ಶುಕ್ರವಾರ, ನವೆಂಬರ್ 8, 2019

ಸಿ. ಪರಮೆಶ್ವರಾಚಾರ್ಯಸಂಪ್ರದಾಯ ಶಿಲ್ಪಕಲೆಯ ಹಿರಿಯ ತಲೆಮಾರಿನವರಾದ ಸಿ. ಪರಮೇಶ್ವರಾಚಾರ್ಯರು 1927 ವರ್ಷದ ನವೆಂಬರ್ 8ರಂದು  ಮೈಸೂರಿನಲ್ಲಿ ಜನಿಸಿದರು.  ತಂದೆ ಪ್ರಖ್ಯಾತ ಶಿಲ್ಪಿಗಳೆನಿಸಿದ್ದ ಮಿರ್ಲೆ ಚೌಡಾಚಾರ್ಯರು.  ತಾಯಿ ಲಕ್ಷ್ಮೀದೇವಮ್ಮನವರು.  ಪರಮೇಶ್ವರಚಾರ್ಯರಿಗೆ ಕಲೆ ವಂಶಪಾರಂಪರ್ಯವಾಗಿ ಬಂದದ್ದು. ಪರಮೇಶ್ವರಾಚಾರ್ಯರ ಪೂರ್ವಿಕರು ವಿಜಯನಗರ ಸಾಮ್ರಾಜ್ಯದಲ್ಲಿ ಆಸ್ಥಾನ ಶಿಲ್ಪಿಗಳಾಗಿದ್ದು ನಂತರದ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿ ರಾಜಾಶ್ರಯ ಪಡೆದವರು. ಅಜ್ಜ, ತಂದೆ, ಶಿಲಾ ಮತ್ತು ಲೋಹ ಶಿಲ್ಪ ರಚನೆಯಲ್ಲಿ ಪರಿಣತರು, ಅಣ್ಣ ಗಾರೆಯ ಶಿಲ್ಪದಲ್ಲಿ ಸಿದ್ಧಹಸ್ತರು. ತಾಯಿಯ ಕಡೆಯವರೂ ಕಾಷ್ಠ ಶಿಲ್ಪದಲ್ಲಿ ಪ್ರಸಿದ್ದಿ ಪಡೆದು, ಅರಮನೆಯಲ್ಲಿ ಗೌರವ ಸ್ಥಾನದಲ್ಲಿದ್ದವರು.

ಎಳೆಯ ವಯಸ್ಸಿನಲ್ಲಿಯೇ ವಂಶದ ಹಿರಿಯರಿಂದ ಸ್ಫೂರ್ತಿ ಪಡೆದು ಶಿಲಾಶಿಲ್ಪ, ಕಾಷ್ಠಶಿಲ್ಪ ಹಾಗೂ ಲೋಹ ಶಿಲ್ಪಗಳಲ್ಲಿ ಪರಿಚಯ ಪಡೆದುಕೊಂಡು. ಪ್ರಯೋಗ ನಡೆಸಿದರು. ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ಕಲಾಶಾಲೆಯಲ್ಲಿ ಉನ್ನತ ಶಿಕ್ಷಣ ಪಡೆದು ಕಲಾಪ್ರೌಢಿಮೆಯನ್ನು ಸಂಪಾದಿಸಿದರು. ಹೊಯ್ಸಳ ದೇವಾಲಯಗಳ, ಅದ್ಭುತ ಶಿಲ್ಪಗಳಿಂದ ಪ್ರಭಾವಿತರಾದರು. ಶಿಲ್ಪ ಸಿದ್ಧಾಂತಿ ಸಿದ್ಧಲಿಂಗಸ್ವಾಮಿಗಳ ಗುರುಕುಲದಲ್ಲಿ ಶಾಸ್ತ್ರೀಯ ಶಿಲ್ಪಕಲೆಯನ್ನು ಅಭ್ಯಾಸ ಮಾಡಿದರು. ಗುರುಪ್ರೇರಣೆಯಿಂದ ಮೈಸೂರು ಅರಮನೆಯ ಆವರಣದಲ್ಲಿನ ಭುವನೇಶ್ವರಿ ದೇವಾಲಯ, ಮತ್ತು ಮೈಸೂರಿನ ರಾಮಾನುಜ ರಸ್ತೆಯ ಕಾಮಕಾಮೇಶ್ವರಿ ದೇವಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಬೆಂಗಳೂರಿನ ಅನೇಕ ದೇವಾಲಯಗಳ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉನ್ನತ ಶಿಲ್ಪಕಲಾಪಾಂಡಿತ್ಯವನ್ನು ಕರಗತ ಮಾಡಿಕೊಂಡರು. ಗುರುಗಳ ಮಕ್ಕಳಾದ ನಾಗೇಂದ್ರ ಸ್ಥಪತಿಯವರ ಮಾರ್ಗದರ್ಶನದಲ್ಲಿ ಇಂದು ವೈಭವದಿಂದ ಕಂಗೊಳಿಸುತ್ತಿರುವ ಬೆಂಗಳೂರಿನ ವಿಧಾನ ಸೌಧದ ನಿರ್ಮಾಣ ಕಾರ್ಯದಲ್ಲೂ ನೆರವು ನೀಡಿದರು. ಅದರ ಹೊರ ವಿನ್ಯಾಸದ ಶಿಲ್ಪ ರಚನೆ ಶಿಲ್ಪಿಗಳದ್ದು. ವಿಧಾನಸೌಧದ ನೆಲ ಹಾಗೂ ಮೊದಲ ಮಹಡಿಯ ವಿಶಾಲವಾದ ಮೊಗಸಾಲೆ, ದಪ್ಪನಾದ ಬೃಹದಾಕಾರದ ಕಂಬಗಳು ಹಾಗೂ ಅವುಗಳ ಮೇಲಿನ ಚಿತ್ತಾರ, ಸಭಾಸದನದ ಒಳಭಾಗ, ಹೊರಗಿರುವ ನಾಲ್ಕಾರು ಬಾಗಿಲುಗಳು ಇವುಗಳೆಲ್ಲ ಸಾಕಷ್ಟು ಕಲಾತ್ಮಕವಾಗಿವೆ. ಒಳ ಹಾಗೂ ಮೇಲ್ಛಾವಣಿಯ ಭಿತ್ತಿಯಲ್ಲಿ, ಕಂಬಗಳ ಮೇಲೆ ಅವಕಾಶ ಇರುವಲ್ಲೆಲ್ಲಾ ಶಿಲೆಯ ಗಾರೆಯ ಡಿಸೈನ್‍ಗಳು ವಿವಿಧ ನಮೂನೆಗಳಲ್ಲಿವೆ. ಅಂತೆಯೆ ಸಭಾಸದನದ ಪ್ರವೇಶದಲ್ಲಿ ಗಂಧದ ಮರದ ಕಲಾತ್ಮಕ ಬಾಗಿಲು ಹಾಗೂ ಉಳಿದ ಹಲವಾರು ಸದನಗಳ ಪ್ರವೇಶದ್ವಾರಗಳು ಕಟ್ಟಿಗೆಯಲ್ಲಿ ರೂಪಿತವಾಗಿ ಅನೇಕ ಪೌರಾಣಿಕ ಮೂರ್ತಿಗಳಲ್ಲದೆ ಪ್ರಾಣಿ ಪಕ್ಷಿಗಳಿಂದ ನಕ್ಷೆ ಸುಳುಹು ಹೊಳಹುಗಳಿಂದ ತುಂಬಿವೆ. ಈ ಗಾರೆ ಹಾಗೂ ಮರದ ಡಿಸೈನ್‍ಗಳನ್ನು ವಿಶೇಷವಾಗಿ ಮೈಸೂರಿನ ಹಾಗೂ ಸೊರಬ ಸಾಗರದ ಗುಡಿಗಾರ ಶಿಲ್ಪಿಗಳಿಗೆ ನೀಡುವ ಮೇಲ್ವಿಚಾರಣೆ ಪರಮೇಶ್ವರಾಚಾರ್ಯರ ಪಾಲಿಗೆ ಬಂತು. ಅದನ್ನು ಆಚಾರ್ಯರು ಶ್ರದ್ಧೆಯಿಂದ ನಿರ್ವಹಿಸಿದರು.

1957ನೇ ವರ್ಷ ಆಚಾರ್ಯರ ಬದುಕಿಗೆ ತಿರುವು ನೀಡಿದ ಮುಖ್ಯವಾದ ವರ್ಷ.  ಕಮಲಾದೇವಿ ಚಟ್ಟೋಪಾಧ್ಯಾಯರ ನೇತೃತ್ವದಲ್ಲಿ ಸ್ಥಾಪಿತಗೊಂಡಿದ್ದ ಅಖಿಲ ಭಾರತ ಹಸ್ತಶಿಲ್ಪ ಮಂಡಳಿಯ ಬೆಂಗಳೂರಿನ ವಿನ್ಯಾಸ ಕೇಂದ್ರದಲ್ಲಿ ಆಚಾರ್ಯರು  ಆ ವರ್ಷ ಶಿಲ್ಪಕಲಾವಿದರಾಗಿ ನೇಮಕಗೊಂಡರು. ಆ ಸಂಸ್ಥೆಯಲ್ಲಿ 28 ವರ್ಷಗಳ ಕಾಲ ದುಡಿದರು. ಪರಮೇಶ್ವರಾಚಾರ್ಯರು ಡಿಸೈನ್ ಸೆಂಟರಿನಲ್ಲಿದ್ದಾಗ ನಡೆದ ಪ್ರಮುಖ ಕಾರ್ಯಾಗಾರವೆಂದರೆ `ಅಖಿಲ ಏಷ್ಯಾ ಖಂಡದ ಕರಕುಶಲ ಶಿಲ್ಪಿಗಳ ಪ್ರಥಮ ಕಾರ್ಯಾಗಾರ. ಬೆಂಗಳೂರಿನಲ್ಲಿ ಏಪ್ರಿಲ್ ಮೇ 1980ರಲ್ಲಿ ನಡೆದ ಈ ಶಿಬಿರಕ್ಕೆ ಹದಿನೈದು ದೇಶಗಳ ಎಪ್ಪತ್ತಕ್ಕೂ ಹೆಚ್ಚು ಪ್ರತಿನಿಧಿಗಳು ಬಂದಿದ್ದರು. ಎಂದಿನಂತೆ ಕಮಲಾದೇವಿ ಅವರ ನೇತೃತ್ವವಿದ್ದು ಇಲ್ಲಿಯವರೇ ಆದ ಪರಮೇಶ್ವರಾಚಾರ್ಯರದೂ ಮುಖ್ಯ ಪಾತ್ರವಾಗಿತ್ತು. ವಿನ್ಯಾಸ ಕೇಂದ್ರದ ಕಾರ್ಯಕ್ರಮಕ್ಕನುಗುಣವಾಗಿ ಆಚಾರ್ಯರು ದಕ್ಷಿಣ ಭಾರತದ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ ಹೊಯ್ಸಳ, ಚೋಳ, ಪಲ್ಲವ, ಗಂಗ, ಗುಪ್ತ, ಮೊದಲಾದ ವಿಭಿನ್ನ ಶೈಲಿಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳ ವಿಗ್ರಹಗಳನ್ನು ಅಭ್ಯಾಸ ಮಾಡಿದರು. ಅದರ ಫಲವಾಗಿ ಸಂಪಾದಿಸಿದ ಕಲಾಚೈತನ್ಯವನ್ನು ಶಿಷ್ಯವೃತ್ತಿ ಮಾಡಿದ ನೂರಾರು ವಿದ್ಯಾರ್ಥಿಗಳಿಗೆ ಧಾರೆಯೆರೆದರು.

1965ರಲ್ಲಿ ಅಖಿಲ ಭಾರತ ಹಸ್ತಶಿಲ್ಪ ಮಂಡಳಿಯು ಪ್ರಪ್ರಥಮವಾಗಿ ಸ್ಥಾಪಿಸಿದ ಸಿದ್ಧಹಸ್ತ ಶಿಲ್ಪಿಗಳಿಗೆ ರಾಷ್ಟ್ರೀಯ ಪುರಸ್ಕಾರ ಯೋಜನೆಯಡಿಯಲ್ಲಿ ಆಯ್ಕೆಗೊಂಡ ಹಸ್ತಶಿಲ್ಪಿಗಳಲ್ಲಿ ಮೊದಲಿಗರು. ಆಚಾರ್ಯರು ರಚಿಸಿದ ನವಗ್ರಹಗಳಲ್ಲಿ ಶುಕ್ರಗ್ರಹ ದೇವತೆಯ ಕಾಷ್ಠ ಶಿಲ್ಪಕ್ಕೆ ಈ ಪ್ರಶಸ್ತಿ ದೊರೆಯಿತು. ಆಚಾರ್ಯರ ಸುಂದರ ಶಿಲಾಶಿಲ್ಪಗಳು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿರುವ ಸಂಗ್ರಹಾಲಯಗಳಲ್ಲಿಯೂ, ದೇವಾಲಯಗಳಲ್ಲಿಯೂ ಗಣ್ಯರ ಸೌಧಗಳಲ್ಲಿಯೂ ಕಂಡುಬರುತ್ತವೆ. ಹೊಯ್ಸಳ, ಚೋಳ, ಪಲ್ಲವ ಎಲ್ಲ ಶೈಲಿಗಳಲ್ಲೂ ಆಚಾರ್ಯರು ಶಿಲ್ಪಗಳನ್ನು ರಚಿಸಿದ್ದಾರೆ. ರಚಿಸಿದ ಎಲ್ಲ ಶಿಲ್ಪಗಳು ಮಾರಾಟವಾಗಿವೆ, ಆಚಾರ್ಯರು ರಚಿಸಿದ ಪ್ರತಿಯೊಂದು ಶಿಲ್ಪವೂ ಶಾಸ್ತ್ರಶುದ್ಧ. ಶಾಸ್ತ್ರ ಗ್ರಂಥಗಳಲ್ಲಿ ಕಾಣಬರುವ ಚಿತ್ರಗಳಂತಲ್ಲ. ಅವುಗಳ ರಚನೆ ಲಕ್ಷಣವಾಗಿವೆ ಮುದ್ದಾಗಿರುತ್ತವೆ. ಸಹಾಯಕರ ನೆರವು ಪಡೆದ ಮಾಡಿದ್ದು ವಿರಳ.

ಮೈಸೂರಿನಲ್ಲಿರುವ ಸಾಯಿಬಾಬಾ ಮಂದಿರದಲ್ಲಿರುವ ಬಾಬಾರವರ ಕೃಷ್ಣಶಿಲಾಶಿಲ್ಪ; ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿರುವ ಧನ್ವಂತರಿ; ಎನ್. ಎಸ್.ರಾವ್ ಸಂಗ್ರಹದಲ್ಲಿರುವ ಚೋಳ ಶೈಲಿಯ ಬನಶಂಕರಿ ವಿಜಯ ನಗರ ಶೈಲಿಯಲ್ಲಿರುವ ತಿರುಪತಿಯ ಕೃಷ್ಣದೇವರಾಯ ಹಾಗೂ ಪತ್ನಿಯರ ಶಿಲ್ಪ ಗಮನಾರ್ಹ, ಶ್ರೀಗಂಧದಲ್ಲಿ ಕೆತ್ತಿದ ಬುದ್ಧ ಹಾಗೂ ಅವನ ಅನುಯಾಯಿಗಳ ಶಿಲ್ಪ ಟಿಬೆಟ್ ಹಾಗೂ ಇತರ ಭಾರತ ಶೈಲಿಯಲ್ಲಿದೆ. ಗ್ರೀಕ್ ಪುರಾಣಗಳಲ್ಲಿನ ಧನ್ವಂತರಿ ಹಿಪ್ಪೋಕ್ರೇಟಿಸ್ ಮೂರ್ತಿ, ಗ್ರೀಕ್ ಶೈಲಿಯಲ್ಲಿದೆ. ಲೇಪಾಕ್ಷಿ ಭಿತ್ತಿ ಚಿತ್ರಗಳ ಅನುಸರಿಸಿ ನಿರ್ಮಾಣವಾದ ವಿಷ್ಣು, ರಾಮ ಶಿವ ಕಲ್ಕತ್ತದ ವೆಲ್ಲಿಂಗ್‍ಟನ್ ಪ್ಯಾಲೆಸ್‍ನಲ್ಲಿವೆ. ಬಸವಣ್ಣ, ಗಾಂಧಿ, ಅಕ್ಕಮಹಾದೇವಿ, ಜೀಸಸ್, ಅಂಬೇಡ್ಕರ್ ಕೆ.ಸಿ. ರೆಡ್ಡಿ ಇವರ ಶಿಲ್ಪಗಳು, ಅತ್ಯಂತ ನೈಜರೂಪದಲ್ಲಿವೆ. ಬನಶಂಕರಿ ಅದ್ಭುತವಾದ, ರಚನೆ ಎರಡು ಆನೆಗಳ ಕುಂಭಸ್ಥಳದ ಮೇಲೆ ಕಾಲೂರಿನಿಂತ ಸಿಂಹ. ಆನೆಯ ಪಕ್ಕದಲ್ಲಿ ಶರಣಾಗಿ ಬಿದ್ದಿರುವ ಅಸುರರ ತಲೆಯ ಮೇಲೆ ಕಾಲಿರಿಸಿರುವ ಬನಶಂಕರಿ. ಚಕ್ರ, ತ್ರಿಶೂಲ ಕತ್ತಿ, ಗುರಾಣಿ, ಶಂಖ ಡಮರುಧಾರಿಣಿ. ಹೂಮಳೆಗರೆವ ಗಂಧರ್ವರು, ಪಾಶ್ರ್ವದಲ್ಲಿ ಲಕ್ಷ್ಮಿ ಸರಸ್ವತಿಯರು. ಚಾಮರಧಾರಿಗಳು. ಪ್ರಭಾವಳಿಯ ಶೋಭೆ. ಮಂಡಲಾಕೃತಿಯ ರಚನೆ. ಇಪ್ಪತ್ತು ಆಯುಧಗಳು ಒಂಭತ್ತು ವ್ಯಕ್ತಿಗಳು. ಸ್ಥಳ ಪೋಲು ಮಾಡದ ಅಂದವಾದ ವಿನ್ಯಾಸ. ಪ್ರತಿಯೊಂದು ಶಿಲ್ಪವೂ ನಿಯಮ ಬದ್ಧ; ಬುದ್ಧಿ ಜೀವಿಗಳ ಚರ್ಚೆಗೆ ವಸ್ತುವಾಗುವ ವಿಷಯ. ವಾರಾಣಸಿಯ ಆನಂದಮಯಿ ಆಶ್ರಮಕ್ಕೆ ಗಂಧದ ಮರದಲ್ಲಿ ದೊಡ್ಡ ಆಕಾರದ ಮಂಟಪದ ರಚನೆ ಇನ್ನೊಂದು ಮೈಲಿಗಲ್ಲು, ಅಂತೆಯೆ ಮುಂಬಯಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ ರಚಿಸಿದ ಮಂಟಪ, ಅಲ್ಲಿಗೆ ಕಳಿಸುವ ಮೊದಲು ಕೆಲಕಾಲ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕರಕುಶಲವಸ್ತುಮಾರಾಟ ಸಂಸ್ಥೆ ಕಾವೇರಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗಿತ್ತು ಅದು ಕಟ್ಟಡದ ಒಂದು ಭಾಗವೋ ಎಂಬಂತೆ ಬೃಹದಾಕಾರದಲ್ಲಿತ್ತು. ಸುಮಾರು 10 ಅಡಿ ಅಗಲ, 9 1/2 ಅಡಿ ಎತ್ತರವಿದ್ದ ಮಂಟಪ. ಎಡ ಭಾಗಕ್ಕೆ ರಾಮಾಯಣ, ಬಲಭಾಗಕ್ಕೆ ಮಹಾಭಾರತದ ದೃಶ್ಯಗಳು, ಮಧ್ಯಭಾಗದಲ್ಲಿ ಕೃಷ್ಣಲೀಲೆ, ಚೌಕಟ್ಟಿನಲ್ಲಿ ದಶಾವತಾರಗಳು, ಗಂಧರ್ವರು, ಪೀಠದ ಕೆಳಗೆ ಸೂರದಾಸ್, ಮೀರಾ, ಗಾಂಧಿ, ಹರಿದಾಸ, ಚೈತನ್ಯ ಪ್ರಭುಗಳು ಇತ್ಯಾದಿಯಾಗಿ ಸುಮಾರು 80 ಮೂರ್ತಿಗಳಿಂದ ಒಳಗೊಂಡು ಆಕರ್ಷಣೀಯವಾಗಿತ್ತು. ವಿಗ್ರಹಗಳು ಗಂಧದ ಮರದಲ್ಲೂ ಉಳಿದ ಭಾಗ ತೇಗದ ಮರದಲ್ಲೂ ರಚಿತವಾಗಿತ್ತು. ಮುಂಭಾಗದ ಕಂಬಗಳು ತಲಾ ಎಂಟು ಸೀಳುಗಳಿಂದ ಕೂಡಿದ್ದು ಪ್ರತಿಯೊಂದೂ ಸಿಂಹವನ್ನು ಆಧರಿಸಿದ್ದವು. 1975ರಲ್ಲಿ ರಚಿಸಿದ ಈ ಕೃತಿಗಾಗಿ ನಲವತ್ತೆಂಟು ವಯಸ್ಸಿನ ಆಚಾರ್ಯರು ಇಬ್ಬರು ಹುಡುಗರ ಸಹಾಯದೊಂದಿಗೆ ದಿನಕ್ಕೆ 2-3 ಗಂಟೆಗಳಂತೆ ವ್ಯಯಿಸಿ ಒಂದು ವರ್ಷ ಕಾಲಾವಧಿಯನ್ನು ತೆಗೆದುಕೊಂಡರು. ಅಂದಿಗೇ ಈ ಕೃತಿಗೆ ಅರ್ಧ ಲಕ್ಷ ರೂಗಳ ವೆಚ್ಚವಾಗಿತ್ತು. ಸ್ವಿಟ್ಸರ್ಲೆಂಡ್‍ನಲ್ಲಿ 1981ರಲ್ಲಿ ನಡೆದ ಶಿಲ್ಪಕಲಾ ಪ್ರದರ್ಶನದಲ್ಲಿ ಹಾಗೂ 1985ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ಭಾರತ ಶಿಲ್ಪೋತ್ಸವ ದಲ್ಲಿ ಪಾಲ್ಗೊಂಡು, ಶಾಸ್ತ್ರೀಯ ಶಿಲ್ಪಕಲೆಯನ್ನು ಪಾಶ್ಚಾತ್ಯರಿಗೆ ಪರಿಚಯಿಸಿದರು.

ಆಚಾರ್ಯರಿಗೆ ಬಂದಿರುವ ಬಹುಮಾನಗಳು ಪ್ರಶಸ್ತಿಗಳು ಪುರಸ್ಕಾರಗಳು ನೂರಾರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, (1966) ಲಲಿತ ಕಲಾ ಅಕಾಡೆಮಿ ಪ್ರಶಸ್ತಿ. ಮೈಸೂರಿನ ರಾಮ್‍ಸನ್ಸ್ ಸಂಸ್ಥೆಯ ಕಲಾಸನ್ಮಾನ್ ಪ್ರಶಸ್ತಿ (1998) ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಪ್ರಶಸ್ತಿ, ಆಲ್ ಇಂಡಿಯಾ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿಯ ಬೆಳ್ಳಿಹಬ್ಬದ ಪ್ರಶಸ್ತಿ ಹೀಗೆ ಸಂದ ಗೌರವಗಳಿಗೆ ಕೊನೆಯಿಲ್ಲ. ಕೇಂದ್ರ ಸರಕಾರದ ವಿನ್ಯಾಸ ಕೇಂದ್ರದಿಂದ ನಿವೃತ್ತಿ ಪಡೆದ ನಂತರ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರತಿಮಾಶಾಸ್ತ್ರ ವಿಭಾಗದಲ್ಲಿ ಸಂದರ್ಶಕ-ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ, ನಂತರ ಅಧ್ಯಕ್ಷರಾಗಿ (1990) ಸೇವೆ ಸಲ್ಲಿಸಿದರು.

ಶಿಲ್ಪಕಲೆಗೆ  ಸಲ್ಲಿಸಿರುವ ಅವಿರತ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಒಂದು ಲಕ್ಷರೂ ಮೊತ್ತದ ಜಕಣಾಚಾರಿ ಪ್ರಶಸ್ತಿಯನ್ನು 1995ರಲ್ಲಿ ನೀಡಿತು. ಈ ಪ್ರಶಸ್ತಿ ಪಡೆದವರಲ್ಲಿ ಆಚಾರ್ಯರೇ ಮೊದಲಿಗರು. ಕೇಂದ್ರ ಕರಕುಶಲ ಅಭಿವೃದ್ಧಿ ಮಂಡಳಿ ಪರಮೇಶ್ವರಾಚಾರ್ಯರನ್ನು ಶಿಲ್ಪಗುರು (2001) ಎಂಬ ಉಪಾಧಿಯನ್ನೂ  ನೀಡಿತ್ತು.

ಈ ಮಹಾನ್ ಆಚಾರ್ಯರಿಗೆ ನಮಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಹಾರೈಕೆಗಳನ್ನು ಹೇಳೋಣ.

 Tag: C. Parameshwaracharya, C. Parameswaracharya

ಕಾಮೆಂಟ್‌ಗಳಿಲ್ಲ: