ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಡಿ. ದೇವೇಗೌಡ


 ಎಚ್. ಡಿ. ದೇವೇಗೌಡ


ಎಚ್. ಡಿ. ದೇವೇಗೌಡರು ರಾಜಕಾರಣಿಯಾಗಿ, ಪ್ರಧಾನಿ ಪಟ್ಟವೇರಿದ ಮೊಟ್ಟಮೊದಲ ಕನ್ನಡಿಗರಾಗಿ, ರೈತನಾಯಕರಾಗಿ, ಮಣ್ಣಿನಮಗನಾಗಿ ಹಾಗೂ ಹಿರಿಯ ವಯಸ್ಸಿನಲ್ಲಿನ ಶಿಸ್ತಿನ ಜೀವನಕ್ಕೆ ಹೆಸರಾಗಿದ್ದಾರೆ.‍ ಅವರು 11 ತಿಂಗಳ ಕಾಲ ಪ್ರಧಾನಿಯಾಗಿದ್ದರು. ಈಗಲೂ ಜಾತ್ಯತೀತ ಜನತಾದಳದ ಅಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ 1933ರ ಮೇ 18ರಂದು ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕು ಹರದನಹಳ್ಳಿಯಲ್ಲಿ ಜನಿಸಿದರು. ತಂದೆ ದೋಡ್ಡೇಗೌಡ.  ತಾಯಿ ದೇವಮ್ಮ. ಇವರದ್ದು ಅತಿ ಸಾಮಾನ್ಯ ಕೃಷಿಕರ ಕುಟುಂಬ. ಆ ಬಗ್ಗೆ ಈಗಲೂ ದೇವೇಗೌಡರಿಗೆ ಸದಭಿಮಾನ. ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿದರು. ರಾಜಕಾರಣಕ್ಕೆ ಧುಮುಕುವ ಮೊದಲು ಸಣ್ಣಪುಟ್ಟ ಕಾಂಟ್ರಾಕ್ಟ್ ವೃತ್ತಿ ಮಾಡಿದರು.  

ದೇವೇಗೌಡರು ಹಾಸನಜಿಲ್ಲೆ ಹಿರಿಯ ಕಾಂಗ್ರೆಸ್ ರಾಜಕಾರಣಿ ಎ.ಜಿ. ರಾಮಚಂದ್ರರಾಯರಿಂದ ರಾಜಕೀಯ ದೀಕ್ಷೆ ಪಡೆದರು. 28ರ ಹರೆಯದ ದೇವೇಗೌಡರು 1962ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶ ಮಾಡಿದರು. ಸದನದಲ್ಲಿ ಪ್ರಭಾವಿ ಭಾಷಣಕಾರರಾಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದರು. ಹೊಳೇನರಸೀಪುರದಿಂದಲೇ ಪುನಃ ಪುನಃ ಇನ್ನೂ 3 ಬಾರಿ 1967-71ರಲ್ಲಿ, 1972-77ರಲ್ಲಿ, 1978-83ರಲ್ಲಿ ವಿಧಾನಸಭೆಗೆ ಆಯ್ಕೆಯಾದರು. ಮಾರ್ಚ್ 1972ರಿಂದ ಮಾರ್ಚ್ 1976ರವರೆಗೆ, ಹಾಗೂ ನವೆಂಬರ್ 1976ರಿಂದ ಡಿಸೆಂಬರ್ 1977ರ ವರೆಗೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಸಂಸ್ಥಾ ಕಾಂಗ್ರೆಸ್‍ನಲ್ಲಿ ಉಳಿದರು. 1974ರ ಲೋಕಸಭಾ ಚುನಾವಣಾನಂತರ ಪ್ರತಿಪಕ್ಷದ ನಾಯಕರಾದರು. 1975-76ರಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಸೆರೆಮನೆ ವಾಸ ಅನುಭವಿಸಿದರು.

ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ-ಕ್ರಾಂತಿರಂಗ ಸರ್ಕಾರಗಳಲ್ಲಿ ವಿಧಾನಸಭೆಗಳಲ್ಲಿ ನೀರಾವರಿ ಹಾಗೂ ಲೋಕೋಪಯೋಗಿ ಸಚಿವರಾಗಿ ಗಮನಾರ್ಹ ಸೇವೆ ಸಲ್ಲಿಸಿದರು. ಹೆಗಡೆ ಅವರೊಂದಿಗೆ ಹಲವಾರು ಭಿನ್ನಭಿಪ್ರಾಯಗಳ ನೆರಳಲ್ಲಿ 1987ರಲ್ಲಿ ನೀರಾವರಿಗೆ ಸಾಕಷ್ಟು ಹಣ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದರು.

ದೇವೇಗೌಡರು 1991ರಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ರಾಜ್ಯದಲ್ಲಿ 2 ಬಾರಿ ಜನತಾ ಪಕ್ಷದ ಅಧ್ಯಕ್ಷರಾದರು. 1994ರಲ್ಲಿ ಜನತಾದಳದ ಅಧ್ಯಕ್ಷರಾದರು. ಆ ಬಾರಿ ಜನತಾದಳ ಮತ್ತೆ ಅಧಿಕಾರಕ್ಕೆ ಬಂತು. ಡಿಸೆಂಬರ್ 11, 1994ರಂದು ಜನತಾದಳ ಶಾಸಕಾಂಗ ಪಕ್ಷದ ಆಯ್ಕೆಯಾಗಿ  ಕರ್ನಾಟಕದ 14ನೇ ಮುಖ್ಯಮಂತ್ರಿ ಆದರು. ಆ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಭಾರಿ ಬಹುಮತದೊಡನೆ ವಿಧಾನ ಸಭೆಗೆ ಆಯ್ಕೆ ಆದರು.  ಕನಕಪುರ ಕ್ಷೇತ್ರದಿಂದಲೂ ಮರು ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿದ್ದರು.  1996-1997 ಅವಧಿಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರದ ಗೊಂದಲದ ರಾಜಕೀಯ ಸನ್ನಿವೇಶದಲ್ಲಿ ಇದ್ದಕ್ಕಿದ್ದಂತೆ ಪ್ರಧಾನಿ ಆದರು.

ದೇವೇಗೌಡರು 2004ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹಾಸನ ಹಾಗೂ ಕನಕಪುರ ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧಿಸಿದರು. ಹಾಸನದಲ್ಲಿ ಗೆದ್ದು ಕನಕಪುರದಲ್ಲಿ ಸೋತರು. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿರಲಿಲ್ಲ. ಕಾಂಗ್ರೆಸ್ ಜತೆ ಸೇರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದರು. 

ಮುಂದೆ ದೇವೇಗೌಡರ ಪುತ್ರ ಎಚ್. ಡಿ. ಕುಮಾರಸ್ವಾಮಿ, ದೇವೇಗೌಡರ ಇಚ್ಛೆಗೆ ವಿರುದ್ಧ ಎಂಬಂತೆ ಬಿಂಬಿಸಿ ಬಿ. ಜೆ. ಪಿ. ಜೊತೆ ಸಖ್ಯ ಮಾಡಿಕೊಂಡು ಮುಖ್ಯಮಂತ್ರಿಯಾಗಿ, ಮುಂದೆ ಬಿಜೆಪಿಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಬೇಕಾದ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಸಖ್ಯ ಮುರಿದುಕೊಂಡು, ದೇವೇಗೌಡರ ಬಿಜೆಪಿ ವಿರುದ್ಧದ ನಿಲುವೇ ಜಾತ್ಯಾತೀತ ಎಂಬ ಸಿದ್ಧಾಂತಕ್ಕೆ ಹಿಂದಿರುಗಿರುವುದಾಗಿ ನಿರೂಪಣಾ ಕೌಶಲ ತೋರಿದರು.  ದೇವೇಗೌಡರ ರಾಜಕೀಯ ದೃಷ್ಟಿಯ ದೆಸೆಯಿಂದಾಗಿ ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತಕ್ಕೆ ಕೆಲವು ಸ್ಥಾನಗಳು ಕಡಿಮೆ ಇದ್ದಾಗ ಕಾಂಗ್ರೆಸ್ ಸಹಯೋಗದಲ್ಲಿ ಮತ್ತೊಮ್ಮೆ ಕೆಲಕಾಲ ಮುಖ್ಯಮಂತ್ರಿಯಾಗಿದ್ದರು. ಈಗ ಪುನಃ ಅವರ ಕೂಡಿಕೆ ಬಿಜೆಪಿಯೊಂದಿಗೆ ಸಾಗಿದೆ.  

ಕರ್ನಾಟಕದಲ್ಲಂತೂ ಹಲವು ಚುನವಾಣೆಯ ಸಮಯದಲ್ಲಿ ಕೆಲವೊಂದು ಸೀಮಿತ ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಬಹುಮತ ಬರದ ಸ್ಥಿತಿಯಯನ್ನೇ ಬಂಡವಾಳವಾಗಿಸಿಕೊಂಡು ದೇವೇಗೌಡರು ಹಲವು ಬಾರಿ ತಮ್ಮ ರಾಜಕೀಯ ಪ್ರಾಬಲ್ಯ ತೋರಿದ್ದಾರೆ.  ಚುನಾವಣಾ ಕಣದಲ್ಲಿ ಅವರ ಕುಟುಂಬದ ಎಲ್ಲ ತಲೆಮಾರುಗಳೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿ ಇದ್ದಾರೆ.

ಒಂದೆಡೆ ರವಿ ಬೆಳಗೆರೆ ಹೀಗೆ ಹೇಳುತ್ತಾರೆ: "ಮಾಧ್ಯಮಗಳನ್ನು ಓಲೈಸದ ಏಕೈಕ ಮುತ್ಸದ್ದಿ ದೇವೇಗೌಡರು. ಯಾಕೆ ಹೀಗೆ ಬರೀತೀಯ ಅಥವಾ ಬರೀಬೇಡ ಅಂತ ಒಂದು ದಿನಕ್ಕೂ ನನಗೆ ಫೋನ್ ಮಾಡಿ ಕೂಡ ಹೇಳಿಲ್ಲ, ಯಾರ ಬಳಿಯೂ ಹೇಳಿಸಿಲ್ಲ.  ದೇವೇಗೌಡರನ್ನು ಅವರ ರಾಜಕಾರಣ ಅಥವಾ ಬುದ್ಧಿವಂತಿಕೆಯಿಂದ ಅಳೆಯುವುದು ತಪ್ಪು.ಅವೆಲ್ಲವನ್ನೂ ಮೀರಿದ ಮಹಾನ್ ವ್ಯಕ್ತಿತ್ವ ಅವರದ್ದು."

ಎಚ್. ಡಿ. ದೇವೇಗೌಡರ ರಾಜಕೀಯದ ರೀತಿಗಳೇನೇ ಇರಲಿ, ಈ ಹಿರಿಯ ವಯಸ್ಸಿನಲ್ಲೂ ಅವರ ಜೀವನದಲ್ಲಿ ಕಾಪಾಡಿಕೊಂಡು ಬಂದಿರುವ ಆರೋಗ್ಯ, ಶಿಸ್ತು, ಅಧ್ಯಯನಶೀಲತೆ ಮತ್ತು ಸರಳತೆ ವಿಶಿಷ್ಟವಾದದ್ದು ಎಂಬುದು ಅವರನ್ನು ಬಲ್ಲ ಎಲ್ಲರ ಅಂಬೋಣ.  ನಾಡಿನ ಹಿರಿಯರಾದ ಎಚ್. ಡಿ. ದೇವೇಗೌಡರಿಗೆ ಹುಟ್ಡುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of senior politician, farmer and former Prime Minister H. D. Devegowda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ