ಎಂ. ಬಿ. ಸಿಂಗ್
ಎಂ. ಬಿ. ಸಿಂಗ್
ಕನ್ನಡ ಪತ್ರಿಕೋದ್ಯಮ ಕಂಡ ಮಹತ್ವದ ವ್ಯಕ್ತಿಗಳಲ್ಲಿ ಮದನ್ ಭುವನ್‍ಸಿಂಗ್ ಒಬ್ಬರು. ಪತ್ರಿಕಾವಲಯದಲ್ಲಿ ಇವರು ಎಂ.ಬಿ.ಸಿಂಗ್ ಎಂದೇ ಪರಿಚಿತರು.
ಎಂ. ಬಿ. ಸಿಂಗ್ 1925ರ ಮೇ 24 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಮದನ್‍ಸಿಂಗ್. ತಾಯಿ ವಸಂತಾಬಾಯಿ. ಭುವನ್ ಸಿಂಗ್ ಅವರ ಶಾಲಾ ಶಿಕ್ಷಣ ಮಂಡ್ಯದಲ್ಲಿ ಮತ್ತು ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು.
ಎಂ. ಬಿ. ಸಿಂಗ್ ಅವರು ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಮೈಸೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ 'ಮಾತೃಭೂಮಿ' ಪತ್ರಿಕೆಯ ವರದಿಗಾರ ಹಾಗೂ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬದುಕಿನ ಬವಣೆಗಾಗಿ ವಿಮಾನದಳಕ್ಕೆ ಆಯ್ಕೆಯಾಗಿ, ತರಬೇತಿ ಪಡೆಯಲು ಸಜ್ಜಾಗುತ್ತಿದ್ದಾಗ ಸಮಯದಲ್ಲಿ ವೀರಕೇಸರಿ ಸೀತಾರಾಮ ಶಾಸ್ತ್ರೀ ಅವರನ್ನು ಭೇಟಿ ಆಗುವ ಸಂದರ್ಭ ಒದಗಿಬಂತು. ಈ ಭೇಟಿ ಸಿಂಗ್ ಅವರ ದಿಕ್ಕು ದೆಸೆಯನ್ನೇ ಬದಲಾಯಿಸಿತು.
ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಜೊತೆಯಲ್ಲಿ ವಾರ್ತಾ, ಚಿತ್ರಗುಪ್ತ, ವಿಶ್ವಕರ್ನಾಟಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಸಿಂಗ್, 1953ರಲ್ಲಿ ಪ್ರಜಾವಾಣಿಯ ಉಪಸಂಪಾದಕ ವರದಿಗಾರರಾಗಿ ಸೇರಿದರು. ಅದು ಪತ್ರಿಕೋದ್ಯಮದ ಸಂಕ್ರಮಣ ಕಾಲ.
ಸ್ವಾತಂತ್ರ್ಯಾನಂತರದಲ್ಲಿ ಹುಟ್ಟಿದ ಪ್ರಜಾವಾಣಿಯ ಮುಂದೆ ಸ್ವಾತಂತ್ರ್ಯೋತ್ತರ ಭಾರತದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಭಾಷ್ಯ ಬರೆಯುವ, ಕನಸುಗಳು ಮಡುಗಟ್ಟಿತ್ತು. ಆ ಕನಸುಗಳ ಸಾಕಾರಕ್ಕೆ ಶಿಸ್ತಿನ ಸೇನೆಯನ್ನು ಪ್ರಜಾವಾಣಿ ಸ್ಥಾಪಕರು ಬಯಸಿದ್ದರು. ಮಿಲಿಟರಿಗೆ ಸೇರದೆ ಪತ್ರಿಕೋದ್ಯಮಕ್ಕೆ ಬಂದ ಸಿಂಗ್ ಪ್ರಜಾವಾಣಿಯೊಳಗೆ ಶಿಸ್ತಿನ ಸಿಪಾಯಿಯಂತೆ ಬಂದರು. ಒಂದೊಂದೇ ಮೆಟ್ಟಿಲೇರುತ್ತ ಅದರ ಕಮಾಂಡರ್ ಆದರು. ಸಿಂಗ್ ಪ್ರಜಾವಾಣಿಯೊಂದಿಗೆ ಸುಧಾ ಸಾಪ್ತಾಹಿಕ, ಮಾಸಿಕ ಮಯೂರಕ್ಕೂ ಸಂಪಾದಕರಾಗಿ ನಿವೃತ್ತರಾದರು. ಪ್ರಜಾವಾಣಿ, ಸುಧಾ ಸಾಪ್ತಾಹಿಕ ಹಾಗೂ ಮಯೂರ ಮಾಸ ಪತ್ರಿಕೆಗಳಿಗೆ ಏಕಕಾಲದಲ್ಲಿ ಸಂಪಾದಕರಾಗಿದ್ದವರು ಸಿಂಗ್. ಅವುಗಳ ವಸ್ತು, ವಿನ್ಯಾಸ, ಸ್ವರೂಪಗಳಿಗೆ ಹೊಸದೇ ಆದೊಂದು ಆಯಾಮವನ್ನು ದೊರಕಿಸಿಕೊಟ್ಟರು.
ತಾವು ಪತ್ರಿಕೋದ್ಯಮ ವೃತ್ತಿಯಲ್ಲಿದ್ದಷ್ಟೂ ಕಾಲ ಸಿಂಗ್ ಯಾವುದೇ ಪ್ರಶಸ್ತಿ, ಗೌರವ ಹುದ್ದೆ, ಸರ್ಕಾರ ಕೊಡ ಮಾಡುವ ಸೌಲಭ್ಯಗಳನ್ನು ಒಪ್ಪಿಕೊಳ್ಳಲಿಲ್ಲ ಎನ್ನುವುದು ಸಾರ್ವಕಾಲಿಕ ಅಪರೂಪದ ಗುಣ.
"ಪ್ರಜಾವಾಣಿ ಕಚೇರಿಗೆ ನಾನು ಬೆಳಿಗ್ಗೆ ಒಂಬತ್ತಕ್ಕೇ ಹೋಗುತ್ತಿದ್ದೆ. ಕಸ ಗುಡಿಸಿ, ಹಳೆಯ ಪೇಪರುಗಳನ್ನು ಯಾರೂ ಹೊರಗೆ ಹಾಕದೇ ಇದ್ದರೆ ನಾನೇ ಆ ಕೆಲಸವನ್ನು ಮಾಡುತ್ತಿದ್ದೆ. ಎಂದೂ ಗಡಿಯಾರ ನೋಡಿ ಕೆಲಸ ಮಾಡಲೇ ಇಲ್ಲ. ಲೇಖಕರನ್ನು ಖುದ್ದು ಹುಡುಕಿಕೊಂಡು ಹೋಗುತ್ತಿದ್ದೆ. ಬರೆಯುವಂತೆ ಓಲೈಸಲು ಸಾಕಷ್ಟು ಹೆಣಗಾಡಿದ್ದೂ ಇದೆ. ಇವನ್ನೆಲ್ಲಾ ನೋಡಿದ ಸಹೋದ್ಯೋಗಿಗಳು ತಂತಾನೇ ಪ್ರೀತಿಯಿಂದ ಕೆಲಸ ಮಾಡತೊಡಗಿದರು. ನಾನು ಒತ್ತಡ ಹೇರಿ ಕೆಲಸ ಮಾಡಿಸಲಿಲ್ಲ. ಕೆಲಸದ ಬಗ್ಗೆ ಪ್ರೀತಿ ಮೂಡಿಸಿದೆನಷ್ಟೆ.” ಇದು ಎಂ.ಬಿ.ಸಿಂಗ್ ಅವರೇ ಹೇಳಿಕೊಂಡಿದ್ದ ಮಾತು.
ಗೋವಾ ವಿಮೋಚನಾ ಚಳವಳಿಯನ್ನು ಛಾಯಾಗ್ರಾಹಕರಾಗಿ ಸೆರೆ ಹಿಡಿದ ಸಿಂಗ್ ಯೂರೋಪ್, ರಷ್ಯಾ ಒಳಗೊಂಡಂತೆ ಹಲವು ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಅಧ್ಯಯನ ಪ್ರವಾಸ ಮಾಡಿಬಂದಿದ್ದರು.
ಸಣ್ಣ ಪತ್ರಿಕೆಗಳ ಕಷ್ಟ-ಸುಖ, ಅಳಿವು-ಉಳಿವು ಮತ್ತು ಅದರ ಏಳಿಗೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು, ಸಮಗ್ರ ಅಧ್ಯಯನ ನಡೆಸಿ ವರದಿಯೊಂದನ್ನು ತಯಾರಿಸಲು ಸರಕಾರ ಸಮಿತಿಯೊಂದನ್ನು ರಚಿಸಿತ್ತು. ಅದರ ನೇತೃತ್ವ ವಹಿಸಿದ್ದವರು ಎಂ.ಬಿ. ಸಿಂಗ್. ಆ ಸಮಿತಿಯ ವರದಿ 'ಸಿಂಗ್ ವರದಿ' ಎಂದೇ ಹೆಸರಾಗಿತ್ತು.
ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಹಾಗೂ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ (1996), ಟೀಯೆಸ್ಸಾರ್ ಪ್ರಶಸ್ತಿ (1997) ಮುಂತಾದ ಗೌರವಗಳು ಎಂ. ಬಿ. ಸಿಂಗ್ ಅವರಿಗೆ ಸಂದಿದ್ದವು.
ಸಿಂಗ್ ಅವರಿಗೆ 90 ವರ್ಷ ತುಂಬಿದ ಸಂದರ್ಭದಲ್ಲಿ 'ಎಂ.ಬಿ.ಸಿಂಗ್: ಕನ್ನಡ ಪತ್ರಿಕೋದ್ಯಮ ಕಟ್ಟಾಳು' ಎಂಬ ಅಭಿನಂದನಾ ಗ್ರಂಥ ಹೊರತರಲಾಯಿತು.
ಎಂ. ಬಿ. ಸಿಂಗ್ 2016ರ ಅಕ್ಟೋಬರ್ 25 ರಂದು ತಮ್ಮ 91 ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.
On the birth anniversary of great journalist M. B. Singh
ಕಾಮೆಂಟ್‌ಗಳು