ಶುಕ್ರವಾರ, ನವೆಂಬರ್ 8, 2019

ಶಿ. ಶಿ. ಬಸವನಾಳ


ಶಿ. ಶಿ. ಬಸವನಾಳ


ಮಹಾನ್ ಶೈಕ್ಷಣಿಕ ಸಂಸ್ಥೆಗಳ ಸ್ಥಾಪಕರಾಗಿ, ಸಾಹಿತಿಗಳಾಗಿ ಮತ್ತು ವಿದ್ವಂಸರಾಗಿ ಶೋಭಿಸಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು, ಶಿವಯೋಗಪ್ಪ ಮತ್ತು ಸಿದ್ದಮ್ಮ ದಂಪತಿಗಳ ಪುತ್ರರಾಗಿ 1893 ವರ್ಷದ ನವೆಂಬರ್ 7ರಂದು ಜನಿಸಿದರು. ಮೆಟ್ರಿಕ್ ಪರೀಕ್ಷೆಯನ್ನು 1910ರಲ್ಲಿ ಮುಗಿಸಿ 1915ರಲ್ಲಿ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. ಪದವಿಗಳಿಸಿದರು.


ಸರ್ಕಾರಿ ಕೆಲಸಕ್ಕೆ ಹೋಗದ ಬಸವನಾಳರು ಸಾರ್ವಜನಿಕ ಸೇವೆಗೆ ಟೊಂಕಕಟ್ಟಿ ನಿಂತರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿಯನ್ನು ಸ್ಥಾಪಿಸಿದರು. ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಮತ್ತು ಲಿಂಗರಾಜ ಕಾಲೇಜಿನಲ್ಲಿ ವೈಸ್ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಕೆಎಲ್ಇ ಸೊಸೈಟಿಯ ಕಾರ್ಯದರ್ಶಿಯಾಗಿ ದುಡಿದರು.
ಪ್ರಬೋಧ ಮಾಸಪತ್ರಿಕೆ, ಜಯಕರ್ನಾಟಕದ ಮಾಸಪತ್ರಿಕೆಗಳ ಸಂಪಾದಕರಾಗಿ, ಸಾಹಿತ್ಯ ಸಮಿತಿ, ಪತ್ರಿಕೆ ಸ್ಥಾಪಕರಾಗಿಯೂ ಶ್ರಮಿಸಿದರು. ಬೆಳಗಾವಿ ಜಿ. ಐ. ಹೈಸ್ಕೂಲ್, ಧಾರವಾಡದ ಲಿಂಗರಾಜು ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಯ ಕಾರ್ಯಗಳಲ್ಲಿ ಇವರ ಕೊಡುಗೆ ಅಪಾರವಾದುದಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಕರಾಗಿಯೂ ಅವರು ಹಲವು ವರ್ಷ ಕಾರ್ಯ ಮಾಡಿದ್ದರು.


ಬಸವನಾಳರು 1944ರಲ್ಲಿ ರಬಕವಿಯಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ 13ನೇ ಅಧಿವೇಶನದ ಅಧ್ಯಕ್ಷರಾದರು. 1926ರಲ್ಲಿ ಸಿದ್ಧಗಂಗಾದಲ್ಲಿ ನಡೆದ ವೀರಶೈವ ತರುಣ ಸಂಘಗಳ ಸಮ್ಮೇಳನದ ಸಭಾಧ್ಯಕ್ಷರಾದರು.


ಶಿ ಶಿ. ಬಸವನಾಳರು ಚೆನ್ನಬಸವಪುರಾಣ, ಪ್ರಭುಲಿಂಗಲೀಲೆ, ಶಬರಶಂಕರ ವಿಳಾಸ, ಗಿರಿಜಾ ಕಲ್ಯಾಣ ಮೊದಲಾದ ಕಾವ್ಯಗಳ ಸಂಪಾದನೆ; ಹಾಗೂ ಕಾವ್ಯಾವಲೋಕನ, ಬಸವಣ್ಣನವರ ಷಟ್ಸ್ಥಲ ವಚನಗಳು, ಸಂಶೋಧನೆ ಸಂಪಾದನೆ, ವೀರಶೈವ ತತ್ವಪ್ರಕಾಶ (ಪಂಡಿತ ಬರಹಗಳ ಸಂಕಲನ), ಮ್ಯೂಸಿಂಗ್ಸ್ ಆಫ್ ಬಸವ (ಬಸವಣ್ಣನವರ ವಚನಗಳ ಆಂಗ್ಲಾನುವಾದ) ಮುಂತಾದ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.


ಸಮರ್ಥ ಆಡಳಿತಗಾರರೂ ಪರಿಣತ ಗ್ರಂಥ ಸಂಪಾದನಕಾರರೂ ಆಗಿದ್ದ ಶಿ. ಶಿ. ಬಸವನಾಳರು 1951 ವರ್ಷದ ಫೆಬ್ರುವರಿ 22ರಂದು ಕೈಲಾಸವಾಸಿಗಳಾದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: S. S. Basavanala


ಕಾಮೆಂಟ್‌ಗಳಿಲ್ಲ: