ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಶವಂತ ಹಳಿಬಂಡಿ


 ಯಶವಂತ ಹಳಿಬಂಡಿ 


ಯಶವಂತ ಹಳಿಬಂಡಿ ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಮುಖರ ಸಾಲಿನಲ್ಲಿ ಪ್ರಕಾಶಿತರು.  ವರಕವಿ ಬೇಂದ್ರೆಯವರ ಧಾರವಾಡ ಶೈಲಿಯ ಕಾವ್ಯದಿಂಪನ್ನು ಯಶವಂತ ಹಳಿಬಂಡಿ ಅವರ ಧ್ವನಿಯಲ್ಲಿ ಸವಿಯಬಹುದಾದ ಸುಖ ಮನೋಜ್ಞವಾದದ್ದು.  ಸ್ವತಃ ಬೇಂದ್ರೆಯವರ ಎದುರೇ ಅವರ ಗೀತೆಯನ್ನು ಹಾಡಿ, ಅವರ ಮನಮೆಚ್ಚಿಸಿ ಆಶೀರ್ವಾದ ಪಡೆದವರು ಯಶವಂತ ಹಳಿಬಂಡಿ.

ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ  ‘ಪಾತರಗಿತ್ತಿಪಕ್ಕ ನೋಡಿದ್ದೇನ ಅಕ್ಕ’ ಅಂತೂ ಜನಮನದಲ್ಲೆಲ್ಲಾ ಸಂತಸ ಉಕ್ಕಿಹರಿಸುವಂತದ್ದು.   ಅವರ ಮಧುರ ಕಂಠದಿಂದ ಹೊರಹೊಮ್ಮುವ  ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು..., ಕುಣಿಯೋಣು ಬಾರಾ ಕುಣಿಯೋಣು ಬಾ..., ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ..., ಎಲ್ಲೋ ಜೋಗಪ್ಪ ನಿನ್ನ ಅರಮನೆ...  ಕುಂಬಾರಕ್ಕಿ ಈಕಿ ಕುಂಬಾರಕ್ಕಿ, ಬಾರೊ ಸಾಧನ ಕೇರಿಗೆ ಗೀತೆಗಳಂತೂ ಶ್ರೋತೃಗಳನ್ನು ಆನಂದದ ಸಾಗರದಲ್ಲಿ ತೇಲಿಸುತ್ತಾ ಮುದನೀಡುವಂತದ್ದು. 

ಯಶವಂತ ಹಳಿಬಂಡಿ 1950ರ  ಮೇ 25ರಂದು  ಧಾರವಾಡದಲ್ಲಿ ಜನಿಸಿದರು.  ತಂದೆ  ಹನುಮಂತ ಹಳಿಬಂಡಿ. ತಾಯಿ ಬಸವೇಶ್ವರಿ.  ಚಿಕ್ಕಂದಿನಲ್ಲೇ ಧಾರವಾಡದ ಪರಿಸರದಲ್ಲಿ ಹಾಸುಹೊಕ್ಕಾಗಿದ್ದ ಹಿಂದೂಸ್ಥಾನೀ  ಸಂಗೀತಕ್ಕೆ ಮಾರುಹೋದ ಯಶವಂತರು ಶ್ರೀ ಲಕ್ಷ್ಮಣರಾವ್ ದೇವಾಂಗರಲ್ಲಿ ಮೊದಲಿಗೆ ಶಿಷ್ಯವೃತ್ತಿ ಆರಂಭಿಸಿದರು. ಕೆಲವು ವರ್ಷಗಳ ನಂತರ ಹೆಚ್ಚಿನ ಪರಿಣಿತಿಗಾಗಿ ಶ್ರೀ ನಾರಾಯಣರಾವ್ ಮಜುಂದಾರ್ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಹೀಗೆ ಬಹಳಷ್ಟು ವರ್ಷ ಹಿಂದೂಸ್ತಾನಿ ಗಾಯನದ ತಾಲೀಮು ನಡೆಸಿದರು.

ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನವನ್ನು ಆಗಾಗ ಕೇಳುತ್ತಿದ್ದ ಯಶವಂತರು ಸುಗಮ ಸಂಗೀತದ ಕಡೆ ಆಕರ್ಷಿತರಾದರು. ಕನ್ನಡ ಗೀತೆಗಳನ್ನು ಹಾಡಲು ಮುಂದಾದರು. ಅಷ್ಟರಲ್ಲಿಯೇ ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲೆಯಲ್ಲಿ  ತರಬೇತಿ ಹೊಂದಿದ್ದರು.

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಮೇಲೆ ಹಳಿಬಂಡಿ, ಕೆಲಸದ ಜೊತೆಜೊತೆಗೆ ಹಾಡಿನ ಕಾಯಕವನ್ನು ಮುಂದುವರಿಸಿದರು. ಆಕಾಶವಾಣಿಯ ಸುಗಮ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಅಯ್ಕೆಯಾದ ಹಳಿಬಂಡಿ ದೂರದರ್ಶನದಲ್ಲಿ  ಕೂಡ ಜನಪ್ರಿಯ ಗಾಯಕರೆನಿಸಿದರು.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸುಗಮ ಸಂಗಿತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು  ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿದ ಹಳಿಬಂಡಿ ತಮ್ಮದೇ ಆದ ತಂಡ ಕಟ್ಟಿ, ನಾಡಿನಉದ್ದಗಲಗಳಲ್ಲಿ ಸಂಚರಿಸಿ ಸುಪ್ರಸಿದ್ಧ ಕವಿಗಳ ಕವಿತಾಮೃತವನ್ನು  ಸಂಗೀತಪ್ರಿಯರಿಗೆ ಉಣಬಡಿಸಿದವರು.

ಹಳಿಬಂಡಿಯವರ ನೂರಾರು ಧ್ವನಿ ಸುರುಳಿಗಳು ಜನಪ್ರಿಯಗೊಂಡಿವೆ.    ನೂರಾರು ಸುಗಮ ಸಂಗೀತ ಕಮ್ಮಟಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಗೀತೆಗಳನ್ನು ಕಲಿಸಿ ಅವರಿಂದಲೇ ಹಾಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.   ಮೈಸೂರು ಸೀಮೆಯಲ್ಲಿ  ಸುಗಮ ಸಂಗೀತವನ್ನು ಧಾರವಾಡದ ಶೈಲಿಯಲ್ಲಿ ಹಾಡುವ ಅಪರೂಪದ   ಗಾಯಕರೆಂದು  ಹಳಿಬಂಡಿ ಹೆಸರಾಗಿದ್ದರು. ಮಕ್ಕಳು ಹಿರಿಯರು ಎಂದು ಭೇದವಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ  ಹಳಿಬಂಡಿ ಸರಳ ವ್ಯಕ್ತಿತ್ವದ ಸಜ್ಜನರೆನಿಸಿದ್ದವರು. 

ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದಗೀತೆ, ಶರಣರ ಪದ, ವಚನ, ತತ್ವಪದ ಹೀಗೆ ಹಲವು ಪ್ರಕಾರದಲ್ಲಿ  ಹಳಿಬಂಡಿ ತಮ್ಮ   ದನಿಯಿಂದ ಪ್ರಸಿದ್ಧರಾಗಿದ್ದರು. ಕರ್ನಾಟಕ ಸರ್ಕಾರ ಆಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ  ಮನಗೆದ್ದಿದ್ದರು.

ಅನೇಕ ಸಂಘ ಸಂಸ್ಥೆಗಳು ಹಳಿಬಂಡಿ ಅವರ ಗಾಯನ ಪ್ರತಿಭೆ ಗುರುತಿಸಿ ಪುರಸ್ಕರಿಸಿವೆ. ರಾಜ್ಯ ಸರ್ಕಾರ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು.   ಯಶವಂತ ಹಳಿಬಂಡಿ ಕೇವಲ  ಗಾಯಕರಷ್ಟೇ ಅಲ್ಲ, ಉತ್ತಮ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕರು ಕೂಡ. ಜೊತೆಗೆ ಇವರು ವಾಸ್ತುಶಿಲ್ಪಿ ಕೂಡಾ.  ಮರದ ಹಲಗೆಗಳಲ್ಲಿ ಹಾಗೂ ದಪ್ಪ ಕಾಗದದಲ್ಲಿ  ಮನೆ, ಮಹಲುಗಳ ವಿನ್ಯಾಸ ಮಾಡುವುದರಲ್ಲಿ  ಹಳಿಬಂಡಿ ಸಿದ್ಧ ಹಸ್ತರೆನಿಸಿದ್ದರು.

ಹೀಗೆ ಪ್ರತಿಭೆ ಚತುರತೆ ಸಜ್ಜನತೆಗಳ ಸಂಗಮರಾಗಿದ್ದ ಯಶವಂತ ಹಳಿಬಂಡಿ ಅವರು 2014ರ ಜನವರಿ 22 ರಂದು  ಈ ಲೋಕವನ್ನಗಲಿದರು.

On the birth anniversary of our great singer Yashwanth Halibandi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ