ಬಿ. ಪುಟ್ಟಯ್ಯ
ಬಿ. ಪುಟ್ಟಯ್ಯ
ಬಿ. ಪುಟ್ಟಯ್ಯ ಕನ್ನಡಕ್ಕಾಗಿ ದುಡಿದ ಮಹನೀಯರಲ್ಲಿ ಒಬ್ಬರು. ಮದ್ರಣ ಕಲೆಯಲ್ಲಿ ಮಹಾನ್ ಪರಿಣತಿ ಸಾಧಿಸಿದ ಪುಟ್ಟಯ್ಯನವರು ಸರಕಾರಿ ಮುದ್ರಣಾಲಯದ ಪ್ರಾರಂಭಿಕ ಕಾರ್ಯ ನಿರ್ವಹಣೆಯಲ್ಲಿ ನೀಡಿದ ಕೊಡುಗೆ ಅಪಾರ. ಮಹಾನ್ ಭೂವಿಜ್ಞಾನಿ ಮತ್ತು ವಿಜ್ಞಾನ ಲೇಖಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಪಿ. ರಾಧಾಕೃಷ್ಣ ಅವರು ಪುಟ್ಟಯ್ಯನವರ ಸುಪುತ್ರರು.
ಪುಟ್ಟಯ್ಯನವರು 1879ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಮರಿಚೆನ್ನಪ್ಪ. ತಾಯಿ ತಿಮ್ಮಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು.
ಪುಟ್ಟಯ್ಯನವರು ಪದವಿ ಗಳಿಸಿದರೂ ನೌಕರಿ ಸಿಗದೆ ಬಡತನದ ಜೀವನವಾಯಿತು. ಕಡೆಗೆ ಪೊಲೀಸ್ ಇಲಾಖೆಯಲ್ಲಿ ಏಳನೆಯ ದರ್ಜೆ ಗುಮಾಸ್ತೆ ಕೆಲಸ ದೊರೆಯಿತು. 1903ರಲ್ಲಿ ಬಡ್ತಿ ದೊರೆತು ಪೊಲೀಸ್ ಹೆಡ್ಮುನ್ಷಿಯಾಗಿ ಚಿತ್ರದುರ್ಗಕ್ಕೆ ವರ್ಗವಾಯಿತು. ಹನ್ನೆರಡು ವರ್ಷದ ಲೆಕ್ಕಪತ್ರಗಳನ್ನು ಸರಿಪಡಿಸಿ ಡೆಪ್ಯುಟಿ ಕಮೀಷನರಿಂದ ಮೆಚ್ಚುಗೆ ಪಡೆದರು.
ಬಿ. ಪುಟ್ಟಯ್ಯ 1906ರಲ್ಲಿ ಒಕ್ಕಲಿಗರ ಸಂಘ ಸ್ಥಾಪನೆ ಮಾಡಿದರು. ದಿವಾನರ ಅಪ್ಪಣೆಯ ಮೇರೆಗೆ ಸಂಬಳವಿಲ್ಲದೆ ರಜೆ ದೊರಕಿಸಿಕೊಂಡು ಸಂಘದ ಕಾರ್ಯದರ್ಶಿಯಾಗಿ, ಒಕ್ಕಲಿಗರ ಪತ್ರಿಕೆಯ ಸಂಪಾದಕರಾಗಿ, ಮುದ್ರಣಾಲಯದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಣೆ ಮಾಡಿದರು.
ಸರಕಾರದ ಮುದ್ರಣ ಶಾಖೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಪುಟ್ಟಯ್ಯನವರ ಜೊತೆಯಲ್ಲಿ ಆಯ್ಕೆಯಾದವರು ಶ್ರೀನಿವಾಸ ಅಯ್ಯಂಗಾರ್ಯರು. ಮುದ್ರಣ ಕಲೆಯಲ್ಲಿ ಉಚ್ಚ ರೀತಿಯ ಶಿಕ್ಷಣ ಪಡೆಯಲು ಇಬ್ಬರೂ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಮುದ್ರಣ ಕಲೆಯಲ್ಲಿ ಪರಿಣತರಾಗಿ ಪ್ರಶಸ್ತಿ ಪಡೆದು 1915ರಲ್ಲಿ ಸ್ವದೇಶಕ್ಕೆ ಹಿಂದಿರುಗಿದರು. ವಿದೇಶದಲ್ಲಿದ್ದಾಗ ತಮ್ಮ ಅನುಭವಗಳನ್ನು ಒಕ್ಕಲಿಗರ ಪತ್ರಿಕೆಗಾಗಿ PUTTAIAH’S WEEKLY ಎಂಬ ಕಾಲಂನಿಂದ ಪ್ರಕಟಿಸಿದರು. ಅಭಿವೃದ್ಧಿ ಸಂದೇಶ ಎಂಬ ಹೆಸರಿನಿಂದ 1921ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡಿದರು. ಸರಕಾರಿ ಮುದ್ರಣಾಲಯದ ಅಸಿಸ್ಟೆಂಟ್ ಸೂಪರಿಂಟೆಂಡೆಂಟರಾಗಿ, ಸೂಪರಿಂಟೆಂಡೆಂಟರಾಗಿ ಕಾರ್ಯ ನಿರ್ವಹಿಸಿ 1934ರಲ್ಲಿ ನಿವೃತ್ತರಾದರು.
ಪುಟ್ಟಯ್ಯನವರು ಮುದ್ರಣ ಕಲೆಯ ಬಗ್ಗೆ ಬರೆದ ಪುಸ್ತಕ 'ಮುದ್ರಣ ಕಸುಬು' (1915). ರಬಕವಿಯಲ್ಲಿ ನಡೆದ 28ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋದ ಪುಟ್ಟಯ್ಯನವರು ಹಠಾತ್ 1944ರ ಡಿಸೆಂಬರ್ 31ರಂದು ನಿಧನರಾದರು.
ಪುಟ್ಟಯ್ಯನವರ ಜೀವನ ವೃತ್ತಾಂತವನ್ನು ಅವರ ಮಗ ಡಾ. ಬಿ.ಪಿ. ರಾಧಾಕೃಷ್ಣರವರು ಬರೆದ ‘ನನ್ನ ತಂದೆ’ ಕೃತಿ 1948ರಲ್ಲಿ ಪ್ರಕಟಗೊಂಡಿತು.
On the birth anniversary of writer and among the first pioneers in Printing technology B. Puttaiah
ಕಾಮೆಂಟ್ಗಳು