ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿಲ್ಲಿಸದಿರು ವನಮಾಲೀ


ನಿಲ್ಲಿಸದಿರು ವನಮಾಲೀ
ಕೊಳಲ ಗಾನವ
ನಿಲ್ಲಿಸೆ ನೀ ಕಳೆವುದೆಂತೊ
ಭವಭೀತಿಯ ಕ್ಲೇಶವ

ಕ್ರೂರ ದೈವ ಬಲಿಗೆ ಎಂತು
ಕಾಯುತಿಹುದೊ ದೂರ ನಿಂತು
ಅಂತೆ ನಮ್ಮ ತುತ್ತುಗೊಳ್ಳೆ
ಹೊಂಚುತಿಹುದು ಭೀತಿಯಿಂತು
(ನಿಲ್ಲಿಸದಿರು)

ಊರಿದಲ್ಲ ಹಳುವು ಎಂಬ
ಹಗಲಿದಲ್ಲ ಇರುಳು ಎಂಬ
ಇಂತುಗೈದುದೊಳಿತೇ ಎಂಬ
ಭಯವಪ್ಪುದೊ ಬಗೆಯ ತುಂಬ
(ನಿಲ್ಲಿಸದಿರು)

ನಾನು ಸತಿ ಆತ ಪತಿ
ಅಣ್ಣ ಅಕ್ಕ ಏನು ಗತಿ
ಇಂತು ನಂಟತನವಿವೆಲ್ಲ
ಮರುಕೊಳಿಪವೊ ಮನದಿ ನಲ್ಲ
(ನಿಲ್ಲಿಸದಿರು)

ಹಿರಿಯರಿಟ್ಟ ನಯದ ನಡೆಯ
ಮೀರಿಹೆವೆಂದ ಹುದುರುಭಯ
ನಿನ್ನ ಕೊಳಲು ನೀಡಲಭಯ
ನಟ್ಟಿರುಳೊಳೆ ಬಂದೆವಯ್ಯ
(ನಿಲ್ಲಿಸದಿರು)

ನಮ್ಮ ಬಾಳಿನಾಳದಿಂದ
ಮತ್ಯ್ಸನಂತೆ ಮೇಲೆ ತಂದ
ಕೃಷ್ಣ ಈ ಚಿದಾನಂದ
ಮರಳಿ ಮುಳುಗಿಹೋಹುದಯ್ಯ
(ನಿಲ್ಲಿಸದಿರು) 
                             
ನೀರು ನಿಂತು ಕೊಳೆಯುವಂತೆ
ನಮಗಹುದೋ ನೂರು ಚಿಂತೆ
ಕೊಳಲುಲುಹಿನ ನೆರೆಯ ನುಗ್ಗಿ
ಜೀವ ಹರಿಯಲೆಂಥ ಸುಗ್ಗಿ
(ನಿಲ್ಲಿಸದಿರು)

ಭಾವದ ಮಾಯೆ ಅಡಗುವಂತೆ
ಅಹಂಕಾರ ಕರಗುವಂತೆ
ನಿನ್ನ ಗಾನದನುರಾಗವು
ಬದುಕ ತುಂಬಲನುಗಾಲವು
ನಿಲ್ಲಿಸದಿರು ವನಮಾಲೀ
ಕೊಳಲ ಗಾನವ

ಸಾಹಿತ್ಯ: ಪು ತಿ ನರಸಿಂಹಾಚಾರ್
(‘ಗೋಕುಲ ನಿರ್ಗಮನಗೀತರೂಪಕದಿಂದ ಭಕ್ತಿಪೂರ್ವಕವಾಗಿ)


ಪು ತಿ ನ ಅವರ ಗೋಕುಲ ನಿರ್ಗಮನಕೃತಿಯಲ್ಲಿನ  ಶ್ರೀಕೃಷ್ಣನ   ಬೃಂದಾವನದಲ್ಲಿಪಶುಪ್ರಾಣಿ, ಮನುಷ್ಯ ಚೇತನಗಳೆಲ್ಲ ಕೃಷ್ಣ  ಕೇಂದ್ರದ ಸುತ್ತ ತಿರುಗುತ್ತವೆ.  ಅಲ್ಲಿ ಉದ್ದಕ್ಕೂ ಭೋರ್ಗರೆದು ಹರಿಯುವ ಗೋಪೀ ಪ್ರೇಮಾನುರಾಗದ ಮಹಾಪೂರ ಮೈಪಡೆಯುವುದು ಸಹ ಕೃಷ್ಣಮುರಳಿಯ ಅಲೌಕಿಕ ಗಾನವರ್ಷದಿಂದಲೇ.  ಕೃಷ್ಣ ಕೊಳಲನ್ನಿಳಿಸಿದಾಗ ಗೋಪಿಯರು ಮಾಡುವ ಪ್ರಾರ್ಥನೆ ಈ ಪರಿಯದು.  (ಸಾಹಿತ್ಯರತ್ನ ಸಂಪುಟದಲ್ಲಿ ಡಾ. ಎನ್ ಎಸ್ ಲಕ್ಮೀನಾರಾಯಣಭಟ್ ಅವರು ನೀಡಿರುವ ಮಾತು)

Tag: Nillisadiru Vanamali, Nillisadiru Vanamaali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ