ಶನಿವಾರ, ಮಾರ್ಚ್ 2, 2019

ಕೆ. ಚಂದ್ರನಾಥ ಆಚಾರ್ಯ


ಕೆ. ಚಂದ್ರನಾಥ ಆಚಾರ್ಯ

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ನಮ್ಮ  ಮಹಾನ್ ಕಲಾವಿದ ಕೆ. ಚಂದ್ರನಾಥ ಆಚಾರ್ಯರು,  ಫೆಬ್ರವರಿ 28, 1949ರಂದು ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು.  ತಂದೆ ಮಹಾಲಿಂಗ ಆಚಾರ್ಯರು ಮತ್ತು ತಾಯಿ ಸುಶೀಲಮ್ಮ ಅವರು.ತಾವು ಬೆಳೆದು ಬಂದ ಪರಿಸರ ಮತ್ತು ತಾವು ಕಂಡ  ತಾಯಿಯ ತಂದೆ ಮಧೂರ ಮಹಾಲಿಂಗಾಚಾರ್ಯ ಮತ್ತು ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಚಂದ್ರನಾಥ ಆಚಾರ್ಯರು ಅಪಾರವಾಗಿ ಪ್ರಭಾವಿತರಾದವರು.  ಕಾಲೇಜು ಶಿಕ್ಷಣದ ವೇಳೆಯ ಹೊತ್ತಿಗೆ ಅವರಲ್ಲಿ ಕಲಾವಿದನಾಗಬೇಕೆಂಬ ಆಶಯ ದೊಡ್ಡದಾಗಿ ಬೆಳೆದಿತ್ತು.  ಹೊಟ್ಟೆಪಾಡಿಗಾಗಿ ಬೆಂಗಳೂರಿನ  ‘ಮಲ್ಲಿಗೆ’ ಮಾಸಪತ್ರಿಕೆಗೆ ಕಲಾವಿದರಾಗಿ ಕೆಲಸ ಮಾಡುತ್ತಲೇ ಅನೇಕ ಪುಸ್ತಕಗಳಿಗೆ ಮುಖಚಿತ್ರಗಳನ್ನೂ ರಚಿಸುತ್ತಾ ಬಂದರು. 

ಮಹಾನ್ ಕಲಾವಿದ ಆರ್.ಎಂ. ಹಡಪದರ “ಕೆನ್ ಸ್ಕೂಲ್ ಆಫ್ ಆರ್ಟ್” ಸೇರಿದ್ದು ಅವರ ಬದುಕಿನ  ಬಹು ಮುಖ್ಯ ಅಧ್ಯಾಯ. ಕಲಾ ಲೋಕದಲ್ಲಿ ಸೃಜನಶೀಲರಾಗಿ ಬೆಳೆಯುವಲ್ಲಿ ಇದೊಂದು ಪ್ರಮುಖ ಘಟ್ಟವಾಗಿ, ಆಚಾರ್ಯರು  1973 ವರ್ಷದಲ್ಲಿ, ಇಲ್ಲಿಂದ ಕಲಾ ಡಿಪ್ಲೊಮಾ ಪಡೆದರು.

ಪ್ರಜಾವಾಣಿ ಪತ್ರಿಕೆ ಮತ್ತು ಅದರ ಬಳಗದ ನಿಯತಕಾಲಿಕೆಗಳಾದ   ‘ಸುಧಾ’ ಮತ್ತು ‘ಮಯೂರ’ಗಳಲ್ಲಿನ ಚಿತ್ರಗಳಿಂದ  ಚಂದ್ರನಾಥ ಆಚಾರ್ಯರು ಕನ್ನಡ ನಾಡಿನ ಮನೆಮಾತಾದರು.  ಇಲ್ಲಿನ ಕತೆಗಳು ಆಚಾರ್ಯರ ಚಿತ್ರಗಳಿಂದ ತಮ್ಮ ಅರ್ಥ ವ್ಯಾಪ್ತಿ ಮತ್ತು ಆಕರ್ಷಣೀಯ ಗುಣಗಳನ್ನು ವೃದ್ಧಿಸಿಕೊಂಡವು.  ಅವರ ಕಲೆ ನವ್ಯಕಲೆಯ ಚಿತ್ರರಂಗವನ್ನೂ ಆಕರ್ಷಿಸಿತು.  ಲಂಕೇಶರ ‘ಪಲ್ಲವಿ’, ‘ಎಲ್ಲಿಂದಲೋ ಬಂದವರು’, ‘ಅನುರೂಪ’, ಮತ್ತು ಗಿರೀಶ್ ಕಾಸರವಳ್ಳಿ ಅವರ ‘ಘಟಶ್ರಾದ್ಧ’ ಮುಂತಾದ ಅನೇಕ  ಚಿತ್ರಗಳಲ್ಲಿ ಚಂದ್ರನಾಥ ಆಚಾರ್ಯರ ಕಲಾ ನಿರ್ದೇಶನ ಶೋಭಿಸಿತು. 

1979ರ ವರ್ಷದಲ್ಲಿ ಮಹಾನ್ ಕಲಾವಿದರಾದ ಕೆ.ಕೆ. ಹೆಬ್ಬಾರ್ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಂದ್ರನಾಥ ಆಚಾರ್ಯರಿಗೆ ವಿದ್ವಾಂಸ ವೇತನ ಸಂದು, ಶಾಂತಿ ನಿಕೇತನದಲ್ಲಿ ಎರಡು ವರ್ಷದ ಗ್ರಾಫಿಕ್ಸ್ ಕಲಾ ಅಧ್ಯಯನಕ್ಕೆ ಸದವಕಾಶ ಕೂಡಿಬಂತು.  1981ರಲ್ಲಿ ಶಾಂತಿನಿಕೇತನದಿಂದ ಸ್ನಾತಕೋತ್ತರ ಪದವೀಧರರಾಗಿ ಹೊರಹೊಮ್ಮಿದ ಆಚಾರ್ಯರಿಗೆ, ಅಲ್ಲಿನ ಶ್ರದ್ಧಾಪೂರ್ಣ ಅಧ್ಯಯನ ಅವರ ಕಲೆಗಳಲ್ಲಿ ಮತ್ತಷ್ಟ್ರು ವಿಸ್ತೃತಿ ವೈವಿಧ್ಯಗಳನ್ನು ಹೊರಹೊಮ್ಮಿಸುವಲ್ಲಿ ಪ್ರಮುಖ ಘಟ್ಟವಾಯಿತು.  ಅಲ್ಲಿಂದ ಪುನಃ  2003ರವರೆವಿಗೆ, ಪತ್ರಿಕಾಲೋಕದಲ್ಲಿ ತಮ್ಮ ಕಲೆಯನ್ನು ಬೆಳಗಿದ ಚಂದ್ರನಾಥ ಆಚಾರ್ಯರು, ತಮ್ಮ ಕಲೆಯನ್ನು ವಿಶಾಲ ಲೋಕದಲ್ಲಿ ತೆರೆದಿಡುವ ನಿಟ್ಟಿನಲ್ಲಿ ಅಲ್ಲಿಂದ ಹೊರಬಂದರು. 

ಚಂದ್ರನಾಥ ಆಚಾರ್ಯರ ಕಲೆಗಳಲ್ಲಿ ಪೌರಾಣಿಕ, ತಾಂತ್ರಿಕ ಹಾಗೂ ಸಾಮಾಜಿಕಕ್ಕೆ ಸಂಬಂಧಿಸಿದಂತೆ, ಜನ ಸಾಮಾನ್ಯರಿಂದ ಕಲಾಶ್ರೇಷ್ಠರವರೆಗೆ, ಎಲ್ಲರೂ   ತಲೆದೂಗುವಂತಹ  ಸರಳ ರೇಖೆಗಳ, ಆಕರ್ಷಕ ಬಣ್ಣಗಳ ಭಾರತೀಯ ಶೈಲಿಯ ಚಿತ್ರಗಳು ಮತ್ತು ವಿಶಿಷ್ಟ ವರ್ಣ ಸಂಯೋಜನೆಗಳು ಕಾಣಬರುತ್ತವೆ.  ಭಾರತೀಯ ಕಲೆ, ಪಾಶ್ಚಾತ್ಯ ನವ್ಯಕಲೆಯ ಸಮ್ಮಿಶ್ರಣದ ಕಲಾಕೃತಿಗಳು, ತೈಲವರ್ಣ, ಜಲವರ್ಣ, ಅಕ್ರಾಲಿಕ್, ಪೆನ್ಸಿಲ್ ಮಾಧ್ಯಮಗಳು ಹೀಗೆ ಎಲ್ಲ ನಮೂನೆಗಳಲ್ಲೂ ಚಂದ್ರನಾಥ ಆಚಾರ್ಯರು  ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ರಾಷ್ಟ್ರದ ಪ್ರಮುಖ ಕಲಾಶಿಬಿರಗಳಲ್ಲಿ ಭಾಗವಹಿಸಿರುವ ಚಂದ್ರನಾಥ ಆಚಾರ್ಯರು ಹಲವು ಮಹತ್ವದ  ಏಕವ್ಯಕ್ತಿ ಕಲಾಪ್ರದರ್ಶನ ಮತ್ತು ಸಮೂಹ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರದ ಅನೇಕ ಪ್ರಮುಖ ಕಲಾಶಿಬಿರಗಳಲ್ಲಿ ಭಾಗವಹಿಸಿರುವ ಇವರಿಗೆ 1972ರಲ್ಲಿ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಪುಸ್ತಕ ಮೇಳ, 1979ರಲ್ಲಿ ಕರ್ನಾಟಕದ ಲಲಿತಕಲ ಅಕಾಡೆಮಿಯ ವಾರ್ಷಿಕ ಪ್ರದರ್ಶನ, 1986ರಲ್ಲಿ ಚಂಡೀಘಡದಲ್ಲಿ ನಡೆದ ಅಖಿಲಭಾರತ ಗ್ರಾಫಿಕ್ ಪ್ರದರ್ಶನ,  1998ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ,  2008ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2010 ವರ್ಷದಲ್ಲಿ ಕರ್ನಾಟಕ ಸರ್ಕಾರವು ಕಲಾಲೋಕದಲ್ಲಿನ ಶ್ರೇಷ್ಠ ಸಾಧನೆಗಾಗಿ  ನೀಡುವ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಮುಂತಾದ ಗೌರವಗಳು  ಸಂದಿವೆ.  ವಿಶ್ವದ ಅನೇಕ ಕಲಾ ಪ್ರದರ್ಶನಗಳಲ್ಲೂ ಆಚಾರ್ಯರು ತಮ್ಮ ಕಲೆಯನ್ನು ಬೆಳಗಿದ್ದಾರೆ.

ನಾಡಿನ ಅನೇಕ ಕಲಾ ಹೃದಯಗಳಿಗೆ ಪೋಷಕರಾಗಿ ಮತ್ತು ಮಾದರಿಯಾಗಿ ಬೆಳಗುತ್ತಿರುವ ಚಂದ್ರನಾಥ ಆಚಾರ್ಯರ ಕಲಾ ತೇಜಸ್ಸು ನಿರಂತರ ನಮ್ಮ ಕಲಾ ಲೋಕವನ್ನು ಬೆಳಗುತ್ತಿರಲಿ ಎಂದು ಆಶಿಸುತ್ತಾ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿರುವ ಈ ಹಿರಿಯರಿಗೆ ಶುಭಹಾರೈಸೋಣ.

Tag: K. Chandranath Acharya, Chandranatha Acharya

ಕಾಮೆಂಟ್‌ಗಳಿಲ್ಲ: