ಮಂಗಳವಾರ, ಅಕ್ಟೋಬರ್ 1, 2019

ಮಜ್ರೂಹ್ ಸುಲ್ತಾನ್ ಪುರಿ


ಮಜ್ರೂಹ್ ಸುಲ್ತಾನ್ ಪುರಿ


ಉರ್ದು ಕವಿ ಮತ್ತು ಪ್ರಖ್ಯಾತ ಹಿಂದೀ ಚಲನಚಿತ್ರ ಗೀತರಚನಕಾರರಾದ ಮಜ್ರೂಹ್ ಸುಲ್ತಾನ್ ಪುರಿ ಅವರು ಅಕ್ಟೋಬರ್ 1, 1919 ವರ್ಷದಲ್ಲಿ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ಜನಿಸಿದರು. ಹಿಂದೀ ಚಲನಚಿತ್ರ ಜಗತ್ತಿನಲ್ಲಿ ಐವತ್ತು, ಅರವತ್ತರ ದಶಕದಲ್ಲಿ ಮಹೋನ್ನತ ಗೀತ ರಚನಕಾರರಾಗಿದ್ದ ಮಜ್ರೂಹ್ ಸುಲ್ತಾನ್ ಪುರಿ ಅವರು ಪ್ರಗತಿಪರ ಬರಹಗಳ ಯುಗದಲ್ಲಿನ ಪ್ರಮುಖ ಅಭಿವ್ಯಕ್ತಿ ಸಹಾ ಆಗಿದ್ದವರು. ಇಪ್ಪತ್ತನೆಯ ಶತಮಾನದ ಪ್ರಮುಖ ಉರ್ದುಕವಿಗಳಲ್ಲೊಬ್ಬರಾಗಿ ಸಹಾ ಅವರು ಗುರುತಿಸಲ್ಪಡುತ್ತಾರೆ. 1965 ವರ್ಷದಲ್ಲಿ ‘ಚಾಹೂಂಗ ಮೈ ತುಜೆ’ ಪ್ರಸಿದ್ಧ ಗೀತೆಗಾಗಿ ಪ್ರತಿಷ್ಟಿತ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದ ಮಜ್ರೂಹ್ ಸುಲ್ತಾನ್ ಪುರಿ ಅವರು, 1993 ವರ್ಷದಲ್ಲಿ ಚಲನಚಿತ್ರರಂಗದಲ್ಲಿನ ಅತ್ಯುನ್ನತ ಸಾಧನೆಗಾಗಿನ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಗೌರವಕ್ಕೆ ಪಾತ್ರರಾದರು. ಎಂಬತ್ತು, ತೊಂಬತ್ತರ ದಶಕದಲ್ಲೂ ಪಾಪಾ ಕೆಹತೆ ಹೈ ಬಡಾ ನಾಮ್ ಕರೇಗ, ಪೆಹಲಾ ನಶಾ, ತೇರೇ ಸನಂ ಮುಂತಾದ ಆಕರ್ಷಕ ನೆನಪಿನಲ್ಲಿ ಉಳಿಯುವ ಗೀತೆಗಳನ್ನು ಅವರು ರಚಿಸಿದ್ದರು.


ಮಜ್ರೂಹ್ ಸುಲ್ತಾನ್ ಪುರಿ ಅವರ ಮೊದಲ ಹೆಸರು ಅಸರ್ ಉಲ್ ಹಸನ್ ಖಾನ್. ಬ್ರಿಟಿಷ್ ಆಡಳಿತದಲ್ಲಿ ಪೋಲೀಸ್ ಸೇವೆಯಲ್ಲಿದ್ದ ಅವರ ತಂದೆಯವರಿಗೆ ಮಗ ಇಂಗ್ಲಿಷ್ ಕಲಿಯುವುದು ಇಷ್ಟವಿರಲಿಲ್ಲ. ಹಾಗಾಗಿ ಅವರು ಪರ್ಷಿಯನ್ ಅರಾಬಿಕ್ ಕಲಿಕೆಯನ್ನು ಅಭ್ಯಾಸ ಮಾಡಿದರು. ಕಾಲೇಜಿನಲ್ಲಿ ಅವರು ಯುನಾನಿ ವೈದ್ಯಶಾಸ್ತ್ತವನ್ನು ಅಭ್ಯಾಸ ಮಾಡಿ, ಒಬ್ಬ ಔಷಧಿ ನೀಡುವ ಹಕೀಮರಾಗಿ ಬದುಕನ್ನು ಅರಸ ಹೊರಟಿದ್ದರು. ಹಾಗಿದ್ದಾಗ ಒಮ್ಮೆ ಸುಲ್ತಾನ್ ಪುರದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಇವರು ಪ್ರಸ್ತುತ ಪಡಿಸಿದ ಘಜಲ್ ಕವಿತೆಯೊಂದು ಅಪಾರ ಜನ ಮೆಚ್ಚುಗೆಗಳಿಸಿತು. ಇದರಿಂದ ಆಕರ್ಷಿತರಾಗಿ ಪೂರ್ಣ ಪ್ರಮಾಣದಲ್ಲಿ ಕವಿಯಾಗಿ ತಮ್ಮ ಬದುಕನ್ನು ಅರಸ ಹೊರಟರು. ಹೀಗೆ ಕವಿಯಾಗಿ ಅಪಾರ ಜನಮೆಚ್ಚುಗೆ ಗಳಿಸಿದ ಅವರು ತಮ್ಮ ಪ್ರಸಿದ್ಧ ಕವಿತೆಯೊಂದರಲ್ಲಿನಾನು ಒಬ್ಬಂಟಿಯಾಗಿ ಗಮ್ಯದೆಡೆಗೆ ಪಯಣ ಹೊರಟಿದ್ದೆ, ಜನರು ನನ್ನ ಕೂಡಿಕೊಂಡರು, ಶೀಘ್ರದಲ್ಲೇ ಅದೊಂದು ಕ್ಯಾರವಾನ್ ಆಗಿಬಿಟ್ಟಿತ್ತು” ಎಂದು ತಮ್ಮ ಬದುಕಿನ ಹಾದಿ ತೆರೆದ ರೀತಿಯನ್ನು ಕಾಣಿಸಿಕೊಡುತ್ತಾರೆ.


1945 ವರ್ಷದಲ್ಲಿ ಕವಿಗೋಷ್ಠಿಯೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ ಮಜ್ರೂಹ್ ಸುಲ್ತಾನ್ ಪುರಿ ಅವರು ಅಲ್ಲಿನ ಸಿನಿಮಾ ಮಂದಿಯನ್ನು ಆಕರ್ಷಿಸಿದರು. 1946 ವರ್ಷದಲ್ಲಿ ಅವರು ನೌಷಾದ್ ಸಂಗೀತ ನಿರ್ದೇಶನದಲ್ಲಿಶಹಜಹಾನ್’ ಚಿತ್ರದ ಹಾಡುಗಳನ್ನು ರಚಿಸಿದರು. ಈ ಚಿತ್ರದ ಗೀತೆಗಳು ಎಷ್ಟೊಂದು ಮೋಡಿ ಮಾಡಿದ್ದವು ಎಂದರೆ ಸ್ವಯಂ ಕೆ. ಎಲ್. ಸೈಗಾಲ್ ಅವರು ತಮ್ಮ ಅಂತಿಮ ಯಾತ್ರೆಯಲ್ಲಿ ‘ಜಬ್ ದಿಲ್ ಹಿ ಟೂಟ್ ಗಯಾ’ ಗೀತೆಯನ್ನು ಅಪೇಕ್ಷಿಸುತ್ತೇನೆ ಎಂದು ನುಡಿದಿದ್ದರು.


ಮುಂದೆ ಡೋಲಿ, ಅಂದಾಜ್, ಆರ್ಜೂ ಮುಂತಾದ ಚಿತ್ರಗಳು 1948, 1949 ವರ್ಷದಲ್ಲಿ ಮಜ್ರೂಹ್ ಸುಲ್ತಾನ್ ಪುರಿ ಅವರಿಗೆ ಕೀರ್ತಿ ತಂದವು. ಮಾರ್ಕ್ಸಿಸ್ಟ್ ತತ್ವಕ್ಕೆ ಒಲವು ಹೊಂದಿದ್ದ ಅವರನ್ನು ಭಾರತ ಸರ್ಕಾರವು ಸೆರೆಮನೆಯಲ್ಲಿರಿಸಿತು. ಇದರಿಂದಾಗಿ ಅವರ ಕುಟುಂಬವು ಬಹಳಷ್ಟು ಸಂಕಷ್ಟಗಳನ್ನು ಎದುರಿಸಿತು. 1975 ವರ್ಷದಲ್ಲಿ ರಾಜ್ ಕಫೂರ್ ಅವರ ಧರಂ ಕರಮ್ ಚಿತ್ರದ ‘ಎಕ್ ದಿನ್ ಬಿಕ್ ಜಾಯೇಗ ಮಾತಿ ಕೆ ಮೊಯ್’ ಗೀತೆ ಅಪಾರವಾಗಿ ಜನಪ್ರಿಯಗೊಂಡಿತು


ನಾಸಿರ್ ಹುಸೇನ್ ಅವರೊಂದಿಗೆ ಮೊದಲು ‘ಪೇಯಿಂಗ್ ಗೆಸ್ಟ್’ ಚಿತ್ರಕ್ಕೆ ಜೊತೆಗೂಡಿದ ಮಜ್ರೂಹ್ ಸುಲ್ತಾನ್ ಪುರಿ ಮುಂದೆ ಅವರ ಅನೇಕ ಚಿತ್ರಗಳಿಗೆ ಉತ್ತಮ ಗೀತೆಗಳನ್ನು ನೀಡಿದರು. ‘ತುಮ್ಸಾ ನಹಿನ್ ದೇಖಾ’, ‘ದಿಲ್ ದೇಖೆ ದೇಖೋ’, ‘ಫಿರ್ ವೊಹಿ ದಿಲ್ ಲಾಯಾ ಹೂ’, ‘ತೀಸ್ರೀ ಮಂಜಿಲ್’, ‘ಬಾಹಾರೋಂ ಕೆ ಸಪ್ನೆ’, ‘ಪ್ಯಾರ್ ಕಾ ಮೌಸಮ್’, ‘ಕ್ಯಾರವಾನ್’, ‘ಯಾದೋನ್ ಕಿ ಬಾರಾತ್’, ‘ಹಮ್ ಕಿಸೀಸೆ ಕಮ್ ನಹೀನ್’, ಜಮಾನೇ ಕೋ ದಿಖಾನಾ ಹೈ’, ಖಯಾಮತ್ ಸೇ ಖಯಾಮತ್ ತಕ್’, ‘ಜೊ ಜೀತಾ ವೊಹಿ ಸಿಕಂದರ್’, ‘ಅಕೇಲೇ ಹಮ್ ಅಕೇಲೇ ತುಮ್’, ‘ಕಭೀ ಹಾ ಕಭೀ ನಾ’ ಮುಂತಾದ ಪ್ರಖ್ಯಾತ ಚಿತ್ರಗಳಲ್ಲಿ ಈ ಜೋಡಿ ಕೈ ಜೋಡಿಸಿದರು.


ಮಜ್ರೂಹ್ ಸುಲ್ತಾನ್ ಪುರಿ ಅವರು ‘ತೀಸ್ರೀ ಮಂಜಿಲ್’ ಚಿತ್ರದ ಮೂಲಕ ಆರ್. ಡಿ. ಬರ್ಮನ್ ಅವರನ್ನು ಚಿತ್ರರಂಗಕ್ಕೆ ಕರೆತರಲು ನಾಸಿರ್ ಹುಸ್ಸೇನ್ ಅವರಿಗೆ ಶಿಫಾರಸ್ಸು ಮಾಡಿ, ಚಿತ್ರರಂಗಕ್ಕೊಬ್ಬ ಮಹಾನ್ ಪ್ರತಿಭೆ ಬರಲು ಕಾರಣರಾದರು. ಈ ತ್ರಿವಳಿಗಳು ಮುಂದೆ 7 ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದರು


ಮಹಾನ್ ಕವಿ ಮತ್ತು ಗೀತರಚನಕಾರರಾದ ಮಜ್ರೂಹ್ ಸುಲ್ತಾನ್ ಪುರಿ, ಮೇ 24, 2000ದ ವರ್ಷದಲ್ಲಿ ತಮ್ಮ 80 ವರ್ಷಗಳ ಇಹಲೋಕದ ಯಾತ್ರೆಯನ್ನು ಕೊನೆಗೊಳಿಸಿದರು.


Tag: Majrooh Sultanpuri


ಕಾಮೆಂಟ್‌ಗಳಿಲ್ಲ: