ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶ್ವಿನಿ ಸತೀಶ್


 ಅಶ್ವಿನಿ ಸತೀಶ್ 


ಇಂದು ಆತ್ಮೀಯರಾದ ಸಂಗೀತ ವಿದುಷಿ ಅಶ್ವಿನಿ ಸತೀಶ್ ಅವರ ಜನ್ಮದಿನ. ಭಾರತದಲ್ಲಷ್ಟೇ ಅಲ್ಲದೆ ಹಿಂದೆ ತಾವು ನೆಲೆಸಿದ್ದ ದುಬೈ, ಸಿಂಗಪೂರ್ ಪ್ರದೇಶಗಳು ಮತ್ತು ವಿಶ್ವದ ಅನೇಕ ಕಡೆಗಳಲ್ಲಿ ತಮ್ಮ ನೆಚ್ಚಿನ ಸಂಗೀತ ಕ್ಷೇತ್ರದ ಕಂಪನ್ನು ವಿಶಿಷ್ಟ ರೀತಿಯಲ್ಲಿ ಪಸರಿಸಿದ ಕೀರ್ತಿ ಅವರದ್ದು. ಮೂಲತಃ ಶಿವಮೊಗ್ಗದವರಾದ ಅಶ್ವಿನಿ ಸತೀಶ್ ಅವರು ಜನಿಸಿದ ದಿನ ಜೂನ್ 22.

ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ ಹಾಗೂ ಲಘು ಸಂಗೀತ ಕ್ಷೇತ್ರಗಳಲ್ಲಿ ಉನ್ನತ ಶ್ರೇಣಿಯ ಕಲಾವಿದರಾದ ಅಶ್ವಿನಿ ಸತೀಶ್ ಅವರು ಮಹಾನ್ ಸಂಗೀತ ಕಲಾವಿದೆ ಹಾಗೂ ಸಂಗೀತ ಗುರು ಡಾ.ಟಿ. ಎಸ್. ಸತ್ಯವತಿ ಅವರ ಹೆಸರುವಾಸಿ ಶಿಷ್ಯರಲ್ಲೊಬ್ಬರು. ಆಕಾಶವಾಣಿ ಹಾಗೂ ಕಿರುತೆರೆಯ ಹಲವಾರು ಚಾನೆಲ್‌ಗಳಲ್ಲಿ ಹಾಗೂ ವಿವಿಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಹೆಸರಾದ ಅಶ್ವಿನಿ ಸತೀಶ್ ಅವರು ಮುಂದೆ ಭಾರತದ ವಿವಿದೆಡೆಗಳಲ್ಲಷ್ಟೇ ಅಲ್ಲದೆ ದುಬೈ, ಬರ್ಮಿಂಗ್‌ಹ್ಯಾಮ್, ಸಿಂಗಪುರ, ಮೆಲ್ಬೋರ್ನ್ ಮುಂತಾದ ಕಡೆಗಳಲ್ಲೆಲ್ಲಾ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ನಿರಂತರವಾಗಿ ಅಶ್ವಿನಿ ಸತೀಶರು ತಮ್ಮ ಸಂಗೀತಾಭಿಮಾನಿ ಬಳಗಕ್ಕೋಸ್ಕರ ಸಂಗೀತವನ್ನು ಉಣಬಡಿಸುತ್ತಾ ಬಂದಿರುವ ಅಶ್ವಿನಿ ಅವರಿಗೆ ಪ್ರತಿಷ್ಟಿತ ‘ಅನನ್ಯ’ ಸಂಗೀತ ಯುವ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. ತಮ್ಮ ವೈವಿಧ್ಯಮಯ ಸಂಗೀತ ಸಾಧನಾ ಪ್ರಯೋಗಗಳಲ್ಲಿ ನಿರಂತರ ಕ್ರಿಯಾಶೀಲರಾದ ಅಶ್ವಿನಿ ಸತೀಶ್ ಅವರು ಉಸ್ತಾದ್ ಫಯಾಜ್ ಖಾನ್ ಅವರ ಹಿಂದೂಸ್ಥಾನಿ ಸಂಗೀತದೊಂದಿಗೆ ತಮ್ಮ ಕರ್ನಾಟಕ ಸಂಗೀತದ ಜುಗಲ್ಬಂದಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದಾರೆ. ಮಹತ್ವದ ವಾಗ್ಗೇಯಕಾರರ ಕೃತಿವೈಶಿಷ್ಟತೆಗಳನ್ನು ಆಧರಿಸಿ ನಿರಂತರಾಗಿ ಕಾರ್ಯಾಗಾರಗಳನ್ನೂ ಆಯೋಜಿಸುತ್ತಾ ಬಂದಿದ್ದಾರೆ. 

ಭಾರತದಲ್ಲೇ ಇರಲಿ, ವಿದೇಶದಲ್ಲೇ ಇರಲಿ ತಾವು ನೆಲೆ ನಿಂತಲ್ಲೆಲ್ಲಾ ಸಮಾನಾಸಕ್ತರೊಡಗೂಡಿ ಸಂಗೀತವನ್ನು ಆಸಕ್ತರಿಗೆ ಕಲಿಸುವುದರ ಜೊತೆಗೆ ದಾಸ ಸಾಹಿತ್ಯ ಸಂಗೀತೋತ್ಸವಗಳ ಆಯೋಜನೆ, ಸಂಗೀತ ಶಿಬಿರಗಳ ಆಯೋಜನೆ, ಪ್ರಸಿದ್ಧ ಕಲಾವಿದರ ಸಂಗೀತ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಂದ ಸಂಗೀತದ ಕಂಪನ್ನು ನಿರಂತರವಾಗಿ ಪಸರಿಸುತ್ತಿರುವ ವಿದುಷಿ ಅಶ್ವಿನಿ ಸತೀಶ್ ಅವರ ಕಾಯಕ ಶ್ಲಾಘನೀಯವಾಗಿದೆ. ಅವರ ಸಂಗೀತದ ಕಂಪು ನಿರಂತರವಾಗಿ ವಿಸ್ತರಿಸುತ್ತಿರಲಿ ಎಂದು ಹಾರೈಸುತ್ತಾ ಜನ್ಮದಿನದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Hearty birthday  wishes to musician  Ashwini Satish Madam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ