ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಳಿಗಾಲ ಬಂದಾಗ 'ಎಷ್ಟು ಚಳಿ?' ಎಂದರು
ಬಂತಲ್ಲ ಬೇಸಿಗೆ, 'ಕೆಟ್ಟಬಿಸಿಲ್' ಎಂದರು
ಮಳೆ ಬಿತ್ತೊ, 'ಬಿಡದಲ್ಲ ಶನಿ!' ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
'ಹಣ್ಣಿನ ಗಾತ್ರ ಪೀಚು' ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ!
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!


ಸಾಹಿತ್ಯ:  ಕೆ.ಎಸ್. ನರಸಿಂಹಸ್ವಾಮಿ 
Tag: Ivaru mecchuva vastu illilla joke

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ