ಭಾನುವಾರ, ಸೆಪ್ಟೆಂಬರ್ 15, 2019

ಕನ್ನಡ ಸಂಪದ 9 ವರ್ಷ ತುಂಬಿ 10ನೇ ವರ್ಷಕ್ಕೆ ಪ್ರವೇಶ

 

ಕನ್ನಡ ಸಂಪದ 9 ವರ್ಷ ತುಂಬಿ 10ನೇ ವರ್ಷಕ್ಕೆ ಪ್ರವೇಶ

ಫೇಸ್ಬುಕ್ ಲೋಕದಲ್ಲಿ 'ಕನ್ನಡ ಸಂಪದ' ಎಂಬ ಪುಟವನ್ನು ಪ್ರಾರಂಭಿಸಿ 9 ವರ್ಷ ಮುಗಿದು 10ನೇ ವರ್ಷಕ್ಕೆ ಕಾಲಿರಿಸುತ್ತಿದ್ದೇನೆ. ಬದುಕಿನಲ್ಲಿ ಯಾವುದನ್ನೇ ಆಗಲಿ ಉತ್ಸವಿಸಬೇಕೋ ಬೇಡವೋ ಎಂಬ ಸಂದಿಗ್ಧ ಕಾಡುತ್ತೆ. ಉತ್ಸವಿಸಿದಾಗಲೆಲ್ಲ 'ಓಹ್ ಇದು ಇಷ್ಟೇನಾ' ಎಂದು ಮೂಡುವ ಅಸಂತೃಪ್ತಿ; ಹಾಗೂ ಕೆಲವೊಮ್ಮೆ ಕೆಲವರು 'ಯು ಆರ್ ಗ್ರೇಟ್' ಎಂದು 'ಓವರ್ ಉದಾರ ಪ್ರಶಂಸೆ' ತೋರಿದಾಗ 'ನನ್ನಲ್ಲಿ ಹುದುಗಿರುವ ಅಪಾರ ಚಿಕ್ಕತನಗಳು ಸೃಜಿಸುವ ಕಸಿವಿಸಿ' ಈ ಎಲ್ಲ ಉತ್ಸವಗಳ ಅಪೇಕ್ಷೆಗಳು ನನ್ನಲ್ಲಿ ಉದ್ಭವಿಸುವುದನ್ನು ಯಶಸ್ವಿಯಾಗಿ ತಡೆಗಟ್ಟುತ್ತ ಬಂದಿವೆ. ಹಾಗಾಗಿ ಸದ್ಯಕ್ಕೆ ಕನ್ನಡ ಸಂಪದದ ದಶಮಾನವನ್ನು ಉತ್ಸವಕ್ಕೆ ತರುವುದು ಬೇಡ ಎಂಬ ಮನಃಸ್ಥಿತಿಯಲ್ಲಿದ್ದೇನೆ.
ನಾನು ಎಚ್ ಎಮ್ ಟಿ ಸಂಸ್ಥೆಯಲ್ಲಿದ್ದಾಗ ಅಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿದ್ದ, 1980ರಲ್ಲಿ ಪ್ರಾರಂಭಗೊಂಡ ಕನ್ನಡ ಸಂಪದವೇ ನನ್ನ ಈ ಕನ್ನಡ ಸಂಪದ ಪುಟಕ್ಕೆ ಪ್ರೇರಣೆ. ನಾನು ಅಲ್ಲಿ ಎರಡು ದಶಕಗಳ ಕಾಲ ಕಾರ್ಯಕರ್ತನಾಗಿ ಸಲ್ಲಿಸಿದ್ದ ಸೇವೆಯ ಮುಂದುವರಿಕೆಯಾಗಿ ಈ ಪುಟದ ಸೇವೆಯನ್ನು ಭಾವಿಸಿದ್ದೇನೆ.
ಕನ್ನಡ ಸಂಪದ ಪುಟದಲ್ಲಿ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಸ್ಮರಿಸುವುದು ನನ್ನ ಒಂದು ಚಟವಾಗಿದೆ. ಈ ಚಟದಲ್ಲಿ ಸುಮಾರು 2000 ಸಾಧಕ ವ್ಯಕ್ತಿಗಳನ್ನು ಅವರ ಹುಟ್ಟುಹಬ್ಬ/ಸ್ಮರಣೆ ಸಂದರ್ಭದಲ್ಲಿ ಲೇಖನ ರೂಪದಲ್ಲಿ ಸ್ಮರಿಸಿದ ಭಾಗ್ಯ ನನ್ನದಾಗಿದೆ. ಆಗಾಗ ಹಬ್ಬ, ಹಿರಿಯರ ಕವನ, ಮತ್ತಿತರ ಚಿಂತನೆಗಳನ್ನೂ ಹಂಚಿಕೊಳ್ಳುತ್ತೇನೆ.
'ಫೇಸ್ಬುಕ್ ಪೇಜ್' ಮಾದರಿಗೂ ಮತ್ತು 'ಫೇಸ್ಬುಕ್ ಗ್ರೂಪ್' ಮಾದರಿಗೂ ಒಂದು ವೆತ್ಯಾಸವಿದೆ. ಒಂದು 'ಫೇಸ್ಬುಕ್ ಗ್ರೂಪ್'ನಲ್ಲಿ ಸಾವಿರಾರು ಜನರನ್ನು ಒಟ್ಟಿಗೆ ಸೇರಿಸಿಬಿಡಬಹುದು (ಈ ಕಡೆ ಸೇರಿಸುತ್ತಿದ್ದಂತೆ ಆ ಕಡೆ ಬಿಡಿಸಿಕೊಳ್ಳಲು ಜನ ಹೆಣಗುತ್ತಾರೆ ಎಂಬುದು ಮೋಜಿನ ವಿಚಾರ). 'ಫೇಸ್ಬುಕ್ ಪೇಜ್' ನಲ್ಲಿ ಯಾರನ್ನೂ ಸೇರಿಸಲು ಸಾಧ್ಯವಿಲ್ಲ. ಯಾರಾದರೂ ತಾವೇ ಇಚ್ಛೆಪಟ್ಟು ಬಂದು ಪುಟವನ್ನು ಲೈಕ್ ಮಾಡಿದ್ದೇನೆ ಎಂದರೆ ಮಾತ್ರವೇ ಅದರ ಸಂಖ್ಯೆ ಏರುತ್ತೆ. ಪ್ರಾರಂಭಿಕ ದಿನಗಳಲ್ಲಿ ನನ್ನ ಪುಟಕ್ಕೆ ಬನ್ನಿ ಎಂದು ಫೇಸ್ಬುಕ್ ಹೊಂದಿರುವ ಆಹ್ವಾನ ಪತ್ರಿಕೆ ವ್ಯವಸ್ಥೆ ಉಪಯೋಗಿಸಿದ್ದುಂಟು. ಆದರೆ, ನನ್ನ ಹಲವು ಅತ್ಯಂತ ಆಪ್ತ ಸ್ನೇಹಿತರೂ ಕೂಡಾ ನನ್ನ ಪುಟವನ್ನು ಮೆಚ್ಚಿದ್ದೇನೆ ಎಂದು ಹೇಳಿಲ್ಲ, ಜೊತೆಗೆ ಒಮ್ಮೆ ಮೆಚ್ಚಿದ್ದವರು ಕೂಡಾ ತಮ್ಮ ಮೆಚ್ಚುಗೆ ಹಿಂತೆಗೆದುಕೊಂಡಿದ್ದಾರೆ ಎಂದು ಗೊತ್ತಾದಾಗ ಆ ಆಹ್ವಾನ ಕಳಿಸುವುದನ್ನು ಬಿಟ್ಟೆ. ಫೇಸ್ಬುಕ್ನಲ್ಲಿ ನನ್ನ ಸ್ನೇಹಿತರ ಸಂಖ್ಯೆ 700 ಮಾತ್ರಾ. ಅದರಲ್ಲೂ ವಿದೇಶ ಮತ್ತು ಭಾರತದ ವಿವಿಧ ಭಾಗಗಳ ಇತರ ಭಾಷಿಗ ಸ್ನೇಹಿತರು ಇದರಲ್ಲಿ ಬಹುತೇಕರಿದ್ದಾರೆ. ಈ ಎಲ್ಲ ನಿಟ್ಟಿನಲ್ಲಿ ಈ ಕ್ಷಣದವರೆಗೆ 34,643 ಮಂದಿ ಈ ಪುಟವನ್ನು ಬಂದು ಮೆಚ್ಚಿ ಕೈಹಿಡಿದು ನಡೆಸುತ್ತಿದ್ದಾರೆ ಎಂಬುದು ಒಂದು ಊಹಿಸಲಾಗದ ವಿಸ್ಮಯವಾಗಿದೆ. 'ಫಾಲೋಡ್ ಬೈ' ಸಂಖ್ಯೆ ಕೂಡಾ ಸರಿಸುಮಾರು ಅಷ್ಟೇ ಇರುವುದರಿಂದ ಈ ಎಲ್ಲ ಜನ, ನನ್ನ ಕನ್ನಡ ಸಂಪದದ ಬರಹಗಳನ್ನು ತಮ್ಮ ಗೋಡೆಯಲ್ಲಿ ಇರುವುದನ್ನು ಬಯಸಿದ್ದಾರೆ, ಇಲ್ಲವೇ ಅನಿಷ್ಟವೆಂದು ಭಾವಿಸಿಲ್ಲ ಎಂಬುದನ್ನು ದೃಢೀಕರಿಸಿದೆ. ಈ ಎಲ್ಲ ಬೃಹತ್ ಸಂಖ್ಯೆಯ ಜನರೂ ಪ್ರತಿದಿನ ನನ್ನ ಬರಹಗಳನ್ನು ಓದುತ್ತಾರೆ ಎಂಬ ಭ್ರಮೆಯೇನೂ ನನ್ನಲ್ಲಿಲ್ಲ. ಆದರೆ, ಹಲವು ನೂರು ಜನರಾದರೂ ಈ ಬರಹಗಳನ್ನು ಓದಿ, ತಿದ್ದಿ, ವಿಚಾರ ವಿನಿಮಯ ನಡೆಸುತ್ತಿದ್ದಾರೆ.
ಎಲ್ಲಕ್ಕಿಂತ ನನಗೆ ಸಂತೋಷ ಕೊಟ್ಟಿರುವ ಒಂದು ಸಂಗತಿ ಎಂದರೆ, ನಾನು ಬರೆದಿರುವ ವ್ಯಕ್ತಿಗಳ ಸ್ಮರಣೆ ಹೇಗೋ, ಆ ವ್ಯಕ್ತಿಗಳನ್ನು, ಆ ವ್ಯಕ್ತಿಗಳ ಕುಟುಂಬದವರನ್ನು, ಅವರ ವಂಶವಾಹಿನಿಯವರನ್ನು ತಲುಪುತ್ತಿರುವುದು. ಹೀಗೆ ಅವರುಗಳು, "ನನ್ನ ತಂದೆಯನ್ನು, ತಾತನವರನ್ನು, ಅಜ್ಜಿಯನ್ನು ಸ್ಮರಿಸಿದ್ದಕ್ಕೆ" ಸಂತೋಷ ಎಂದು ಸಂತಸ ವ್ಯಕ್ತಪಡಿಸಿದಾಗ ನಾನು ನಿಜಕ್ಕೂ ಸಂತೃಪ್ತಿಯಲ್ಲಿ ತೇಲಿದ್ದೇನೆ.
ಯಾವುದನ್ನೂ ಫಲಾಪೇಕ್ಷೆಯಲ್ಲಿ ಮಾಡಿ ಸಂತೋಷ ಅನುಭವಿಸಲಾಗುವುದಿಲ್ಲ. ಯಾವುದೇ ಹಿರಿಯತನದ ವ್ಯಕ್ತಿಯನ್ನು ಓದಿ, ಅವರ ಕುರಿತು ವಾಕ್ಯಗಳನ್ನು ಪೋಣಿಸಿ, ಓಹ್ ಇಂಥಾ ಮಹನೀಯರ ಸ್ಮರಣೆ ನನಗೆ ದೊರಕಿತು ಎಂದು, ಅವರ ಭಾವಚಿತ್ರ ಮತ್ತು ಲೇಖನವನ್ನು ಮೆತ್ತಿ, ಪೋಸ್ಟಿಸುವ ಬಟನ್ ಅನ್ನು ಒತ್ತುವಾಗ ಅನುಭವಿಸಿದ ಧನ್ಯತೆಯನ್ನು ನಾನು ಯಾವ ಬೆಲೆ ಇರುವ ಕಾರ್ಯಸಾಧನೆಗೆ ಕೂಡಾ ಸಮೀಕರಿಸಲಾರೆ. ಇಂತಹ ಸಂತೃಪ್ತಿ ನನ್ನ ಎಲ್ಲ ಕೆಲಸಗಳಲ್ಲೂ ಇದ್ದಿದ್ದರೆ ಬದುಕು ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಗಾಗ ನನಗೆ ಅನ್ನಿಸುತ್ತೆ.
ನನ್ನ ಕನ್ನಡ ಸಂಪದ ಪುಟದಲ್ಲಿ ಬರೆದದ್ದು ಒಂದು ಕಡೆ ಸಿಗಲಿ ಎಂದು ಅದಕ್ಕ್ಕೆ 'ಸಂಸ್ಕೃತಿ ಸಲ್ಲಾಪ' www.sallapa.com ಎಂಬ ತಾಣ ಮಾಡಿ 6 ವರ್ಷದಿಂದ ನಡೆಸುತ್ತಿದ್ದೇನೆ. ಹಿಂದೆ ನಾನು ಈ ಕನ್ನಡ ಸಂಪದ ಮತ್ತು ಸಲ್ಲಾಪ.ಕಾಮ್ ಪ್ರಾರಂಭಿಸಿದಾಗ ಅಂತರಜಾಲದಲ್ಲಿ ಕನ್ನಡದಲ್ಲಿ ಹೆಚ್ಚು ವ್ಯವಸ್ಥಿತವಾಗಿ ವಿಚಾರಗಳು ಸಿಗುತ್ತರಲಿಲ್ಲ. ಇಂದು ಅಂತಹ ಅನೇಕ ವಿಚಾರಗಳಿಗೆ ನನ್ನ ಬರಹಗಳು ಕೂಡಾ ಆಕರವಾಗಿದೆ ಎಂದು ಆ ಬರಹಗಳನ್ನು ನೋಡಿದರೆ ಗೊತ್ತಾಗುತ್ತದೆ. ಅನೇಕ ಪತ್ರಿಕೆಗಳು ಕೂಡಾ ಬಳಸುತ್ತವೆ. ಅನೇಕ ಮಹನೀಯರುಇಲ್ಲಿಂದ ಕಾಪಿ ಪೇಸ್ಟ್ ಮಾಡಿಕೊಂಡು 'ಓಹ್ ಎಷ್ಟು ಚೆನ್ನಾಗಿ ಬರೆದಿದ್ದೀರಿ ಎಂದು ಆದಕ್ಕೆ ಬರುವ ಕಾಮೆಂಟಿಗೆ ಥಾಂಕ್ ಯು ವೆರಿ ಮಚ್' ಎಂದು ಹೇಳುವುದನ್ನು ಆಗಾಗ ನೋಡುತ್ತಲೇ ಇರುತ್ತೇನೆ.
ಯಾವುದು ಶಾಶ್ವತ? ನಾನು ಬರೆದಿರುವ ಈಗ ಬದುಕಿಲ್ಲದ ಮಹನೀಯರುಗಳ ಜೀವನವನ್ನೂ, ಅವರ ಸಾಧನೆಗಳ ಜೊತೆಗೆ ಅವರು ಬದುಕಿನಲ್ಲಿ ಕಂಡ ಅನೇಕ ವ್ಯತಿರಿಕ್ತತೆಗಳನ್ನು ಮನಸ್ಸಿನ ಮುಂದೆ ನಿಲ್ಲಿಸಿಕೊಂಡಾಗ ಏನನಿಸುತ್ತದೆ? ಅವರು ಬದುಕಿದ್ದರು ಎಂಬುದಷ್ಟೇ ಸತ್ಯ. ಅವರಾಗಲೀ ಅವರ ಗಳಿಕೆ, ಕಷ್ಟಗಳಾಗಲಿ ಯಾವುದು ಶಾಶ್ವತವಿತ್ತು? ಇನ್ನು ಅವರ ಕುರಿತ ನಮ್ಮ ಭಾವುಕತೆಗಳೂ ಅಷ್ಟೇ ಆಶಾಶ್ವತ. ಒಬ್ಬರು ಬದುಕಿದ್ದಾಗ ಅವರ ಕಷ್ಟಗಳ ನಡುವಿನ ಔನ್ನತ್ಯವನ್ನು ಕಿಂಚಿತ್ತೂ ನೆನೆಯದ ಲೋಕ, ಅವರ ಸಾವಿನ ಸುದ್ಧಿಯೊಂದಿಗೆ ತನ್ನನ್ನು ಸೆಲ್ಫಿ ಮಾಡಿಕೊಳ್ಳುತ್ತದೆ. ಮುಂದಿನ ತಿಂಗಳೊಳಗೆ ಅವರ ಜನ್ಮದಿನ ಸ್ಮರಣೆ ಬರುವ ವೇಳೆಗೆ ಅವರು ಮರೆತೇಹೋಗಿರುತ್ತಾರೆ. ಒಂದು ದಿನ ನಾವೂ ಅಷ್ಟೇ. ನಮ್ಮ ಇಂಥಹ ಸಣ್ಣಪುಟ್ಟ ಕಾರ್ಯಗಳೂ ಅಷ್ಟೇ. ನಾವು ಸೇವಿಸುವ ಹನಿ ಹನಿಯನ್ನೂ ಆಸ್ವಾದಿಸಿದೆವೇ? ಆ ಆಸ್ವಾದದ ಅನುಭವವನ್ನು ಕಳೆದುಕೊಂಡು ಬಿಟ್ಟೆವೇ? ನಮ್ಮ ಈ ಆಸ್ವಾದ ಏನಾದರೂ ರಸದ ತಂಪನ್ನು ನಮ್ಮೊಳಗೆ ಇಳಿಸಿತೆ? ಇದು ಈ ಕ್ಷಣದಲ್ಲಿ ನನ್ನಲ್ಲಿ ಮಿಂಚಿಹೋಗುತ್ತಿರುವ ಭಾವಗಳು.
ಯಾವುದೋ ಕ್ಷಣದಲ್ಲಿ ಯಾವುದೋ ಓದಿದ, ಅಭಿವ್ಯಕ್ತಿಸಿದ ಸಾಲುಗಳು, ಯಾವುದೋ ಹೃದಯದಲ್ಲಿ ಉಂಟು ಮಾಡುವ ಮಿಂಚು-ತಂಪುಗಳು, ವಿಶ್ವವೆಂಬ ಪ್ರವಹಿನಿಗೆ ಒಂದು ಪ್ರಮುಖ ನಾಲೆ. ಆ ನಾಲೆಗೆ ಈ 'ಕನ್ನಡ ಸಂಪದ' ಮತ್ತು 'ಸಂಸ್ಕೃತಿ ಸಲ್ಲಾಪ'ಗಳು ಒಂದು ಸಣ್ಣ ತೊರೆಯಾಗಿದ್ದ ಪಕ್ಷದಲ್ಲಿ ಅದೇ ನನ್ನ ಈ ಕೈಂಕರ್ಯದಲ್ಲಿ ನನಗಿರುವ ಕೃತಾರ್ಥತೆ. ಇದನ್ನು ದಯಪಾಲಿಸಿರುವ ತಮಗೆ ನಾನು ಕೃತಜ್ಞ.

Tag: Kannada Sampada

ಕಾಮೆಂಟ್‌ಗಳಿಲ್ಲ: