ಭಾನುವಾರ, ನವೆಂಬರ್ 3, 2019

ಬೆಂಗಳೂರು ನಾಗರತ್ನಮ್ಮ

ಬೆಂಗಳೂರು ನಾಗರತ್ನಮ್ಮ

ಕರ್ನಾಟಕ ಸಂಗೀತಕ್ಕೆ ಅಮರ ಕೊಡುಗೆ ನೀಡಿದ ಮಹನೀಯೆ ಬೆಂಗಳೂರು ನಾಗರತ್ನಮ್ಮನವರು.  ತ್ಯಾಗರಾಜರ ಆರಾಧನೆ ಇಂದು ವಿಶ್ವಪ್ರಸಿದ್ಧಿ ಪಡೆದಿದ್ದರೆ ಅದಕ್ಕ ಭದ್ರ ಬುನಾದಿ ಹಾಕಿಕೊಟ್ಟ ಕೀರ್ತಿ ಬೆಂಗಳೂರು ನಾಗರತ್ನಮ್ಮನವರದು.  ಹಾಗಾಗಿ ಇಂದು ತಿರುವಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿಯ ಸನ್ನಿಧಾನದಲ್ಲೇ ನಾಗರತ್ನಮ್ಮನವರ ಸಮಾಧಿ ಇರುವುದು ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟು ದೊಡ್ಡದು ಎಂಬುದನ್ನ ಸಾರಿ ಸಾರಿ ಹೇಳುವಂತಿದೆ.  ಸಂತ ತ್ಯಾಗರಾಜರ ಸಮಾಧಿಯ ಮೇಲೆ  ತನ್ನ ಎಲ್ಲ ತನು ಮನ ಧನಗಳನ್ನು ಅರ್ಪಿಸಿ ಒಂದು ದೇಗುಲ ನಿರ್ಮಿಸಿದ್ದೇ ಅಲ್ಲದೆ, ಅಲ್ಲಿ ಸಂಗೀತಲೋಕದ ಸಕಲರೂ ತ್ಯಾಗರಾಜರ ಆರಾಧನೆ ಸಂದರ್ಭದಲ್ಲಿ  ಒಗ್ಗಟ್ಟಾಗಿ ಗೋಷ್ಠಿಗಾನ ಮಾಡುವ ವ್ಯವಸ್ಥೆಯನ್ನು ನಿರ್ಮಿಸಿದ ಅಸಾಧಾರಣ ಸಾಧನೆ ನಾಗರತ್ನಮ್ಮನವರದು.  ಆಸ್ಥಾನ ಗಾಯಕಿಯಾಗಿ, ವಿದ್ವಾಂಸೆಯಾಗಿ, ಗ್ರಂಥಕರ್ತೆಯಾಗಿ, ಮಹಿಳಾ ಸಮಾನತೆಗಾಗಿ, ಎಲ್ಲಕ್ಕೂ ಮಿಗಿಲಾಗಿ ತ್ಯಾಗರಾಜರೆಂಬ ಶ್ರೇಷ್ಠತೆ ಹಾಗೂ ಸಂಗೀತದ ಅಮರತ್ವದ ಉಳಿಕೆಗಾಗಿ ಹೋರಾಡಿದವರಾಗಿ ಬೆಂಗಳೂರು ನಾಗರತ್ನಮ್ಮನವರು ಅಮರ ಸಾಧಕಿ ಎನಿಸಿದ್ದಾರೆ.   ಎಲ್ಲ ಕಾಲದಲ್ಲೂ ಶ್ರೇಷ್ಠತೆಯನ್ನು ಮಾತನಾಡುವ ಸಮಾಜ  ಹಿಂಬಾಗಿಲಿನಲ್ಲಿ ಸೃಷ್ಟಿಸುವ ಶೋಷಣೆಗಳ ಹಲವು  ರೂಪಿನಲ್ಲಿ ಒಂದಾದ, ಅಂದಿನ ದಿನದಲ್ಲಿದ್ದ  ದೇವದಾಸಿ ಪದ್ಧತಿಯ ಅನಿವಾರ್ಯ  ಭಾಗವಾಗಿದ್ದ  ನಾಗರತ್ನಮ್ಮನವರು ಮುಂದೆ ಉಳಿಸಿ ಹೋದ ದಿವ್ಯತ್ವ ಮಾತ್ರಾ ಎಂದೆಂದೂ ಅಳಿಸಲಾಗದ್ದು.   

ನಾಗರತ್ನಮ್ಮನವರು 1878 ವರ್ಷದ ನವೆಂಬರ್ 3 ದಿನದಂದು ವಕೀಲ್ ಸುಬ್ಬರಾವ್ ಮತ್ತು ಪುಟ್ಟು ಲಕ್ಷ್ಮಿ ಅವರಿಗೆ ಜನಿಸಿದರು.  ಪುಟ್ಟು ಲಕ್ಷ್ಮಿ ಅವರ ಪೂರ್ವಜರು ಮೈಸೂರು ಸಂಸ್ಥಾನದ ಸಂಗೀತಗಾರರಾಗಿ ಸೇವೆ ಸಲ್ಲಿಸಿದವರಾಗಿದ್ದರು.  ಪುಟ್ಟು ಲಕ್ಷ್ಮಿ ಅವರನ್ನು ಸುಬ್ಬರಾವ್ ಕೈಬಿಟ್ಟಾಗ ಆಕೆ ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಶಾಸ್ತ್ರಿ ಎಂಬುವನ ಆಶ್ರಯ ಪಡೆದರು.  ಈತ ನಾಗರತ್ನಮ್ಮನವರಿಗೆ ಸಂಸ್ಕೃತ ಮತ್ತು ಸಂಗೀತ ಕಲಿಕೆಗಳ ವ್ಯವಸ್ಥೆ ಕಲ್ಪಿಸಿಕೊಟ್ಟ.  ಬಾಲಕಿ ನಾಗರತ್ನಮ್ಮ ಇನ್ನೂ ಐದನೇ ವರ್ಷದಲ್ಲಿದ್ದಾಗ ದೇವದಾಸಿಯಾದಳು.  ಶಾಸ್ತ್ರಿ ಕೂಡಾ ಕೈಬಿಟ್ಟಾಗ, ನಾಗರತ್ನಮ್ಮ ಪಿಟೀಲು ವಾದಕನಾಗಿದ್ದ ವೆಂಕಿಟಸ್ವಾಮಿ ಎಂಬ ತನ್ನ ಚಿಕ್ಕಪ್ಪನ ಆಶ್ರಯಕ್ಕೆ ಬಂದಳು.  ನಾಗರತ್ನಮ್ಮ ತನ್ನ ಕಲಿಕೆಯನ್ನು ಮುಂದುವರೆಸಿ, ಕನ್ನಡ, ಇಂಗ್ಲಿಷ್ ಮತ್ತು ತೆಲುಗು ಭಾಷೆಯನ್ನು ಕಲಿತು ಸಂಗೀತ ಮತ್ತು ನೃತ್ಯಗಳ ಪಾರಂಗತೆಯಾದಳು. 

ಮುಂದೆ ನಾಗರತ್ನಮ್ಮನವರು ಮುನಿಸ್ವಾಮಪ್ಪನವರಲ್ಲಿ,  ತ್ಯಾಗರಾಜರಿಂದ ಪ್ರಚಲಿತಗೊಂಡ  ಗುರು ಶಿಷ್ಯ ಪರಂಪರೆಯ ಮಾದರಿಯಲ್ಲಿ ಶಿಷ್ಯೆಯಾಗಿ ಸಂಗೀತ ತರಬೇತಿ ಪಡೆದರು.  ತಮ್ಮ ಹದಿನೈದನೆಯ ವಯಸ್ಸಿನಲ್ಲಿ  ಪಿಟೀಲುವಾದಕಿಯಾಗಿ ಹಾಗೂ ನರ್ತಕಿಯಾಗಿ ವಿದ್ವಜ್ಜನರ ಎದುರಿಗೆ ತನ್ನ ಮೊದಲ ಪ್ರದರ್ಶನ ನೀಡಿದರು.

ತಮ್ಮ ಕಾಲದ ಶ್ರೇಷ್ಠ ಗಾಯಕಿಯರಲ್ಲೊಬ್ಬರಾಗಿ ರೂಪುಗೊಂಡ ನಾಗರತ್ನಮ್ಮನವರು ಕನ್ನಡ, ಸಂಸ್ಕೃತ ಮತ್ತು ತೆಲುಗಿನ ಕೃತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರಸ್ತುತಿಪಡಿಸುತ್ತಿದ್ದರು.  ಅವರ ವಿಶಿಷ್ಟ ಸಾಮರ್ಥ್ಯದಲ್ಲಿ ಹರಿಕಥೆ ಕೂಡಾ ಸೇರಿತ್ತು.  ಅಂದಿನ ಮೈಸೂರು ಅರಸರ ಸಂಸ್ಥಾನದಲ್ಲಿ ಆಸ್ಥಾನ ವಿದುಷಿ ಗೌರವವನ್ನು ಪಡೆದಿದ್ದ ನಾಗರತ್ನಮ್ಮನವರು ಮುಂದೆ ಬೆಂಗಳೂರಿಗೆ ಬಂದರು.  ಬೆಂಗಳೂರಿನಲ್ಲಿ ಅವರು ಸಂಗೀತ ಮತ್ತು ನೃತ್ಯಗಳೆರಡೂ ಕ್ಷೇತ್ರಗಳಲ್ಲಿಯೂ ಪ್ರಸಿದ್ಧಿ ಪಡೆದರು.  ಮೈಸೂರು ಸಂಸ್ಥಾನವಷ್ಟೇ ಅಲ್ಲದೆ ಅವರಿಗೆ ತಿರುವಾಂಕೂರು, ಬೊಬ್ಬಿಲಿ, ವಿಜಯನಗರಂ ಸಂಸ್ಥಾನಗಳಲ್ಲಿಯೂ ಬೇಡಿಕೆ ಗೌರವಗಳು ಸಲ್ಲತೊಡಗಿದವು.  ಅಂದಿನ ಮೈಸೂರು ಸಂಸ್ಥಾನದಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನರಹರಿ ರಾವ್ ಅವರ ಸಲಹೆಯ ಮೇರೆಗೆ ನಾಗರತ್ನಮ್ಮನವರು, ಸಂಗೀತ ಮತ್ತು ನೃತ್ಯ ಕಲೆಗೆ ಬಹುಪ್ರಸಿದ್ಧವಾಗಿದ್ದ ಮದ್ರಾಸಿನಲ್ಲಿ ನೃತ್ಯ ಮತ್ತು ಸಂಗೀತ ಕಲಾವೃತ್ತಿಯ ಬದುಕನ್ನು  ಅರಸಿಹೊರಟರು.  ಅಲ್ಲಿ ಅವರು ತಮ್ಮನ್ನು ಬೆಂಗಳೂರು ನಾಗರತ್ನಮ್ಮ ಎಂದು ಹೆಸರಿಸಿಕೊಂಡರು.  ನರಹರಿ ರಾವ್ ಅವರ ಬೆಂಬಲ ಮತ್ತು ತಮ್ಮಲ್ಲಿದ್ದ ಅಗಾಧ ಪ್ರತಿಭೆಯಿಂದ  ಬೆಂಗಳೂರು ನಾಗರತ್ನಮ್ಮನವರು ಕಚೇರಿ ಗಾಯನದಲ್ಲಿ ಎಲ್ಲೆಡೆ ಪ್ರಸಿದ್ಧಿ ಪಡೆದರು.  ಅಂದಿನ ಮದ್ರಾಸಿನ ಆಡಳಿತದಲ್ಲಿ ಆದಾಯ ತೆರಿಗೆ ಕಟ್ಟಿದ ಮೊಟ್ಟ ಮೊದಲ ಮಹಿಳಾ ಕಲಾವಿದೆ ನಮ್ಮ ಬೆಂಗಳೂರು ನಾಗರತ್ನಮ್ಮನವರು. 

ನಾಗರತ್ನಮ್ಮನವರೇ ಹೇಳಿದಂತೆ ಅವರಿಗೆ ತಮ್ಮ ಸ್ವಪ್ನದಲ್ಲ್ಲಿ ಸಂತ ತ್ಯಾಗರಾಜರ ಸ್ಮಾರಕ ನಿರ್ಮಿಸಿ ಆ ಮೂಲಕ ಕರ್ನಾಟಕ ಸಂಗೀತಕ್ಕೊಂದು ನಿರಂತರ ಪ್ರವಹಿನಿ ಒದಗಿಸಲು ಆದೇಶ ದೊರಕಿದ ಭಾಸವಾಯಿತು.  ಆ ಕ್ಷಣದಿಂದಲೇ ತಪಸ್ವಿನಿಯಂತೆ ಬದುಕ ತೊಡಗಿದ ಆಕೆ ತಮ್ಮ ಎಲ್ಲ ಸಂಪತ್ತನ್ನೂ ಈ ಮಹತ್ಕಾರ್ಯಕ್ಕೆ ಸಮರ್ಪಿಸಲು ಮುಂದಾದರು. 

ಮದ್ರಾಸಿನಲ್ಲಿದ್ದಾಗ ನಾಗರತ್ನಮ್ಮನವರಿಗೆ ಅವರ  ಗುರುವರ್ಯರಾದ ಬಿಡಾರಂ ಕೃಷ್ಣಪ್ಪನವರಿಂದ  ತ್ಯಾಗರಾಜರ ಸಮಾಧಿ ಸ್ಥಳ ಶಿಥಿಲಗೊಂಡಿರುವ ವಿಚಾರ ತಿಳಿದುಬಂತು.  ಬಿಡಾರಂ ಕೃಷ್ಣಪ್ಪನವರ ಶಿಷ್ಯಂದಿರಾದ ಕೃಷ್ಣ ಭಾಗವತರ್ ಮತ್ತು ಸುಂದರ ಭಾಗವತರ್ ಅವರುಗಳು ತ್ಯಾಗರಾಜರ ಒಂದು ಸಣ್ಣ ಗುಡಿಯನ್ನು  ನಿರ್ಮಿಸಿ, ಅಲ್ಲಿ 1903 ವರ್ಷದಿಂದ ಮೊದಲುಗೊಂಡಂತೆ ತ್ಯಾಗರಾಜರ ಆರಾಧನೆಯನ್ನು ಪ್ರಾರಂಭಿಸಿದರು.  ಹೀಗೆ ಪ್ರಾರಂಭಗೊಂಡ ಕೆಲವೇ ವರ್ಷದಲ್ಲಿ ಅಲ್ಲಿ ಗುಂಪುಗಾರಿಕೆ ಮೊದಲುಗೊಂಡು ಎರಡು ಬಣಗಳು ಪ್ರತ್ಯೇಕ ಕಚೇರಿ ಕಾರ್ಯಕ್ರಮಗಳನ್ನು ಸ್ಪರ್ಧಾತ್ಮಕ ರೀತಿಯಲ್ಲಿ ನಡೆಸಲು ಪ್ರಾರಂಭಿಸಿದವು.  ಒಗ್ಗಟ್ಟಿಲ್ಲದ ಈ ವಾತಾವರಣದಲ್ಲಿ ತ್ಯಾಗರಜರಿಗಾಗಿ ನಿರ್ಮಿಸಿದ್ದ ಸಣ್ಣ ಸ್ಥಾವರ ಅಸಡ್ಡೆಗೆ ಗುರಿಯಾಗಿ ಶಿಥಿಲಾವಸ್ಥೆ ತಲುಪಿತು.  ಇದನ್ನು ಮನಗಂಡ ನಾಗರತ್ನಮ್ಮನವರು ತ್ಯಾಗರಾಜರ ಸಮಾಧಿಯಿದ್ದ ಪೂರ್ಣಸ್ಥಳವನ್ನು ತಮ್ಮ ಸ್ವಂತ ಹಣಕೊಟ್ಟು ಖರೀದಿಸಿ, ತ್ಯಾಗರಾಜರ ಹೆಸರಿನಲ್ಲಿ ದೊಡ್ಡ ದೇಗುಲವನ್ನು ನಿರ್ಮಿಸಿ, ಶ್ರೀ ತ್ಯಾಗರಾಜರ ಮೂರ್ತಿಯನ್ನು ಸ್ಥಾಪಿಸಿ, ದಿನನಿತ್ಯ ಅಲ್ಲಿ ಪೂಜಾ ಕೈಂಕರ್ಯವಿಧಿಗಳು ಜರುಗುವಂತೆ ವ್ಯವಸ್ಥೆ ಮಾಡಿದರು. ಹೀಗೆ ತಿರುವಯಯ್ಯಾರಿನಲ್ಲಿ ಶ್ರೀತ್ಯಾಗರಾಜರ ಪವಿತ್ರ ದೇಗುಲ 1921ವರ್ಷದಲ್ಲಿ ಬೆಂಗಳೂರು ನಾಗರತ್ನಮ್ಮನವರ ದೆಸೆಯಿಂದ ಅಸ್ಥಿತ್ವಕ್ಕೆ ಬಂತು. 

ಅಂದಿನ ವರ್ಷಗಳಲ್ಲಿ ಅಲ್ಲಿ ನಡೆಯುತ್ತಿದ ಸಂಗೀತ ಕಚೇರಿಗಳೆಲ್ಲ ಪುರುಷ ಕೇಂದ್ರಿತವಾಗಿದ್ದು, ಸ್ತ್ರೀಯರಲ್ಲಿ  ನೃತ್ಯ ಮತ್ತು ಸಂಗೀತಗಳೆಲ್ಲ ವೇಶ್ಯೆ ಮತ್ತು ದೇವದಾಸಿಯರು ತಮ್ಮ ಜೀವನ ಪದ್ಧತಿಯನ್ನು ಸಾಗಿಸಲು ಸೀಮಿತಗೊಂಡಿದ್ದವು.  ಹೀಗಾಗಿ ಮಡಿವಂತಿಕೆಯ ಹೆಸರಿನಲ್ಲಿ ಅಂದಿನ ಪುರುಷ ಸಮಾಜ ನಾಗರತ್ನಮ್ಮನವರು ಸಂಗೀತ ಕಚೇರಿ ನೀಡುವುದಕ್ಕೆ ಬಹಿಷ್ಕಾರ ಹಾಕಿತು.  ತಾವು ಕೇವಲ ಭಗವಂತನ ಸನ್ನಿಧಿಯಲ್ಲಿ ಹರಿಕಥೆಯನ್ನು ನಡೆಸುತ್ತೇನೆ ಅದಕ್ಕಾಗಿ ಅವಕಾಶ ನೀಡಿ ಎಂದರೂ ಆ ಜನ ಅವಕಾಶ ನೀಡಲಿಲ್ಲ.  ಇದನ್ನು ಒಂದು ಸವಾಲಾಗಿ ಸ್ವೀಕರಿಸಿದ ನಾಗರತ್ನಮ್ಮನವರು ಈ ಪುರೋಹಿತಶಾಹಿ ‘ಪೆರಿಯ ಕಚೇರಿ’ಗೆ ಪರ್ಯಾಯವಾಗಿ  ‘ಪೆಣ್ ಕಚೇರಿ’ ಎಂಬ ಮಹಿಳಾ ಕಲಾವಿದರ ಪರ್ಯಾಯ ವ್ಯವಸ್ಥೆಯನ್ನೇ ಹುಟ್ಟುಹಾಕಿದರು.  ಕಡೆಗೆ 1941 ವರ್ಷದಲ್ಲಿ ನಾಗರತ್ನಮ್ಮನವರ ಪರಿಶ್ರಮಕ್ಕೆ ಬೆಲೆ ದೊರಕಿ ಮಹಿಳಾ ಕಲಾವಿದೆಯರು ಮತ್ತು ಪುರುಷ ಕಲಾವಿದರು ಎಂಬ ಭೇದವಿಲ್ಲದೆ ಒಂದೇ ವೇದಿಕೆಯಲ್ಲಿ ಸಂಗೀತ ಸಮಾರಂಭಗಳು ಜರುಗಲು ಪ್ರಾರಂಭವಾಯಿತು.  ಹೀಗಾಗಿ ಸಂಗೀತಲೋಕದಲ್ಲಿ ಮಹಿಳಾ ಕಲಾವಿದರ ಆಗಮನಕ್ಕೆ ಬೆಂಗಳೂರು ನಾಗರತ್ನಮ್ಮನವರು ನೀಡಿದ ಕೊಡುಗೆ ಅಸಾಮಾನ್ಯವಾದುದು. 

ಸಂಗೀತಗಾರ್ತಿಯಾಗಿ ಅಲ್ಲದೆ ಸಾಹಿತ್ಯ ವಿದ್ವಾಂಸರಾಗಿ ಸಹಾ ಬೆಂಗಳೂರು ನಾಗರತ್ನಮ್ಮನವರು ಶೋಭಿತರಾಗಿದ್ದಾರೆ.  ಅವರಿಗೆ ಕನ್ನಡ, ಸಂಸ್ಕೃತ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವಿತ್ತು.  ನಾಗರತ್ನಮ್ಮನವರು ತಮ್ಮ ಅಧ್ಯಯನದಲ್ಲಿ ಅಂದಿನ ಕಾಲಕ್ಕೆ ಸುಮಾರು 150 ವರ್ಷಗಳ ಹಿಂದೆ ಮುದ್ದುಪಳನಿ ಎಂಬ ರಾಜನರ್ತಕಿಯೊಬ್ಬರು ರಚಿಸಿದ್ದ ‘ರಾಧಿಕಾ ಸಾಂತ್ವನಂ’ ಎಂಬ ತೆಲುಗಿನ  ಕೃತಿಯನ್ನು ಕುತೂಹಲದಿಂದ ಕಂಡರು.  ಇದನ್ನು ಮೂಲ ತಾಳೆಗರಿ ಪ್ರತಿಯಲ್ಲಿ ಇರುವುದಕ್ಕಿಂತ ಅಂದಿನ ಕೆಲ ಮಡಿವಂತರು ಮಾರ್ಪಡಿಸಿ ಅಸಂಬದ್ಧವಾಗಿ ಪ್ರಕಟಿಸಿದ್ದು ನಾಗರತ್ನಮ್ಮನವರಿಗೆ ಅರಿವಾಯಿತು.  ಮೂಲವನ್ನು ಹುಡುಕಿ ಅಪಾರ ಪರಿಶ್ರಮವಹಿಸಿ  ಅದನ್ನು ಅಂತೆಯೇ ಪರಿಷ್ಕರಿಸಿ ಸವಿಸ್ತಾರವಾಗಿ ಸಂಕಲಿಸಿ ಪ್ರಕಟಿಸಿದ ಕೀರ್ತಿ ನಾಗರತ್ನಮ್ಮನವರದಾಯಿತು.  ಇದರಲ್ಲಿನ ಕೆಲವು ಶೃಂಗಾರರಸ  ಅಂಶಗಳ ಪ್ರಸ್ತುತಿ ಬಗ್ಗೆ ವೀರಸಲಿಂಗಮ್ ಎಂಬ ವಿದ್ವಾಂಸನೊಬ್ಬ ಟೀಕೆ ಮಾಡಿದಾಗ, ಅದೇ ವಿದ್ವಾಂಸ ಸಂಕಲನ ಮಾಡಿದ ‘ವೈಜಯಂತಿ ವಿಲಾಸಂ’ ಎಂಬ ಕೃತಿಯಲ್ಲಿ ಆತ ಮೂಡಿಸಿದ್ದ ಅಶ್ಲೀಲ ಅಂಶಗಳನ್ನು ಎತ್ತಿ ತೋರಿ ಪುರುಷನಿಗೊಂದು ಬರವಣಿಗೆ ನಿಯಮ, ಸ್ತ್ರೀಯರಿಗೊಂದು ನಿಯಮ ಎಂದು ಆತನಲ್ಲಿ ಮನೆಮಾಡಿದ್ದ ಸಣ್ಣತನವನ್ನು ನಿರ್ದಾಕ್ಷಿಣ್ಯವಾಗಿ ಬಹಿರಂಗವಾಗಿ ಪ್ರಶ್ನಿಸಿ ಸಾಹಿತ್ಯಕ ಧಿಟ್ಟತನವನ್ನು ಮೆರೆದರು.  ಆದರೆ ಈ ವಿದ್ವಾಂಸ ಮತ್ತು ಆತನ ಹಿಂದಿದ್ದ ಹಿಂಬಾಲಕ ಲಾಬಿ ಈ ಕೃತಿಗೆ ಬಹಿಷ್ಕಾರ ಹಾಕಿಸುವ  ಪ್ರಯತ್ನದಲ್ಲಿ ಯಶಸ್ವಿಯಾಯಿತು. ಮುಂದೆ ಸ್ವಾತಂತ್ರ್ಯಾನಂತರದಲ್ಲಿ ಅದಕ್ಕಿದ್ದ ಬಹಿಷ್ಕಾರವನ್ನು ತೆಗೆಯಲಾಯಿತು. 

ನಾಗರತ್ನಮ್ಮನವರು 1952 ವರ್ಷದ ಮೇ ತಿಂಗಳ 19ರಂದು ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಕೊನೆಗೊಳಿಸಿದರು.  ಅವರ ಸ್ಮಾರಕವನ್ನು ಸಂತ ತ್ಯಾಗರಾಜರ ಸಮಾಧಿಯ ಪಕ್ಕದಲ್ಲೇ ಸ್ಥಾಪಿಸಲಾಯಿತು.  ಕರ್ನಾಟಕ ಸಂಗೀತವನ್ನು ನೆನೆಯುವರು, ತ್ಯಾಗರಾಜರನ್ನು ನೆನೆಯುವವರು, ಬೆಂಗಳೂರು ನಾಗರತ್ನಮ್ಮನವರನ್ನೂ ಸ್ಮರಿಸಲೇಬೇಕು. 
Tag: Bangalore Nagaratnamma, Bengaluru Nagaratnammaಕಾಮೆಂಟ್‌ಗಳಿಲ್ಲ: