ಸ್ವಾಗತ
‘ಸಂಸ್ಕೃತಿ ಸಲ್ಲಾಪ’
(www.sallapa.com
ಅಥವಾ www.ಸಲ್ಲಾಪ.com)
ಸಾಮಾಜಿಕ ಜೀವನದಲ್ಲಿನ ವಿವಿಧ ಸಾಂಸ್ಕೃತಿಕ ಸದಭಿರುಚಿಗಳತ್ತ ಆತ್ಮೀಯವಾದ ‘ಸಲ್ಲಾಪ’(ಸಂವಹನ)ಕ್ಕೆ ಆಸ್ಪದ ನೀಡುವುದು 'ಸಂಸ್ಕೃತಿ ಸಲ್ಲಾಪ' ಜಾಲತಾಣದ ಆಶಯ. ನಮ್ಮ ಸಾಮಾಜಿಕ ಜೀವನದಲ್ಲಿ ಕಂಡುಬರುವ ಹಲವು ಪ್ರಸಿದ್ಧ ಘಟನೆಗಳು, ವ್ಯಕ್ತಿತ್ವಗಳು, ಸಾಧನೆಗಳು, ಕಲಾವಂತಿಕೆಗಳು, ನೈಪುಣ್ಯತೆಳು, ಸಜ್ಜನಿಕೆಗಳು ಇತ್ಯಾದಿ ಇತ್ಯಾದಿಗಳು ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಗಮನಕ್ಕೆ ಬಂದಿರುತ್ತವೆ. ಇಂತಹ ಅಂಶಗಳು ಕಾಲಾನುಕ್ರಮದಲ್ಲಿ ನಮ್ಮ ಆಂತರ್ಯದಲ್ಲಿ ಸುಪ್ತವಾಗಿ ಅಡಗಿಕೊಂಡಿದ್ದು, ಅವುಗಳ ಬಗ್ಗೆ ಮಾಧ್ಯಮಗಳ ಮೂಲಕವೋ, ಇತರರೊಂದಿಗೆ ಒಂದಿನಿತು ಮೆಲುಕು ಹಾಕುವಂತಹ ಸಂದರ್ಭಗಳೋ ಬಂದಾಗ ನಮಗೆ ಮುದ ನೀಡುತ್ತಿರುತ್ತವೆ.
ಆದರೆ ಇಂದಿನ ಬದುಕು ಸೃಷ್ಟಿಸುತ್ತಿರುವ ಯಾಂತ್ರಿಕತೆ; ವ್ಯಾವಹಾರಿಕತೆಯ ಮಾಧ್ಯಮ ಪ್ರಸರಣಗಳಲ್ಲಿರುವ ಏಕತಾನತೆ, ವಿಭಿನ್ನಸಂಸ್ಕೃತಿ, ಪರಿಸರ, ಮನೋಭಾವಗಳೊಡನೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇತ್ಯಾದಿಗಳಿಂದ, ಇಂದಿನ ದೈನಂದಿನ ಬದುಕು, ನಮ್ಮಲ್ಲಿ ಅಂತರಂಗಿಕವಾಗಿ ಹುದುಗಿಕೊಂಡಿರುವ ಸುಪ್ತತೆಗಳಿಗೆ ಆತ್ಮೀಯ ಸ್ಪರ್ಶಗಳೇ ದೊರಕದಂತಹ ಅನಾಥ ಪ್ರಜ್ಞೆಗಳನ್ನು ಹುಟ್ಟುಹಾಕಿಬಿಡುತ್ತಿವೆ. ಈ ನಿಟ್ಟಿನಲ್ಲಿ ಅಂತರ್ಜಾಲ ಸಂಪರ್ಕಗಳು ಇಂದಿನ ಯುಗದಲ್ಲಿ ಒಂದಿಷ್ಟು ಆಶಾದಾಯಕ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿವೆ. ಬದುಕು ತರುವ ಹತ್ತು ಹಲವು ನಿಟ್ಟಿನ ಯಾಂತ್ರಿಕತೆ, ಅಶಿಸ್ತು, ಬೇಡದ ಜಂಜಾಟ ತಲೆನೋವುಗಳಿಗೆ ಅಂತರ್ಜಾಲ ಸಂಪರ್ಕಗಳೂ ಹೆಚ್ಚು ಹೆಚ್ಚು ಉಪಯೋಗಿಸಲ್ಪಡುತ್ತಿವೆ ಎಂಬುದು ನಿಜವಾದರೂ, ಈ ವ್ಯವಸ್ಥೆಯನ್ನು ಸದುಪಯೋಗಕ್ಕೆ ಬಳಸಿಕೊಂಡಲ್ಲಿ ಅದು, ನಮ್ಮ ಬದುಕಿಗೆ ಒಂದಿಷ್ಟು ಉತ್ತಮ ಚಿಂತನ ಮಂಥನದ ಹವೆಯನ್ನೂ, ಉತ್ಸಾಹವನ್ನೂ, ನಮ್ಮ ಬದುಕಿಗೆ ನೀಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಕನ್ನಡದಂತಹ ಭಾಷೆಯನ್ನು ಅಂತರಜಾಲ ಮಾಧ್ಯಮದ ಮೂಲಕ ವಿಶ್ವದೆಲ್ಲಡೆಯಲ್ಲಿರುವ ಜನರು ಆಪ್ತವಾಗಿ ಸಂವಹನ ನಡೆಸಲು ಸಾಧ್ಯವಾಗಿರುವುದು ಭಾಷೆಯ ದೃಷ್ಟಿಯಿಂದ ತುಂಬ ಸಂತೋಷಕರವಾದದ್ದು.
ನಾವು ಬದುಕಿದ ಕಾಲ ಘಟ್ಟದಲ್ಲಿ, ಕಷ್ಟದ ನಡುವೆ ಎಲ್ಲೋ ಜೀವನಾಸಕ್ತಿಗಳನ್ನು ಜನ ತಾವೇ ಅರಸಿಕೊಂಡು ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುವ ರೀತಿ ಎಲ್ಲೆಡೆ ಕಾಣುತ್ತಿತ್ತು. ಇದು ಒಂದು ರೀತಿ ಕಾರಂತರ ಕಾದಂಬರಿಗಳಾದ ಬೆಟ್ಟದ ಜೀವ, ಮರಳಿ ಮಣ್ಣಿಗೆ ಕಾದಂಬರಿಗಳಲ್ಲಿನ ಸಹೃದಯಿ ಸಾಹಸಿ ಪಾತ್ರಗಳಲ್ಲಿನ ಬದುಕಿನಂತೆ! ಎಲ್ಲೋ ಅದರ ತಂಗಾಳಿಯ ಹಿತ ನಮಗೂ ಬಡಿದಿತ್ತು. ಹೀಗಾಗಿ ಜೀವನಾಸಕ್ತಿಗಳು ನಮ್ಮನ್ನು ಎಂದೂ ಬಿಡುತ್ತಿಲ್ಲ. ಗೆಳೆಯರೊಬ್ಬರು ಫೇಸ್ಬುಕ್ನಲ್ಲಿ ಕನ್ನಡ ಬಳಸಬಹುದು ಎಂದ ತಕ್ಷಣ ಫೇಸ್ಬುಕ್ ಅಂದರೆ ಏನು ಎಂದು ನೋಡಬಂದೆ. ಫೇಸ್ಬುಕ್ಗೆ ಇರುವ ಶಕ್ತಿ ನನ್ನನ್ನು ಅಪಾರವಾಗಿ ಹಿಡಿದಿಟ್ಟಿತ್ತು. ಇಲ್ಲಿ ಏನನ್ನೇ ಇಟ್ಟರೂ ಅದನ್ನು ನಮಗೆ ಊಹಿಸಲು ಸಾಧ್ಯವಿಲ್ಲದ ಮೂಲೆ ಮೂಲೆಗೆ ಹೆಚ್ವಿನ ತ್ರಾಸವಿಲ್ಲದೆ ಬಿತ್ತರಿಸುವ ಅದ್ಭುತ ಮಾಂತ್ರಿಕತೆ ಇದೆ. ಇದನ್ನು ನನ್ನ ಅಭಿರುಚಿಗಳಿಗೆ ಅಭಿವ್ಯಕ್ತಿಯಾಗಿಸಿಕೊಳ್ಳಬಹುದು ಅನಿಸಿತು. ಅದಕ್ಕಾಗಿ ಫೇಸ್ಬುಕ್ ಪೇಜ್ ವ್ಯವಸ್ಥೆಯಲ್ಲಿ ನನ್ನನ್ನು ಬೆಳೆಸಿದ 'ಕನ್ನಡ ಸಂಪದ' ಹೆಸರಿನ ಪುಟವನ್ನು (2010 ಸೆಪ್ಟೆಂಬರ್ 14ರಂದು) ಆರಂಭಿಸಿದೆ. ಮುಂದೆ ಇಲ್ಲಿ ಪ್ರಕಟಿಸುವುದು ಅಂತರಜಾಲದಲ್ಲಿ ಬೇಕಿದ್ದವರಿಗೆ ಹುಡುಕುವಾಗ ಸುಲಭವಾಗಿ ಸಿಗಲಿ ಎಂದು ನಾನು ಹೊಂದಿದ್ದ ಬ್ಲಾಗ್ ಅನ್ನು 2013ರಲ್ಲಿ 'ಸಂಸ್ಕೃತಿ ಸಲ್ಲಾಪ' (www.sallapa.com) ಎಂಬ ತಾಣ ಮಾಡಿದೆ.
ಪ್ರಪಂಚದಲ್ಲಿ ಒಳಿತೆಂಬುದು ಇಲ್ಲಿ ನಾವು ನೋಡಿದವರು ಮತ್ತು ಕೇಳಿದವರು ಸವೆಸಿದ ಮತ್ತು ಸಾಗಿಸುತ್ತಿರುವ ಬಾಳ್ವೆಯ ಅನುಪಮ ರೀತಿ. ಅವರು ಯಾವ ರೀತಿಯಲ್ಲಿ ಯಶಸ್ಸು ಕಂಡುಕೊಂಡರು ಎಂಬುದಕ್ಕಿಂತ, ನಾವಿರುವ ಪರಿಸ್ಥಿತಿ ಅಥವಾ ಅದಕ್ಕೂ ಪ್ರತೀಕೂಲ ಪರಿಸ್ಥಿತಿಯನ್ನೇ ಕಂಡಿದ್ದರೂ ಅವರು ಹೇಗೆ ಅದನ್ನು ಮೀರಿ ಮೇಲೇರಿದರು ಎಂಬುದು ನನಗೆ ಸದಾ ಆಸಕ್ತ ವಿಷಯ. ಹಾಗಾಗಿ ವ್ಯಕ್ತಿಗಳ ಬದುಕಿನ ಮೂಲಕ ಬದುಕಿನ ದರ್ಶನ ಕಾಣುವ ಚಟ ನನ್ನನ್ನು ಹಲವು ವರ್ಷಗಳಿಂದ ಹಿಡಿದಿಟ್ಟಿದೆ. ಮೊದ ಮೊದಲು ನಾ ಬರೆಯತ್ತಿದ್ದುದರಲ್ಲಿ ನಾ ಜೀವನದಲ್ಲಿ ಕಂಡ, ಓದಿದ, ಮೆಚ್ಚಿದ ಕಲಾವಿದರು ಬರಹಗಾರರು ಇದ್ದರು. ಅವರಿಂದ ಯಾವುದೋ ಪ್ರಭಾವ ನನ್ನ ಮೇಲಿದೆ ಎಂಬ ಭಾವವಿತ್ತು. ಈ ಮಹನೀಯರ ವಿಚಾರ ಹುಡುಕುತ್ತ ಹೋದಂತೆ ಮತ್ತಷ್ಟು ಮಹನೀಯರ ಜೀವನ ಕಾಣತೊಡಗಿತು. ಹೀಗಾಗಿ ಗಣ್ಯರ ಪಟ್ಟಿ ಬೆಳೆಯುತ್ತಲೇ ಇದೆ.
'ಸಂಸ್ಕೃತಿ ಸಲ್ಲಾಪ' ತಾಣದಲ್ಲಿ 4500 ಕ್ಕೂ ಹೆಚ್ಚು ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ, ನೃತ್ಯ, ಕಲೆ, ಕ್ರೀಡೆ, ಅಧ್ಯಾತ್ಮ, ವಿಜ್ಞಾನ, ಸಾರ್ವಜನಿಕ ಸೇವೆ, ಜಾನಪದ, ಕನ್ನಡ ನಾಡು, ಸಂಸ್ಕೃತಿ, ಉದ್ಯಮ ಹೀಗೆ ಹಲವು ವಿಚಾರಗಳ ಹರವು ಇದೆ. 600ಕ್ಕೂ ಹೆಚ್ಚು ವ್ಯಾಪ್ತಿಯ ಗೀತೆಗಳಿವೆ. 153 ಸಂಧಿಗಳ ಕುಮಾರವ್ಯಾಸ ಭಾರತವನ್ನು ಭಾವಾರ್ಥದೊಡನೆ ಲಭ್ಯವಾಗಿಸಿದ್ದೇನೆ. ಜೊತೆಗೆ ಜಯದೇವ ಕವಿಯ ಗೀತಗೋವಿಂದ, ತಿರುಪ್ಪಾವೈ, ಸಂಗ್ರಹ ರಾಮಾಯಣ, ಗೋವಿನ ಕಥೆ, ಗೋಕುಲ ನಿರ್ಗಮನ, ಸೋಮೇಶ್ವರ ಶತಕ ಮುಂತಾದ ಗ್ರಂಥಗಳನ್ನು ಅರ್ಥ ಸಮೇತ ಲಭ್ಯವಾಗಿಸಿರುವೆ. ಸುಮಾರು ನಾಲ್ಕೈದು ಶತಮಾನಗಳ ಸ್ವಾತಂತ್ರ್ಯ ಹೋರಾಟದ ಅಂತರಾಳವನ್ನು ಅಭಿವ್ಯಕ್ತಿಸುವ ಪ್ರಯತ್ನವೂ ಇಲ್ಲಿದೆ. ಇವುಗಳನ್ನು ಸುಮಾರು 40 ವಿಚಾರದ ಅಧ್ಯಾಯಗಳಲ್ಲಿ ಸೂಕ್ತ Menu ಮತ್ತು search options ಮೂಲಕ ಓದುಗರಿಗೆ ಸುಲಭವಾಗಿ ಅರಸಿ ಓದುವ ಹಾಗೆ ಸೌಕರ್ಯ ಕಲ್ಪಿಸಿದ್ದೇನೆ.
ಇಲ್ಲಿ ಯಾವುದೇ ವಾಣಿಜ್ಯದ ಆಶಯಗಳು ನುಸುಳದ ಹಾಗೆ ಜಾಗೃತಿ ವಹಿಸಿದ್ದೇನೆ. ಸಂಸ್ಕೃತಿ ಸಲ್ಲಾಪ ಮತ್ತು ಕನ್ನಡ ಸಂಪದಗಳಿಗೆ ಇರುವ followers ನಿಟ್ಟಿನಲ್ಲಿ ಇವುಗಳನ್ನು ಜಾಹೀರಾತಿಗೆ ತೆರೆದು ಹಣ ಮಾಡುವುದು ಸುಲಭ ಸಾಧ್ಯವಿದೆ. ಆದರೂ ಸಾಂಸ್ಕೃತಿಕ ಸದಭಿರುಚಿಗಳ ಮಹತ್ವದಲ್ಲಿ
ವಾಣಿಜ್ಯ ಚಿಂತನೆ ಬೇಡ ಎಂದು ನಿರ್ಧರಿಸಿರುವೆ. ಹೀಗಾಗಿ ಇದು ಪ್ರೀತಿಯ ಕೈಂಕರ್ಯ ಮತ್ತು ಕನ್ನಡಿಗರಿಗೆ ಯಾವುದೇ ಅಡ್ಡತಡೆಯಿಲ್ಲದೆ, ಏನೂ ಖರ್ಚುಮಾಡದೆ ಓದಬಹುದಾದ ಮುಕ್ತ ಮಾಹಿತಿಕೋಶ. ಇದು ಜನಸಾಮಾನ್ಯರು, ವಿದ್ಯಾರ್ಥಿಗಳಿಗಲ್ಲದೆ, ಸಮೂಹ ಮಾಧ್ಯಮಗಳಿಗೂ ಒಂದು ವಿಷಯಾಲಂಬನೆಯ ಕೋಶವಾಗಿದೆ
ನಾನು ಹಿಂದೆ 1980, 1990, 2000 ದಶಕದಲ್ಲಿ ಬರೆಯಬೇಕಾದಾಗ ಪುಸ್ತಕಗಳನ್ನು ಅರಸಿ ಅವುಗಳ ಕುರಿತು ಮಾಹಿತಿ ಬರೆದು ಟೈಪಿಸಿಕೊಳ್ಳುತ್ತಿದ್ದೆ. ಅದಕ್ಕಾಗಿ ಅನೇಕ ಪುಸ್ತಕಗಳನ್ನು ಕೊಳ್ಳುತ್ತಿದ್ದೆ. ಈಗಲೂ ಕೊಳ್ಳುತ್ತೇನೆ. ಜೊತೆಗೆ ಅಂತರ ಜಾಲದಲ್ಲಿ ಕೂಡಾ ಅವ್ಯವಸ್ಥಿತ ರೂಪದಲ್ಲಿ ಮಾಹಿತಿ ದೊರಕುತ್ತಿದೆ. ಕನ್ನಡದಲ್ಲಿ ಸಿಗದಿರುವುದು ಇಂಗ್ಲಿಷಿನಲ್ಲಿ ದೊರಕುತ್ತದೆ. ಪುಸ್ತಕಗಳ ಮುನ್ನುಡಿಗಳಲ್ಲಿ, ಹಿನ್ನುಡಿಗಳಲ್ಲಿ, ಸಂದರ್ಶನ, ಉಪನ್ಯಾಸಗಳಲ್ಲಿ ಹೀಗೆ ಸಾಮಗ್ರಿ ಸಿಗುತ್ತದೆ. ವಿಷಯಗಳ ಸಂಗ್ರಹಣೆಯ ಜೊತೆಗೆ ವ್ಯಕ್ತಿಗಳ ವಿವರಗಳನ್ನು ಪ್ರಸ್ತುತ ಪಡಿಸುವಾಗ, ಅದಕ್ಕೊಂದು ವ್ಯವಸ್ಥಿತ ರೂಪ ಕೊಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಅಸಕ್ತಿ ಇರಬೇಕು. ನನಗೆ ಈ ಕಾಯಕದಲ್ಲಿ ಒಂದಷ್ಟು ಸಂತೃಪ್ತಿಯಿದೆ.
ನಾನು ಕನ್ನಡ ವಿಕಿಪೀಡಿಯಾದಲ್ಲಿ ಹಲವು ನೂರು ವ್ಯಕ್ತಿ ಚಿತ್ರಣಗಳನ್ನು ಬರೆದೆ. ಆದರೆ ನಾವು ಇಲ್ಲಿ ಬರೆದು ಹೋದದ್ದನ್ನು ಪ್ರಜ್ಞೆ ಇಲ್ಲದ ಜನ ಹುಚ್ಚು ಹುಚ್ಚಾಗಿ ತಿದ್ದಿ ಅದನ್ನು ಯಾರೂ ಓದದ ಹಾಗೆ ಮಾಡಿರುತ್ತಾರೆ. ಇಂಗ್ಲಿಷ್ ವಿಕಿಪೀಡಿಯಾ ಅಷ್ಟು ಮತ್ತು ಇತರ ಭಾಷೆಗಳಲ್ಲಿನ ವಿಕಿಪೀಡಿಯಾದಲ್ಲಿ ಇರುವ ಮಟ್ಟದ ಜನ ಆಸಕ್ತಿ ಮತ್ತು ವ್ಯವಸ್ಥಾಪನೆ ಕನ್ನಡ ವಿಕಿಪೀಡಿಯಾದಲ್ಲಿ ಇನ್ನೂ ಆಗಿಲ್ಲ. ಆದರೆ ಇಲ್ಲಿನ ಬರಹದ ಅನುಭವ ಉಪಯುಕ್ತವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ಗಾಗಿ ನಾನು ಸಂಗ್ರಹಿಸಿದ, ಅದಕ್ಕಾಗಿ ನಡೆಸಿದ ಅಧ್ಯಯನದಿಂದ ಹೊಟ್ಟೆ ತುಂಬದಿದ್ದರೂ ಸಂತೃಪ್ತಿ ನೀಡಿದ ಲಾಭ ಬಹಳಷ್ಟು. ಇದೇ ತೆರನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 'ಕಣಜ'ಕ್ಕೆ ಕೆಲಕಾಲ ಸಂದ ನನ್ನ ಸಣ್ಣ ರೀತಿಯ ಸೇವೆಯನ್ನೂ ನಾನು ಆನಂದಿಸಿದ್ದೇನೆ.
ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಏನು ಸಿಗುತ್ತಿದೆ ? ಹಣಕಾಸಿನ ಸಂಪದವಲ್ಲ. ಅದು ಬೇರೆ ರೂಪದ ವೃತ್ತಿಯಲ್ಲಿನ ಕೂಲಿಯಲ್ಲಿ ಸಲ್ಲುತ್ತಿದೆ. ನಾನು ಮಾಡುತ್ತಿರುವ ವಿಷಯ ಪ್ರಸ್ತುತಿಗಳಲ್ಲಿ ನಾನು ಹೇಳಬೇಕು ಎಂದು ಮನದಟ್ಟು ಮಾಡಿಕೊಳ್ಳುವ ವಿಚಾರಗಳಿಂದ, ಮತ್ತಷ್ಟು ಏನಾದರೂ ಹೊಸತು ಹೇಳಬೇಕು ಎಂಬ ನಿಟ್ಟಿನಲ್ಲಿ ಹೊಸ ಹೊಸತನ್ನು ಕಲಿಯುವ ದಿಕ್ಕಿನಲ್ಲಿ ಸಾಕಷ್ಟು ನನ್ನ ಅಭಿರುಚಿಗಳು ಬೆಳೆದಿವೆ. ಇದೇ ಈ ಕೆಲಸ ನನಗೆ ನೀಡಿರುವ ಬೆಲೆಕಟ್ಟಲಾಗದ ಕೊಡುಗೆ.
ನನ್ನಲ್ಲಿ ಯಾವುದೇ ಪ್ರತಿಭೆ ಇದೆ ಎಂದು ನನಗನ್ನಿಸುವಿದಿಲ್ಲ. ಯಾವುದೇ ಸಾಧಕರನ್ನು ನೆನೆದು ಅವರನ್ನು ಕುರಿತು ಕೆಲವು ಸಾಲು ಮೂಡಿದಾಗ ಹೃದಯದಲ್ಲಿ ಮೂಡುವ ಕೃತಾರ್ಥ ಭಾವ ಎಣೆಯಿಲ್ಲದ್ದು. ಇದು ನಾ ಬದುಕಿನಲ್ಲಿ ಕಂಡುಕೊಂಡಿರುವ ಒಂದು ಧನ್ಯತೆ.
ಯಾವುದನ್ನೂ ಫಲಾಪೇಕ್ಷೆಯಲ್ಲಿ ಮಾಡಿ ಸಂತೋಷ ಅನುಭವಿಸಲಾಗುವುದಿಲ್ಲ. ಯಾವುದೇ ಹಿರಿಯತನದ ವ್ಯಕ್ತಿಯನ್ನು ಓದಿ, ಅವರ ಕುರಿತು ವಾಕ್ಯಗಳನ್ನು ಪೋಣಿಸಿ, ಓಹ್ ಇಂಥಾ ಮಹನೀಯರ ಸ್ಮರಣೆ ನನಗೆ ದೊರಕಿತು ಎಂದು, ಅವರ ಭಾವಚಿತ್ರ ಮತ್ತು ಲೇಖನವನ್ನು ಮೆತ್ತಿ, ಪೋಸ್ಟಿಸುವ ಬಟನ್ ಅನ್ನು ಒತ್ತುವಾಗ ಅನುಭವಿಸಿದ ಧನ್ಯತೆಯನ್ನು ನಾನು ಯಾವ ಬೆಲೆ ಇರುವ ಕಾರ್ಯಸಾಧನೆಗೆ ಕೂಡಾ ಸಮೀಕರಿಸಲಾರೆ. ಇಂತಹ ಸಂತೃಪ್ತಿ ನನ್ನ ಎಲ್ಲ ಕೆಲಸಗಳಲ್ಲೂ ಇದ್ದಿದ್ದರೆ ಬದುಕು ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಗಾಗ ನನಗೆ ಅನ್ನಿಸುತ್ತೆ.
ಯಾವುದೋ ಕ್ಷಣದಲ್ಲಿ ಯಾವುದೋ ಓದಿದ, ಅಭಿವ್ಯಕ್ತಿಸಿದ ಸಾಲುಗಳು, ಯಾವುದೋ ಹೃದಯದಲ್ಲಿ ಉಂಟು ಮಾಡುವ ಮಿಂಚು-ತಂಪುಗಳು, ವಿಶ್ವವೆಂಬ ಪ್ರವಹಿನಿಗೆ ಒಂದು ಪ್ರಮುಖ ನಾಲೆ. ಆ ನಾಲೆಗೆ ಈ 'ಕನ್ನಡ ಸಂಪದ' ಮತ್ತು 'ಸಂಸ್ಕೃತಿ ಸಲ್ಲಾಪ'ಗಳು ಒಂದು ಸಣ್ಣ ತೊರೆಯಾಗಿದ್ದ ಪಕ್ಷದಲ್ಲಿ ಅದೇ ನನ್ನ ಈ ಕೈಂಕರ್ಯದಲ್ಲಿ ನನಗಿರುವ ಕೃತಾರ್ಥತೆ.
ನಾನು ತಿರು ಶ್ರೀಧರ. ವಯಸ್ಸು 66. ಹುಟ್ಟಿದ್ದು ಹಾಸನದಲ್ಲಿ. ಮುಂದೆ ಬಿಕಾಮ್ ವರೆಗೆ ಓದಿದ್ದು ಮೈಸೂರಿನಲ್ಲಿ. ಎಚ್ ಎಮ್ ಟಿ ಸಂಸ್ಞೆಯಲ್ಲಿ 1980 - 2000 ಅವಧಿಯಲ್ಲಿ ಉದ್ಯೋಗಿಯಾಗಿದ್ದೆ. ಸಾಫ್ಟ್ವೇರ್ ಕೌಶಲ್ಯ ಕಲಿತು ಹಲವು ವರ್ಷಗಳಿಂದ ದುಬೈನಲ್ಲಿ ಇನ್ನೂ ಸೇವೆಯಲ್ಲಿದ್ದೇನೆ.
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ವಂದನೆಗಳು.
ಪ್ರತ್ಯುತ್ತರಅಳಿಸಿ