ಭಾನುವಾರ, ಸೆಪ್ಟೆಂಬರ್ 8, 2019

ಭೂಪೇನ್ ಹಝಾರಿಕ


ಭೂಪೇನ್ ಹಝಾರಿಕ

ಭಾರತದ ಪೂರ್ವೋತ್ತರ ಮೂಲೆಯಿಂದ ಬಂದ ಮೊಟ್ಟಮೊದಲ ಸುಪ್ರಸಿದ್ಧ ಸಂಗೀತಗಾರ, ಹಾಡುಗಾರ, ಸಂಗೀತ ನಿರ್ದೇಶಕ, ಕವಿ, ಪತ್ರಕರ್ತ, ಗೀತ ರಚನಕಾರ ಹಾಗೂ ನಿರ್ಮಾಪಕರೆಂಬ ಕೀರ್ತಿಗೆ ಪಾತ್ರರಾದ ಭಾರತರತ್ನ ಡಾ.ಭೂಪೇನ್ ಹಝಾರಿಕಾ ಅವರು ತಮ್ಮ ಅನುಪಮ ಕೃತಿ 'ಗಂಗಾ ಬೆಹ್ತಿ ಹೊ ಕ್ಯೊಂ' ಗೀತೆಯ ರಚನೆ ಮತ್ತು ಗಾಯನದಿಂದ ದೇಶದಾದ್ಯಂತ ಹೆಸರಾದವರು.

ಭೂಪೇನ್ ಹಝಾರಿಕಾ ಅವರು 1926 ವರ್ಷದ ಸೆಪ್ಟೆಂಬರ್ 8ರಂದು ಅಸ್ಸಾಂ ರಾಜ್ಯದ ಸಾದಿಯಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ನೀಲಕಾಂತ ಹಝಾರಿಕಾ, ಮತ್ತು ತಾಯಿ ಶಾಂತಿಪ್ರಿಯ ಹಝಾರಿಕಾ. ಗೌಹಾಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿ.ಎ ಮತ್ತು ಎಂ.ಎ ಪದವಿಗಳನ್ನು ಗಳಿಸಿದರಲ್ಲದೆ, 1952ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಗಳಿಸಿದರು.

ಭೂಪೇನ್ ಹಝಾರಿಕಾ ಅವರು, ಬಾಲ್ಯದಲ್ಲೇ ಸಂಗೀತದ ಬಗ್ಗೆ ಒಲವು ಉಳ್ಳವರಾಗಿದ್ದರು. ತಾಯಿಯಿಂದ ಪ್ರಾರಂಭಿಕ ಸಂಗೀತ ಕಲಿತು, ಅಸ್ಸಾಂನ ಬುಡಕಟ್ಟು ಜನರ ಹಾಡುಗಳನ್ನು ಹತ್ತಿರದಿಂದ ಕೇಳಿ ಹಾಡಿ ನಲಿಯುತ್ತಾ ಬೆಳೆದರು. ಭೂಪೇನ್ ಹಝಾರಿಕಾ ಸಂಗೀತದಲ್ಲಿ ಗಾಢವಾದ 'ಅಸ್ಸಾಮಿನ ಜಾನಪದ ಭಾಷೆಯ ಸೊಗಡ'ನ್ನು ಕಾಣಬಹುದಾಗಿದೆ

ಭೂಪೇನ್ ಹಝಾರಿಕಾ 1939 ರಲ್ಲಿ ತಯಾರಾದ 'ಇಂದ್ರಾ ಮಲತಿ' ಎಂಬ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿರಿಸಿದರು. ಅಸ್ಸಾಂನ ಎರಡನೆಯ ಸಿನಿಮಾ 'ಬಿಸ್ವ ಬಿಜೊಯ್ ನೊ ಜವಾನ್' ಚಿತ್ರದಲ್ಲಿ ತಮ್ಮ ಹಾಡುಗಳಿಂದ ರಸಿಕರ ಮನ ತಣಿಸಿದ್ದರು. ಈ ಚಿತ್ರದ ಗೀತೆಗಳ ಮೂಲಕ ಅವರು ತಮ್ಮ ಗಾಯನದ ಬದುಕಿಗೆ ಮುನ್ನುಡಿ ಬರೆದರು. 1977ರಲ್ಲಿ ತೆರೆಕಂಡ ಚಲನಚಿತ್ರ 'ಮೇರಾ ಧರಮ್ ಮೇರಿ ಮಾ' ದಲ್ಲಿ ಅವರ ಕಾರ್ಯ ವೈಖರಿಯನ್ನು ಕಾಣಬಹುದು. ಇದೇ ರೀತಿ ಮತ್ತೊಂದು ಹಿಂದಿ ಚಿತ್ರ 'ಏಕ್ ಪಲ್'. ಇದಕ್ಕೆ ಹಲವರು ಪ್ರಶಸ್ತಿಗಳು ಅವರನ್ನು ಅರಸಿ ಬಂದವು. 'ರುಡಾಲಿ' ಚಿತ್ರದ ಜನಪ್ರಿಯತೆಯಿಂದ 'ಭೂಪೇನ್ ಹಝಾರಿಕ' ಮುಂಬೈನಲ್ಲಿ ಮನೆಮಾತಾದರು

ಭೂಪೇನ್ ಹಝಾರಿಕ ಅವರು ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಅದಕ್ಕೆ ಸಂಗೀತ ಅಳವಡಿಸಿದ್ದಲ್ಲದೆ, ಹಲವಾರು ಅಸ್ಸಾಮಿ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಶಕುಂತಲಾ, ಪ್ರತಿಧ್ವನಿ, ಲೋಟಿ ಘೋಟಿ ಅಸ್ಸಾಮಿ ಚಿತ್ರಗಳಿಗೆ ರಾಷ್ಟ್ರಪತಿ ಪದಕ ದೊರೆತವು. ಮುಂದೆ ಮುಂಬೈನಲ್ಲಿ ಅವರಿಗೆ ಸಲೀಲ್ ಚೌಧರಿ, ಬಲರಾಜ್ ಸಹಾನಿ ಮತ್ತಿತರ ಗೆಳೆತನ ದೊರೆಯಿತು.

ಭೂಪೇನ್ ಹಝಾರಿಕ ಸಂಗೀತ ನಿರ್ದೇಶನದ 'ಚಮೇಲಿ ಮೇಮ್ ಸಾಬ್' ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ' ದೊರೆಯಿತು. 'ರುಡಾಲಿ ಚಿತ್ರ'ಕ್ಕೆ 'ಏಶಿಯಾ ಪೆಸಿಫಿಕ್ ಫಿಲ್ಮ್ ಫೆಸ್ಟಿವಲ್ ಆಫ್ ಜಪಾನ್' ಪ್ರಶಸ್ತಿ ಸ್ವೀಕರಿಸಿದ ಪ್ರಥಮ ಭಾರತೀಯ ಸಂಗೀತ ನಿರ್ದೇಶರೆಂಬ ಕೀರ್ತಿಗೆ ಪಾತ್ರರಾದರು. 1979 ರಲ್ಲಿ ಅವರಿಗೆ 'ಆಲ್ ಇಂಡಿಯ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ ಫಾರ್ ಬೆಸ್ಟ್ ಪರ್ಫಾರ್ಮಿಂಗ್ ಫೋಕ್ ಆರ್ಟ್ ಪ್ರಶಸ್ತಿ ಸಂದಿತು.

ದಾದಾ ಸಾಹೇಬ್ ಫಾಲ್ಕೆ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಸಲ್ಲಿಸಲಾಯಿತು. ಅಸ್ಸಾಮಿನ ಪ್ರತಿಷ್ಠಿತ ಸೇತುವೆಗೆ ಅವರ ಹೆಸರನ್ನಿಡಲಾಯಿತು.
ಭೂಪೇನ್ ಹಝಾರಿಕ ಅವರು 1993 ರಲ್ಲಿ ಅಸ್ಸಾಂ ಸಾಹಿತ್ಯ ಸಭೆಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಗೌರವವೂ ಅವರಿಗೆ ಸಂದಿತ್ತು.

ಭೂಪೇನ್ ಹಝಾರಿಕ ಅವರು ತಮ್ಮ ಕೊನೆಯ ಚಲನಚಿತ್ರ 'ಗಾಂಧಿ ಟು ಹಿಟ್ಲರ್' ಚಿತ್ರದಲ್ಲಿ ಪ್ರಸಿದ್ಧ 'ವೈಷ್ಣವ ಜನತೊ ತೇನೆ ಕಹಿಯೆ' ಭಜನೆಯನ್ನು ಹಾಡಿದ್ದರು.

ಭೂಪೇನ್ ಹಝಾರಿಕಾ ಅವರು ನವೆಂಬರ್ 5, 2011ರಂದು ತಮ್ಮ 85ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಗಂಗೆಯ ಹರಿವಿನಂತೆ, ಅವರ ಗಂಗೆಯ ಕುರಿತಾದ ಗೀತೆ ಮತ್ತು ಇಂಪಾದ ಜಾನಪದ ಧ್ವನಿ ಕೂಡಾ ಅಮರ.

Tag: Bhupen Hazarika

ಕಾಮೆಂಟ್‌ಗಳಿಲ್ಲ: