ಭಾನುವಾರ, ಸೆಪ್ಟೆಂಬರ್ 10, 2017

ಬಿ. ವಿ. ರಾಧಾ


ಹಿರಿಯ ಕಲಾವಿದೆ ಬಿ. ವಿ. ರಾಧಾ ಇನ್ನಿಲ್ಲ

ಮತ್ತೋರ್ವ ಹಿರಿಯ ಕಲಾಚೇತನ  ಬದುಕೆಂಬ ನಾಟಕರಂಗದ ತೆರೆಯಿಂದ ಹಿಂದೆ ಸರಿದಿದೆ.   ಕನ್ನಡ ಚಿತ್ರರಂಗದ  ಪ್ರವರ್ಧಮಾನ ವರ್ಷಗಳಿಂದ  ಮೊದಲ್ಗೊಂಡು  ಇಂದಿನ ಯುಗದ ಕಿರುತೆರೆಯ ಧಾರಾವಾಹಿಗಳವರೆಗೆ ವ್ಯಾಪಿಸಿದ್ದ  ಹಿರಿಯ ಕಲಾವಿದೆ  ಬಿ. ವಿ. ರಾಧಾ ಸೆಪ್ಟೆಂಬರ್ 10, 2017ರಂದು ನಿಧನರಾಗಿದ್ದಾರೆ.  ಹಸನಾದ ತೇಜಸ್ವಿ ಕಳೆಯ ಬಿ.ವಿ.ರಾಧಾ ಅವರು  ನಾಯಕಿಯಾಗಿ, ಪೋಷಕ ಪಾತ್ರಧಾರಿಯಾಗಿ,  ಹಾಸ್ಯ ನಟಿಯಾಗಿ, ರಾಷ್ಟ್ರಮಟ್ಟದಲ್ಲಿ ಚಿತ್ರಗಳ ನಿರ್ಮಾಪಕಿಯಾಗಿ  ಮತ್ತು ಕನ್ನಡ ಚಲನಚಿತ್ರದ  ಮಹಾನ್ ನಿರ್ಮಾಪಕ, ನಿರ್ದೇಶಕರ ಸಾಲಿನಲ್ಲಿ ಪ್ರತಿಷ್ಟಿತರಾದ ಕೆ.ಎಸ್.ಎಲ್. ಸ್ವಾಮಿ (ರವಿ) ಅವರ ಜೀವನ ಸಂಗಾತಿಯಾಗಿ ಹಾಗೂ ಅವರ ಸೃಜನಶೀಲತೆಯ ಸಹಚಾರಿಯಾಗಿ ಚಲನಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮಹನೀಯೆ.  ಅವರು ವೃತ್ತಿ ರಂಗಭೂಮಿ ಕಲಾವಿದೆಯಾಗಿಯೂ ಸೇವೆ ಸಲ್ಲಿಸಿದ್ದವರು.

1948ರ ವರ್ಷದಲ್ಲಿ ಬೆಂಗಳೂರಿನ ಒಂದು ರೈತ ಕುಟುಂಬದಲ್ಲಿ ಜನಿಸಿದ  ರಾಜಲಕ್ಷ್ಮಿ ಎಂಬ ಹೆಸರಿನ ಈ ಹುಡುಗಿಗೆ ಕಲಿಕೆಯ ದಿನಗಳಲ್ಲೇ ಚಲನಚಿತ್ರಗಳ ಆಕರ್ಷಣೆ ಹುಟ್ಟಿತು.  1960ರ ರಣಧೀರ ಕಂಠೀರವದಲ್ಲಿ ಮೊದಲು ಮುಖ ತೋರಿದ  ಈಕೆ 1964ರ ವರ್ಷದಲ್ಲಿ ನವಕೋಟಿ ನಾರಾಯಣ ಚಿತ್ರದಲ್ಲಿ  ನಟಿಸುವಾಗ ತಮ್ಮ ಹೆಸರನ್ನು ಬೆಂಗಳೂರು ವಿಜಯ ರಾಧಾ ಎಂದು ಬದಲಿಸಿಕೊಂಡು ಮುಂದೆ  ಬಿ.ವಿ. ರಾಧಾ ಎಂದು ಎಲ್ಲೆಡೆ ಹೆಸರಾದರು.  ಕನ್ನಡವಲ್ಲದೆ ದಕ್ಷಿಣ ಭಾರತೀಯ  ತಮಿಳು, ತೆಲುಗು, ಹಿಂದಿ, ತುಳು ಚಿತ್ರಗಳಲ್ಲೂ  ಅವರು ಪಾತ್ರವಹಿಸಿದರು.   ಕಳೆದ  ಐದೂವರೆ ದಶಕಗಳಲ್ಲಿ  250ಕ್ಕೂ ಚಿತ್ರಗಳಲ್ಲಿ  ಎಲ್ಲ ತಲೆಮಾರಿನ ಕಲಾವಿದರು, ತಂತ್ರಜ್ಞರು ಮತ್ತು  ನಿರ್ದೇಶಕರೊಡನೆ ಕೆಲಸ ಮಾಡಿದ  ಬಿ.ವಿ. ರಾಧಾ ಅವರು ಹಲವಾರು ದೂರದರ್ಶನದ ಧಾರಾವಾಹಿಗಳಲ್ಲೂ  ತಮ್ಮ  ಕಲೆಯನ್ನು ಬೆಳಗಿದ್ದರು.  ಯಾವುದೇ ವೈವಿಧ್ಯ ಪಾತ್ರವೇ ಇರಲಿ ಅದರಲ್ಲಿ ಅವರು ತೊಡಗಿಕೊಳ್ಳುತ್ತಿದ್ದ  ನಿಷ್ಠೆ ಅವರ ಮೊಗದಲ್ಲಿದ್ದ  ತೇಜಸ್ಸಿನಷ್ಟೇ  ಎದ್ದು ಕಾಣುತ್ತಿತ್ತು.  

ಜಂಬೂಸವಾರಿ ಚಿತ್ರದ ನಿರ್ಮಾಣಕ್ಕೆ  ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ,  ಹರಕೆಯ ಕುರಿ ಚಿತ್ರಕ್ಕೆ  ರಜತ ಕಮಲ ರಾಷ್ಟ್ರೀಯ ಪ್ರಶಸ್ತಿ, ಕಲಾರಂಗದಲ್ಲಿನ ಜೀವನ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಬಿ.ವಿ. ರಾಧಾ ಅವರಿಗೆ ಸಂದಿದ್ದವು.   

ಇತ್ತೀಚಿನ ವರ್ಷದಲ್ಲಿ ಅವರ ಪತಿ ಕೆ.ಎಸ್.ಎಲ್. ಸ್ವಾಮಿ ಈ ಲೋಕದಿಂದ ಅಗಲಿದ್ದರು ಎಂಬ ನಷ್ಟ  ತಿಳಿದಿತ್ತು.  ಕೆಲವು ತಿಂಗಳ ಹಿಂದೆ ಅವರನ್ನು ಗಾಂಧೀ ಬಜಾರಿನಲ್ಲಿ ಕಂಡಾಗ  ಅವರ ಮೊಗದಲ್ಲಿದ್ದ ಎಂದಿನ ಕಳೆಯನ್ನು ಕಂಡಾಗ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದರು ಎಂದು ನನಗೆ ತಿಳಿದಿರಲಿಲ್ಲ, ಹೀಗೆ ಇದ್ದಿರಬಹುದು ಎಂಬ ಊಹೆಯೂ ಇರಲಿಲ್ಲ.  ಇಂದು ಅವರು ಹೃದಯಾಘಾತದಿಂದ  ನಿಧನರಾದರು ಎಂದು ಸುದ್ಧಿ ಓದಿದಾಗಲೇ ಹಲವು ಸುದ್ದಿಗಳು ಪೋಣಿಸಿಕೊಂಡ ಹಾಗೆ ಈ ವಿಚಾರ ತಿಳಿದದ್ದು.  ಕಲಾವಂತರ ಬದುಕೇ ಹಾಗೆ.  ಅವರ ಕಲೆಯ ಅಭಿವ್ಯಕ್ತಿಯಲ್ಲಿ  ಅವರ ನಗುವನ್ನು ಕಂಡಾಗ  ಅವರ ಬದುಕು ಸಂತಸದಿಂದ ತುಂಬಿದ್ದು ಅನಿಸುತ್ತದೆ.  ಅವರ  ದುಃಖದ ಅಭಿವ್ಯಕ್ತಿಯನ್ನು ಕಂಡಾಗ ಒಳ್ಳೆಯ  ಅಭಿನಯ ಅನಿಸಿಬಿಡುತ್ತದೆ.  ಅವರು ತಮ್ಮ ನೋವನ್ನು ಮರೆಸಿಕೊಂಡು ಕಲೆಯನ್ನು ಮೆರೆಸುವ ಅಮರರು.  

ತಮ್ಮ ದೇಹವನ್ನೂ  ವೈದ್ಯಕೀಯ ಉದ್ದೇಶಕ್ಕೆ ಧಾರೆ ಎರೆದು ಹೋದ ಈ ಮಹಾನ್ ಚೇತನಕ್ಕೆ ಗೌರವಯುತ ನಮನ.  

Tag: B.V. Radha


ಕಾಮೆಂಟ್‌ಗಳಿಲ್ಲ: