ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಸಂಪದ

 

ಕನ್ನಡ ಸಂಪದ 


ನಾವು ಬದುಕಿದ ಕಾಲ ಘಟ್ಟದಲ್ಲಿ,  ಕಷ್ಟದ ನಡುವೆ ಎಲ್ಲೋ  ಜೀವನಾಸಕ್ತಿಗಳನ್ನು ಜನ ತಾವೇ ಅರಸಿಕೊಂಡು ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುವ ರೀತಿ ಎಲ್ಲೆಡೆ ಕಾಣುತ್ತಿತ್ತು.‍‍ ಇದು ಒಂದು ರೀತಿ ಕಾರಂತರ ಕಾದಂಬರಿಗಳಾದ ಬೆಟ್ಟದ ಜೀವ, ಮರಳಿ ಮಣ್ಣಿಗೆ ಕಾದಂಬರಿಗಳಲ್ಲಿನ ಸಹೃದಯಿ ಸಾಹಸಿ ಪಾತ್ರಗಳಲ್ಲಿನ ಬದುಕಿನಂತೆ. ಎಲ್ಲೋ ಅದರ ತಂಗಾಳಿಯ ಹಿತ ನಮಗೂ ಬಡಿದಿತ್ತು.  ಹೀಗಾಗಿ ಜೀವನಾಸಕ್ತಿಗಳು ನಮ್ಮನ್ನು ಎಂದೂ ಬಿಡುತ್ತಿಲ್ಲ. 


ಗೆಳೆಯರೊಬ್ಬರು ಫೇಸ್ಬುಕ್ನಲ್ಲಿ ಕನ್ನಡ ಬಳಸಬಹುದು ಎಂದ ತಕ್ಷಣ ಫೇಸ್ಬುಕ್ ಅಂದರೆ ಏನು ಎಂದು ನೋಡಬಂದೆ.  ಅಂದಿನ ದಿನದಲ್ಲಿ ಕನ್ನಡ ಗೆಳೆಯರ ಬಳಗ ಮತ್ತು ವಿಶ್ವ ಕನ್ನಡಿಗರ ಕೂಟ ಎಂಬ ಎರಡು ಗ್ರೂಪ್ಗಳು ಕಂಡವು.  ನಾವೇನೇ ಗೀಚಿದರೂ ಯಾರೋ ಎಲ್ಲಿಂದಲೋ ಉತ್ತರ ಕೊಡುವುದು ಮತ್ತು ಅದಕ್ಕಾಗಿ ಮನಸ್ಸು ಹಾತೊರೆಯುವ ಚಟ ರೂಪಿಸಿಕೊಂಡದ್ದು ಸುಳ್ಳಲ್ಲ.   ಆದರೆ ಇದೆಲ್ಲ ಏಕತಾನತೆಯ ಯಾಂತ್ರಿಕ ಬದುಕೆನಿಸಿತು.‍‍ ಈ ಮಧ್ಯೆ ಕೆಲವೊಂದು ಪ್ರತಿಭಾವಂತರು ಬರೆಯುವ ರೀತಿ, ಕೆಲವರು ಹಾಕುವ ಚಿತ್ರಗಳು ಮತ್ತು ಅವರ ಆಸಕ್ತಿಗಳ ಹಾದಿಯಲ್ಲಿ ನನಗೂ ನಡೆಯುವ ಆಸೆ ಹುಟ್ಟುತ್ತಿತ್ತು. ಅಂತಹ ಆಸೆಯಿಂದ ಕೆಲವು ಗಣ್ಯರ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಬಾರಿ ಲೇಖನ ಬರೆದೆ.‍ ಆದರೆ ಈ ಗ್ರೂಪ್ಗಳಲ್ಲಿ ಎಲ್ಲರಿಗೂ ಏನಾದರೂ ಹೇಳುವಾತುರ.  ಕಾಡಹರಟೆ ಆಶಯ.  ಓದುವುದಕ್ಕೆ ಆಸಕ್ತಿ ಇರುವ ವಾತಾವರಣ ಇಲ್ಲ ಅನಿಸಿತು.


ಆದರೆ ಫೇಸ್ಬುಕ್ಗೆ ಇರುವ ಶಕ್ತಿ ನನ್ನನ್ನು ಅಪಾರವಾಗಿ ಹಿಡಿದಿಟ್ಟಿತ್ತು.  ನನ್ನ ಪ್ರಕಾರ ಫೇಸ್ಬುಕ್ ಎಂಬುದು ಒಂದು ಜನಸಂದಣಿ ಇರುವ  ರಸ್ತೆ ಇದ್ದಂತೆ.  ಇಲ್ಲಿ ಮಾರ್ಕೆಟ್ಟಿಗೆ ಹೋಗುವವರು, ವಿಹಾರಕ್ಕೆ ಹೋಗುವವರು, ದೇಗುಲಕ್ಕೆ ಹೋಗುವವರು, ಆಟವಾಡುವವರು, ಒಂದಷ್ಟು ಪುಂಡಾಟದವರು ಹೀಗೆ  ಎಲ್ಲರೂ ಇದ್ದಾರೆ. ಇಲ್ಲಿ ಏನನ್ನೇ ಇಟ್ಟರೂ ಅದನ್ನು ನಮಗೆ ಊಹಿಸಲು ಸಾಧ್ಯವಿಲ್ಲದ ಮೂಲೆ ಮೂಲೆಗೆ ಹೆಚ್ವಿನ ತ್ರಾಸವಿಲ್ಲದೆ ಭಿತ್ತರಿಸುವ ಅದ್ಭುತ  ಮಾಂತ್ರಿಕತೆ ಇದೆ.  ಇದನ್ನು ನನ್ನ ಅಭಿರುಚಿಗಳಿಗೆ ಅಭಿವ್ಯಕ್ತಿಯಾಗಿಸಿಕೊಳ್ಳಬಹುದು ಅನಿಸಿತು. ಅದಕ್ಕಾಗಿ ಫೇಸ್ಬುಕ್ ಪೇಜ್ ವ್ಯವಸ್ಥೆಯಲ್ಲಿ ನನ್ನನ್ನು ಬೆಳೆಸಿದ 'ಕನ್ನಡ ಸಂಪದ' ಹೆಸರಿನ ಪುಟವನ್ನು (2010 ಸೆಪ್ಟೆಂಬರ್ 14ರಂದು ಆರಂಭಿಸಿದೆ. ಮುಂದೆ ಇಲ್ಲಿ ಪ್ರಕಟಿಸುವುದು ಅಂತರಜಾಲದಲ್ಲಿ ಬೇಕಿದ್ದವರಿಗೆ ಹುಡುಕುವಾಗ ಸುಲಭವಾಗಿ ಸಿಗಲಿ ಎಂದು ನಾನು ಹೊಂದಿದ್ದ ಬ್ಲಾಗ್ ಅನ್ನು 2013ರಲ್ಲಿ 'ಸಂಸ್ಕೃತಿ ಸಲ್ಲಾಪ' (www.sallapa.com) ಎಂಬ ತಾಣ ಮಾಡಿದೆ.


ಪ್ರಪಂಚದಲ್ಲಿ ಒಳಿತೆಂಬುದು ಇಲ್ಲಿ ನಾವು ನೋಡಿದವರು ಮತ್ತು ಕೇಳಿದವರು ಸವೆಸಿದ ಮತ್ತು ಸಾಗಿಸುತ್ತಿರುವ ಬಾಳ್ವೆಯ ಅನುಪಮ ರೀತಿ.  ಅವರು ಯಾವ ರೀತಿಯಲ್ಲಿ ಯಶಸ್ಸು ಕಂಡುಕೊಂಡರು ಎಂಬುದಕ್ಕಿಂತ ನಾವಿರುವ ಪರಿಸ್ಥಿತಿ ಅಥವಾ ಅದಕ್ಕೂ ಪ್ರತೀಕೂಲ ಪರಿಸ್ಥಿತಿಯನ್ನೇ ಕಂಡಿದ್ದರೂ ಅವರು ಹೇಗೆ ಅದನ್ನು ಮೀರಿ ಮೇಲೇರಿದರು ಎಂಬುದು ನನಗೆ ಸದಾ ಆಸಕ್ತ ವಿಷಯ.  ಹಾಗಾಗಿ ವ್ಯಕ್ತಿಗಳ ಬದುಕಿನ ಮೂಲಕ ಬದುಕಿನ ದರ್ಶನ ಕಾಣುವ ಚಟ ನನ್ನನ್ನು ಹಲವು ವರ್ಷಗಳಿಂದ ಹಿಡಿದಿಟ್ಟಿದೆ. ಮೊದ ಮೊದಲು ನಾ ಬರೆಯತ್ತಿದ್ದುದು ನಾ ಜೀವನದಲ್ಲಿ ಕಂಡ, ಓದಿದ ಮೆಚ್ಚಿದ ಕಲಾವಿದರು ಬರಹಗಾರರು ಇದ್ದರು.  ಅವರಿಂದ ಯಾವುದೋ ಪ್ರಭಾವ ನನ್ನ ಮೇಲಿದೆ ಎಂಬ ಭಾವವಿತ್ತು.  ಈ ಮಹನೀಯರ ವಿಚಾರ ಹುಡುಕುತ್ತ ಹೋದಂತೆ ಮತ್ತಷ್ಟು ಮಹನೀಯರ ಜೀವನ ಕಾಣತೊಡಗಿತು.  ಹೀಗಾಗಿ ಗಣ್ಯರ ಪಟ್ಟಿ ಬೆಳೆಯುತ್ತಲೇ ಇದೆ.


ಕನ್ನಡ ಸಂಪದ ಪುಟದಲ್ಲಿ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಸ್ಮರಿಸುವುದು ನನ್ನ ಒಂದು ಚಟವಾಗಿದೆ. ಈ ಚಟದಲ್ಲಿ 4000ಕ್ಕೂ  ಸಾಧಕ ವ್ಯಕ್ತಿಗಳನ್ನು ಅವರ ಹುಟ್ಟುಹಬ್ಬ/ಸ್ಮರಣೆ ಸಂದರ್ಭದಲ್ಲಿ ಲೇಖನ ರೂಪದಲ್ಲಿ ಸ್ಮರಿಸಿದ ಭಾಗ್ಯ ನನ್ನದಾಗಿದೆ. ಆಗಾಗ ಹಬ್ಬ, ಹಿರಿಯರ ಕವನ, ಮತ್ತಿತರ ಚಿಂತನೆಗಳನ್ನೂ ಹಂಚಿಕೊಳ್ಳುತ್ತೇನೆ.


ಈ ಪುಟವನ್ನು ಇದುವರೆಗೆ 50000ಕ್ಕೂ ಹೆಚ್ಚು ಜನ ಬಂದು ಮೆಚ್ಚಿ ಕೈಹಿಡಿದು ನಡೆಸುತ್ತಿದ್ದಾರೆ ಎಂಬುದು ಒಂದು ಊಹಿಸಲಾಗದ ವಿಸ್ಮಯವಾಗಿದೆ. 'ಫಾಲೋಡ್ ಬೈ' ಸಂಖ್ಯೆ ಕೂಡಾ 58000 ಮೀರಿ  ಜನ ಇರುವುದರಿಂದ ಈ ಎಲ್ಲ ಜನ, ನನ್ನ ಕನ್ನಡ ಸಂಪದದ ಬರಹಗಳನ್ನು ತಮ್ಮ ಗೋಡೆಯಲ್ಲಿ ಇರುವುದನ್ನು ಬಯಸಿದ್ದಾರೆ, ಇಲ್ಲವೇ ಅನಿಷ್ಟವೆಂದು ಭಾವಿಸಿಲ್ಲ ಎಂಬುದನ್ನು ದೃಢೀಕರಿಸಿದೆ. ಇನ್ನು ನನ್ನ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comಗೆ 24  ಲಕ್ಷಕ್ಕೂ ಮೀರಿದ ಭೇಟಿಗಳು ಸಂದಿವೆ. 

ಈ ಎಲ್ಲ ಬೃಹತ್ ಸಂಖ್ಯೆಯ ಜನರೂ ಪ್ರತಿದಿನ ನನ್ನ ಬರಹಗಳನ್ನು ಓದುತ್ತಾರೆ ಎಂಬ ಭ್ರಮೆಯೇನೂ ನನ್ನಲ್ಲಿಲ್ಲ. ಆದರೆ, ಹಲವು ನೂರು ಜನರಾದರೂ ಈ ಬರಹಗಳನ್ನು ಓದಿ, ತಿದ್ದಿ, ವಿಚಾರ ವಿನಿಮಯ ನಡೆಸುತ್ತಿದ್ದಾರೆ. 


ಎಲ್ಲಕ್ಕಿಂತ ನನಗೆ ಸಂತೋಷ ಕೊಟ್ಟಿರುವ ಒಂದು ಸಂಗತಿ ಎಂದರೆ, ನಾನು ಬರೆದಿರುವ ವ್ಯಕ್ತಿಗಳ ಸ್ಮರಣೆ ಹೇಗೋ, ಆ ವ್ಯಕ್ತಿಗಳನ್ನು, ಆ ವ್ಯಕ್ತಿಗಳ ಕುಟುಂಬದವರನ್ನು, ಅವರ ವಂಶವಾಹಿನಿಯವರನ್ನು ತಲುಪುತ್ತಿರುವುದು. ಹೀಗೆ ಅವರುಗಳು, "ನನ್ನ ತಂದೆಯನ್ನು, ತಾತನವರನ್ನು, ಅಜ್ಜಿಯನ್ನು, ಗುರುಗಳನ್ನು ಸ್ಮರಿಸಿದ್ದಕ್ಕೆ" ಸಂತೋಷ ಎಂದು ಸಂತಸ ವ್ಯಕ್ತಪಡಿಸಿದಾಗ ನಾನು ನಿಜಕ್ಕೂ ಸಂತೃಪ್ತಿಯಲ್ಲಿ ತೇಲಿದ್ದೇನೆ. 


ನಾನು ಹಿಂದೆ 1980, 1990, 2000 ದಶಕದಲ್ಲಿ ಬರೆಯಬೇಕಾದಾಗ ಪುಸ್ತಕಗಳನ್ನು ಅರಸಿ ಅವುಗಳ ಕುರಿತು ಮಾಹಿತಿ ಬರೆದು ಟೈಪಿಸಿಕೊಳ್ಳುತ್ತಿದ್ದೆ. ಅದಕ್ಕಾಗಿ ಅನೇಕ ಪುಸ್ತಕಗಳನ್ನು ಕೊಳ್ಳುತ್ತಿದ್ದೆ.  ಈಗಲೂ ಕೊಳ್ಳುತ್ತೇನೆ.  ಜೊತೆಗೆ ಅಂತರ ಜಾಲದಲ್ಲಿ ಕೂಡಾ ಅವ್ಯವಸ್ಥಿತ ರೂಪದಲ್ಲಿ ಮಾಹಿತಿ ದೊರಕುತ್ತಿದೆ.   ಕನ್ನಡದಲ್ಲಿ ಸಿಗದಿರುವುದು ಇಂಗ್ಲಿಷಿನಲ್ಲಿ ದೊರಕುತ್ತದೆ.  ಪುಸ್ತಕಗಳ ಮುನ್ನುಡಿಗಳಲ್ಲಿ, ಹಿನ್ನುಡಿಗಳಲ್ಲಿ, ಸಂದರ್ಶನ, ಉಪನ್ಯಾಸಗಳಲ್ಲಿ ಹೀಗೆ ಸಾಮಗ್ರಿ ಸಿಗುತ್ತದೆ.  ವಿಷಯಗಳ ಸಂಗ್ರಹಣೆಯ ಜೊತೆಗೆ ವ್ಯಕ್ತಿಗಳ ವಿವರಗಳನ್ನು ಪ್ರಸ್ತುತ ಪಡಿಸುವಾಗ ಅದಕ್ಕೊಂದು ವ್ಯವಸ್ಥಿತ ರೂಪ ಕೊಡಬೇಕು.  ಎಲ್ಲದಕ್ಕಿಂತ ಮುಖ್ಯವಾಗಿ ಅಸಕ್ತಿ ಇರಬೇಕು. ನನಗೆ ಈ ಕಾಯಕದಲ್ಲಿ ಒಂದಷ್ಟು ಸಂತೃಪ್ತಿಯಿದೆ.


ನಾನು ಕನ್ನಡ ವಿಕಿಪೀಡಿಯಾದಲ್ಲಿ ಹಲವು ನೂರು ವ್ಯಕ್ತಿ ಚಿತ್ರಣಗಳನ್ನು ಬರೆದೆ.  ಆದರೆ ನಾವು ಇಲ್ಲಿ ಬರೆದು ಹೋದದ್ದನ್ನು ಪ್ರಜ್ಞೆ ಇಲ್ಲದ ಜನ ಹುಚ್ಚು ಹುಚ್ಚಾಗಿ ತಿದ್ದಿ ಅದನ್ನು ಯಾರೂ ಓದದ ಹಾಗೆ ಮಾಡಿರುತ್ತಾರೆ.  ಇಂಗ್ಲಿಷ್ ವಿಕಿಪೀಡಿಯಾ ಅಷ್ಟು ಮತ್ತು ಇತರ ಭಾಷೆಗಳಲ್ಲಿನ ವಿಕಿಪೀಡಿಯಾದಲ್ಲಿ ಇರುವ ಮಟ್ಟದ ಜನ ಆಸಕ್ತಿ ಮತ್ತು ವ್ಯವಸ್ಥಾಪನೆ ಕನ್ನಡ ವಿಕಿಪೀಡಿಯಾದಲ್ಲಿ ಇನ್ನೂ ಆಗಿಲ್ಲ. ಆದರೆ ಇಲ್ಲಿನ ಬರಹದ ಅನುಭವ ಉಪಯುಕ್ತವಾದದ್ದು.  ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ಗಾಗಿ ನಾನು ಸಂಗ್ರಹಿಸಿದ, ಅದಕ್ಕಾಗಿ ನಡೆಸಿದ ಅಧ್ಯಯನದಿಂದ ಹೊಟ್ಟೆ ತುಂಬದಿದ್ದರೂ ಸಂತೃಪ್ತಿ ನೀಡಿದ ಲಾಭ ಬಹಳಷ್ಟು.  ಇದೇ ತೆರನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 'ಕಣಜ'ಕ್ಕೆ ಕೆಲಕಾಲ ಸಂದ  ನನ್ನ ಸಣ್ಣ ರೀತಿಯ ಸೇವೆಯನ್ನೂ ನಾನು ಆನಂದಿಸಿದ್ದೇನೆ.


ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಏನು ಸಿಗುತ್ತಿದೆ ?  ಹಣಕಾಸಿನ ಸಂಪದವಲ್ಲ.  ಅದು ಬೇರೆ ರೂಪದ ವೃತ್ತಿಯಲ್ಲಿನ ಕೂಲಿಯಲ್ಲಿ ಸಲ್ಲುತ್ತಿದೆ. ನಾನು ಮಾಡುತ್ತಿರುವ ವಿಷಯ ಪ್ರಸ್ತುತಿಗಳಲ್ಲಿ ನಾನು ಹೇಳಬೇಕು  ಎಂದು ಮನದಟ್ಟು ಮಾಡಿಕೊಳ್ಳುವ  ವಿಚಾರಗಳಿಂದ, ಮತ್ತಷ್ಟು ಏನಾದರೂ ಹೊಸತು ಹೇಳಬೇಕು ಎಂಬ  ನಿಟ್ಟಿನಲ್ಲಿ  ಹೊಸ ಹೊಸತನ್ನು  ಕಲಿಯುವ  ದಿಕ್ಕಿನಲ್ಲಿ ಸಾಕಷ್ಟು  ನನ್ನ ಅಭಿರುಚಿಗಳು ಬೆಳೆದಿವೆ.  ಇದೇ ಈ ಕೆಲಸ ನನಗೆ ನೀಡಿರುವ ಬೆಲೆಕಟ್ಟಲಾಗದ ಕೊಡುಗೆ. ಇದೇ ನನಗೆ ದಕ್ಕಿರುವ, ನನ್ನ ಪ್ರೀತಿಯ ಕನ್ನಡ ನೀಡಿರುವ ಸಂಪದ, ನನ್ನ 'ಕನ್ನಡ ಸಂಪದ'.


ನನ್ನಲ್ಲಿ ಯಾವುದೇ ಪ್ರತಿಭೆ ಇದೆ ಎಂದು ನನಗನ್ನಿಸುವಿದಿಲ್ಲ.  ಯಾವುದೇ ಸಾಧಕರನ್ನು ನೆನೆದು ಅವರನ್ನು ಕುರಿತು ಕೆಲವು ಸಾಲು ಮೂಡಿದಾಗ ಹೃದಯದಲ್ಲಿ ಮೂಡುವ ಕೃತಾರ್ಥ ಭಾವ ಎಣೆಯಿಲ್ಲದ್ದು.  ಇದು ನಾ ಬದುಕಿನಲ್ಲಿ ಕಂಡುಕೊಂಡಿರುವ ಒಂದು ಧನ್ಯತೆ.


ಯಾವುದನ್ನೂ ಫಲಾಪೇಕ್ಷೆಯಲ್ಲಿ ಮಾಡಿ ಸಂತೋಷ ಅನುಭವಿಸಲಾಗುವುದಿಲ್ಲ. ಯಾವುದೇ ಹಿರಿಯತನದ ವ್ಯಕ್ತಿಯನ್ನು ಓದಿ, ಅವರ ಕುರಿತು ವಾಕ್ಯಗಳನ್ನು ಪೋಣಿಸಿ, ಓಹ್ ಇಂಥಾ ಮಹನೀಯರ ಸ್ಮರಣೆ ನನಗೆ ದೊರಕಿತು ಎಂದು, ಅವರ ಭಾವಚಿತ್ರ ಮತ್ತು ಲೇಖನವನ್ನು ಮೆತ್ತಿ, ಪೋಸ್ಟಿಸುವ ಬಟನ್ ಅನ್ನು ಒತ್ತುವಾಗ ಅನುಭವಿಸಿದ ಧನ್ಯತೆಯನ್ನು ನಾನು ಯಾವ ಬೆಲೆ ಇರುವ ಕಾರ್ಯಸಾಧನೆಗೆ ಕೂಡಾ ಸಮೀಕರಿಸಲಾರೆ. ಇಂತಹ ಸಂತೃಪ್ತಿ ನನ್ನ ಎಲ್ಲ ಕೆಲಸಗಳಲ್ಲೂ ಇದ್ದಿದ್ದರೆ ಬದುಕು ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಗಾಗ ನನಗೆ ಅನ್ನಿಸುತ್ತೆ. 


ಯಾವುದೋ ಕ್ಷಣದಲ್ಲಿ ಯಾವುದೋ ಓದಿದ, ಅಭಿವ್ಯಕ್ತಿಸಿದ ಸಾಲುಗಳು, ಯಾವುದೋ ಹೃದಯದಲ್ಲಿ ಉಂಟು ಮಾಡುವ ಮಿಂಚು-ತಂಪುಗಳು, ವಿಶ್ವವೆಂಬ ಪ್ರವಹಿನಿಗೆ ಒಂದು ಪ್ರಮುಖ ನಾಲೆ. ಆ ನಾಲೆಗೆ ಈ 'ಕನ್ನಡ ಸಂಪದ' ಮತ್ತು 'ಸಂಸ್ಕೃತಿ ಸಲ್ಲಾಪ'ಗಳು ಒಂದು ಸಣ್ಣ ತೊರೆಯಾಗಿದ್ದ ಪಕ್ಷದಲ್ಲಿ ಅದೇ ನನ್ನ ಈ ಕೈಂಕರ್ಯದಲ್ಲಿ ನನಗಿರುವ ಕೃತಾರ್ಥತೆ.


ಕೊಂಡಿ ಇಲ್ಲಿದೆ

https://www.facebook.com/kannadasampada


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ