ಶ್ರೀರಾಮಾನುಜರು
ಶ್ರೀರಾಮಾನುಜಾಚಾರ್ಯರು
ಇಂದು ಶ್ರೀರಾಮನುಜರ ಜಯಂತಿ. ರಾಮಾನುಜರು ಈಗಿನ ತಮಿಳುನಾಡಿನಲ್ಲಿರುವ ಶ್ರೀಪೆರಂಬದೂರಿನಲ್ಲಿ 1018ರ ವರ್ಷದಲ್ಲಿ ಜನಿಸಿದರು ಎಂದು ನಂಬಲಾಗಿದೆ.
ಹಿಂದೂಧರ್ಮವು ವಿವಿಧ ಅಜ್ಞಾನಗಳು, ಮೂಢ ಆಚರಣೆಗಳಿಂದ ತುಂಬಿದ್ದ ಕಾಲದಲ್ಲಿ, ಇತರ ಧರ್ಮಗಳ ಪ್ರಾಬಲ್ಯದಲ್ಲಿ ತನ್ನ ಮೂಲನೆಲೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾಗ, ಮಹಾಪುರುಷರಾದ ಶಂಕರರು, ರಾಮಾನುಜರು ಮತ್ತು ಮಧ್ವಾಚಾರ್ಯರಂತಹ ಆಚಾರ್ಯರು ನಮ್ಮ ನಾಡಿನಲ್ಲಿ ಜನಿಸಿ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ನೀಡಿದಂತಹ ಕಾಣಿಕೆ ಅಪಾರವಾದದ್ದು. ಈ ಆಚಾರ್ಯರುಗಳು ನಮಗೆ ನೀಡಿದ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತಗಳು ಸತ್ಯವೆಂಬ ದಾರಿಯನ್ನು ಅರಿಯುವ ವಿವಿಧ ದಾರಿಗಳಾಗಿದ್ದು ಈ ಯಾವುದೇ ದಾರಿಯಲ್ಲೂ ನಾವು ನಮ್ಮ ಸಿದ್ಧಿಯನ್ನು ಗಳಿಸುವುದು ಸಾಧ್ಯವಿದೆ ಎಂದು ಮುಂದೆ ಈ ನಾಡಿನಲ್ಲಿ ಜನಿಸಿದ ಬಹಳಷ್ಟು ಮಹನೀಯರು ತಮ್ಮ ಜೀವನದ ರೀತಿನೀತಿಗಳಿಂದ ಸಾಧಿಸಿ ತೋರಿದ್ದಾರೆ.
‘ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೇ ಸತ್ಯ ಎಂದರು ಆಚಾರ್ಯ ಶಂಕರರು.’ ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಆದರಿಂದ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು. ‘ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿ’ ಎಂದವರು ಆಚಾರ್ಯ ಮಧ್ವರು.
ಜಿ.ವಿ. ಅಯ್ಯರ್ ಅವರು ರಾಮಾನುಜರ ಕುರಿತು ನಿರ್ಮಿಸಿದ ಚಿತ್ರದಲ್ಲಿನ ಒಂದು ಘಟನೆ ನೆನಪಿಗೆ ಬರುತ್ತದೆ. ರಾಮಾನುಜರ ಗುರುಗಳು ನಿನಗೆ ಮೋಕ್ಷಕ್ಕೆ ಮೂಲವಾದ ದಿವ್ಯಮಂತ್ರವನ್ನು ಉಪದೇಶಿಸುತ್ತಿದ್ದೇನೆ. ಅದು ಎಲ್ಲರಿಗೂ ಸಿಗುವಂತದ್ದಲ್ಲ ಎಂದು ಹೇಳಿ ಮಂತ್ರೋಪದೇಶ ಮಾಡುತ್ತಾರೆ. ಆ ಉಪದೇಶವನ್ನು ಕೇಳಿದ ಸ್ವಲ್ಪ ಸಮಯದಲ್ಲೇ ರಾಮಾನುಜರು ಊರಿನ ಜನರನ್ನೆಲ್ಲಾ ಕರೆದು ಆ ಉಪದೇಶವನ್ನು ನೀಡಿಬಿಟ್ಟರು. ಗುರುಗಳು ಕೇಳಿದರೆ, "ನಾನೊಬ್ಬನೇ ಮೋಕ್ಷ ಬಯಸುವುದು ಸ್ವಾರ್ಥವಲ್ಲವೇ?" ಎಂಬುದು ಇವರ ಮರುಪ್ರಶ್ನೆ.
ಅಧ್ಯಾತ್ಮ ಅಥವಾ ದೇವರು ಎಂಬ ತನಗಿಂತ ಮೇಲೊಂದು ಶಕ್ತಿ ಇದೆ ಎಂದು ಭಾವಿಸುವ ಮಾನವನಿಗೆ, ಆ ಕುರಿತಾದ ಜಿಜ್ಞಾಸೆಗಳು ಹಲವು ವಿಧದಲ್ಲಿದ್ದು ಅದು ಆದಿಮಾನವನಿಂದ ಇಂದಿನ ವೈಜ್ಞಾನಿಕ ಮಾನವನವರೆಗೆ ನಡೆದೇ ಇದೆ. ಈ ಪ್ರಪಂಚದಲ್ಲಿ ಹಲವು ದಾರ್ಶನಿಕರು ತಾವು ಅನುಭಾವಿಸಿದ ಸತ್ಯವನ್ನು ಹೊರಗೆಡವಿ ಜನರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದಾಗಲೆಲ್ಲಾ ಕಾಲಾನುಕ್ರಮದಲ್ಲಿ ಅವರು ಕಂಡುಕೊಂಡ ಸತ್ಯಗಳ ಪ್ರೇರಣೆಯನ್ನು ಜನ ಮರೆತು ಇವರು ಹೇಳಿದ್ದು ದೊಡ್ಡದು, ಅವರು ಹೇಳಿದ್ದು ಚಿಕ್ಕದು ಎಂಬಂತಹ ಸಣ್ಣತನಗಳಿಗೆ ಬೆಲೆ ಕೊಟ್ಟು ಆ ಮಹಾನ್ ದಾರ್ಶನಿಕರ ಮೂಲ ಆಶಯಗಳನ್ನು ಮರೆತಿರುವುದೇ ಹೆಚ್ಚು. ಹೆಚ್ಚೆಂದರೆ ಅವರು ಕೆಲವೊಂದು ಧಾರ್ಮಿಕ ಶ್ರದ್ಧೆಗಳವರಿಗೆ ಹೆಸರಾಗಿಯೋ, ಕೆಲವೊಂದು ದೇವಸ್ಥಾನಗಳಲ್ಲಿ ಮೂಲ ವಿಗ್ರಹಗಳ ಪಕ್ಕದಲ್ಲಿನ ಒಂದು ವಿಗ್ರಹವಾಗಿಯೋ ಉಳಿದಿರುವುದೇ ಹೆಚ್ಚು.
ರಾಮಾನುಜರು ಜನಿಸಿದ್ದ ಊರಿನಲ್ಲಿ ಒಬ್ಬ ಶೂದ್ರ ದೇವಸ್ಥಾನಕ್ಕೆ ದುಡಿಯುತ್ತಿದ್ದನಂತೆ. ರಾಮಾನುಜರು ಆತನನ್ನೇ ತಮ್ಮ ಗುರು ಎಂದು ಪರಿಗಣಿಸಿದರು. ಮುಂದೆ ಅದ್ವೈತದ ಗುರು ಯಾದವಪ್ರಕಾಶ ಎಂಬುವರು ಇವರ ಗುರುಗಳಾದರಂತೆ. ಯಮುನಾಚಾರ್ಯರು ಅವರ ಅಂತಿಮ ಸಮಯದಲ್ಲಿ ಇವರಿಗೆ ಪ್ರೇರಣೆ ಒದಗಿಸಿದರು. ಹಾಗಾಗಿ ಯಮುನಾಚಾರ್ಯರು ಅವರ ಮಾನಸಿಕ ಗುರುಗಳಾಗಿದ್ದರು.
ರಾಮಾನುಜರು ತಮ್ಮ ಗುರುಗಳಿಂದ ಪಡೆದುಕೊಂಡ ಪ್ರೇರಣೆ ಎಂದರೆ
- ಪರಮಾತ್ಮನಲ್ಲಿ ಶರಣಾಗತಿಯೇ ಮೋಕ್ಷದ ಮೂಲ ಮಾರ್ಗ
- ವ್ಯಾಸರು ರಚಿಸಿದ್ದ ಬ್ರಹ್ಮ ಸೂತ್ರಗಳನ್ನು ವಿಶಿಷ್ಟಾದ್ವೈತ ಭಾಷ್ಯವಾಗಿ ರಚಿಸುವುದು
- ವಿಷ್ಣುಪುರಾಣವನ್ನು ರಚಿಸಿದ ಪರಾಶರರಂತಹವರ ದಿವ್ಯದರ್ಶನಗಳನ್ನು ಜನರಿಗೆ ತಲುಪಿಸಿವುದು
ಶ್ರೀ ರಾಮಾನುಜರು ಪ್ರತಿಪಾದಿಸಿದ ತತ್ವ ವಿಶಿಷ್ಟಾದ್ವೈತ. ಪರಮಾತ್ಮನ ಏಕತೆಯನ್ನು ಪ್ರತಿಪಾದಿಸುವ ‘ಅದ್ವೈತ’ವನ್ನು ಕೆಲವೊಂದು ವಿಶೇಷತೆಗಳ ಜೊತೆಗೆ ಪ್ರತಿಪಾದಿಸುವುದರಿಂದ ಇದು ವಿಶಿಷ್ಟಾದ್ವೈತವೆನಿಸಿದೆ. ರಾಮಾನುಜರು 9 ಮಹಾನ್ ಕೃತಿಗಳನ್ನು ರಚಿಸಿದ್ದು ಅವು ನವರತ್ನಗಳೆಂದು ಪರಿಗಣಿತವಾಗಿವೆ. ಅವುಗಳೆಂದರೆ ಶ್ರೀ ಭಾಷ್ಯ ಅಥವಾ ಬ್ರಹ್ಮ ಭಾಷ್ಯ, ಗದ್ಯತ್ರಯಗಳಾದ ವಿಷ್ಣುವಿನ ಕುರಿತಾದ ವೈಕುಂಠಗದ್ಯ, ಶ್ರೀರಂಗನಾಥನ ಕುರಿತಾದ ಶ್ರೀರಂಗ ಗದ್ಯ, ಶರಣಾಗತಿ ಗದ್ಯ; ವೇದಾಂತ ಸಂಗ್ರಹ, ವೇದಾಂತ ಸಾರ, ವೇದಾಂತ ದೀಪ, ಭಗವದ್ಗೀತೆಯ ಕುರಿತಾದ ಗೀತ ಭಾಷ್ಯ ಮತ್ತು ಶ್ರೀ ವೈಷ್ಣವರ ನಿತ್ಯಾನುಸಂಧಾನದ ಕುರಿತಾದ ನಿತ್ಯ ಗ್ರಂಥ
ಭಗವದ್ಗೀತೆಯ ಕುರಿತಾದ ಭಾಷ್ಯದಲ್ಲಿ ಒಂದು ಕಡೆ ರಾಮಾನುಜರು ಹೀಗೆ ಹೇಳುತ್ತಾರೆ. "ನನ್ನ ಜೀವನವೇ ಅವನ ಮೇಲೆ ಅವಲಂಬಿಸಿದೆ. ಅವನ ಗುರಿಯಾದ ನಾನಿಲ್ಲದೆ ಹೇಗೆ ಅವನು ಬದುಕಿರಲಾರನೋ, ನಾನೂ ಹಾಗೆಯೇ ನನ್ನ ಗುರಿಯಾದ ಅವನಿಲ್ಲದೆ ಬದುಕಿರಲಾರೆ". ಭಕ್ತನಿಗೂ, ಭಗವಂತನಿಗೂ ಇರುವ ಪರಸ್ಪರತೆಯೇ ರಾಮಾನುಜರ ಉನ್ನತ ಮುಕ್ತಿಯ ಕಲ್ಪನೆಯಾಗಿದೆ. ರಾಮಾನುಜರ ಮುಕ್ತಿಯ ಕಲ್ಪನೆಯಲ್ಲಿ ವ್ಯಕ್ತಿತ್ವದ ನಾಶವಿಲ್ಲ. ಅವರ ಪ್ರಕಾರ ಮಾನವನ ಮೇಲಿನ ಪ್ರೇಮದಿಂದ ಇಳಿದುಬರುವುದೇ ಭಗವಂತನ ಅವತಾರದ ಉದ್ದೇಶ. ಇದಕ್ಕೆ ಪೂರಕವಾದ ಒಬ್ಬರು ಆಳ್ವಾರರ ಭಕ್ತಿಯ ನುಡಿ ಇಂತಿದೆ "ಭಗವಂತನು ತನ್ನನ್ನು ಪಡೆಯಬೇಕೆಂದು ಏಕಾಗ್ರಚಿತ್ತದಿಂದ ಯೋಗದಲ್ಲಿ ಯಾವನು ಕುಳಿತಿರುವನೋ, ಅವನ ಹೃದಯವನ್ನು ಆತ ಪ್ರವೇಶಿಸುತ್ತಾನೆ".
ಹನ್ನೊಂದನೆಯ ಶತಮಾನದಷ್ಟು ಹಿಂದೆಯೇ ಜಾತಿ ಭೇಧಗಳನ್ನು ಹೋಗಲಾಡಿಸುವಲ್ಲಿ ರಾಮಾನುಜರು ಮಾಡಿದ ಕಾರ್ಯಗಳು ಮಹತ್ವಪೂರ್ಣವೆನಿಸಿವೆ. ಸಕಲ ಜನರನ್ನೂ ಪ್ರೀತಿಯಿಂದ ಕಂಡ ರಾಮಾನುಜರ ಜೀವನದ ಕುರಿತಾಗಿ ಹಲವು ದೃಷ್ಟಾಂತದ ಕತೆಗಳಿವೆ. ಮೇಲುಕೋಟೆಯ ವೈರಮುಡಿಯಲ್ಲಿ ನಡೆಯುವ ಉತ್ಸವಗಳಲ್ಲಿ ಕೂಡಾ ಇಂದಿಗೂ ವಿವಿಧ ವರ್ಗದ ಜನ ಪಾಲ್ಗೊಂಡು ಆ ಉತ್ಸವವನ್ನು ನಡೆಸುವ ರೀತಿ ನೀತಿಗಳು ಆಚಾರ್ಯರ ಸರ್ವಜನ ಸಮಭಾವದ ದೃಷ್ಟಾಂತಗಳಿಗೆ ಸಾಕ್ಷಿಯಾಗಿವೆ.
ಕೆಲವೊಂದು ಚೋಳ ದೊರೆಗಳು ತಾವು ನಂಬಿದ್ದ ಶೈವ ಸಂಸ್ಕೃತಿಗೆ ರಾಮಾನುಜರ ಚಿಂತನೆಗಳು ಮತ್ತು ಬೋಧನೆಗಳು ವಿರುದ್ಧವಾಗಿವೆ ಎಂದು ಅವರು ತಮ್ಮ ನಾಡನ್ನು ಬಿಟ್ಟು ಹೋಗುವಂತೆ ಮಾಡಿದಾಗ ಅವರು ಕರ್ನಾಟಕದ ಹೊಯ್ಸಳರ ದೊರೆ ವಿಷ್ಣುವರ್ಧನ ದೊರೆಯ ಆಶ್ರಯಕ್ಕೆ ಬಂದು ಬೇಲೂರು, ಹಳೇಬೀಡು, ಮೇಲುಕೋಟೆಯೂ ಸೇರಿದಂತೆ ಅನೇಕ ಸಾಂಸ್ಕೃತಿಕ ಕೇಂದ್ರಗಳ ಉನ್ನತಿಗೆ ಪ್ರೇರಣೆಯಾದರು.
ಹೀಗಾಗಿ ನಮ್ಮ ಧಾರ್ಮಿಕ ಶ್ರದ್ಧೆಗಳ ಪರಿಧಿಯಾಚೆಗೂ ರಾಮಾನುಜಾಚಾರ್ಯರನ್ನು ಒಂದು ಸಂಸ್ಕೃತಿಯ ಪ್ರತಿನಿಧಿಯಾಗಿ ಕಾಣುವ ಸಾಧ್ಯತೆಗಳಿವೆ. ವೇದ ಉಪನಿಷತ್ತುಗಳ ತತ್ವಗಳನ್ನು ಬದುಕಿಗೆ ಅಳವಡಿಸುವ ಮಾರ್ಗದರ್ಶಕರಾಗಿ, ನಮ್ಮ ನಾಡಿನ ಸಂಸ್ಕೃತಿಯ ಹಲವು ಪ್ರೇರಣೆಗಳ ಶಕ್ತಿಯಾಗಿ ಮತ್ತು ಸಕಲಜಾತಿ ಮತಗಳ ಸಾಮರಸ್ಯದ ಪ್ರತಿಪಾದಕರಾಗಿ ಆಚಾರ್ಯರು ಪೂಜನೀಯರಾಗಿದ್ದಾರೆ. ಶ್ರೀರಾಮಾನುಜರು ನೂರ ಇಪ್ಪತ್ತುವರ್ಷಗಳ ಸುದೀರ್ಘ ಜೀವನವನ್ನು ಈ ಭುವಿಯಲ್ಲಿ ನಡೆಸಿದವರು ಎಂಬ ಮಾತೂ ಕೇಳಿಬರುತ್ತದೆ. ಶ್ರೀ ರಾಮಾನುಜಾಚಾರ್ಯರೆಂಬ ಆ ಆಧ್ಯಾತ್ಮಿಕ ಶಕ್ತಿಗೆ ನಮನ 🌷🙏🌷
On Sri Ramanujacharya Jayanthi
ಕಾಮೆಂಟ್‌ಗಳು