ಗೋಕುಲ ನಿರ್ಗಮನ 22
ಗೋಕುಲ ನಿರ್ಗಮನ 22
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಎಲ್ಲರೂ
ಹಾಡು: ರಾಗ - ಶ್ರೀರಾಗ
ನಿಲ್ಲಿಸದಿರು ವನಮಾಲೀ
ಕೊಳಲ ಗಾನವ || ಪ ||
ನಿಲ್ಲಿಸೆ ನೀ ಕಳೆವುದೆಂತೊ
ಭವಭೀತಿಯ ಕೇಶವ || ಅ.ಪ ||
ಕ್ರೂರದೈವ ಬಲಿಗೆ ಎಂತು
ಕಾಯುತಿಹುದು ದೂರ ನಿಂತು
ಅಂತೆ ನಮ್ಮ ತುತ್ತುಗೊಳ್ಳೆ
ಹೊಂಚುತಿಹುದು ಭೀತಿಯಿಂತು – ನಿಲ್ಲಿಸದಿರು
ಊರಿದಲ್ಲ ಹಳುವು ಎಂಬ
ಹಗಲಿದಲ್ಲ. ಇರುಳು ಎಂಬ
ಇಂತುಗೈದುದೊಳಿತೇ ಎಂಬ
ಭಯವಪ್ಪುದೊ ಬಗೆಯ ತುಂಬ – ನಿಲ್ಲಿಸದಿರು
ನಾನು ಸತಿ ಆತ ವತಿ
ಅಣ್ಣ ಅಕ್ಕ ಏನು ಗತಿ
ಇಂತು ನಂಟತನವಿವೆಲ್ಲ
ಮರುಕೊಳಿಸುವೊ ಮನದಿ ನಲ್ಲ – ನಿಲ್ಲಿಸದಿರು
ಹಿರಿಯರಿಟ್ಟ ನಯದ ನಡೆಯ ಮೀರಿಹೆವೆಂದಹುದುರುಭಯ
ನಿನ್ನ ಕೊಳಲು ನೀಡಲಭಯ
ನಟ್ಟಿರುಳೊಳೆ ಬಂದೆವಯ್ಯ ನಿಲ್ಲಿಸದಿರು
ನಮ್ಮ ಬಾಳಿನಾಳದಿಂದ
ಮತ್ತ್ವನಂತೆ ಮೇಲೆ ತಂದ
ಕೃಷ್ಣ ಈ ಚಿದಾನಂದ
ಮರಳಿ ಮುಳುಗಿ ಹೋಹುದಯ್ಯ - ನಿಲ್ಲಿಸದಿರು
ನೀರು ನಿಂತು ಕೊಳೆಯುವಂತೆ ನಮಗಹುದೋ ನೂರು ಚಿಂತೆ
ಕೊಳಲುಲುಹಿನ ನೆರೆಯು ನುಗ್ಗಿ
ಜೀವ ಹರಿಯಲೆಂಥ ಸುಗ್ಗಿ - ನಿಲ್ಲಿಸದಿರು
ಭವದ ಮಾಯೆ ಅಡಗುವಂತೆ
ಅಹಂಕಾರ ಕರಗುವಂತೆ
ನಿನ್ನ ಗಾನದನುರಾಗವು
ಬದುಕ ತುಂಬಲನುಗಾಲವು -
ನಿಲ್ಲಿಸದಿರು ವನಮಾಲೀ ಕೊಳಲ ಗಾನವ
ಕೃಷ್ಣ
ರಾಗ - ಗೌರೀ ಮನೋಹರಿ
ಮುದವು ಮನದಿ ತೀರಿತ್ತೆಂತು ನಾನಾವ ರಾಗ ಕ್ಕುಸಿರ ಕೊಡಲಿ ರಾಧಾನೇತ್ರಸುಸ್ನೇಹದೂರಂ ಎಲರು ತಿರೆಯ ಬಿಟ್ಟಂತಿಂದು ನಕ್ಷತ್ರಗೂಡು - ತಿರುಳ ತೊರೆದವೋಲೆನ್ನಾತ್ಮವುಂ ಭಾವಶೂನ್ಯಂ
ಎಲ್ಲರೂ
ಹಾಡು : ರಾಗ - ಖರಹರಪ್ರಿಯ
ಸಖ ಹರೀ ವಿಷಾದವ ನೀಗೆಲೈ ||ಪ||ಭವಮೋಚನಾ ಗೆಲವಾಗೆಲೈ ||ಅ.ಪ||
ಅರಳಿಹ ಬಕುಲಗಳೆಲರಿಗೆ ಕಂಪ
ತೆರುತಿವೆ ಇರುಳಿದು ಜೊನ್ನಕೆ ಪೆಂಪ ನಿನಗಿನಿಯಾ ನಮ್ಮಿರವ
ಇಕೊ ತೆರುವೆವಯ್ಯ ಲೇಸಾಗೆಲೈ - ಸಖ ಹರೀ
ಎಲ್ಲ ಬಣ್ಣಕ್ಕೂ ಬೆಳಕಪ್ಪಂತೆ
ಎಲ್ಲ ರಾಗಕೂ ಕೊಳಲಪ್ಪಂತೆ
ನಮಗಿನಿಯಾ ನಿನ್ನೊಲವ
ತುಸವೀಯುತ ನಿನೆಮಗೆಲೈ - ಸಖ ಹರೀ
ಮೋಹನ ರಾಧಾಮೋಹದ ನೆಳಲು
ನಿನ್ನಾವರಿಸದ ತೆರ ತಡೆಗೊಳಲು
ಇಕೊ ಇನಿಯ ನಮ್ಮೆದೆಯ
ಕಡುನೇಹದಿ ತಂದಿಹೆವೀಗಳೈ - ಸಖ ಹರೀ
ಕೃಷ್ಣ
ರಾಗ - ಷಣ್ಮುಖಪ್ರಿಯ
ಕಾಣೆಂ ನಾ ಸಖರೇ ಮನಂ ಕಳವಳಗೊಂಡಿರ್ಪುದೇತರ್ಕೆಯೋ
ರಾಧಾರಾಸದ ಯೋಗಕಿಂದು ಕೊನೆಯೆಂದಾಶಂಕೆಯಾಂತಿರ್ದಪೆಂ
ಬ್ರಹ್ಮಂ ನಕ್ಕನೊ ಬೆನ್ನಹಿಂದೆ ಎನುವಂತಾಯಿತ್ತು ಮಾಮಾಮುದಂ
ಆಮೋದಕ್ಕಿದೆ ಸಾಜಮೆನ್ನೆ ಬಗೆಯೊಳ್ ಖೇದಂ ಪದಂಗೊಂಡುದೋ
( ಕೆಲವರು ರಾಧೆಯನ್ನರಸುವ ತೆರ ತೋರುತ್ತಲೂ, ಕೆಲವರು ಸುಮ್ಮನೆ ನಿಂತೂ, ಅಂತೂ ಎಲ್ಲರೂ ಖಿನ್ನರಾಗಿರುವಾಗ ದೂರದಲ್ಲಿ ಹಾಡು ಕೇಳಿಬರುತ್ತಿದೆ. ಬಲರಾಮಾದಿಗಳು ಗೆಲವಿನಿಂದ ಅಕ್ರೂರನೊಡಗೂಡಿ ಬರುತ್ತಾರೆ )
**********
ಕೃಷ್ಣ ಕೊಳಲು ಊದುವುದನ್ನು ನಿಲ್ಲಿಸಿದ್ದರಿಂದ ಎಲ್ಲರಿಗೂ ಬೇಸರ. ನಿಲ್ಲಿಸದಿರು ಎಂದು ಬೇಡುತ್ತಾರೆ. ಭೀತಿಯು ಆವರಿಸುತ್ತಿದೆ. ಕ್ರೂರ ದೈವ ಹೊಂಚು ಹಾಕುತ್ತಿದೆ. ಇದು ಊರಲ್ಲ ಕಾಡು, ಹಗಲಲ್ಲ ಇರುಳು, ಹೀಗೆಲ್ಲ ನಾವು ಕುಣಿದದ್ದು ಸರಿಯೇ ಎಂಬ ಭಯ ಕಾಡುತ್ತಿದೆ.
ಮನದಲ್ಲಿ ಎಲ್ಲ ಬಗೆಯ ಸಂಬಂಧಗಳೂ ಕಾಣುತ್ತಿವೆ. ಹಿರಿಯರ ನಿಯಮಗಳನ್ನು ಮೀರಿದ್ದೇವೆಂಬ ಭಯ. ನಿನ್ನ ಕೊಳಲೊಂದೇ ನಮಗೆ ಅಭಯವನ್ನು ಕೊಡುವುದು. ದಯವಿಟ್ಟು ಅದನ್ನು ನಿಲ್ಲಿಸದಿರು.
ಬಾಳಿನ ಆಳದಿಂದ ನಮ್ಮನ್ನು ಮೀನಿನಂತೆ ತಂದು ಜೀವನದ ಸೊಗಸನ್ನು ತೋರಿಸಿದೆ. ಈಗ ಕೊಳಲು ನಿಂತರೆ ನಮ್ಮ ಬಾಳಿನ ಆನಂದವೇ ಮುಳುಗಿ ಹೋದಂತೆ. ದಯವಿಟ್ಟು ಅದನ್ನು ನಿಲ್ಲಿಸದಿರು.
ನಮಗೆ ನೂರು ಚಿಂತೆಗಳು. ಅವುಗಳನ್ನೆಲ್ಲ ಪ್ರವಾಹದಂತೆ ಕೊಚ್ಚಿಕೊಂಡು ಹೋಗುತ್ತಿತ್ತು ನಿನ್ನ ಗಾನ. ಈಗ ಜೀವವೇ ಹರಿದಂತಾಗಿದೆ.
ಇನ್ನೆಲ್ಲಿಯ ಸುಗ್ಗಿ? ಭವದ ಮಾಯೆಯು ಅಡಗಿ ನಮ್ಮ ಅಹಂಕಾರ ಕರಗಿ ನಿನ್ನ ಗಾನದ ಅನುರಾಗವು ಬದುಕನ್ನು ತುಂಬಲಿ. ನಿಲ್ಲಿಸದಿರು ಈ ಕೊಳಲ ಗಾನ.
ಕೃಷ್ಣನು ಹೇಳುವನು. ಮನದಲ್ಲಿ ಮುದವು ತೀರಿದೆ. ಇನ್ನು ನಾನು ಯಾವ ರಾಗ ನುಡಿಸಲಿ? ರಾಧೆಯ ಸ್ನೇಹಪೂರ್ಣ ಕಣ್ಣುಗಳಿಂದ ದೂರಾಗಿರುವಾಗ ಗಾಳಿಯು ಭೂಮಿಯನ್ನು ಬಿಟ್ಟಂತಾಗಿದೆ. ನಕ್ಷತ್ರಗಳು ಇರುಳನ್ನು ತೊರೆದಂತೆ ಆಗಿದೆ ನನ್ನ ಮನ. ನನ್ನ ಆತ್ಮವಿದು ಭಾವಶೂನ್ಯವಾಗಿದೆ.
ಎಲ್ಲರೂ ಅವನಿಗೆ ಸಮಾಧಾನ ಹೇಳುವರು. ಸಖನೇ, ವಿಷಾದವನ್ನು ನೀಗು. ಗೆಲುವಾಗು. ಅರಳಿದ ಬಕುಲಗಳಿಗೆ ಕಂಪನ್ನು ತರುತ್ತಿದೆ ಈ ಇರುಳು. ಈ ಬೆಳುದಿಂಗಳು.
ಎಲ್ಲ ಬಣ್ಣಕ್ಕೂ ಬೆಳಕಿದ್ದರೇ ಸೊಗಸು. ಎಲ್ಲ ರಾಗಕ್ಕೂ ನಿನ್ನ ಕೊಳಲು ಸೊಗಸು. ನಮಗೆ ನಿನ್ನ ಒಲವೇ ಸೊಗಸು. ಅದನ್ನು ನೀಡುತ್ತ ಗೆಲುವಾಗು ಸಖ. ರಾಧೆಯ ಮೋಹದ ನೆಳಲು ನಿನ್ನನ್ನು ಆವರಿಸದಿರಲಿ. ನಮ್ಮೆದೆಯ ಒಲವನ್ನೆಲ್ಲ ನಿನಗಾಗಿ ತಂದಿಹೆವು. ಗೆಲುವಾಗು.
ಕೃಷ್ಣನು ವಿಷಾದದಿಂದ ನುಡಿಯುವನು. ಮಿತ್ರರೇ, ನನ್ನ ಮನಸ್ಸು ಏಕೋ ಕಾಣೆ ಶಂಕೆಯಿಂದ ಕೂಡಿದೆ. ಕಳವಳಗೊಂಡಿದೆ. ರಾಧಾರಾಸದ ಯೋಗಕ್ಕೆ ಇಂದೇ ಕೊನೆಯು ಬಂದಂತಿದೆ. ವಿಧಿಯು ಬೆನ್ನಹಿಂದೆ ನಕ್ಕಂತೆ ಆಯಿತು.ಸಹಜವಾಗಿ ನನ್ನ ಮನಸ್ಸು ಆಮೋದಗಳಿಂದ ದೂರವಾಗಿ ಖೇದವನ್ನು ತಾಳಿದೆ.
ಆಗ ಕೆಲವರು ಬಾಧೆಯನ್ನು ಹುಡುಕಲು ಹೊರಡುವರು. ಕೆಲವರು ಸುಮ್ಮನೆ ನಿಲ್ಲುವರು.ದೂರದಲ್ಲಿ ಹಾಡು ಕೇಳಿಸುತ್ತದೆ. ಅಕ್ರೂರನೊಂದಿಗೆ ಬಲರಾಮಾದಿಗಳು ಬರುವರು.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು