ತಿರು ಶ್ರೀಧರ
ಹೆಸರು ಟಿ. ಎಸ್. ಶ್ರೀಧರ. ತಂದೆ ತಿರು ಶ್ರೀನಿವಾಸಾಚಾರ್. ತಾಯಿ ಸೀತಮ್ಮ. ಹುಟ್ಟಿದ್ದು 1958ರ (December) ವರ್ಷ ಹಾಸನದಲ್ಲಿ.
ಚಿಕ್ಕಂದಿನಿಂದ ಒಂದು ರೀತಿ ಮೊದ್ದು ಶಿಖಾಮಣಿ. ಓದುವುದು ಬರೆಯವುದು ಇದು ಯಾವುದನ್ನೂ ವ್ಯವಸ್ಥಿತವಾಗಿ ಕಲಿತದ್ದು ನೆನಪಿಲ್ಲ. ಎರಡನೇ ತರಗತಿಯಲ್ಲಿ ಇವನೇನೂ ಓದಿಲ್ಲ, ಇವನಿಗೇನೂ ಬರಲ್ಲ. ಇವ ಪರೀಕ್ಷೆಗೇನು ಹೋಗುವುದು ಅಂತ ಮನೆಯಲ್ಲಿ ಎಲ್ಲರೂ ಸುಮ್ಮನಿದ್ದರು. ಅಣ್ಣ ಫಲಿತಾಂಶದ ದಿನ ಶ್ರೀಧರನೂ ಪಾಸು ಅಂತ ಹೇಳಿದ್ದು ನೆನಪಿದೆ. ಒಂದು ರೀತಿಯಲ್ಲಿ ಬದುಕು ಹೇಗೋ ಉರುಳಿದ್ದು ಹೀಗೆಯೇ.
ನಾಲ್ಕನೆ ತರಗತಿ ವರೆಗೆ ಹಾಸನದಲ್ಲಿ ಶಾಲೆಗೆ ಹೋದೆ. ನಂತರ ಮೈಸೂರಲ್ಲಿ ಓದಿದ್ದು ಬಿಕಾಮ್ ಪದವಿವರೆಗೆ. ಹೇಗೋ ಪಾಸಾಗುತ್ತಿದ್ದೆ. ವಿಶೇಷ ಸಾಮರ್ಥ್ಯ ಯಾವ ವಿಚಾರದಲ್ಲೂ ಇರಲಿಲ್ಲ.
ಮನೆಯಲ್ಲಿ ತಮಿಳು ಮಾತನಾಡುವ ಸಂಪ್ರದಾಯದ ಕುಟುಂಬ. ತಂದೆ ಕನ್ನಡ ಪಂಡಿತರಾಗಿದ್ದರು. ವ್ಯಾಕರಣ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ಹಲವು ಪುಸ್ತಕ ಬರೆದಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕರಾಗಿ ಹಾಸನದಲ್ಲಿ ಮಹತ್ವದ ಕೆಲಸ ಮಾಡಿದ್ದರು.
ತಾಯಿ ಆಂಧ್ರದ ನೆಲೆಯಲ್ಲಿ ತಮಿಳು ಮತ್ತು ತೆಲುಗು ಕಲಿತು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಮಕ್ಕಳನ್ನು ಬೆಳೆಸಿದವರು. ಮನೆಯಲ್ಲಿ ಅಷ್ಟೊಂದು ಮಕ್ಕಳು, ಗಂಡನ ಕಡಿಮೆ ಸಂಬಳದ ಕಷ್ಟ ಎಷ್ಟೇ ಇದ್ದರೂ ಮಕ್ಕಳನ್ನು ಹೇಗಾದರೂ ವಿದ್ಯಾವಂತರಾಗಿ ಮಾಡಲೇಬೇಕು ಎಂದು ಛಲ ತೊಟ್ಟವರು. ಹೀಗೆ ನಾವೆಲ್ಲ ಒಂದು ದಡ ತಲುಪಿದವರು.
ಹೆಸರಿಗೆ ಸಂಸ್ಕೃತ ಎರಡನೆ ಭಾಷೆಯಾಗಿ ತೆಗದುಕೊಂಡು ಓದಿದ್ದು. ಸಂಸ್ಕೃತ ಪರೀಕ್ಷೆಗಳಲ್ಲಿ ಕನ್ನಡದಲ್ಲಿಯೇ ಹೆಚ್ಚು ಬರೆಯುವ ಕಾರಣ, ಸಂಸ್ಕೃತವನ್ನೂ ಚೆನ್ನಾಗಿ ಕಲಿಯಲಿಲ್ಲ. ಕನ್ನಡವನ್ನೂ ವ್ಯವಸ್ಥಿತವಾಗಿ ಕಲಿಯಲಿಲ್ಲ. ಮನೆಯಲ್ಲಿ ಹಿರಿಯರೊಂದಿಗೆ ಸಾಂಪ್ರದಾಯಿಕವಾಗಿ ತಮಿಳು ಮಾತಾಡುತ್ತಿದ್ದುದರಲ್ಲಿ ಹೆಚ್ಚು ಕನ್ನಡ ಇರುತ್ತಿತ್ತು. ಹಿಂದಿಯಲ್ಲಿ ಕನಿಷ್ಠ 26 ಅಂಕ ತೆಗೆದರೆ ಪಾಸು ಅದು ಬರೀ ಪ್ರಶ್ನೆಗಳನ್ನೇ ಉತ್ತರ ಪತ್ರಿಕೆಯಲ್ಲಿ ಬರೆದರೂ ಕೊಡುತ್ತಾರೆ ಎಂಬ ಮಾತುಗಳಿತ್ತು. ಇನ್ನು ಇಂಗ್ಲಿಷ್ ಏನಾದರೂ ತಲೆಗೆ ಹೋಗುತ್ತಿರಲಿಲ್ಲ. ಆದರೆ ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮ. ಹೇಗೋ ಹಾಗೂ ಹೀಗೂ ಒಂದು ಡಿಗ್ರಿ ಬಂತು. ಕಲಿತದ್ದು ಏನು ಎಂಬುದು ಸದಾ ಡೌಟು.
1979 ರಲ್ಲಿ ಪದವಿ ಪಡೆದ ವರ್ಷದಲ್ಲೆ ನೂರು ರೂಪಾಯಿ ಸಂಬಳದ ಕೆಲಸ ಸಿಕ್ತು. ನಂತರ ಎಚ್ ಎಮ್ ಟಿ ಸಂಸ್ಥೆಯಲ್ಲಿ ಸುಮಾರು ಎರಡು ವರ್ಷ ತಾತ್ಕಾಲಿಕ ಸೇವೆ, ಅಂಪ್ರೆಟಿಸ್ ಕಲಿಕಾ ಸೇವೆ ಇತ್ಯಾದಿ ಮಾಡಿ 1982 ಫೆಬ್ರವರಿಯಲ್ಲಿ ಖಾಯಂ ಗುಮಾಸ್ತನಾದೆ.
ನನ್ನ ಕಾಲಮೇಲೆ ನಾನು ನಿಂತಿದ್ದೇನೆ ಅನಿಸಿದಾಗ ಬದುಕಿನಲ್ಲಿ ಆವರೆಗೆ ತುಂಬಿಕೊಂಡಿದ್ದ ಕೀಳರಿಮೆ ಮತ್ತು ಸಂಕೋಚ ಪ್ರವೃತ್ತಿಗಳಿಂದ ಈಚೆ ಬರಬೇಕು ಎಂಬ ತುಡಿತ ಕಾಡುತ್ತಿತ್ತು. ಒಂದಷ್ಟು ಸಾಹಿತ್ಯ ಓದಲು ತೊಡಗಿದೆ. ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದ ಆವರಣದಲ್ಲಿ ಎಚ್ ಎಮ್ ಟಿ ಕನ್ನಡ ಸಂಪದ ಎಂಬ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳ ಸಂಘಟನೆ ಇತ್ತು. ಅದರಲ್ಲಿನ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಭಾಗಿಯಾಗತೊಡಗಿದೆ. ಎಚ್ಎಮ್‍ಟಿ ಸಂಸ್ಥೆಯಲ್ಲಿದ್ದ ಬಹುತೇಕ ಅವಧಿಯಲ್ಲಿ ಅಲ್ಲಿ ಕಾರ್ಯಕರ್ತನಾಗಿ/ಕಾರ್ಯದರ್ಶಿಯಾಗಿದ್ದೆ. ಇದಲ್ಲದೆ ಕಾರ್ಮಿಕ ಸಂಘಟನೆಗಳಲ್ಲಿ ಕೂಡಾ ನಾನು ಪ್ರತಿನಿಧಿಯಾಗಿ ಮತ್ತು ಕಾರ್ರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ.
ಎಚ್ ಎಮ್ ಟಿ ಕನ್ನಡ ಸಂಪದ ಎಲ್ಲ ಶ್ರೇಷ್ಠ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಕರೆಸಿ ಆಗ್ಗಿಂದಾಗ್ಗೆ ಉಪನ್ಯಾಸ ಏರ್ಪಡಿಸುತ್ತಿತ್ತು. ಪ್ರಸಿದ್ಧ ಕವಿ ಮತ್ತು ಪತ್ರಿಕೋದ್ಯಮ ಶಿಕ್ಷಣದಲ್ಲಿ ಹೆಸರಾದ ಎಸ್. ಜಯಸಿಂಹ, ಐನಾವರಂ ಕನ್ನಡ ಸಂಘದ ಸಂಸ್ಥಾಪಕ ಎಚ್. ಸೂರ್ಯನಾರಾಯಣ, ಉದಯಭಾನು ಕಲಾ ಸಂಘದ ಸ್ಥಾಪಕರಾದ ಎಂ. ನರಸಿಂಹ, ಪ್ರಸಿದ್ಧ ವಿಮರ್ಶಕ ಎಸ್. ಆರ್. ವಿಜಯಶಂಕರ್, ಗಾಯಕಿ ಬಿ. ಆರ್. ಛಾಯಾ, ಭಾರತೀಯ ವಿದ್ಯಾಭವನದ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿದ್ದ ಎನ್. ರಾಮಾನುಜ ಮುಂತಾದ ಅನೇಕ ಮಹನೀಯರ ಪ್ರಭಾವಳಿ ಮತ್ತು ಅನೇಕ ಉತ್ಸಾಹಿಗಳ ನಿಸ್ವಾರ್ಥ ಸೇವೆ ಈ ಎಚ್ ಎಮ್ ಟಿ ಕನ್ನಡ ಸಂಪದದಲ್ಲಿ ಇತ್ತು. ಇಲ್ಲಿ ಕನ್ನಡ ಕಿರಣ, ದರ್ಪಣ ಮತ್ತು ಸೌರಭ ಎಂಬ ನಿಯತಕಾಲಿಕ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದೆವು. ನಾನು ಹಲವಾರು ವರ್ಷ ಈ ಸಂಚಿಕೆಗಳ ಸಂಪಾದಕನಾಗಿ ಕೆಲಸ ಮಾಡಿದೆ. ಇವುಗಳಲ್ಲಿ ಸಾಹಿತಿಗಳು ಮತ್ತು ಗಣ್ಯರ ಕುರಿತಾಗಿ ವ್ಯಕ್ತಿ ವಿಚಾರ ಮೂಡಿಸುತ್ತಿದ್ದ 'ಸೌರಭ' ಸಂಚಿಕೆಗಳ ಕೆಲಸ ನನಗೆ ಆಪ್ತವಾಗಿತ್ತು. (ಮುಂದೆ ನಾನು ಅಂತರಜಾಲದಲ್ಲಿ ಫೇಸ್ಬುಕ್ ಜಾಲದಲ್ಲಿ ಮೂಡಿಸುತ್ತಿರುವ 'ಕನ್ನಡ ಸಂಪದ' ಪುಟಕ್ಕೆ ಈ ಕಾಯಕ ಒಂದು ಮುನ್ನುಡಿಯಾಯ್ತು). ನಾವು ಅಲ್ಲಿ ಒಂದು ಗ್ರಂಥಾಲಯವನ್ನೂ ಹುಟ್ಟುಹಾಕಿದ್ದೆವು. ಇಡೀ ಕುಟುಂಬ ಭಾಗವಹಿಸಬಹುದಾದ ಸಾಂಸ್ಕೃತಿಕ ಸ್ಪರ್ಧೆ, ಸಮಾರಂಭ, ಉತ್ಸವ ಮತ್ತು ಪ್ರವಾಸಗಳಂತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೆವು. ಉಪನ್ಯಾಸ, ಸಂಗೀತ, ನಾಟಕ, ಆರ್. ಗಣೇಶರ ಅಷ್ಟಾವಧಾನ, ನೀನಾಸಮ್ ಸಾಹಿತ್ಯ ಶಿಬಿರ, ಚಿಂತನ ಶಿಬಿರ, ವಿಜ್ಞಾನ - ತಂತ್ರಜ್ಞಾನ - ಸಾಹಿತ್ಯಕ - ಆರ್ಥಿಕ ಹೀಗೆ ವಿವಿಧ ಪ್ರಕಟಣೆಗಳು ಹೀಗೆ ಎಲ್ಲವನ್ನೂ ಮಾಡುತ್ತಿದ್ದೆವು. ಸಾಹಿತ್ಯ ರತ್ನಗಳು, ಲೇಸರ್ ತಂತ್ರಜ್ಞಾನ, ಆರ್ಥಿಕ ಉದಾರಿಕರಣ ಮುಂತಾದ ಪುಸ್ತಕಗಳನ್ನೂ ಪ್ರಕಟಿಸಿದ್ದೆವು.
ನಮ್ಮಲ್ಲಿ ಹಣವಿರುತ್ತಿರಲಿಲ್ಲ. ಆದರೆ ನಮ್ಮಲ್ಲಿನ ಉತ್ಸಾಹ ಬಲ ಎಲ್ಲವನ್ನೂ ಹೇಗೋ ಆಗುಮಾಡುತ್ತಿತ್ತು. ಎಚ್ ಎಮ್ ಟಿ ಕನ್ನಡ ಸಂಪದದ ಕಾರ್ಯಕರ್ತನಾಗಿ ಮತ್ತು ಕಾರ್ಯದರ್ಶಿಯಾಗಿ ಅನುಭವಿಸಿದ ಸುಮಾರು ಎರಡು ದಶಕಗಳ ಯುಗ ಅತ್ಯಂತ ಸ್ಮರಣೀಯವಾದದ್ದು.
ವೃತ್ತಿಯಲ್ಲಿ ಸುಮಾರು ಹದಿನಾಲ್ಕು ವರ್ಷ ಗುಮಾಸ್ತನಾಗಿದ್ದ ನನಗೆ ಕಂಪ್ಯೂಟರ್ ಕಲಿಕೆಯಲ್ಲಿ ಆಸಕ್ತಿ ಹುಟ್ಟಿ ಬಹಳ ಶ್ರಮ ಪಟ್ಟು ಕಂಪ್ಯೂಟರ್
ಪ್ರೋಗ್ರಾಮರ್ ಆಗಿ ಬದಲಾದೆ. ಎಚ್ ಎಮ್ ಟಿ ಸಂಸ್ಥೆಯ ಮೂಲಕ ಯುಎಇ ಮತ್ತು ಒಮಾನ್ ದೇಶಗಳಲ್ಲಿ ಕೆಲವೊಂದು ಸಾಪ್ಟ್ವೇರ್ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದೆ.
ಭಾರತೀಯ ರಾಜಕೀಯ ಕ್ಷೇತ್ರದಲ್ಲಿನ ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳುವ ನೀತಿ ಬದಲಾವಣೆಗಳಿಂದ ಸಾರ್ವಜನಿಕ ಉದ್ದಿಮೆಯಾದ ಎಚ್ ಎಮ್ ಟಿ ಸಂಸ್ಥೆ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆಗಳಿಗೆ ಈಡಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದುದು ಅರಿವಿಗೆ ಬಂದ ಸಂದರ್ಭದಲ್ಲಿ 2000 ದ ವರ್ಷದಲ್ಲಿ ಸ್ವಯಂ ನಿವೃತ್ತಿ ಪಡೆದು ಸ್ವಯಂ ಉದ್ಯೋಗ ಮಾಡಹೊರಟೆ. ನಾಲ್ಕು ವರ್ಷದ ಈ ಅನುಭವದಲ್ಲಿ ಆರ್ಥಿಕ ಸೋಲು ಕಂಡು ಪುನಃ ಉದ್ಯೋಗಿಯಾಗ ಹೊರಟಾಗ, ದುಬೈನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತು. ದುಬೈನಲ್ಲಿ ಎಂಟು ವರ್ಷ ಕೆಲಸ ಮಾಡಿ ಮಧ್ಯೆ ಆರು ವರ್ಷ ಮೈಸೂರು ಬೆಂಗಳೂರುಗಳಲ್ಲಿ ಇದ್ದು ಕಳೆದ ಏಳು ವರ್ಷಗಳಿಂದ ಪುನಃ ದುಬೈನಲ್ಲಿ ಉದ್ಯೋಗಿಯಾಗಿದ್ದೇನೆ.
ವೈಯಕ್ತಿಕವಾಗಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೀಗೆ ಹಲವು ಇನಿತಿನಿತು ಆಸಕ್ತಿಗಳಿವೆ. ಯಾವುದೂ ಪೂರ್ಣವಿಲ್ಲ. ಪ್ರಕೃತಿಯೊಂದಿಗೆ ಹಸುರಿನ ನಡುವೆ ಪಕ್ಷಿಗಳ ಕೂಗು ಆಲಿಸುತ್ತ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು, ಮೌನದ ಆಂತರ್ಯದಲ್ಲಿ ಕಾಣುವುದು ನನಗೆ ತುಂಬಾ ಪ್ರಿಯ. ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ, ಭಗವದ್ಗೀತೆಗಳ ಕುರಿತು ಆಪ್ತ ಒಲವು. ಕಳೆದ 9 ವರ್ಷಗಳಲ್ಲಿ ಸೈಕಲ್ ಸವಾರಿ ಒಲವು ಮೂಡಿದೆ. ಸೈಕಲ್ ಸವಾರಿಯಲ್ಲಿ ನಿಧಾನವಾಗಿ ಚಕ್ರ ಮುಂದೆ ಚಲಿಸುವಾಗ ತಂಗಾಳಿ ತರುವ ಸ್ಪರ್ಶ ಬಲು ಹಿತವಾದದದ್ದು. ಒಂದು ರೀತಿಯಲ್ಲಿ ಬದುಕಿನ ಹಿನ್ನೋಟವೂ ಹಾಗೆಯೇನೋ ಎಂದು ಭಾಸವಾಗುತ್ತದೆ.
ನನ್ನ ಅಂತರಂಗದ ಆಸಕ್ತಿಗಳನ್ನು ಆಗಾಗ ಕಂಡುಕೊಳ್ಳಲು ಫೇಸ್ಬುಕ್ನಲ್ಲಿ ಕನ್ನಡ ಸಂಪದ ಮತ್ತು ಈ ಸಂಸ್ಕೃತಿ ಸಲ್ಲಾಪಗಳನ್ನು ಕಳೆದ ಸುಮಾರು 15 ವರ್ಷಗಳಿಂದ ಕನ್ನಡಿಯಾಗಿ ಬಳಸುತ್ತಿದ್ದೇನೆ. ಅವುಗಳ ಕುರಿತು ಪ್ರತ್ಯೇಕವಾಗಿ ಕೆಳಗಿನ ವಿಭಾಗಗಳಲ್ಲಿ ಹೇಳಿದ್ದೇನೆ.
Tiru Sridhara, T.S.Sridhara
ಕಾಮೆಂಟ್‌ಗಳು