ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಚಂದ್ರ ಹೆಗಡೆ


 ಸಿ. ಎಸ್. ರಾಮಚಂದ್ರ ಹೆಗಡೆ 


ರಾಮಚಂದ್ರ ಹೆಗಡೆ ನಮ್ಮ ನಡುವಿರುವ ಅಪರೂಪದ ಸಮಾಜಮುಖಿ ಉತ್ಸಾಹಿ. ಇಂದು ಅವರ ಜನ್ಮದಿನ. ಆಪ್ತಗೆಳೆಯರಿಗೆ ಅವರು ರಾಚಂ.

ಮೂಲತಃ ಸಾಗರದವರಾದ ರಾಮಚಂದ್ರ ಹೆಗಡೆ ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಓದಿ, ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು.

ಓದಿನ ದಿನಗಳಲ್ಲೂ ತಾವಿರುವ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತೀವ್ರ ತುಡಿತ ಅವರದ್ದು.  ಅಂದಿನ ದಿನಗಳಲ್ಲೆ 'ಚೈತ್ರರಶ್ಮಿ' ಎಂಬ ಪತ್ರಿಕೆ ಮಾಡಿದ ಉತ್ಸಾಹಿ.  ಆ ಮೂಲಕ ಸಮಾಜಪರ ತುಡಿತಗಳನ್ನು ಜನಮಾಸದಲ್ಲಿ ಸಾಕಷ್ಟು ಭಿತ್ತಿದ್ದೇ ಅಲ್ಲದೆ ಅನೇಕ ಯುವ ಬರಹಗಾರರು ಮೂಡಿಬರುವಂತಾಯಿತು.

ಬರಹಗಾರನಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂದು ಪ್ರತಿಪಾದಿಸುವ ರಾಮಚಂದ್ರ ಹೆಗಡೆ,  ಬರಹ-ಕೃತಿ ಪರಸ್ಪರ ವಿರುದ್ಧವಾಗಿರುವ ಲೇಖಕರ ನಡೆಯನ್ನು ಒಪ್ಪುವುದಿಲ್ಲ. ತಮ್ಮ ಇಂಜಿನಿಯರ್ ಗೆಳೆಯರೊಂದಿಗೆ ಸಮಾಜ ಸೇವಕರ ಸಮಿತಿಯನ್ನು ರಚಿಸಿಕೊಂಡು ನೆರವು ಬೇಕಾದಲ್ಲಿ ಧಾವಿಸುವ ಇವರ ಸಾಮಾಜಿಕ ಬದ್ಧತೆ ಪ್ರಶ್ನಾತೀತ.  2010ರಲ್ಲಿ ಉತ್ತರಕರ್ನಾಟಕ ನೆರೆಹಾವಳಿಗೆ ತುತ್ತಾದಾಗ ತಮ್ಮ ಗೆಳೆಯರೊಂದಿಗೆ ಅವರ ನೆರವಿಗೆ ಧಾವಿಸಿದ್ದಲ್ಲದೆ, ಅಲ್ಲಿಯ ಚಿತ್ರಣ ಮನಮುಟ್ಟುವಂತೆ ’ನೆರೆಯ ನೋವಿಗೆ ಸ್ಪಂದನ’ ಎಂಬ ಪುಸ್ತಕವನ್ನೂ ಹೊರತಂದು ಹಂಚಿದರು.

ಪ್ರತಿಭಾವಂತ ಇಂಜಿನಿಯರ್ ಆದ ರಾಚಂ ಉದ್ಯೋಗಕ್ಕೆ ಇನ್ಫೋಸಿಸ್ ಸೇರಿದರು.  ಸಾಫ್ಟ್ವೇರ್ ಹುದ್ದೆಯಲ್ಲಿ ಕೆಲಸದ ಒತ್ತಡಗಳು, ನಿರಂತರ ಕಲಿಯಬೇಕಾದ ಅನಿವಾರ್ಯತೆಗಳು ಇತ್ಯಾದಿ ಅವರ ಸಮಾಜಮುಖಿ ಉತ್ಸಾಹವನ್ನು ತಗ್ಗಿಸಲಿಲ್ಲ.  ಅಲ್ಲಿಗೆ ಹೋದ ನಂತರವೂ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ. ವಿಶ್ವಕುಟುಂಬದ ವಾತಾವರಣವನ್ನು ಹೊಂದಿರುವ ಇನ್ಫೋಸಿಸ್ ಆವರಣದಲ್ಲಿ ಕನ್ನಡದ ಕಳೆಯನ್ನು ಮತ್ತು ಸೌಗಂಧವನ್ನು  ಹೊರಹೊಮ್ಮಿಸುತ್ತಿರುವ 'ಸಿರಿಗಂಧ' ಕನ್ನಡ ಬಳಗದ ಮೂಲಕ ಮನೋಜ್ಞ ಕೆಲಸ ಮಾಡುತ್ತಿದ್ದಾರೆ.  ಈ 'ಸಿರಿಗಂಧ' ತಂಡ ಇನ್ಫೋಸಿಸ್ ಆವರಣದಲ್ಲಿ ಅತ್ಯಂತ ಸೃಜನಾತ್ಮಕವಾಗಿ ಕೆಲಸ ಮಾಡುತ್ತಿರುವ ತಂಡವಾಗಿ ಅನೇಕ ಬಾರಿ ಸಮೂಹ ಪ್ರಶಸ್ತಿ ಗಳಿಸಿದೆ.  ಅಲ್ಲಿ ಮೂಡುವ ತ್ರೈಮಾಸಿಕದ ಹೆಸರೂ 'ಸಿರಿಗಂಧ'.  ಎಲ್ಲರೂ ಒಂದಗೂಡುವ ಸಂಭ್ರಮಗಳಿಗೆ ಹೆಸರು 'ಸಮ್ಮಿಲನ' ಹೀಗೆ ಎಲ್ಲವೂ ಸರಳ ಸುಂದರ.

ಬಸವನಗುಡಿಯಲ್ಲಿನ  'ಸಮಾಜ ಸೇವಕರ ಸಮಿತಿ' ಮುಂತಾದ ಸಂಘಟನೆಗಳಲ್ಲೂ ರಾಮಚಂದ್ರ ಹೆಗಡೆ ಕೆಲಸ ಮಾಡುತ್ತಾರೆ.‍ ಡಿವಿಜಿ ಅವರ ಸ್ಮರಣೆಯ ಅನೇಕ  ಕಾರ್ಯಕ್ರಮಗಳನ್ನು ಗೆಳೆಯರ ಜೊತೆ ಮಾಡಿದ್ದಾರೆ. ಡಿವಿಜಿ, 'ತಿರುಕ' ಕಾವ್ಯನಾಮದ ರಾಘವೇಂದ್ರ ಗುರೂಜಿ, ಕೆಎಸ್‍ನ, ಮೈಸೂರು ತಾತಯ್ಯ, ಜಿವಿ ಹೀಗೆ ಹಿರಿಯ ಸಾಧಕರೆಂದರೆ ಅವರಿಗೆ ಅಪಾರ ಗೌರವ ಶ್ರದ್ಧೆ.  ಅಂತಹವರ ಕಾರ್ಯಕ್ರಮ ಎಲ್ಲೇ ಆದರೂ ಹೆಗಲುಕೊಡುತ್ತಾರೆ. ಸಮಾಜದಲ್ಲಿ ಎಲ್ಲಿ ನೋವಿದೆಯೋ ಅಲ್ಲಿ ರಾಚಂ ಸ್ಪಂದನೆಯಿದೆ.  ವ್ಯವಸ್ಥೆಯ ಕುರಿತು ಅವರದ್ದು ಅನಗತ್ಯ ಟೀಕೆ ಇಲ್ಲ.  ಏನು ಮಾಡಬಹುದು ಎಂಬ ಕುರತು ಸಂವೇದನೆ ಇದೆ. ತಮ್ಮ ಕೈಯಲ್ಲಿ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುವ ನಿಃಸ್ವಾರ್ಥ ಅರ್ಪಣಾ ಮನೋಭಾವವಿದೆ.  ನಮ್ಮ ದೇಶ,‍ ನಮ್ಮಭಾಷೆ, ನಮ್ಮ ಸಮಾಜ ಹೀಗೆ ಅವರೊಳಗೆ ಅಂತಃಸ್ಪಂದನೆಯಿದೆ. ಯಾರು ಏನು ಒಳಿತನ್ನು ಮಾಡಿದರೂ ಮೆಚ್ಚಿ ಪ್ರೋತ್ಸಾಹಿಸುವ ಔದಾರ್ಯವಿದೆ.

ರಾಮಚಂದ್ರ ಹೆಗಡೆ ಅವರ ಕ್ರಿಯಾಶೀಲತೆ ಹೇಗೆ ನನ್ನನ್ನು ಆಕರ್ಷಿಸಿದೆ ಎಂಬ ನಿಟ್ಟಿನಲ್ಲಿ ಅವರ ಕುರಿತು ನಾಲ್ಕು ಮಾತು ಹೇಳಿದೆ.  ಅವರು ಮಾಡುತ್ತಿರುವ ಕೆಲಸ ನನಗೆ ಗೊತ್ತಿಲ್ಲದಿರುವುದು ಇನ್ನೂ ಬಹಳಷ್ಟಿದೆ ಎನಿಸುತ್ತದೆ.  ಈ ಉತ್ಸಾಹಿ, ಸದ್ಗುಣಿ, ಸದಾ ಕ್ರಿಯಾಶೀಲ, ಆತ್ಮೀಯ ರಾಮಚಂದ್ರ ಹೆಗಡೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ಬದುಕು ನಿತ್ಯ ಸುಂದರವಾಗಿದ್ದು, ಹೀಗೇ ನಿರಂತರ ನಮ್ಮ ಪ್ರೇರಿಸುತ್ತಿರಲಿ.

Happy birthday Ramachandra Hegde Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ