಣ್ಣ ಕಣಗಾಲರು ಕಲಾವಿದರನ್ನು ಹುಟ್ಟುಹಾಕುವ ಕಾರ್ಖಾನೆ ಮಾತ್ರವೇ ಅಲ್ಲದೆ, ಕನ್ನಡದ ನೆಲದಲ್ಲಿರುವ ಮುತ್ತುರತ್ನಗಳನ್ನು ಹೆಕ್ಕಿ ತೆಗೆದು ಶೇಖರಿಸಿದ ಕಣಜವೂ ಹೌದು. ಕನ್ನಡ ನಾಡಿನ ಬರಹಗಾರರ ಕಥೆ, ಕಾದಂಬರಿಗಳನ್ನು ಹೇಗೆ ಚಿತ್ರ ಮಾಧ್ಯಮಕ್ಕೆ ಉಪಯೋಗಿಸಬೇಕೆಂದು ಚಿತ್ರಜಗತ್ತಿಗೆ ವಿಶಿಷ್ಟವಾಗಿ ತೋರಿಸಿಕೊಟ್ಟವರು ಕೂಡ ಅವರೆ. ಅಷ್ಟೇ ಅಲ್ಲ, ಸೊಬಗಿನ ಕನ್ನಡ ನಾಡನ್ನು ಹೇಗೆ ಚಿತ್ರೀಕರಣದಲ್ಲಿ ಸೆರೆಹಿಡಿದು ಪ್ರೇಕ್ಷಕನಿಗೆ ಸೊಗಸಾಗಿ ಉಣಬಡಿಸಬಹುದೆಂಬುದನ್ನು ತೋರಿಸಿಕೊಟ್ಟವರು ಸಹಾ ಪುಟ್ಟಣ್ಣನವರು. ಕವಿಗಳ ಹಾಡುಗಳನ್ನು ಹೇಗೆ ಚಿತ್ರಗೀತೆಗಳಲ್ಲಿ ನವೀನ ರೀತಿಯಿಂದ ಹೊಂದಿಸಬೇಕೆಂಬ ಸೃಜನೆ ಕೂಡ ಅವರದು. ‘ಮೂಡಲ ಮನೆಯ ಮುತ್ತಿನ ನೀರಿನ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’, ‘ಕೊಡಗಿನ ಕಾವೇರಿ’, ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಜನುಮ ಜನುಮದ ಅನುಬಂಧ’, ‘ವಿರಹಾ ನೂರು ನೂರು ತರಹ’, ‘ವೇದಾಂತಿ ಹೇಳಿದನು’, ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’ ಹೀಗೆ ಒಂದಕ್ಕಿಂತಲೂ ಒಂದು ಪ್ರಭಾವಶಾಲೀ ವ್ಯಕ್ತತೆಗಳನ್ನು ಇಲ್ಲಿ ಹೆಸರಿಸಬಹುದು.ಕಥೆ ಹೇಳುವೆ ನನ್ನ ಕಥೆ ಹೇಳುವೆ’ದಂತಹ ಹಾಡುಗಳಲ್ಲಿ, ಹಾಡುಗಳನ್ನು ಹೇಗೆ ಕಥನದ ಒಂದು ಭಾಗದ ಮುಂದುವರಿಕೆಯಾಗಿ ಬಳಸಬಹುದೆಂದು ತೋರಿಸಿಕೊಟ್ಟವರು ಕೂಡ ಅವರೆ.ಕನ್ನಡ ನಾಡಿನ ವೀರ ರಮಣಿಯ’ ಮೂಲಕ ಅವರು ಓಬವ್ವನಿಗೆ ನೀಡಿದ ಪ್ರಸಿದ್ಧಿ ವಿಶಿಷ್ಟವಾದದ್ದು. ಹೀಗೆ ಪುಟ್ಟಣ್ಣ ಚಲನಚಿತ್ರ ರಂಗದ ಒಂದು ಸಮಗ್ರತೆಯ ಬಿಂದುವೇ ಹೌದು.

ಪುಟ್ಟಣ್ಣ ಕಣಗಾಲರು ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಬಿ.ಆರ್ ಪಂತುಲು ಅವರ ಶಿಷ್ಯರಾಗಿ ನಿರ್ದೇಶಕ ವೃತ್ತಿಯನ್ನು ಆರಂಭಿಸಿದರು. ಪುಟ್ಟಣ್ಣ ಅವರ ಚಿತ್ರಗಳು ‘ಬೆಳ್ಳಿಮೋಡ’, ‘ಸಾವಿರ ಮೆಟ್ಟಿಲು’, ‘ಮಲ್ಲಮ್ಮನ ಪವಾಡ’, ‘ಕಪ್ಪು ಬಿಳುಪು’, ‘ಗೆಜ್ಜೆ ಪೂಜೆ’, ‘ಕರುಳಿನ ಕರೆ’, ‘ಶರಪಂಜರ’, ‘ಸಾಕ್ಷಾತ್ಕಾರ’, ‘ನಾಗರಹಾವು’, ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’, ‘ಶುಭ ಮಂಗಳ’, ‘ಬಿಳಿ ಹೆಂಡ್ತಿ’, ‘ಕಥಾ ಸಂಗಮ’, ‘ಕಾಲೇಜು ರಂಗ’, ‘ಫಲಿತಾಂಶ’, ‘ಪಡುವಾರಳ್ಳಿ ಪಾಂಡವರು’, ‘ಧರ್ಮಸೆರೆ’, ‘ರಂಗನಾಯಕಿ’, ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಅಮೃತ ಘಳಿಗೆ’, ‘ಋಣ ಮುಕ್ತಳು’, ‘ಮಸಣದ ಹೂವು’. ಹೆಸರುಗಳೇ ಹೇಳುವಂತೆ ಇವುಗಳಲ್ಲಿ ಬಹುತೇಕವು ಕಾದಂಬರಿ ಆಧಾರಿತ ಚಿತ್ರಗಳು. ಅವರು ಹಿಂದಿಯಲ್ಲಿ ‘ಹಮ್ ಪಾಂಚ್’ ಮತ್ತು ‘ಜಹ್ರೀಲಾ ಇನ್ಸಾನ್’ ಎಂಬ ಚಿತ್ರಗಳನ್ನು ನಿರ್ದೇಶಿಸಿದರು.

ಮಸಣದ ಹೂವು’ ಚಿತ್ರದ ಚಿತ್ರಣ ಸಂದರ್ಭದಲ್ಲಿ ಜೂನ್ 5, 1985 ರಂದು ಪುಟ್ಟಣ್ಣ ಕಣಗಾಲರು ನಿಧನರಾದರು. ಸಾವು ಯಾರನ್ನೂ ಬಿಡುವುದಿಲ್ಲ. ಪುಟ್ಟಣ್ಣ ಅಂತಹ ಮೇಧಾವಿ ವ್ಯಕ್ತಿ ಕೂಡ ಮೋಹಗಳ ಬಲೆಗೆ ಸಿಲುಕಿದರು, ಅದರಿಂದ ಸೋಲುಗಳ ಕಡೆಗೆ, ಕೊನೆಗೆ ಬದುಕಿನ ಅಂತ್ಯಕ್ಕೂ ಬಂದರು. ಇದೂ ಆ ವಿಶ್ವನಿಯಾಮಕನ ಲೀಲೆಯೇ. ಆ ವಿಶ್ವ ನಿಯಾಮಕನ ಎಲ್ಲ ಕ್ರಿಯೆಗಳಿಗೆ ವ್ಯಾಖ್ಯಾನ ಹೇಗೆ ತಾನೇ ಸಾಧ್ಯ. ಆ ವಿಶ್ವನಿಯಾಮಕ, ಈ ಪ್ರಪಂಚದಲ್ಲಿ ಆಯ್ಕೆ ಮಾಡಿದ ಕೆಲವೊಂದು ಮಹನೀಯರ ಮೂಲಕ ಒಂದಷ್ಟು ಅಚ್ಚಳಿಯದ ಕೃತಿಗಳನ್ನು ಮೂಡಿಸಿ ಅರಳಿಸಿರುವುದನ್ನು ಮಾತ್ರ ನಾವು ಅನುಭಾವಿಸಲು ಸಾಧ್ಯ. ಆ ವಿಶ್ವ ನಿಯಾಮಕ ಆಯ್ಕೆ ಮಾಡಿದ ಮಹಾನ್ ಕುಸುಮಗಳ ಸಾಲಿನಲ್ಲಿ ಪುಟ್ಟಣ್ಣ ಕೂಡ ಒಬ್ಬರು ಎಂಬುದು ಮಾತ್ರ ನಿರ್ವಿವಾದ. ಆ ಪುಟ್ಟಣ್ಣ ಕಣಗಾಲ್ ಎಂಬ ಮಹಾನ್ ಕುಸುಮಕ್ಕೆ ನಮ್ಮ ಅನಂತ ನಮನಗಳು.

Tag: Puttanna Kanagal 

ಕಾಮೆಂಟ್‌ಗಳಿಲ್ಲ: