ಶನಿವಾರ, ಸೆಪ್ಟೆಂಬರ್ 21, 2019

ವಾಣಿಶ್ರೀ ರವಿಶಂಕರ್


ವಾಣಿಶ್ರೀ ರವಿಶಂಕರ್


ಕನ್ನಡ ಸಾಹಿತ್ಯ ಲೋಕದ ಮಹಾನ್ ಚೇತನರಾದ ಮುಳಿಯ ತಿಮ್ಮಪ್ಪಯ್ಯನವರ ಮೊಮ್ಮಗಳು, ನೃತ್ಯ ಕಲಾವಿದೆ, ನೃತ್ಯ ಗುರು, ಕಲಾ ವಿಮರ್ಶಕಿ, ಸಂಗೀತಜ್ಞೆ ಹಾಗೂ ನಮ್ಮೆಲ್ಲರ ಆತ್ಮೀಯರಾದ ವಾಣಿಶ್ರೀ ರವಿಶಂಕರ್ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ.


ವಾಣಿಶ್ರೀ ಅವರ ತಾತನವರಾದ ಮುಳಿಯ ತಿಮ್ಮಪ್ಪಯ್ಯನವರ ಹೆಸರು ಕೇಳಿದರೆ ಕನ್ನಡಿಗರಿಗೆ ಹೃದಯದಲ್ಲಿ ವಿದ್ಯುತ್ ಸಂಚಾರ. ಈ ಸಾಹಿತ್ಯಕ ಹಿನ್ನೆಲೆಯ ಕುಟುಂಬ ಶಿಕ್ಷಣ, ಸಂಸ್ಕೃತಿ ಮತ್ತು ಕಲೆಗಳ ನಿವಾಸವೂ ಹೌದು. ವಾಣಿಶ್ರೀ ರವಿಶಂಕರ್ ಅವರ ತಂದೆ ಎಂ.ಕೆ. ರಮೇಶ್ ಅವರು ಶಿಕ್ಷಣ ತಜ್ಞರು. ತಾಯಿ ಜಯಲಕ್ಷ್ಮೀ ರಮೇಶ್ ಅವರು ಸಂಗೀತ ವಿದುಷಿ.


ವಾಣಿಶ್ರೀ ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಕಲಾನಿಕೇತನದ ಜನಾರ್ಧನ ಅವರಿಂದ ನೃತ್ಯ ಶಿಕ್ಷಣವನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದರು. 1985ರ ವರ್ಷದಲ್ಲಿ ಮಂಗಳೂರಿನಲ್ಲಿ ನೆರವೇರಿದ ಅವರ ಆರಂಗೇಟ್ರಮ್ ನಡೆದ ತಕ್ಷಣದಲ್ಲೇ ಒಂದಾದ ಮೇಲೆ ಒಂದು ಎಂಬಂತೆ ಅವರ ಸುಮಾರು ಇಪ್ಪತ್ತು ನೃತ್ಯಕಾರ್ಯಕ್ರಮಗಳು ಮೈಸೂರು, ಮಡಿಕೇರಿ, ಮಂಗಳೂರು, ಬಂಟ್ವಾಳಗಳಲ್ಲಿ ನಡೆದವು.


ಪ್ರಾರಂಭದಲ್ಲೇ ಸಿಕ್ಕ ಈ ಜನಪ್ರಿಯತೆಯಲ್ಲಿ ತಮ್ಮನ್ನು ಕಳೆದುಕೊಳ್ಳಲು ಒಪ್ಪದ ವಾಣಿಶ್ರೀ ಅವರು ಹೆಚ್ಚಿನ ಸಾಧನೆಗಾಗಿ ನೃತ್ಯ ಕಲೆಯ ಮಹೋನ್ನತ ಪೋಷಕ ಕೇಂದ್ರವಾದ ಚೆನ್ನೈನ ಆಡ್ಯಾರ್ ತಲುಪಿದರು. ಅಲ್ಲಿ ಅವರು ಕಲಿತದ್ದು ಕಲಾಕ್ಷೇತ್ರದ ಸ್ಥಾಪಕರಾದ ಶ್ರೀಮತಿ ರುಕ್ಮಿಣಿ ಅರುಂಡೇಲ್ ಅವರ ನೇರ ಶಿಷ್ಯರಾದ ಗುರು ಶ್ರೀಮತಿ. ಸಾವಿತ್ರಿ ಜಗನ್ನಾಥ ರಾವ್ ಅವರ 'ಪ್ರದಕ್ಷಿಣಾ' ಕೇಂದ್ರದಲ್ಲಿ. ಇಲ್ಲಿ ವಾಣಿಶ್ರೀ ಅವರಿಗೆ ಗುರು ಶ್ರೀಮತಿ ಗೀತಾ ಗೋಪಿನಾಥ್ ಅವರು ಶಾಸ್ತ್ರಗಳ ಬೋಧನೆ ನೀಡಿದರೆ, ಸ್ವಯಂ ಗುರು ಶ್ರೀಮತಿ. ಸಾವಿತ್ರೀ ಜಗನ್ನಾಥ್ ಅವರು ನಟ್ಟುವಾಂಗಮ್ಮ್ ಅಭ್ಯಾಸ ನೀಡಿದರು. ಅಭಿನಯವನ್ನು ಅವರು ಕಲಿತದ್ದು ಗುರುಗಳಾದ ಶ್ರೀಮತಿ. ನಿತ್ಯಕಲ್ಯಾಣಿ ವೈದ್ಯನಾಥನ್ ಮತ್ತು ಶ್ರೀಮತಿ. ಬ್ರಾಗಾ ಬೆಸ್ಸೆಲ್ ಅವರಲ್ಲಿ.


ವಾಣಿಶ್ರೀ ರವಿಶಂಕರ್ ಅವರು ನೃತ್ಯವನ್ನಷ್ಟೇ ಅಲ್ಲದೆ ಶಾಸ್ತ್ರೀಯ ಸಂಗೀತವನ್ನು ತಮ್ಮ ತಾಯಿ ವಿದುಷಿ ಜಯಲಕ್ಷ್ಮಿ ಅವರಲ್ಲಿ ಹಾಗೂ ಚೆನ್ನೈನಲ್ಲಿ ಶ್ರೀಮತಿ ಪದ್ಮಾ ನಾರಾಯಣಸ್ವಾಮಿ ಅವರಲ್ಲಿ ಸಾಧನೆ ಮಾಡಿದರು.


ವಾಣಿಶ್ರೀ ರವಿಶಂಕರ್ ಅವರು 1993ರಲ್ಲಿ ಪ್ರದಕ್ಷಿಣಾ ವತಿಯಿಂದ ಮಡಿಕೇರಿಯಲ್ಲಿ ಸಾವಿರಕ್ಕೂ ಹೆಚ್ಚು ಕಲಾಭಿಮಾನಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿದರು. 1994ರಲ್ಲಿ ಚಿದಂಬರಂನ ಪ್ರಸಿದ್ಧ ನಾಟ್ಯಾಲಂಜಲಿ ಉತ್ಸವದಲ್ಲಿ ಅವರ ಕಾರ್ಯಕ್ರಮ ನಡೆಯಿತು.


1995ರ ವರ್ಷದಲ್ಲಿ ವಾಣಿಶ್ರೀ ಅವರು ಪ್ರಸಿದ್ಧ ಕಲಾವಿದೆ ವೈಜಯಂತಿ ಮಾಲಾ ಅವರೊಂದಿಗೆ ಗುರು ರವೀಂದ್ರನಾಥ ಠಾಗೂರರ 'ಚಂಡಲೀಕ' ನೃತ್ಯ ನಾಟಕ ರೂಪಕದಲ್ಲಿ ಅಭಿನಯಿಸಿದರು. ಮೊದಲು ದೆಹಲಿಯಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅಂದಿನ ರಾಷ್ಟ್ರಪತಿಗಳಾದ ಡಾ. ಶಂಕರ್ ದಯಾಳ್ ಶರ್ಮ ಮತ್ತು ಚುನಾವಣಾ ಅಧಿಕಾರಿಗಳಾಗಿ ಪ್ರಸಿದ್ಧರಾದ ಟಿ.ಎನ್. ಶೇಷನ್ ಅವರೂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 1996 ವರ್ಷದಲ್ಲಿ ಇದೇ ಕಾರ್ಯಕ್ರಮವು ಚೆನ್ನೆನ ಪ್ರಸಿದ್ಧ ನಾರದ ಗಾನ ಸಭಾದಲ್ಲಿ ಜರುಗಿತು. 1996ರಲ್ಲಿ ಜರ್ಮನ್ ಸಹಯೋಗದಲ್ಲಿ ಸಹಾ ಇವರ ಕಾರ್ಯಕ್ರಮ ನಡೆಯಿತು.


ಮುಂದೆ ವಾಣಿಶ್ರೀ ರವಿಶಂಕರ್ ಅವರ ಕಾರ್ಯಕ್ರಮಗಳು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಪ್ರಮುಖ ಉತ್ಸವಗಳು ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿವೆ. ತಿರುಪತಿ, ಉಡುಪಿ, ಚಿದಂಬರಂ, ತಿರುವನಂತಪುರದ ಧಾರ್ಮಿಕ ಕ್ಷೇತ್ರಗಳ ಸನ್ನಿಧಿಗಳಲ್ಲಿ ಗೌರವದ ಆಹ್ವಾನಿತರಾಗಿ ಸಹಾ ಅವರು ತಮ್ಮ ತಂಡದೊಂದಿಗೆ ಅನೇಕ ಬಾರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ವಾಣಿಶ್ರೀ ರವಿಶಂಕರ್ ಅವರು ಚೆನ್ನೈ ನಗರದಲ್ಲಿ 'ನಾಟ್ಯಸಮರ್ಪಣಂ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ವಿಧಾರ್ಥಿಗಳನ್ನು ತಯಾರು ಮಾಡುತ್ತಲೂ ಬಂದಿದ್ದಾರೆ.


ವಾಣಿಶ್ರೀ ರವಿಶಂಕರ್ ಅವರು ಸಂಗೀತ ಕಾರ್ಯಕ್ರಮಗಳ ವಿಮರ್ಶಕರಾಗಿ ಸಹಾ ಪ್ರಸಿದ್ಧ ಮಾಧ್ಯಮಗಳಲ್ಲಿ ಬರೆಯುತ್ತ ಬಂದಿದ್ದಾರೆ.


ಆತ್ಮೀಯರೂ, ಮಹತ್ವದ ಕಲಾ ಸಾದಕರೂ ಆದ ವಾಣಿಶ್ರೀ ರವಿಶಂಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.


Tag: Vanishree Ravishankar


ಕಾಮೆಂಟ್‌ಗಳಿಲ್ಲ: