ಭಾನುವಾರ, ಜನವರಿ 20, 2019

ಕುಮಾರವ್ಯಾಸ


ಕುಮಾರವ್ಯಾಸ
 ಇಂದು ಕುಮಾರವ್ಯಾಸ ಜಯಂತಿ ಅಂತ ಅಲ್ಲಲ್ಲಿ ತಿಳಿದು ಬಂತು. ಹೀಗಾದರೂ ನಮ್ಮ ಕನ್ನಡದ ಮಹತ್ವದ ಹಿರಿಮೆಯಾದ ಕುಮಾರವ್ಯಾಸ ಎಂಬ  ಅಂಕಿತವನ್ನು  ನೆನೆಯುವ  ಅವಕಾಶವಾಗಿದೆ.  ನಮ್ಮ ಕಾಲದವರು ಅನೇಕ ವಿದ್ವಾಂಸರು ಮತ್ತು ಗಮಕಿಗಳಿಂದ  ಕುಮಾರವ್ಯಾಸ ಭಾರತದ ಅಮೃತಸುಧೆಯನ್ನು ಒಂದಿನಿತು ಪಾನ ಮಾಡಿದ  ಪುಣ್ಯವಂತರು ಎನ್ನಲಡ್ಡಿಯಿಲ್ಲ.  
ಕುಮಾರವ್ಯಾಸ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದು, ಜನಪ್ರಿಯ ಗದುಗಿನ ಭಾರತವನ್ನು ಬರೆದ ಕವಿ. ಈತ ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿ: ಉನ್ನತೋನ್ನತರೆನ್ನಬಹುದಾದ ನಾಲ್ವರೊ ಐವರೊ ಮಹಾಕವಿಗಳಲ್ಲಿ ಒಬ್ಬ. ಕುಮಾರವ್ಯಾಸ ಎಂಬ ಪದ ಈಗ ಇವನ ಹೆಸರು ಎಂಬಂತೆ ಬಳಕೆಯಲ್ಲಿದೆ. ದಿಟ್ಟದಲ್ಲಿ ಇದು ಕವಿಯ ಕಾವ್ಯನಾಮವೂ ಅಲ್ಲ; ಪ್ರಾಯಶಃ ಮೊದಲಲ್ಲಿ ಬಿರುದಾಗಿ ಬಂದದ್ದು. ಕವಿ ತನ್ನನ್ನು ತಾನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದರೆ ಅದನ್ನು ನಾವು ಕಾವ್ಯನಾಮ ಎನ್ನಬೇಕು; ಹಿರಿಯರು ಅಭಿಮಾನಿಗಳು ಅವನನ್ನು ಈ ಹೆಸರಿನಿಂದ ಹೊಗಳಿದರೆಂದು ತಿಳಿದೆವಾದರೆ ಅದು ಒಂದು ಬಿರುದು ಎನ್ನಬೇಕಾಗುತ್ತದೆ. ಕುಮಾರವ್ಯಾಸ ಎಂದು ಹೆಸರಾಗಿರುವ ಈ ಕವಿಯ ವಾಡಿಕೆಯ ಹೆಸರು ಏನಾಗಿತ್ತು ಎಂದು ಖಂಡಿತವಾಗಿ ಹೇಳುವಂತಿಲ್ಲ. ನಾರಣಪ್ಪ ಎಂದಿತ್ತು ಎಂದು ಪ್ರತೀತಿ. ಕವಿ ಗದುಗಿನ ವೀರನಾರಾಯಣದೇವರ ಉಪಾಸಕ: ಆ ದೇವರನ್ನು ತನ್ನ ಕಾವ್ಯದಲ್ಲಿ ನಾರಾಯಣ, ನಾರಯಣ, ನಾರಣ ಎಂದು ಕರೆದಿದ್ದಾನೆ. ಇದರ ಆಧಾರದ ಮೇಲೋ ಇಲ್ಲ ಪೂರ್ವದಿಂದ ಹಾಗೆಂದು ಬಂದದ್ದರಿಂದಲೋ ಜನ ಎಂದೋ ಇವನ ಹೆಸರು ನಾರಣಪ್ಪ ಎಂದು ನಿರ್ಧರಿಸಿದರು. ಈಗ ನಾವು ಈ ಭಾರತ ಗದುಗಿನ ನಾರಣಪ್ಪ ಬರೆದದ್ದು ಎಂದು ಹೇಳುತ್ತೇವೆ. ಇದರಲ್ಲಿ ತಪ್ಪೇನೂ ಇಲ್ಲ; ಆದರೆ ಇದಕ್ಕೆ ಸರಿಯಾದ ಆಧಾರ ಇಲ್ಲ ಎನ್ನುವುದು ನೆನಪಿನಲ್ಲಿರಬೇಕು. ಸ್ಥಳೀಯ ಪ್ರತೀತಿಯಂತೆ ಕುಮಾರವ್ಯಾಸ ಗದುಗಿನ ಬಳಿಯ ಕೋಳಿವಾಡದ ಕರಣಿಕರ ವಂಶಸ್ಥ, ಕೋಳಿವಾಡದ ಈ ಮನೆತನದವರ ಇತಿಹಾಸದಿಂದ ಮಾಧವ ಎಂಬ ಹಿರಿಯರೊಬ್ಬರ ಮಗ ಲಕ್ಷ್ಮಣ ಎಂಬಾತ ವಿಜಯನಗರದ ಅರಸರಲ್ಲಿ ಮಂತ್ರಿಯಾಗಿದ್ದನೆಂದೂ ಅವನ ಐದು ಜನ ಗಂಡುಮಕ್ಕಳಲ್ಲಿ ಹಿರಿಯವ ವೀರನಾರಾಯಣ ಎಂದೂ ತಿಳಿಯುತ್ತದೆ. ವಿಜಯನಗರದ ಅರಸರಲ್ಲಿ ಲಕ್ಷ್ಮಣ ಎಂಬ ಹೆಸರ ಮಂತ್ರಿ ಒಬ್ಬ ಇದ್ದದ್ದು ಒಂದನೆಯ ದೇವಾರಾಯನಲ್ಲಿ. ಅರಸ ತೀರಿಕೊಂಡ ಮೇಲೆ ಮಂತ್ರಿ ತನ್ನ ಉಂಬಳಿಯ ಕೋಳಿವಾಡಕ್ಕೆ ಬಂದನಂತೆ.

ಕುಮಾರವ್ಯಾಸನ ಭಾರತ ಧರ್ಮರಾಜನ ಪಟ್ಟಾಭಿಷೇಕದಿಂದ ಮುಗಿಯುತ್ತದೆ. ಕೃಷ್ಣದೇವರಾಯನ ಆಸ್ಧಾನದ ತಿಮ್ಮಣ ಕವಿ ಇದರ ಕಥೆಯನ್ನು ಮುಂದುವರಿಸಿ ಇನ್ನೆಂಟು ಪರ್ವಗಳನ್ನು ರಚಿಸಿದ್ದಾನೆ. ಆ ಕಾವ್ಯದ ಪೀಠಿಕೆಯಲ್ಲಿ ಆತ ಮೊದಲು ಕುಮಾರವ್ಯಾಸನ ಕಾವ್ಯವನ್ನು ಪೂರ್ತಿ ಮಾಡು ಎಂದು ಅರಸ ಅಪ್ಪಣೆ ಮಾಡಿದ್ದಾಗಿ ಹೇಳಿದ್ದಾನೆ. ಕೃಷ್ಣದೇವರಾಯನ ಕಾಲ 1509-20. ಈ ಮಾತಿನ ಆಧಾರದ ಮೇಲೆ ರೈಸ್ ಮತ್ತು ಕಿಟ್ಟೆಲರು ಕುಮಾರವ್ಯಾಸ ಸುಮಾರು 1500ರ ಕಾಲಕ್ಕೆ ಜೀವಿಸಿದ್ದಿರಬಹುದೆಂದು ಊಹಿಸಿದರು. ಕೋಳಿವಾಡದ ಕರಣಿಕರ ಮನೆತನದ ಲಕ್ಕರಸನ ಹಿರಿಯ ಮಗ ವೀರನಾರಾಯಣ ಈ ಕಾವ್ಯವನ್ನು ರಚಿಸಿದ ಎನ್ನುವುದಾದರೆ ಕಾವ್ಯ 1430-1500ರ ಅಂತರದಲ್ಲಿ ರಚಿತವಾಯಿತೆನ್ನಬೇಕು. ಇಂತಹ ಹಲವು ವಿಚಾರಗಳು ಊಹೆಗಳಿಗೆ ಸೇರಿದ್ದು.  ನಮ್ಮ ಪೂರ್ವಿಕರು ಇಂಥ ಮಾತಿಗೆ ಬಹಳ ಗಮನ ಕೊಡದೆ ಕಾವ್ಯವನ್ನು ಸವಿದು ಸಂತೋಷಪಟ್ಟರು. ನೀತಿ ಕಲಿತರು. ಭಕ್ತಿಯನ್ನನುಭವಿಸಿದರು, ಬಾಳನ್ನೇ ಹಸನು ಮಾಡಿಕೊಂಡರು. ಕುಮಾರವ್ಯಾಸನ ಕಾವ್ಯ ಈ ಎಲ್ಲವನ್ನೂ ಸಾಧಿಸಲು ಪರ್ಯಾಪ್ತವಾದ ಒಂದು ಸಾಧನೆ. ಅಕ್ಷರವಿದ್ಯೆ ಅಷ್ಟೇನೂ ಹರಡದಿದ್ದ ಅವನ ಕಾಲದಲ್ಲಿ, ಅವನಾಚಿನ ಕಾಲದ ನಾಲ್ಕು ಶತಮಾನಗಳಲ್ಲಿ ಜನತೆ ಈ ಕಾವ್ಯವನ್ನು ಪುರಾಣಶ್ರವಣ ಕ್ರಮದಲ್ಲಿ ಗಮಕಿಗಳಿಂದ ಕೇಳಿ ಅನುಭವಿಸಿತು. ನಮ್ಮಲ್ಲಿ ಉಪಾಧ್ಯಾಯ. ಶಿಷ್ಯ, ಕಾವ್ಯವನ್ನು ಪಾಠ ಹೇಳುತ್ತಿದ್ದದ್ದು ಕಲಿಯುತ್ತಿದ್ದದ್ದು ಗಮಕದ ಕ್ರಮದಲ್ಲಿಯೇ, ಕವಿಯೇ ಗಮಕಿಯೂ ಆಗಿದ್ದದ್ದು ಸಂಪ್ರದಾಯದಲ್ಲಿ ಉಂಟು. ಕುಮಾರವ್ಯಾಸ ತನ್ನ ಕಾವ್ಯವನ್ನು ಗಮಕದಲ್ಲಿ ಹೇಳುತ್ತಿದ್ದನೆಂದೇ ಗದುಗಿನ ಪ್ರಾಂತದಲ್ಲಿ ಪ್ರತೀತಿ. ಕಳೆದ ಶತಮಾನದಲ್ಲಿ ಬಾಳಿದ  ಬಾಳಿದ ಮಹಾಕವಿ ಬಸವಪ್ಪಶಾಸ್ತ್ರಿಗಳು ಈ ಗ್ರಂಥವನ್ನೂ ಇತರ ಗ್ರಂಥಗಳನ್ನೂ ಬಹು ಚೆನ್ನಾಗಿ ಓದಿ ಹೇಳುತ್ತಿದ್ದರಂತೆ. ಮುಂದೆ ಅನೇಕ ಮಹನೀಯ ವಿದ್ವಾಂಸರುಗಳು ಮತ್ತು  ಗಮಕಿ ಶ್ರೇಷ್ಠರು ಈ ಕಾವ್ಯವನ್ನು ಜನಮಾನಸಕ್ಕೆ ಹತ್ತಿರವಾಗಿಸಿದ ದೆಸೆಯಿಂದಾಗಿ  ಕುಮಾರವ್ಯಾಸ ಕವಿ ಕನ್ನಡ ಜನತೆಯ ಅತ್ಯಂತ ಜನಪ್ರಿಯ ವರಕವಿ, ಮಹಾಕವಿ ಆಗಿ  ಪ್ರತಿಷ್ಠಿತನಾಗಿದ್ದಾನೆ.

ಕುಮಾರವ್ಯಾಸನ  ಕಾವ್ಯ ಜನರ ಮನಸ್ಸನ್ನು ಸೂರೆಗೊಂಡಿರುವುದರ ಮುಖ್ಯ ಕಾರಣ ಮೂರು. ಮೊದಲಾಗಿ ಅದು ಬಹುಪಾಲು ಓದುತ್ತಿದ್ದಂತೆ, ಕೇಳುತ್ತಿದ್ದಂತೆ. ಅರ್ಥವಾಗುತ್ತದೆ. ಎರಡನೆಯದಾಗಿ ವಿಸ್ತಾರವಾಗಿ ಒಂದು ಕಥೆಯನ್ನು ಹೇಳುವಲ್ಲಿ ಅದು ಮತ್ತೆ ಮತ್ತೆ ರಸಸ್ಥಾನಗಳನ್ನು ಮುಟ್ಟುತ್ತದೆ. ಮೂರನೆಯದಾಗಿ ಅದು ಜನರ ಮನೋಧರ್ಮದ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತದೆ. ಕಾವ್ಯಸುಲಭವಾಗಿ ಅರ್ಥವಾಗುವುದಕ್ಕೆ ಕಾರಣ ಅದು ಷಟ್ಟದಿಯಲ್ಲಿರುವುದು, ಹತ್ತಿರ ಹತ್ತಿರ ಬಳಕೆಯ ಭಾಷೆಯಲ್ಲಿರುವುದು. ಇಲ್ಲಿ ಕೃಷ್ಣಭಕ್ತಿ ಮುಖ್ಯ ವಿಷಯ. ಕುಮಾರವ್ಯಾಸನ ಕಾಲ ನಾಡಿನಲ್ಲಿ ಶಿವಭಕ್ತಿ ವಿಷ್ಣುಭಕ್ತಿ ಮಹಾಪೂರವಾಗಿ ತುಂಬಿ ಬಂದ ಕಾಲ; ಶಿವಶರಣರ, ಹರಿದಾಸರ, ವಚನದಲ್ಲಿ ನಾಮಾಮೃತ ತುಂಬಿದ ಕಾಲ. ಇಂಥ ವಚನಗಳ ರಚನೆಯ ಪ್ರವೃತ್ತಿ, ಚದುರು, ಕುಮಾರವ್ಯಾಸನಲ್ಲಿ ಉಸಿರಾಟದಂತೆ ಸಹಜವಾಗಿತ್ತಲ್ಲದೆ  ತುಂಬಿ ಮೇಲೆ ಹರಿಯಿತು. ಕುಮಾರವ್ಯಾಸ ಕವಿ ಭಾರತದ ಕಥೆಯನ್ನು ಕೃಷ್ಣಕಥೆ ಎಂದೇ ವರ್ಣಿಸಿದ. ಅದು 'ಚಾರುಕವಿತೆಯ ಬಳಕೆಯಲ್ಲ' ಎಂದು ಮೂದಲೆಯನ್ನೂ ನುಡಿದ. ಅದನ್ನು ನುಡಿವಲ್ಲಿಯೇ ವೀರನಾರಾಯಣನ ಕವಿ, ಲಿಪಿಕಾರ ಕುಮಾರವ್ಯಾಸ ಎಂದ; ತಾನು ಬರಿಯ ಬರೆದಾತ; ಕೃತಿಕಾರ ದೇವರು. ಅಂತೇ 'ಹರಿಯ ಬಸಿರೊಳಗಖಿಲ ಲೋಕದ ವಿರಡ ಅಡಗಿಹವೋಲು ಭಾರತ ಶರಧಿಯೊಳಗಡಗಿಹವು ಅನೇಕ ಪುರಾಣಶಾಸ್ತ್ರಗಳು' ; 'ಅರಸುಗಳಿಗಿದುವೀರ ದ್ವಿಜರಿಗೆ ಪರಮವೇದದ ಸಾರ ಯೋಗೀಶ್ವರರ ತತ್ವ ವಿಚಾರ, ಮಂತ್ರೀಜನಕೆ ಬುದ್ಧಿಗುಣ. ವಿರಹಿಗಳ ಶೃಂಗಾರ, ವಿದ್ಯಾಪರಿಣತರಲಂಕಾರ, ಕಾವ್ಯಕೆ ಗುರು' ಎಂದ. ಜಾರುಕವಿತೆಯ ಬಳಕೆಯಲ್ಲ; ಆದರೂ 
ಮೂಲ ಭಾರತದ ಕಥೆಯನ್ನು ಕಾವ್ಯಕುಲಕ್ಕೆ ಗುರುವಾಗುವಂತೆ ಕನ್ನಡಿಸುವಲ್ಲಿ ಕುಮಾರವ್ಯಾಸ ವ್ಯಾಸಮಹರ್ಷಿ ಹೇಳಿದ ವಿಷಯ ಅಷ್ಟನ್ನೇ ಸಂಗ್ರಹಿಸಿ ಮುಗಿಸಲಿಲ್ಲ. ಕಥೆಯನ್ನು ತನ್ನದಾಗಿ ಮಾಡಿಕೊಂಡು, ಅದನ್ನು ತನ್ನ ರುಚಿಯನ್ನನುಸರಿಸಿ ಮತ್ತೆ ಹೇಳಿದ; ಅದನ್ನು ಭಾರತಕಥಾಮಂಜರಿ ಎಂದು ಕರೆದ. ಮಹಾಭಾರತವನ್ನು ಸಂಗ್ರಹಿಸುವಲ್ಲಿ ಕವಿ ಮುಖ್ಯವಾಗಿ ಮೂಲ ಭಾರತದ ಕಥೆಯನ್ನು, ಜೊತೆಗೆ ಕೃಷ್ಣನ ಮಹಿಮೆಯನ್ನು ಪ್ರಕಟಿಸುವ ಪ್ರಸಂಗಗಳನ್ನು ಎತ್ತಿಕೊಂಡಿದ್ದಾನೆ. ಸಂಗ್ರಹದ ಸುಮಾರು ಎಂಟುಸಾವಿರ ಷಟ್ಪದಿ ಮೂಲದ ಲಕ್ಷ ಶ್ಲೋಕದ ಎಂಟರಲ್ಲಿ ಒಂದು ಭಾಗ ಆಗುತ್ತದೆ. ಹೀಗಿದ್ದೂ ಕವಿ ಇಷ್ಟಪಟ್ಟಿರುವಲ್ಲಿ ಮೂಲಕ್ಕಿಂತ ವಿಸ್ತಾರವಾಗಿಯೇ ಕಥೆಯನ್ನು ವಿಸ್ತರಿಸುತ್ತಾನೆ. ದ್ರೌಪದೀ ಸ್ವಯಂವರದ ಪ್ರಸಂಗ, ಅರ್ಜುನ ಪಾಶುಪತಾಸ್ತ್ರವನ್ನು ಪಡೆದ ಕಥೆ. ಉತ್ತರನ ಪ್ರತಾಪದ ಕಥೆ, ಅಭಿಮನ್ಯುವಿನ ವಿವಾಹದ ಕಥೆ-ಇವು ಈ ವಿಸ್ತಾರಕ್ಕೆ ಉದಾಹರಣೆಗಳು. ಕೃಷ್ಣಭಕ್ತಿಯನ್ನು ಪ್ರಕಟಿಸಲು ಆರಿಸಿರುವ ಪ್ರಸಂಗಗಳ ಉದಾಹರಣೆಗಳು ಎಂದರೆ-ಶಿಶುಪಾಲವಧೆ, ದೌಪದೀವಸ್ತ್ರಾಪಹರಣ, ಸಂಧಾನಕ್ಕಾಗಿ ಬಂದ ಕೃಷ್ಣ ಹಸ್ತಿನಾಪುರವನ್ನು ಹೊಕ್ಕ ಸಂದರ್ಭ, ಸಂಧಾನವನ್ನು ನಡೆಸಿದ ಸಂದರ್ಭ-ಇವುಗಳ ಕಥನ. ಕೃಷ್ಣ ಸಭೆಯನ್ನು ಹೊಕ್ಕಾಗ ದುರ್ಯೋಧನ ಪೀಠದಿಂದ ಏಳಲಿಲ್ಲ. ಕೃಷ್ಣ ನೆಲವನ್ನು ಉಂಗುಟದಿಂದ ಮೀಟಿದ. ಪೀಠದ ಗೊಣಸು ಮುರಿದು ದುರ್ಯೋಧನ ಕೃಷ್ಣನ ಪಾದದ ಮೇಲೆ ಬಿದ್ದ. ಮಹಾಭಾರತದಲ್ಲಿಲ್ಲದ ಇಂಥ ಸಂಗತಿಗಳು ಜನರಲ್ಲಿ ಪ್ರಚಾರದಲ್ಲಿದ್ದವಾಗಿರಬಹುದು, ಇಲ್ಲ ಕವಿ ಕಲ್ಪಿಸಿದವೂ ಆಗಿರಬಹುದು. ಎಂದರೆ ಮೊತ್ತದ ಮಾತು ಇಷ್ಟು. ಕುಮಾರವ್ಯಾಸನ ಕಾವ್ಯ ವ್ಯಾಸನ ಕಾವ್ಯದ ಪ್ರತಿ ಮಾತ್ರ, ಸಂಗ್ರಹ ಮಾತ್ರ ಆಲ್ಲ, ವ್ಯಾಸನ ಕುಮಾರ ಎನ್ನಬಹುದಾದ ಒಬ್ಬ ಉದ್ದಾಮ ಕವಿಯ ಸುಸ್ವತಂತ್ರ ಕೃತಿ. ಮಗ ತಂದೆಯಂತೆ ಇದ್ದೂ ತಾನೇ ಪೂರ್ಣವ್ಯಕ್ತಿ ಆಗಿರುವಂತೆ ಭಾರತ ಕಥಾಮಂಜರಿ ಸುವ್ಯಕ್ತವಾಗಿ, ಮೂಲವನ್ನು ಕೇವಲ ಅವಲಂಬಿಸಿ ಬರೆದ ಸ್ವಸಂಪೂರ್ಣ ಕಾವ್ಯ.
ಜನ್ಮತಃ ಕವಿ ಆದವನು ಮಹಾ ಅನುಭಾವಿಯಾಗಿ ಬರೆದ ಈ ಕಾವ್ಯದಲ್ಲಿ ಭಕ್ತಿ ಮುಖ್ಯ ರಸವಾಗಿ ಮತ್ತೆ ಮತ್ತೆ ಮಡುಗಟ್ಟಿ. ಮತ್ತೆ ಮತ್ತೆ ಹೊನಲಾಗಿ ಹರಿಯುವುದು ಸಹಜವಾಗಿದೆ. ಪಂಡಿತರ ಪ್ರಪಂಚವನ್ನು ಬಲ್ಲ ರಸಿಕಚೇತನ ಆದುದರಿಂದ ಇವನ ದೈವಸ್ತವಗಳಲ್ಲಿ ವೇದ ಉಪನಿಷತ್ತುಗಳ ಉಪದೇಶ ಕೆನೆ, ಗಿಣ್ಣು, ಜೇನು ಎಂಬಂತೆ ಸಿಹಿಯಾಗುತ್ತದೆ. ವಿಸ್ತಾರವೇ ಈ ಸ್ತವಗಳ ಹೃದಯ. ಗಾಯನದಲ್ಲಿ ಸಂಗತಿಗಳಂತೆ ಹೊಸ ವಿವರಗಳನ್ನು ಒಂದರ ಮೇಲೊಂದನ್ನು ಪೇರಿಸಿ ಪೇರಿಸಿ ಕವಿ ನಮ್ಮ ಮನಸ್ಸನ್ನು ಒಂದು ಮೋಡಿಗೆ ಅಧೀನ ಮಾಡುತ್ತಾನೆ.  ಕುಮಾರವ್ಯಾಸ ಮಹಾಭಾರತದಿಂದ ದಿವ್ಯದೃಷ್ಟಿಯನ್ನು ಪಡೆದು ತನ್ನ ಒಳಗೆ ತನ್ನ ಹೊರಗೆ ಅದರ ಮಹಾಶಕ್ತಿಗಳನ್ನು ಕಂಡು ತನ್ನ ಪಾಲಿಗೆ ಬಂದ ಭಾಗವನ್ನು ತನ್ನ ಜನಕ್ಕೆ ಹಂಚಿದ ಉದೀರ್ಣ ಚೇತನ; ಉದಾತ್ತ ಭಾವುಕ. ಕನ್ನಡ ನಾಡಿನ ಸಂಸ್ಕೃತಿ  ಭರತವರ್ಷದ ಬೇರೆ ಯಾವ ಭಾಗದ ಸಂಸ್ಕೃತಿಗೂ ಸಮವಾಗಿ ಮೇಲೇರಿತ್ತು. ಭರತವರ್ಷದ ಸಂಸ್ಕೃತಿ  ಬೇರೆ ಯಾವ ದೇಶದ ಸಂಸ್ಕೃತಿಗೂ ಕಡಿಮೆಯನ್ನುವ ಕಾರಣವಿಲ್ಲ ಎಂದು ಕುಮಾರವ್ಯಾಸ ತನ್ನ ಕಾವ್ಯದಿಂದ ಸಿದ್ಧಾಂತ ಮಾಡಿದ್ದಾನೆ. ಈ ಅರ್ಥದಲ್ಲಿ ಈತ ಲೋಕದ ಸಂಸ್ಕೃತಿ  ಈ ವರೆಗೆ ಮುಟ್ಟಿರುವ ಮಹಾಪೂರವೊಂದರ ಎತ್ತರವನ್ನು ಗುರುತಿಸುವ ಸಾಕ್ಷಿರೇಖೆಯಾಗಿದ್ದಾನೆ.   

(ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿರುವ ಲೇಖನದ ಕಿರುರೂಪ)

Tag: Kumaravyasa 

ಕಾಮೆಂಟ್‌ಗಳಿಲ್ಲ: