ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾತೆ ಮೀರಾ ಅಲ್ಫಾಸ


 ಶ್ರೀಮಾತೆ ಮೀರಾ ಅಲ್ಫಾಸ ಸಂಸ್ಮರಣೆ


ಗುರು ಶ್ರೀ ಅರವಿಂದರು ಅತೀತ ಮಾನಸ ಯೋಗದ ಪ್ರವರ್ತಕರು.  ಈ ಕೆಲಸದಲ್ಲಿ ಅವರಿಗೆ ಸಹಕಾರಿಯಾದವರು ಮುಂದೆ ಶ್ರೀಮಾತೆ ಎಂದು ಪೂಜನೀಯರಾದ ಮೀರಾ  ಅಲ್ಫಾಸ ಅವರು.  ಇಂದು ಶ್ರೀಮಾತೆಯವರ ಸಂಸ್ಮರಣಾ ದಿನ.

ಅರವಿಂದರಂತೆಯೇ ಸಾಕ್ಷಾತ್ಕಾರಗಳನ್ನು ಪಡೆದುಕೊಂಡ ಶ್ರೀಮಾತೆಯವರು  “ಅತೀತ ಮಾನಸಯೋಗವು ಪೃಥ್ವಿಯ ಮುಂದಿನ ವಿಕಸನವನ್ನು ತ್ವರಿತಗೊಳಿಸುವುದೆಂದು” ಪ್ರತಿಪಾದಿಸಿದರು. 1878ರಲ್ಲಿ ಪ್ಯಾರಿಸ್ಸಿನಲ್ಲಿ ಜನಿಸಿದ ಮೀರಾ ಅಲ್ಫಾಸಾ  ಅವರು ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ 36ನೆಯ ವಯಸ್ಸಿನಲ್ಲಿ.   ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ದಂಪತಿಗಳ ಪುತ್ರಿಯಾಗಿದ್ದರೂ ಈಕೆ ಬಾಲ್ಯದಿಂದಲೂ ಕೆಲವು ಅಲೌಕಿಕ ಗುಣ ಸಂಪನ್ನರಾಗಿದ್ದರು.  ಮೀರಾ ಅವರನ್ನು ಭೇಟಿಯಾದ ಪ್ರಥಮ ಸಂದರ್ಭದಲ್ಲಿಯೇ ಅರವಿಂದರು ಆಕೆಯಲ್ಲಿ ಅಂತರ್ಗತವಾಗಿದ್ದ  ಈ ವೈಶಿಷ್ಟ್ಯವನ್ನು ಗುರುತಿಸಿದ್ದರು.  
 
1920ರಲ್ಲಿ ಮಿರಾ ಅವರು ಶಾಶ್ವತವಾಗಿ ಭಾರತದಲ್ಲಿ  ನೆಲೆಸುವ ಸಂಕಲ್ಪದೊಡನೆ, ಪಾಂಡಿಚೆರಿ ಆಶ್ರಮದ ಏಳ್ಗೆಗಾಗಿ, ಮತ್ತು  ಆ ಮೂಲಕ ಅರವಿಂದರ ‘ಪೂರ್ಣ ಯೋಗ’ ಪ್ರಸರಣಕ್ಕಾಗಿ ಟೊಂಕಕಟ್ಟಿ ನಿಂತರು.   ಅರವಿಂದರು ಮೀರಾ ಅವರನ್ನು ತಮಗೆ ಸಮರಾದ ಸಾಧಕಿ ಎಂದೇ ಗೌರವಿಸುತ್ತಿದ್ದರು.  

ಅರವಿಂದರ  ಆಶಯದಂತೆ ಶ್ರೀಮಾತೆಯವರು  1926ರಲ್ಲಿ  ಅರವಿಂದೋ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.  ಮುಂದಿನ ದಿನಗಳಲ್ಲಿ  ಶ್ರೀಮಾತೆಯವರು ‘ಅರವಿಂದೋ ಇಂಟರ್ ನ್ಯಾಶನಲ್ ಸೆಂಟರ್ ಆಫ್ ಎಜುಕೇಷನ್’ ಸಂಸ್ಥೆಯನ್ನು ಆರಂಭಿಸಿ ವಿಶ್ವದಾದ್ಯಂತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟರು.  ಅರವಿಂದರು ಇಹಲೋಕ ವ್ಯವಹಾರ ಮುಗಿಸಿ ದೀರ್ಘಸಮಾಧಿಗೆ ತೆರಳಿದ ನಂತರ ಶ್ರೀಮಾತೆಯವರು ಆಶ್ರಮದ ಅನುಯಾಯಿಗಳಿಗೆ ಪಥದರ್ಶಕರಾಗಿ ಮುನ್ನಡೆದರು. ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಶ್ರೀಮಾತೆಯವರು ಆರಂಭಿಸಿದ ‘ಅರೋವಿಲ್ಲ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು.   ಜಗತ್ತಿನ ಎಲ್ಲಾ ಭಾಗದ, ಎಲ್ಲಾ ವರ್ಗದ, ಎಲ್ಲಾ ವಿಧದ ಜನರು ಶಾಂತಿ-ಸೌಹಾರ್ದದಿಂದ ಬಾಳಬೇಕು ಎನ್ನುವುದು ಈ ನಿರ್ಮಾಣದ ಹಿಂದಿನ ಉದ್ಧೇಶವಾಗಿದೆ.    1968ರಲ್ಲಿ ಉದ್ಘಾಟನೆಗೊಂಡ ‘ಅರೋವಿಲ್ಲ’ ಉದ್ಘಾಟನಾ ಸಮಾರಂಭದಲ್ಲಿ 121 ದೇಶಗಳ ಮತ್ತು ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯದಿಂದ ಒಂದು ಮುಷ್ಠಿ ಮಣ್ಣನ್ನು ತಂದು ಆ ಪ್ರದೇಶದಲ್ಲಿ ಸಂಗಮಗೊಳಿಸಿದರು.  ಇಂದಿಗೆ ‘ಅರೋವಿಲ್ಲ’ ಪ್ರದೇಶದಲ್ಲಿ 35 ರಾಷ್ಟ್ರಗಳ ಸುಮಾರು 1700ಜನರು ನೆಲೆಸಿರುವರು.  ಶ್ರೀಮಾತೆಯವರು 1973ರ ನವೆಂಬರ್ 17ರಂದು  ತಮ್ಮ 95ನೆಯ ವಯಸ್ಸಿನಲ್ಲಿ ನಿಧನರಾದರು.

On Remembrance Day of Mira Alfassa, The Mother,  a spiritual guru and a collaborator of Sri Aurobindo



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ