ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು


ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ? -
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? - ಎನ್ನರಸ
ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? – ಎನ್ನರಸ.
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ,
ಊರ ಬೇಲಿಗೆ ಬಂದು, ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? - ಎನ್ನರಸ
ಸುಮ್ಮನಿರಿ ಎಂದಳಾಕೆ.

ಸಾಹಿತ್ಯ: ಕೆ ಎಸ್ ನರಸಿಂಹಸ್ವಾಮಿ
ಸಂಗೀತ: ಸಿ ಅಶ್ವಥ್
ಮೈಸೂರು ಮಲ್ಲಿಗೆ ಧ್ವನಿಸುರುಳಿಯಲ್ಲಿ ಗಾಯಕರು: ರತ್ನಮಾಲಾ ಪ್ರಕಾಶ್ ಮತ್ತು ಸಿ ಅಶ್ವಥ್

ಸಿನಿಮಾದಲ್ಲಿ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ


ಸಿನಿಮಾದಲ್ಲಿ ಈ ಗೀತೆಯನ್ನು  ಇಲ್ಲಿ ಕೇಳಿ 

Tag: Ondirulu kanasinali nannavala kelidenu

Photo Courtesy: http://tahuko.com/?p=7931

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ