ಬುಧವಾರ, ಜನವರಿ 23, 2019

ಎಸ್. ಎನ್. ಸೇತುರಾಮ್


ಎಸ್. ಎನ್. ಸೇತುರಾಮ್

ನಮ್ಮ ಇಂದಿನ ಕನ್ನಡ ಯುಗದ ಕಲಾವಿದರಲ್ಲಿ ಅತ್ಯಂತ ಸಹಜ ಕಲಾವಿದರೆಂದು  ಗುರುತಿಸಲ್ಪಡುವ; ರಂಗಭೂಮಿ ಮತ್ತು ಕಿರುತೆರೆಗಳ ಕಲಾವಿದ, ನಿರ್ದೇಶಕ, ಮಾತುಗಾರ, ಚಿಂತಕ  ಮತ್ತು ಸೃಜನಶೀಲ ಬರಹಗಾರರಾದ ಎಸ್. ಎನ್. ಸೇತುರಾಮ್ ಅವರು ಜನಿಸಿದ ದಿನವಿದು. 

ಸೇತುರಾಮ್ ಅವರು 1953 ವರ್ಷದ ಜನವರಿ 23ರಂದು ಹಾಸನ ಜಿಲ್ಲೆಯ ಶಂಖ ಎಂಬಲ್ಲಿ ಜನಿಸಿದರು.  ವಿಜ್ಞಾನ  ಪದವೀಧರರಾದ ಅವರು ಓದಿದ್ದು ಅರಸೀಕೆರೆ ಮತ್ತು ಹಾಸನಗಳಲ್ಲಿ. ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಚೀಟಿ ಮಾರುವ ಗುಮಾಸ್ತ ಹುದ್ಧೆಯ  ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸೇತುರಾಮ್,  ಮುಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್ ವರೆಗಿನ ಹುದ್ಧೆಗಳನ್ನು ನಿರ್ವಹಿಸಿದರು.  2007 ವರ್ಷದಲ್ಲಿ  ತಮ್ಮ ಪ್ರವೃತ್ತಿ ಆಸಕ್ತಿಗಳ ಸೆಳೆತಗಳಿಂದ ಸ್ವಯಂ ನಿವೃತ್ತಿ ಪಡೆದ ಅವರು ಆದಾಯ ತೆರಿಗೆ ಸಲಹೆಗಾರರಾಗಿಯೂ ನಿಜಜೀವನದಲ್ಲಿ ಪಾತ್ರವಹಿಸುವುದಿದೆ.

ಸೇತುರಾಮ್ ಅವರಿಗೆ ಸಾಹಿತ್ಯಕ ಓದು ಬಲು ಪ್ರಿಯ.  ಕನ್ನಡ ಸಾಹಿತ್ಯವಲ್ಲದೆ ಪಾಶ್ಚಾತ್ಯ ಸಾಹಿತ್ಯಗಳ ಓದಿನಲ್ಲೂ ಅವರಿಗೆ ಅಪಾರ ಆಸಕ್ತಿ.  ಜೊತೆಗೆ ವೃತ್ತಿಯ ನೆಲೆಯಲ್ಲಿರುವಾಗಲೇ ಹವ್ಯಾಸಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡರು. 

ಅನೇಕ  ರಂಗಪ್ರಯೋಗಗಳಲ್ಲಿ ರಂಗಾಸಕ್ತರ ಗಮನಸೆಳೆದಿದ್ದ  ಸೇತುರಾಮ್,  ಅವರು ಮನೆ ಮನೆಗಳಲ್ಲಿ, ಜನಮನ ತಲುಪಿದ್ದು ಟಿ. ಎನ್. ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ ಮತ್ತು ಮುಕ್ತ ಧಾರಾವಾಹಿಗಳಲ್ಲಿ ನಿರ್ವಹಿಸಿದ ಲೀಲಾಜಾಲ ಪಾತ್ರ ನಿರ್ವಹಣೆಗಳಿಂದ.  ಸದಾ ಸೃಜನಶೀಲವಾಗಿದ್ದ ಅವರ ಮನ, ಧಾರಾವಾಹಿಗಳ  ನಿರ್ದೇಶನದತ್ತ ಅವರನ್ನು ತರುವ ಮೂಲಕ ‘ಮಂಥನ’, ‘ದಿಬ್ಬಣ’ ಮತ್ತು ‘ಅನಾವರಣ’ ಮುಂತಾದ ವಿಶಿಷ್ಟ ಧಾರಾವಾಹಿಗಳು ಮೂಡಿಬಂದವು.

ಸ್ವಯಂ ನಾಟಕಕರ್ತರೂ ಆದ ಸೇತುರಾಮ್ ಅವರಿಂದ  ನಿಮಿತ್ತ, ಗತಿ ಮತ್ತು ಅತೀತ ಎಂಬ ನಾಟಕಗಳು ಪ್ರಕಟಗೊಂಡಿವೆ.  ಇದರಲ್ಲಿ ನಿಮಿತ್ತ ನಾಟಕವು ವಿಶ್ವವಿದ್ಯಾಲಯದ ಪಠ್ಯವಾಗಿ ಸಹಾ ಮೂಡಿದೆ. 

ಕಥೆಗಾರರಾಗಿ ಸೇತುರಾಮ್ ಅವರದು ಮತ್ತೊಂದು ನೆಲೆಯ ಸಾಧನೆ.  ಅವರ ಕಥೆಗಳು ‘ನಾವಲ್ಲ’ ಮತ್ತು ‘ದಹನ’ ಎಂಬ ಕಥಾ ಸಂಕಲನಗಳಲ್ಲಿ ಮೂಡಿಬಂದಿರುವುದೇ ಅಲ್ಲದೇ ಅವರ ‘ನಾವಲ್ಲ’ ಕಥಾ ಸಂಕಲನ ಪ್ರತಿಷ್ಟಿತ ‘ಮಾಸ್ತಿ ಕಥಾ ಪುರಸ್ಕಾರ’ದ ಗೌರವಕ್ಕೆ ಪಾತ್ರವಾಗಿದೆ. 

ಹೀಗೆ ವಿವಿಧ ರೀತಿಯಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಗಳಿಂದ  ಜನಮಾನಸದಲ್ಲಿ ಆಪ್ತವಾದ ನೆಲೆ ಹೊಂದಿರುವ  ಎಸ್. ಎನ್. ಸೇತುರಾಮ್ ಅವರ ಸಾಧನೆಗಳು ನಿರಂತರವಾಗಿ ಮುಂದೆ ಸಾಗುತ್ತಿರಲಿ ಮತ್ತು ಅವರ ಬದುಕು ಸಕಲ ಭಾಗ್ಯಗಳಿಂದ ಹಸನಾಗಿರಲಿ ಎಂದು ಆಶಿಸೋಣ. 
Tag: S.N. Sethuram


ಕಾಮೆಂಟ್‌ಗಳಿಲ್ಲ: