ಎಂ. ಫಾತಿಮಾ ಬೀವಿ
ಎಂ. ಫಾತಿಮಾ ಬೀವಿ
ಎಂ. ಫಾತಿಮಾ ಬೀವಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಿತಗೊಂಡ ಪ್ರಥಮ ಮಹಿಳೆ.
ಫಾತಿಮಾ ಬೀವಿ 1927ರ ಏಪ್ರಿಲ್ 30ರಂದು ಕೇರಳದ ತಿರುವಾಂಕೂರಿನ ಪಥನಂತಿಟ್ಟಾದಲ್ಲಿ ಜನಿಸಿದರು. ತಂದೆ ಅನ್ನವೀತಿಲ್ ಮೀರಾ ಸಾಹಿಬ್. ತಾಯಿ ಖದೇಜಾ ಬೀಬಿ.
ಫಾತಿಮಾ ಬೀವಿ ಪಥನಂತಿಟ್ಟಾ ಕ್ಯಾಥೊಲಿಕ್ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದು ಯೂನಿವರ್ಸಿಟಿ ಕಾಲೇಜಿನಿಂದ ಬಿ.ಎಸ್ಸಿ ಶಿಕ್ಷಣವನ್ನು ಪಡೆದರು. ತಿರುವನಂತಪುರದ ಸರ್ಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಕಾನೂನು ಪದವಿ ಗಳಿಸಿದರು.
1950ರ ನವೆಂಬರ್ 14ರಂದು ಫಾತಿಮಾ ಬೀವಿ ಕೇರಳದ ಕೆಳ ನ್ಯಾಯಾಂಗದಲ್ಲಿ ವಕೀಲರಾಗಿ ನೋಂದಾಯಿತರಾದರು. 1958ರ ಮೇ ತಿಂಗಳಿನಲ್ಲಿ ಕೇರಳದ ಸಬಾರ್ಡಿನೇಟ್ ನ್ಯಾಯಾಂಗ ಸೇವೆಗಳಲ್ಲಿ ಮುನ್ಸಿಫ್ ಆಗಿ ನೇಮಕಗೊಂಡರು. 1968ರಲ್ಲಿ ಸಬಾರ್ಡಿನೇಟ್ ನ್ಯಾಯಾಧೀಶರಾಗಿ ಮತ್ತು 1972ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ 1974ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು 1980ರ ಜನವರಿಯಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾಗಿ ನೇಮಕಗೊಂಡರು. 1983ರ ಆಗಸ್ಟ್ 4ರಂದು ಹೈಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 1984ರ ಮೇ 14ರಂದು ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾದರು. 1989ರ ಏಪ್ರಿಲ್ 29ರಂದು ಹೈಕೋರ್ಟ್‌ನ ನ್ಯಾಯಾಧೀಶರಾಗಿ ನಿವೃತ್ತರಾದರು. ನಂತರ 1989ರ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರಾಗಿ ಉನ್ನತಿ ಗಳಿಸಿದರು. 1992ರ ಏಪ್ರಿಲ್ 29ರಂದು ನಿವೃತ್ತರಾದರು.
ಫಾತಿಮಾ ಬೀವಿ 1997ರ ಜನವರಿ 25ರಂದು ತಮಿಳುನಾಡಿನ ರಾಜ್ಯಪಾಲರಾದರು. ರಾಜ್ಯಪಾಲರಾಗಿ ಅವರು ಮದ್ರಾಸ್ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಕೇರಳದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿಯೂ (1993) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ (1993) ಸೇವೆ ಸಲ್ಲಿಸಿದ್ದರು.
ಫಾತಿಮಾ ಬೀವಿ ಅವರಿಗೆ 1990 ರಲ್ಲಿ ಡಿ.ಲಿಟ್, ಮಹಿಳಾ ಶಿರೋಮಣಿ ಪ್ರಶಸ್ತಿ, ಭಾರತ್ ಜ್ಯೋತಿ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
On the birthday of first female judge in Supreme Court M. Fatheema Beevi
ಕಾಮೆಂಟ್‌ಗಳು