ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾರ್ಲ್ ಮಾರ್ಕ್ಸ್


 ಕಾರ್ಲ್ ಮಾರ್ಕ್ಸ್


ಕಾರ್ಲ್ ಮಾರ್ಕ್ಸ್ ವೈಜ್ಞಾನಿಕ ಸಮಾಜವಾದದ ಪ್ರವರ್ತಕರು. 

ಕಾರ್ಲ್ ಮಾರ್ಕ್ಸ್ ಜರ್ಮನಿಯ ರೈನ್ ಪ್ರದೇಶದ ಟ್ರಿಯರ್ ನಗರದಲ್ಲಿ 1818ರ ಮೇ  5ರಂದು ಜನಿಸಿದರು. ಇವರ ತಂದೆ ಒಬ್ಬ ಯಶಸ್ವೀ ವಕೀಲರಾಗಿದ್ದರು. ಜನ್ಮತಃ ಯೆಹೂದ್ಯರಾಗಿದ್ದ  ಕಾರ್ಲ್ ಮಾರ್ಕ್ಸ್
ಹುಟ್ಟಿದ 6 ವರ್ಷಗಳ ಅನಂತರ ಪ್ರಾಟೆಂಸ್ಟೆಂಟ್ ಮತದ ಅನುಯಾಯಿಯಾದರು. 

ಕಾರ್ಲ್ ಮಾರ್ಕ್ಸ್ ಆರಂಭದ ಶಿಕ್ಷಣ ಟ್ರಿಯರ್ ಪಟ್ಟಣದ ಮೇಲು ದರ್ಜೆಯ ಜಿಮ್ನಾಸಿಯಮ್ ವಿದ್ಯಾಲಯದಲ್ಲಿ ನಡೆಯಿತು. ಮುಂದೆ ಬಾನ್‍ನಲ್ಲೂ,  ಬರ್ಲಿನ್ನಿನಲ್ಲೂ ವಿದ್ಯಾಭ್ಯಾಸ ಮುಂದುವರಿಸಿ ನ್ಯಾಯಶಾಸ್ತ್ರ, ಇತಿಹಾಸ ಮತ್ತು ತತ್ತ್ವಶಾಸ್ತ್ರ ಕಲಿತರು. ಮಾರ್ಕ್ಸ್ ತಮ್ಮ ಶಾಲಾಭ್ಯಾಸವನ್ನು ಕಡೆಗಣಿಸದಿದ್ದರೂ ಅಂದಿನ ಪದ್ಧತಿಯ ಪ್ರಕಾರ ವಿದ್ಯಾರ್ಥಿಗಳು ಬಾಯಿಪಾಠಮಾಡಬೇಕಾಗಿದ್ದ ಧಾರ್ಮಿಕ ಗ್ರಂಥಗಳ ಬಗೆಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಡೆಮೋಕ್ರಿಟಸ್ ಮತ್ತು ಎಪಿಕ್ಯೂರಸ್ಸರ ತತ್ತ್ವಶಾಸ್ತ್ರದ ಮೇಲೆ ಪ್ರಬಂಧ ರಚಿಸಿ ಯೇನಾ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿ ಪಡೆದರು (1841). ಈ ಪ್ರಬಂಧದ ಪ್ರಕಾರ ಮಾರ್ಕ್ ಹೆಗಲ್ಲನ ಭಾವನಾವಾದೀ ಅನುಯಾಯಿಯಾಗಿದ್ದಿರಬಹುದೆಂದು ಅನ್ನಿಸಿದರೂ ಹೆಗಲ್ಲನ ವಿಚಾರಧಾರೆ ಮಾರ್ಕ್ಸ್ ಅವರ ಪೂರ್ಣ ಒಪ್ಪಿಗೆ ಪಡೆದಿರಲಿಲ್ಲವೆಂದು ವೇದ್ಯವಾಗುತ್ತದೆ.

ವಿಶ್ವವಿದ್ಯಾಲಯದ ಪದವಿ ಪಡೆದ ಬಳಿಕ ಮಾರ್ಕ್ಸ್ ಪ್ರಾಧ್ಯಾಪಕ ವೃತ್ತಿ ಅವಲಂಬಿಸಲು ಬಯಸಿದರು. ಆದರೆ ಅಂದಿನ ದಿನಗಳಲ್ಲಿ ಜರ್ಮನಿಯು ಪ್ರತಿಗಾಮೀ ನೀತಿ ತಳೆದಿದ್ದುದರಿಂದ ಇದು ಸಾಧ್ಯವಾಗಲಿಲ್ಲ. 

1842ರಲ್ಲಿ  ಮಾರ್ಕ್ಸ್ ರೈನ್ ಪತ್ರಿಕೆಯ ರೈನಿಷ್ ತ್ಸೈತೂಂಗ್ ಸಂಪಾದಕರಾಗಿ ಕೆಲಸ ಆರಂಭಿಸಿದರು.  ಇದರಲ್ಲಿ ಪ್ರಕಟವಾದ ಕ್ರಾಂತಿಕಾರಿ ಮತ್ತು ಪ್ರಜಾಸತ್ತಾತ್ಮಕ ಲೇಖನಗಳಿಂದ ಕೆರಳಿದ ಸರ್ಕಾರ 1843 ಜನವರಿಯಲ್ಲಿ ಈ ಪತ್ರಿಕೆಯನ್ನು ನಿಷೇಧಿಸಿತು.  ಮಾರ್ಕ್ಸ್ ಸಂಪಾದಕರ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಪತ್ರಿಕೋದ್ಯಮದಲ್ಲಿ ತೊಡಗಿದ್ದಾಗ ಮಾರ್ಕ್ಸ್ ತಮಗೆ ರಾಜ್ಯಶಾಸ್ತ್ರ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ಸಾಕಷ್ಟು ಪರಿಣತಿ ಇಲ್ಲವೆಂದು ಮನಗಂಡು ಅವನ್ನು ಗಾಢವಾಗಿ ಅಭ್ಯಸಿಸತೊಡಗಿದರು. 1843ರಲ್ಲಿ ಮಾರ್ಕ್ಸ್ ತಮ್ಮ ಬಾಳಗೆಳತಿಯಾದ ಜೆನ್ನಿಯನ್ನು ಮದುವೆಯಾದರು. ಇವರದೊಂದು ತುಂಬಾ ಅನ್ಯೋನ್ಯ ದಾಂಪತ್ಯ.  

ಮಾರ್ಕ್ಸ್ ದಂಪತಿಗಳು ವಾಮ ಹೆಗಲಿಯನ್ ಆಗಿದ್ದ ಆರ್ನಾಲ್ಡ್ ರೂಬ್ ಜೊತೆಗೂಡಿ ಪ್ಯಾರಿಸ್ಸಿನಲ್ಲಿ ತಮ್ಮ ಮುಂದಿನ ಚಟುವಟಿಕೆಗಳನ್ನು ಆರಂಭಿಸಿದರು. ಇಲ್ಲಿ ಜರ್ಮನ್-ಫ್ರೆಂಚ್ ವಾರ್ಷಿಕ ಎಂಬ ನಿಯತಕಾಲಿಕೆಯನ್ನು ಪ್ರಕಟಿಸತೊಡಗಿದರು. ಇದನ್ನು ಜರ್ಮನಿಯಲ್ಲಿ ರಹಸ್ಯವಾಗಿ ಹಂಚಲು ಕಷ್ಟಸಾಧ್ಯವಾದ್ದರಿಂದ ಮೊದಲ ಸಂಚಿಕೆ ಪ್ರಕಟವಾದ ಕೆಲವೇ ದಿನಗಳಲ್ಲಿ ನಿಲ್ಲಿಸಬೇಕಾಯಿತು.

ಅಂದಿನ ದಿನಗಳಲ್ಲಿ ಫ್ರಾನ್ಸ್ ಬೂರ್ಜ್ವಾ ಪದ್ಧತಿಯು ಸಮಾನತೆ ಸ್ವಾತಂತ್ರ್ಯ ಹಾಗೂ ಭ್ರಾತೃತ್ವಗಳ ಉನ್ನತ ಧ್ಯೇಯಗಳನ್ನು ಮರೆತು ಸ್ವಾರ್ಥ ಸಂಪತ್ಸಂಗ್ರಹಣೆಯಲ್ಲಿ ಆಸಕ್ತಿ ವಹಿಸಿತ್ತು. ಇಂಥ ಬೂರ್ಜ್ವಾ ಸಮಾಜವನ್ನು ಯುರೋಪಿನ ಇತರ ರಾಷ್ಟ್ರಗಳಿಂದ ಹೆಚ್ಚಾಗಿ ಇಲ್ಲಿ ಟೀಕೆಗೊಳಪಡಿಸಲಾಗಿತ್ತು. ಸಮಾಜವಾದೀ ಚಿಂತನೆಗಳು ಪ್ರಥಮವಾಗಿ ಇಲ್ಲೇ ಕಾಣಿಸಿಕೊಂಡಿತು. ಮಾರ್ಕ್ಸ್ ಕೂಡ ಇಲ್ಲೇ ವೈಜ್ಞಾನಿಕ ಸಮಾಜವಾದವನ್ನು ರೂಪಿಸಿಕೊಂಡರು.

ಸಿದ್ಧಾಂತವನ್ನು ವಸ್ತುಸ್ಥಿತಿಯೊಂದಿಗೆ ಕೂಡಿಸಲು ಮಾರ್ಕ್ಸ್ ಜರ್ಮನಿಯ ಕೈ ಕಸುಬುದಾರರ ಮತ್ತು ಫ್ರೆಂಚ್ ಕಾರ್ಮಿಕರ ಜೊತೆಗೂಡಿ ಕೆಲಸ ಮಾಡಲು ಉಪಕ್ರಮಿಸಿದರು. ಕ್ರಾಂತಿಕಾರಿ ಕಾರ್ಮಿಕರೊಡನೆ ಕೆಲಸಮಾಡಲು ನಿರತರಾದಾಗ ಶ್ರಮಜೀವಿಗಳಲ್ಲಿದ್ದ ನೈತಿಕ ಶಕ್ತಿ ಜ್ಞಾನದಾಹ ಮತ್ತು ಉದಾತ್ತ ಮಾನವೀಯತೆಗಳಿಂದ ಪ್ರಭಾವಿತರಾದರು. ಅವರಿಗೆ ಫ್ರೆಡರಿಕ್ ಎಂಗೆಲ್ಸ್ ಪರಿಚಯವಾದದ್ದು ಇಲ್ಲಿಯೇ. ಇವರಿಬ್ಬರೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲುಗೊಂಡದ್ದರಿಂದ ಇವರನ್ನು ಫ್ರಾನ್ಸ್ ಇಂದ ಹೊರದೂಡಲಾಯಿತು. ಇಬ್ಬರೂ ಬ್ರಸ್ಸೆಲ್ಸ್ ಪಟ್ಟಣಕ್ಕೆ ತೆರಳಿದರು. ಅಲ್ಲಿ ಕಮ್ಯುನಿಸ್ಟ್ ಲೀಗ್ ಎಂಬ ರಹಸ್ಯ ಸಂಸ್ಥೆ ಸೇರಿ ಅದರ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಈ ಸಂಸ್ಥೆಯ ಕೋರಿಕೆಯಂತೆ ಇವರು ಹೊಸ ಜಾಗತಿಕ ಮನೋಧರ್ಮದಿಂದ ಕೂಡಿರುವ ಮತ್ತು ವಿಶ್ವ ಶ್ರಮಜೀವಿಗಳ ಕ್ರಾಂತಿಕಾರಿ ಪಾತ್ರ ನಿರೂಪಿಸುವ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ರಚಿಸಿದರು. ಈ ವೇಳೆಯಲ್ಲಿ ಬ್ರಸ್ಸೆಲ್ಸ್ ನಗರದಲ್ಲಿದ್ದ ಜರ್ಮನ್ ವಲಸೆಗಾರರನ್ನು ಬೆಲ್ಜಿಯಮ್ಮಿನ ಸರ್ಕಾರ ತೀವ್ರ ಪ್ರತಿಬಂಧಕಗಳಿಗೆ ಒಳಪಡಿಸಿತ್ತು. ಇವನ್ನು ಪ್ರತಿಭಟಿಸಲು ಜರ್ಮನ್ ಕ್ರಾಂತಿಕಾರರು ಸಿದ್ಧರಾದರು. 

1848ರ ಫೆಬ್ರವರಿ ಕ್ರಾಂತಿ ಆರಂಭವಾದಾಗ ಮಾರ್ಕ್ಸ್ ಅವರನ್ನು ಬೆಲ್ಜಿಯಮ್ಮಿನಿಂದ ಹೊರದೂಡಲಾಯಿತು. ಮುಂದೆ ಇವರು ಕೊಲೋನ್ ಪಟ್ಟಣ ಸೇರಿ  'ಹೊಸ ರೈನ್ ಪತ್ರಿಕೆ' ಸಂಪಾದಕರಾದರು. ಈ ಪತ್ರಿಕೆಯ ಮೂಲಕ ಕ್ರಾಂತಿಕಾರಿ ಚಟುವಟಿಕೆಗಳಿಗೆ ಇತ್ತ ಬೆಂಬಲದ ಕಾರಣವಾಗಿ ಜರ್ಮನಿಯಿಂದಲೂ ಗಡಿಪಾರು ಮಾಡಲಾಯಿತು. ಮತ್ತೆ ಪ್ಯಾರಿಸ್ಸಿಗೆ ತೆರಳಿದರು. ಅಲ್ಲಿಯೂ ಅಂದಿನ ಸರ್ಕಾರ ಇವರನ್ನು ಉಳಿಯ ಬಿಡಲಿಲ್ಲ. ದೇಶಭ್ರಷ್ಟ ಮಾರ್ಕ್ಸ್ ಮುಂದೆ ಲಂಡನ್ ತಲುಪಿ ಜೀವನದ ಕೊನೆಯ ತನಕವೂ ಅಲ್ಲಿಯೇ ಇದ್ದರು. 

ರಾಜಕೀಯ ದೇಶಭ್ರಷ್ಟ ಮಾರ್ಕ್ಸ್ ಜೀವನ ಅಸಂಖ್ಯ ಸಂಕಷ್ಟಗಳಿಂದ ಕೂಡಿದ್ದಿತು ಮತ್ತು ಎಂಗೆಲ್ಸ್ ನೆರವಿನಿಂದ ಲಂಡನ್ನಿನಲ್ಲಿ ತಮ್ಮ ಬದುಕು ಸಾಗಿಸಿದರು. ಇಲ್ಲಿಯೇ ಇವರ ಮೇರುಕೃತಿಯಾದ 'ಬಂಡವಾಳ' (ದಾಸ್ ಕ್ಯಾಪಿಟಲ್) ರಚನೆ ಆದದ್ದು.

ಮಾರ್ಕ್ಸ‍್ ವಾದ ಒಂದು ಸಮಗ್ರ ವಿಶ್ವದೃಷ್ಟಿ. 19ನೇ ಶತಮಾನದ ಮೂರು ಪ್ರಧಾನ ಸೈದ್ಧಾಂತಿಕ ವಿಚಾರಧಾರೆಗಳಾದ ಜರ್ಮನಿಯ ತತ್ವಶಾಸ್ತ್ರ, ಇಂಗ್ಲೆಂಡಿನ ರಾಜಕೀಯ ಅರ್ಥಶಾಸ್ತ್ರ ಮತ್ತು ಫ್ರಾನ್ಸಿನ ಸಮಾಜವಾದಿ ಚಿಂತನೆ ಇವನ್ನು ಮಾಕ್ರ್ಸ್ ಗಾಢವಾಗಿ ಅಭ್ಯಾಸ ಮಾಡಿ ಮತ್ತು ವಿಮರ್ಶಿಸಿ,  ತಮ್ಮ ಸಿದ್ಧಾಂತವನ್ನು ರಚಿಸಿದರು. ವರ್ಗ ಹೋರಾಟದ ಅನುಭವವನ್ನೆಲ್ಲ ಒಂದುಗೂಡಿಸಿ ಅದರ ಆಧಾರದ ಮೇಲೆ ಹೊಸ ಸಮಾಜದ ರೂಪುರೇಷೆಗಳನ್ನು ನಿರೂಪಿಸಿದರು. ಮಾರ್ಕ್ಸ್ ‍ವಾದದ ತಿರುಳು ತತ್ವಶಾಸ್ತ್ರ. ಇದು ದೈವ, ಆತ್ಮ ಮುಂತಾದ ಅಲೌಕಿಕ ವಿಷಯಗಳನ್ನು ಪರಿಶೀಲಿಸುತ್ತದೆ ಎಂಬುದು ಸಾಮಾನ್ಯ ಭಾವನೆ. ಆದರೆ ತತ್ವಶಾಸ್ತ್ರ ಕೇವಲ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಶಾಸ್ತ್ರವಲ್ಲ, ಬದಲು ಇದು ಪ್ರಕೃತಿ, ಸಮಾಜ ಮತ್ತು ಮಾನವನ ಬುದ್ಧಿ ಪ್ರಪಂಚ ಇವನ್ನು ಅರ್ಥ ಮಾಡಿಕೊಳ್ಳುವ ಮತ್ತು ಬದಲಾಯಿಸುವ ರೀತಿಯನ್ನೂ ಇವನ್ನು ಪ್ರಭಾವಿಸುವ ಸಾಮಾನ್ಯ ನಿಯಮಗಳನ್ನೂ ಪರಿಶೀಲಿಸುತ್ತದೆ.  ಹೀಗೆ ಅವರ ಸಿದ್ದಾಂತ ಸಾಗುತ್ತದೆ.

1860 ಮತ್ತು 1870 ರ ನಡುವೆ ನಡೆಯುತ್ತಿದ್ದ ಪ್ರಜಾಸತ್ತಾತ್ಮಕ ಚಟುವಟಿಕೆಗಳಲ್ಲಿ ಮಾರ್ಕ್ಸ್ ನವಚೈತನ್ಯದಿಂದ ಪಾಲುಗೊಂಡರು. 1864ರಲ್ಲಿ ಸ್ಥಾಪಿತವಾದ ಪ್ರಥಮ ಇಂಟರ್‍ನ್ಯಾಷನಲ್‍ನಲ್ಲಿ ಕಾರ್ಮಿಕ ವರ್ಗದ ಮುನ್ನಡೆಗೆ ಶ್ರಮವಹಿಸಿ ಉತ್ಸಾಹದಿಂದ ದುಡಿದರು. ಈ ಸಂಸ್ಥೆಯಲ್ಲಿ ವಹಿಸಿದ ಶ್ರಮದ ಕಾರಣವಾಗಿ ಇವರ ಆರೋಗ್ಯ ಹದಗೆಟ್ಟಿತು. ಇಂಥ ದುರ್ಭರ ಪರಿಸ್ಥಿತಿಯಲ್ಲೂ ಇವರು ತಮ್ಮ 'ಬಂಡವಾಳ' ಕೃತಿ ರಚನೆಯನ್ನು ಮುಂದುವರಿಸಿದರು. 
ಆದರೆ ಇವರನ್ನು ತೀವ್ರವಾಗಿ ಬಾಧಿಸುತ್ತಿದ್ದ ಅನಾರೋಗ್ಯ ಈ ಕೃತಿಯ ಮೊದಲ ಸಂಪುಟದ ವಿನಾ ಇತರ ಎರಡು ಸಂಪುಟಗಳನ್ನು ಪೂರೈಸಲು ಅವಕಾಶ ಕೊಡಲಿಲ್ಲ. 

ಕಾರ್ಲ್ ಮಾರ್ಕ್ಸ್ 1883ರ ಮಾರ್ಚ್ 14ರಂದು ಲಂಡನ್ನಿನಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದಂತೆಯೇ ತಮ್ಮ ಕೊನೆಯುಸಿರೆಳೆದರು.

ಡಾ. ಸಿದ್ಧಲಿಂಗಯ್ಯನವರ
ಮಾರ್ಕ್ಸ್ ಕುರಿತ ಕವಿತೆ ಇಲ್ಲಿ ನೆನಪಾಗುತ್ತಿದೆ:

ಮರೆಮಾಚಿ ಹೋಗಿದ್ದ ಜಗದ ನಿಜಗಳನೆಲ್ಲ
ಅರಿಯಲೆಂದಡಿಯಿಟ್ಟೆ ಮುಳ್ಳುಗಳ ಮೇಲೆ
ನಿದ್ದೆಮಂಪರುಕವಿದ ಮನುಕುಲವನೆಚ್ಚರಿಸಿ
ದುಡಿವ ಜನತೆಗೆ ನೀನು ಕಣ್ಣಾಗಿ ನಿಂತೆ

ದಿಕ್ಕೆಟ್ಟ ಹಕ್ಕಿಯೊಂದಲೆವಂತೆ ಕಾಡುಗಳ
ಕಷ್ಟಗಳ ಕತ್ತಲೆಯ ಕಂಡೆ ನೀನು
ಜ್ಞಾನಗೊಂಡಾರಣ್ಯ ಹೊಕ್ಕವನು ಹೊರಬಂದೆ
ಭೂಮಿ ಬೆಳಗಿಸಿದಂಥ ಬೆಳ್ಳಿಚುಕ್ಕೆ

ಗಿರಣಿಯಂತ್ರದ ಕೆಳಗೆ ಕೈಜಜ್ಜಿ ಹೋದವನು,
ಮೈಮಾರಿಕೊಳುತಿರುವ ಬಡವೆ ಹೆಣ್ಣು
ಛಾವಣಿಯ ಕುಸುದವನು, ಹಸಿದು ಕಂಗೆಟ್ಟವನು
ಇವರೊಳಗೆ ನಿನ್ನನ್ನು ಕಂಡುಕೊಂಡೆ

ತೊಟ್ಟಚಿಂದಿಯ ಕಂಡು ತೇಪೆಹಾಕುವ ಬದಲು
ಹೊಸಬಟ್ಟೆಯನು ತರುವ ಕನಸ ಕಂಡೆ
ನೊಂದ ಎದೆಯಲಿ ನಗೆಯ ಹೂವ ಅರಳಿಸಲೆಂದು
ಹೋರಾಟಗಳ ಕಟ್ಟಿ ಕನವರಿಸಿದೆ

ಬಿಗಿದ ಕೋಳಗಳನ್ನು ಕಡಿದೆಸೆವ ಬಿಡುಗಡೆಯ
ನಿನ್ನ ಕನಸುಗಳಿಂದು ಅರಳುತಿಹವು
ನ್ಯಾಯ ಕೇಳಲು ಹೊರಟ ಜನರ ಮೆರವಣಿಗೆಯಲಿ
ಬಂದು ಮುನ್ನಡೆಸುವುದು ನಿನ್ನ ನೆನಪು

On the birth anniversary of Karl Marx

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ