ಶನಿವಾರ, ಅಕ್ಟೋಬರ್ 12, 2019

ವಸಂತ ಕವಲಿ

ವಸಂತ ಕವಲಿ 


ನಾವು ಚಿಕ್ಕಂದಿನಲ್ಲಿ ರೇಡಿಯೋದಲ್ಲಿ ಪದೇ ಪದೇ  ಕೇಳುತ್ತಿದ್ದ ಮುದ ನೀಡುತ್ತಿದ್ದ ಸುಂದರ ಹೆಸರು ವಸಂತ ಕವಲಿ.   ಡಾ. ವಸಂತ ಕವಲಿ ಅವರು ನಾಟಕಕಾರರಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಗಳಾಗಿ, ಆಕಾಶವಾಣಿಯ ಕಲಾವಿದರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ಕಾರ್ಯನಿರ್ವಾಹಕರಾಗಿ ಹೀಗೆ ಬಹುಮುಖಿ ಪ್ರತಿಭೆಯಾಗಿ ಪ್ರಸಿದ್ಧರು.

ವಸಂತ ಕವಲಿಯವರು 1931 ವರ್ಷದ ಅಕ್ಟೊಬರ್ 12 ರಂದು ಬ್ಯಾಡಗಿಯಲ್ಲಿ ಜನಿಸಿದರು.  ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಅವರು ಮತ್ತು ತಾಯಿ ಗೌರಮ್ಮನವರು.   ಪ್ರಾರಂಭಿಕ ಶಿಕ್ಷಣವನ್ನು ಹಾವೇರಿಯಲ್ಲಿ ಪೂರೈಸಿದ ವಸಂತ ಕವಲಿ  ಅವರು ಉನ್ನತ ಶಿಕ್ಷಣವನ್ನು  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ  ಕೈಗೊಂಡರು.  ಕನ್ನಡ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಪದವಿ ಮತ್ತು ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದುದಲ್ಲದೆ 'ಬೂರ್ಝ್ವಾ ಟ್ರಾಜೆಡಿ’ ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗೌರವ ಪಡೆದರು.

ಉದ್ಯೋಗವನ್ನು ಅರಸಿ ಮುಂಬಯಿಗೆ ಬಂದ ವಸಂತ ಕವಲಿ  ಅವರು ಜೈಹಿಂದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ದುಡಿದರು.  ಆದರೆ ಮುಂದೆ ಅವರನ್ನು ಕೂಗಿ ಕರೆದದ್ದು ಆಕಾಶವಾಣಿಯ ಹುದ್ದೆ. ಬೆಂಗಳೂರು ಆಕಾಶವಾಣಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ ವಸಂತ ಕವಲಿ  ಅವರು ಭದ್ರಾವತಿಯ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾಗಿ ಸಹಾ ಸೇವೆ ಸಲ್ಲಿಸಿದವರು.

ವಸಂತ ಕವಲಿ  ಅವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ  ಒಲವು. ಅದು ಅವರಿಗೆ ತಂದೆ ಪಂಡಿತ ಕವಲಿಯವರಿಂದ ಬಂದ ಬಳುವಳಿಯಾಗಿತ್ತು.  ಆಕಾಶವಾಣಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಾಟಕ, ಸಾಹಿತ್ಯ ರಚನಕಾರರಾಗಿ ಹೀಗೆ ಬಹುಮುಖಿಯಾಗಿ ಅವರು ದುಡಿದವರು. 

ವಸಂತ ಕವಲಿ ಅವರು ಹಲವಾರು ಏಕಾಂಕ ನಾಟಕಗಳು ಮತ್ತು ಮಕ್ಕಳ ಕೃತಿಗಳನ್ನು ಪ್ರಕಟಿಸಿದರು. ಅಲಂಕಾರ, ಕಣ್ವ ಕೇಶನ್, ಘನ ಆನಂದ. ತಾನಸೇನ, ಮದನಲಾಲ್  ಧಿಂಗ್ರ, ಕನ್ನಡದಲ್ಲಿ ಭಾಸನ ಸ್ವಪ್ನವಾಸವದತ್ತ ನಾಟಕ ‘ಕನಸಿನ ರಾಣಿ' 'ಎನ್ನ ಮುದ್ದಿನ ಮುದ್ದಣ' ಮುಂತಾದವು ಅವರ ನಾಟಕ ಕೃತಿಗಳು.   ಧೃತರಾಷ್ಟ್ರೇಯ ಎಂಬುದು ಒಂದು ರೂಪಕ.  'ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ' ಒಂದು ಸಂಕೀರ್ಣ ಕೃತಿ.  ಯೂರೋಪಿನಲ್ಲಿ ಪ್ರವಾಸ ಕೈಗೊಂಡು ಪ್ಯಾರಿಸಿನಲ್ಲಿ  ಸಂಗೀತ ಕಾರ‍್ಯಕ್ರಮ ಸಂಯೋಜಿಸಿದರಲ್ಲದೆ  ಈ ಮೂಸೆಯಲ್ಲಿ  'ರಾಗ-ತಾನ-ಸೇನ ನದಿಯ ದಡದಲ್ಲಿ' ಕೃತಿಯನ್ನೂ ಅರಳಿಸಿದರು.

ವಸಂತ ಕವಲಿ  ಅವರು ನಿರ್ದೇಶಿಸಿದ ನಾಟಕಗಳಲ್ಲಿ  ಅರಿಶಿನ ಅಳಿಸಬೇಡಮ್ಮ, ಏಕಾಂತದ ಸುಖಕ್ಕೆ ಲೋಕಾಂತವದೇಕೆ, ಶಬ್ದಬ್ರಹ್ಮನ ಶಿರ ಹೋಯಿತ್ತು, ಖಂಡವಿದೆಕೋ ಮಾಂಸವಿದೆಕೋ, ನಂಬರು-ನೆಚ್ಚರು, ಜಗದ್ಗುರು ಬಾದಶಾ ಮುಂತಾದ ಅನೇಕವು ನಿರಂತರವಾಗಿ ಜನಮೆಚ್ಚುಗೆ ಪಡೆದಿದ್ದವು. ಸಂಸ್ಕೃತ ನಾಟಕಗಳನ್ನು ಸಂಸ್ಕೃತದಲ್ಲೇ ಪ್ರಸಾರ ಮಾಡಿದ  ಸಾಧನೆ ಕೂಡಾ ಅವರದ್ದಾಗಿತ್ತು.

ಡಾ. ವಸಂತ ಕವಲಿ ಅವರು 1988 ವರ್ಷದ  ನವೆಂಬರ್ 17ರಂದು ಈ ಲೋಕವನ್ನಗಲಿದರು.

ಚಿತ್ರಕೃಪೆ: www.kamat.com
Tag: Vasantha Kavali

ಕಾಮೆಂಟ್‌ಗಳಿಲ್ಲ: