ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನೋರಮಾ


 ಮನೋರಮಾ


ಅತ್ಯಂತ ಹೆಚ್ಚು  ಚಲನಚಿತ್ರಗಳಲ್ಲಿ ನಟಿಸಿದವರು ಮನೋರಮಾ. ಪ್ರಮುಖವಾಗಿ ಹಾಸ್ಯ ನಟಿಯಾಗಿ ಅಭಿನಯಿಸುತ್ತಿದ್ದ ಅವರು 1,500ಕ್ಕೂ  ಹೆಚ್ಚು ಚಿತ್ರಗಳು, 5000ಕ್ಕೂ ಹೆಚ್ಚು  ನಾಟಕಗಳು ಮತ್ತು ಅನೇಕ ಕಿರುತೆರೆಯ  ಕಥಾನಕಗಳಲ್ಲಿ ನಟಿಸಿ ಗಿನ್ನೆಸ್ ದಾಖಲೆ ಬರೆದವರು.

ಮನೋರಮಾ ಅವರ ಮೊದಲಿನ ಹೆಸರು ಗೋಪಿಶಾಂತಾ. ಅವರು 1937ರ ಮೇ 26ರಂದು ತಂಜಾವೂರು ಜಿಲ್ಲೆಯಲ್ಲಿ ಜನಿಸಿದರು. ಈಕೆ ಹುಟ್ಟಿದಾಗ ಹೆಣ್ಣು ಮಗು ಜನಿಸಿದ್ದಕ್ಕೆ ಮಲತಂದೆ ಅಸಮಾಧಾನಗೊಂಡು, ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕಿಬಿಟ್ಟನಂತೆ. ತಾಯಿ ಪುಟ್ಟ ಮಗು ಗೋಪಿಶಾಂತಾಳನ್ನು ಎದೆಗವುಚಿಕೊಂಡು ಊರೂರು ಸುತ್ತಿ ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸ ತೊಡಗಿದರು. ತಾಯಿಗೆ  ಅನಾರೋಗ್ಯವಾದಾಗ  11 ವಯಸ್ಸಿನ  ಪುಟ್ಟ ಬಾಲಕಿ ಗೋಪಿಶಾಂತಾ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈ ಬಿಟ್ಟು ಮನೆ ಕೆಲಸಕ್ಕೆ ಸೇರಿಕೊಂಡಳು. 12 ನೇ ವಯಸ್ಸಿನಲ್ಲಿ ತಾನಿದ್ದ ಪಾಲ್ಲಥೂರಿನಲ್ಲಿ ಅನಿರೀಕ್ಷಿತವಾಗಿ ನಾಟಕವೊಂದರಲ್ಲಿ ಪುಟ್ಟ ಪಾತ್ರ ಮಾಡಿದಳು. ತದನಂತರ ಒಂದರ ಹಿಂದೆ ಒಂದು ನಾಟಕಗಳಲ್ಲಿ ಪಾತ್ರ ಮಾಡತೊಡಗಿದಳು. ಜೊತೆಗೆ ಹಿನ್ನೆಲೆ ಸಂಗೀತ ಗಾಯಕಿಯಾಗಿಯೂ ಆದಳು. 

ಮನೋರಮಾ ಅವರ ನಾಟಕಗಳಲ್ಲಿನ ಅಭಿನಯ ಕಂಡು ಕೆಲವು ನಿರ್ಮಾಪಕರು ಅವರಿಗೆ ಚಲನಚಿತ್ರಗಳಲ್ಲಿ ಅವಕಾಶ ನೀಡಲಾರಂಭಿಸಿದರು. ಅವರು ನಟಿಸಿದ ಮೊದಲ ಎರಡೂ ಚಿತ್ರಗಳೂ ಅರ್ಧಕ್ಕೆ ನಿಂತುಬಿಟ್ಟವು. 1958ರಲ್ಲಿ ಮಾಲಾಯಿಟ್ಟಾ ಮಾಂಗೈ ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. 1963ರಲ್ಲಿ ತೆರೆಕಂಡ ಕೋನ್ಜುಂಮ್ ಕುಮಾರಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. 2013ರವರೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಸೇರಿದಂತೆ 1,500ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಆಕೆ ನಟಿಸಿದ್ದರು. 

1960ರಿಂದ 1969ರವರೆಗೆ ಮನೋರಮಾ ಮತ್ತು ನಾಗೇಶ್ ಜೋಡಿ ತಮಿಳು ಸಿನಿಮಾರಂಗದಲ್ಲಿ ಬಹು ಜನಪ್ರಿಯವಾಗಿತ್ತು. ಮುಂದೆ ಚೋ, ತೆಂಗಾಯ್ ಶ್ರೀನಿವಾಸನ್, ವೆನ್ನಿರಾಡೈ ಮೂರ್ತಿ, ಸುರಾಲಿ ರಾಜನ್ ಮುಂತಾದವರೊಂದಿಗೆ ಸಹಾ ಜೋಡಿಯಾಗಿ ಹೆಸರಾದರು. ಕನ್ನಡದಲ್ಲಿ ಪ್ರೇಮಲೋಕ, ಪ್ರೇಮಾನುಬಂಧ, ಗೆದ್ದವಳು ನಾನೇ, ದೇವರ ದುಡ್ಡು, ಹೆಣ್ಣು ಸಂಸಾರದ ಕಣ್ಣು, ದೇವರ ಗುಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಮನೋರಮಾ  ಅಂದಿನ ಪ್ರಮುಖ  ನಟರಾದ ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಅಲ್ಲದೆ, ಐದು ಮುಖ್ಯಮಂತ್ರಿಗಳಾದ ಅಣ್ಣಾ ದೊರೈ, ಕರುಣಾನಿಧಿ, ಎಂಜಿ ರಾಮಚಂದ್ರನ್, ಜಯಲಲಿತಾ ಹಾಗೂ ಆಂಧ್ರ ಪ್ರದೇಶದ ಎನ್ ಟಿ ರಾಮರಾಮ್ ಜೊತೆ ನಟಿಸಿದ್ದರು. ಜಯಲಲಿತಾ ಅವರ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಮನೋರಮಾ ಅವರ ಆಪ್ತ ಗೆಳೆತಿಯಾಗಿದ್ದರು. ಕಮಲಹಾಸನ್, ರಜನೀಕಾಂತ್ ಸೇರಿದಂತೆ ಎಲ್ಲ ತಲೆಮಾರುಗಳೊಂದಿಗೆ  ವೈವಿಧ್ಯಪೂರ್ಣ ಪಾತ್ರಗಳಲ್ಲಿ ಸರಾಗವಾಗಿ ನಟಿಸುತ್ತಿದ್ದ ಅಪೂರ್ವ ಪ್ರತಿಭಾವಂತೆ ಆಕೆ.

ಮನೋರಮಾ 1985ರ ವೇಳೆಗಾಗಲೇ 1000 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಗಿನ್ನೆಸ್ ಪುಟಕ್ಕೆ ದಾಖಲೆಯಾದರು. 2002ನೇ ಇಸವಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 1995ರಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಜೀವಮಾನ ಸಾಧನೆಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಲಭಿಸಿದ್ದವು. 

ಮನೋರಮಾ 2015ರ ಅಕ್ಟೋಬರ್  10ರಂದು ತಮ್ಮ 78ನೇ ವಯಸ್ಸಿನಲ್ಲಿ  ನಿಧನರಾದರು.

Manorama 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ