ಶುಕ್ರವಾರ, ಮೇ 10, 2019

ದೇವರಕೊಂಡಾ ರೆಡ್ಡಿ

ದೇವರಕೊಂಡಾ ರೆಡ್ಡಿ

ಇಂದು ಮಹಾನ್ ವಿದ್ವಾಂಸ, ಶಾಸನ ಶಾಸ್ತ್ರಜ್ಞ ಮತ್ತು ಆತ್ಮೀಯ ಸರಳತೆಯೇ ಮೈವೆತ್ತಂತ ಡಾ. ದೇವರಕೊಂಡ ರೆಡ್ಡಿ ಅವರ ಜನ್ಮದಿನ.

ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯದಲ್ಲಿ ಅತ್ಯಂತ ಶಿಸ್ತಿನ ಅಧ್ಯಯನ ನಡೆಸುತ್ತಿದ್ದ ಇವರ ಸಂಶೋಧನೆಗೆ ಆಗಾಗ ಆತ್ಮೀಯ ಮಾತುಕತೆ ಮೂಲಕ ತೊಂದರೆ ಕೊಡುತ್ತಿದ್ದವ ನಾನು.

ಬೆಂಗಳೂರಿನ ಅನೇಕಲ್ ಬಳಿ ತಳಿರಸ್ತೆಯಲ್ಲಿ ತಮಿಳುನಾಡಿನ ಗಡಿಗೆ ಹತ್ತಿದಂತೆ ಇರುವ ವಣಕನಹಳ್ಳಿಯಲ್ಲಿ ಜನಿಸಿದ ದೇವರಕೊಂಡಾ ರೆಡ್ಡಿಯವರು ನೋಡಲಿಕ್ಕೆ ಸರಳ ಸಾಮಾನ್ಯ ವ್ಯಕ್ತಿ. ಅವರೊಬ್ಬ ಅನುಪಮ ವಿದ್ವಾಂಸ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರೌಢಶಾಲಾ ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಗೆಜೆಟಿಯರ‍್ ಇಲಾಖೆಯಲ್ಲಿ ಅನ್ವೇಷಕರಾಗಿ ಕೆಲಸಮಾಡಿ ಅನಂತರ ಕನ್ನಡ ವಿಶ್ವವಿದ್ಯಾಲಯದ  ಶಾಸನಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಮೂಲಕ ಅವರು ಈಗಲೂ ಅಪಾರ ನಿಸ್ವಾರ್ಥತೆಯ ಕೆಲಸ ಮಾಡುತ್ತಿದ್ದಾರೆ.

ಶಾಸನಗಳ ಲಿಪಿ ಮತ್ತು ಪಠ್ಯ ವಿಶ್ಲೇಷಣೆಯಲ್ಲಿ ದೇವರಕೊಂಡಾ ರೆಡ್ಡಿ ಅಪಾರವಾದ ವಿದ್ವತ್ತತೆಯನ್ನು ಸಾಧಿಸಿದ್ದಾರೆ. ಹಲ್ಮಿಡಿ ಶಾಸನ ಮತ್ತು ತಮಟಕಲ್ಲು ಶಾಸನಗಳನ್ನು ಕುರಿತು ಅವರು ಮಾಡಿರುವ ವಿಶ್ಲೇಷಣೆ ವಿಶಿಷ್ಟವಾದುದು. ಅವರ ’ತಲಕಾಡಿನ ಗಂಗರ ದೇವಾಲಯಗಳು: ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧವು ಶಾಸನಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ರಚಿತವಾದ ಒಂದು ಮೌಲಿಕ ಕೃತಿ. ಗಂಗರ ಶಿಲ್ಪಕಲೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ದೇವರಕೊಂಡರೆಡ್ಡಿ. ಹಂಪಿಯ ಕನ್ನಡ ವಿವಿಯ ಪರವಾಗಿ ಕ್ಷೇತ್ರಕಾರ್ಯ ನಡೆಸಿ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ‍್ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಸನಸಂಪುಟಗಳನ್ನು ಪ್ರಕಟಿಸಿದ್ದಾರೆ. ಲಿಪಿಯ ಹುಟ್ಟು ಮತ್ತು ಬೆಳವಣಿಗೆ ಅವರ ಇನ್ನೊಂದು ಕೃತಿಯಾಗಿದ್ದು ಜಗತ್ತಿನ ಎಲ್ಲ ಲಿಪಿಗಳ ಹಿನ್ನೆಲೆಯಲ್ಲಿ ಲಿಪಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತು ಹೇಳುತ್ತದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಸಹಾ ಸಂದಿದೆ..

ನಿರಂತರ ಅಧ್ಯಯನ, ಸಂಶೋಧನೆಗಳಿಂದ ಅಪಾರ ಕಾರ್ಯಮಾಡುತ್ತಾ ಇತಿಹಾಸದ ಕುರಿತು ಲೋಕಕ್ಕೆ ಜ್ಞಾನದೀವಿಗೆ ಆಗಿರುವ ಈ ಸರಳ ಸಜ್ಜನಿಕೆಯ ದೇವರಕೊಂಡಾ ರೆಡ್ಡಿ ಅವರ ಬದುಕು ಸಕಲ ಸುಖ, ಸೌಖ್ಯ, ಶಾಂತಿ, ಸಂತೃಪ್ತಿಗಳ ಸೌಭಾಗ್ಯಗಳಿಂದ ನಿರಂತರ ಕಂಗೊಳಿಸುತ್ತಿರಲಿ.

Tag: Devarakonda Reddy

ಕಾಮೆಂಟ್‌ಗಳಿಲ್ಲ: