ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿಂದಿನ ಸಾಲಿನ ಹುಡುಗರು



‘ಹಿಂದಿನ ಸಾಲಿನ ಹುಡುಗರು’ ಎಂದರೆ
ನಮಗೇನೇನೂ ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದೂ ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೆ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ? –
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೆ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬರಾವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೇರಿಸಲೆನ್ನುವೆವು.

ಸಂಬಳ ಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೆ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೋಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿ ಹರ ಶರಣರ ಕುಲ ನಾವು!
ಕನ್ನಡದಲ್ಲೇ ತೇರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೆ ನಮಗಿಲ್ಲ.
ಸೋತವರಿಗೆ ನಾವಿಲ್ಲವೆ ಮಾದರಿ? –
ಕೆರೆಗೆ ಬೀಳುವುದು ತರವಲ್ಲ.

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು;
ಹಲವರು ಸೋಲದೆ ಕೆಲವರ ಗೆಲವಿಗೆ
ಬೆಲೆಯಿರದೆಂದೇ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲಾ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಭಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದೂ ಬಿಡೆವು;
ನೆಮ್ಮದಿಯಾಗಿಯೆ ಉಳಿಯುವೆವು!

ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ

Tag: Hindina saalina hudugaru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ