ಮಿಲಿಯನ್ ಮೆಮೊರಿ
ಮಿಲಿಯನ್ ಮೆಮೊರೀಸ್
ಇಂದು ನನ್ನ 'sallapa.com’ ಎಂಬ ನನ್ನ 'ಸಂಸ್ಕೃತಿ ಸಲ್ಲಾಪ' ತಾಣ, ಹತ್ತು ಲಕ್ಷ ವೀಕ್ಷಣೆಗಳನ್ನು ಮೀರಿದೆ ಎಂಬುದನ್ನು ಅಧಿಕೃತ ಗೂಗಲ್ ಅಂಕಿ ಅಂಶಗಳು ತೋರಿವೆ. ಇಂಗ್ಲಿಷಿನಲ್ಲಿ ಮಿಲಿಯನ್ ಎನ್ನುವ ದೊಡ್ಡದಾಗಿ ಕಾಣುವ ಸಂಖ್ಯೆಗೆ ನನ್ನದೊಂದು ಕಾಯಕ ಬಂದು ನಿಂತಿರುವುದು ನನಗೇ 'ಹ್ಞಾ 🤔’ ಅನಿಸಿದೆ.
ಸಂಖ್ಯೆ ಎಂಬುದು ಒಂದು ಸಂಖ್ಯೆ ಅಷ್ಟೇ. ಅದು ಮೌಲ್ಯದ ಸಂಕೇತ ಎಂದೇನೂ ಅಲ್ಲ. ಹತ್ತು ಲಕ್ಷ ಭೇಟಿ ಅಂದರೆ ಹತ್ತು ಲಕ್ಷ ಜನ ಬಂದಿದ್ದರು ಎಂದರ್ಥ ಅಲ್ಲ. ನಾನು ಫೇಸ್ಬುಕ್ನಲ್ಲಿ ನನ್ನ 'ಕನ್ನಡ ಸಂಪದ' ಪುಟವನ್ನು 45,೦೦೦ ಜನ ಲೈಕ್ ಮಾಡಿದರು ಎಂದು ಜಂಭದಿಂದ ಬರೆದರೆ ಆ ಬರಹಕ್ಕೆ ಹತ್ತಿಪ್ಪತ್ತು ಲೈಕ್ ಬರದೆ ಇರುವುದು ಕೂಡಾ ಸತ್ಯ. ನನಗೆ ಈ ಸಂಖ್ಯೆಗಳ ಹಿಂದೆ ನನ್ನ ಕಥೆ- ವ್ಯಥೆ; ಸಂತಸ-ದುಃಖಗಳು ಇರುವುದು ಮನಃಕ್ಲೇಶಕಾರಿ ಎಂಬ ಅರಿವಿರುವುದರಿಂದಲೇ ಇಷ್ಟು ಸುದೀರ್ಘಕಾಲ ಸೋಷಿಯಲ್ ಮೀಡಿಯದಲ್ಲಿ ಸಮಸ್ಥಿತಿಯಲ್ಲಿರುವುದು ಸಾಧ್ಯವಾಗಿದೆ.
ಈ ಎಲ್ಲವುಗಳ ನಡುವೆ "ಜನ ಒಂದು ವೆಬ್ ಸೈಟ್ ಅಂತ ಒಂದು ಕಡೆ ಬರುತ್ತಾರೆ ಅಂದರೆ
- ಅವರಿಗೆ ಇಲ್ಲೇನೊ ಇದೆ;
- ತಮಗೆ ಏನಾದರೂ ವಿಚಾರ ಬೇಕಾದರೆ ಇಲ್ಲಿ ಸಿಗಬಹದೇನೊ ಎಂಬ ಒಂದು ನಿರೀಕ್ಷೆ ಅವರಲ್ಲಿರುವುದರಿಂದ ಆ ತಾಣಕ್ಕೆ ಬಂದಿರುತ್ತಾರೆ;
- ಏನೋ ಹುಡುಕುವಾಗ ಅದು ಇಲ್ಲಿ ಕಂಡು ಬಂದಿರುತ್ತಾರೆ
ಇಲ್ಲದಿದ್ದರೆ ಸುಮ್ಮಸುಮ್ಮನೆ ಜನ ಇಲ್ಲಿಗೆ ಬಂದಿರುವುದಿಲ್ಲ" ಎಂಬ ಸ್ಪಷ್ಟತೆಯಿದೆ. ಈ ನಿಟ್ಟಿನಲ್ಲಿ ಈ ಹತ್ತು ಲಕ್ಷ ಭೇಟಿಗಳು, ನನ್ನ ಪರಿಶ್ರಮಗಳಿಗೂ ಒಂದು ಅರ್ಥ ಇದೆ ಎಂಬ ಅನಿಸಿಕೆ ಮೂಡಿಸಿವೆ.
ನಾನು ಬ್ಲಾಗ್ ಲೋಕಕ್ಕೆ ಬಂದದ್ದು ಫೆಬ್ರವರಿ 2010ರಲ್ಲಿ. ಆಗ ಬ್ಲಾಗಿಗೆ 'ಆತ್ಮೀಯ ವಿಹಾರ' ಎಂದು ಹೆಸರಿಟ್ಟಿದ್ದೆ. ಅದು ಇದೆ ಎಂದು ಯಾರಿಗೂ ತಿಳಿಯಲಿಲ್ಲ. ಹಲವು ವರ್ಷ ಯಾರೂ ಇದರೊಳಗೆ ಸುಳಿಯಲೂ ಇಲ್ಲ.
ನನ್ನ ಬರಹಗಳು ಜನರನ್ನು ಮುಟ್ಟಲು ಅರಂಭವಾಗಿದ್ದು ಫೇಸ್ಬುಕ್ಕಿನಲ್ಲಿ ನನ್ನ 'ಕನ್ನಡ ಸಂಪದ' ಪುಟದಿಂದ. ಮುಂದೆ ನನ್ನ ಕನ್ನಡ ಸಂಪದದಲ್ಲಿನ ಲೇಖನಗಳನ್ನು ಫೇಸ್ಬುಕ್ನಲ್ಲಿ ಹುಡುಕುವುದು ಕಷ್ಟ, ವೆಬ್ಸೈಟಲ್ಲಿ ಹುಡುಕಲು ಅನುಕೂಲ ಮಾಡಿ ಎಂದು ಕೆಲವು ಆತ್ಮೀಯ ಜನ ಹೇಳತೊಡಗಿದರು. ಆದರೆ ಅದಕ್ಕೆ ವಿಕಿಪೀಡಿಯಾ ಸರಿಯಾದ ಮಾಧ್ಯಮ ಅನಿಸಿ ನನ್ನ ಲೇಖನಗಳನ್ನೆಲ್ಲ ವಿಕಿಪೀಡಿಯಾ ಕನ್ನಡದಲ್ಲಿ ಹಾಕಲು ಸಾಕಷ್ಟು ಶ್ರದ್ಧೆಯಿಂದ ಕೆಲಸ ಮಾಡಿದೆ.
ಆದರೆ, ವಿಕಿಪೀಡಿಯದಲ್ಲಿರುವ ಅನಿಯಂತ್ರಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಬರಹಗಳೆಲ್ಲ ಓದುವಿಕೆಯನ್ನು ಕಳೆದುಕೊಳ್ಳುವಂತಹ ತಿದ್ದುಪಡಿಗಳನ್ನು ಪಡೆದುಕೊಳ್ಳುತ್ತಿವೆ ಅನಿಸತೊಡಗಿತು. ಹೀಗೆ ಉಂಟಾದ ಅತೃಪ್ತಿ ನನ್ನ ಲೇಖನಗಳನ್ನು ನನ್ನ ಆತ್ಮಸಂತೃಪ್ತಿಗಾದರೂ ಒಂದು ವೆಬ್ ತಾಣದಲ್ಲಿಡಬೇಕು ಎಂದು ಕೆಲಸ ಮಾಡತೊಡಗಿದೆ. ಹೀಗೆ ಕೆಲಸ ಆರಂಭಿಸಿದ್ದು 2013ರಲ್ಲಿ. ಅದಕ್ಕೆ 'sallapa.com’ ಎಂಬ ಡೊಮೈನ್ ಪಡೆದು 'ಸಂಸ್ಕೃತಿ ಸಲ್ಲಾಪ’ ಎಂಬ ಹೆಸರಿಟ್ಟೆ.
ಈ ಮಧ್ಯೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ (kasapa.in) ನವೀಕರಣಕ್ಕಾಗಿ ಕೆಲವು ಸಮಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ 'ಕಣಜ'ಕ್ಕಾಗಿ ಕೆಲವು ಸಮಯ ದುಡಿಯುವ ಸಮಯದಲ್ಲಿ ನನ್ನ ವೆಬ್ಸೈಟ್ ಕೆಲಸವನ್ನು ಅಚ್ಚುಕಟ್ಟಾಗಿ ದಿನನಿತ್ಯದಲ್ಲಿ ಮಾಡುವುದಕ್ಕೆ ಮಾನಸಿಕ ಬಿಡುವು ಸಿಗುತ್ತಿರಲಿಲ್ಲ. ಆಮೇಲೆ ಒಂದಷ್ಟು ಕೆಲಸ ಮಾಡಿದೆನಾದರೂ ವೆಬ್ಸೈಟ್ ತಾಂತ್ರಿಕವಾಗಿ ಮತ್ತು ಬಾಹ್ಯಿಕವಾಗಿ ಒಂದಷ್ಟು ಹೊಸತನದ ಅವಶ್ಯಕತೆ ಇದೆ ಅನಿಸಿ ಅತೃಪ್ತಿ ಕಾಡುತ್ತಿತ್ತು. ಕಡೆಗೆ ಇದಕ್ಕೆ ಸೂಕ್ತ ಅವಕಾಶವಾಗಿದ್ದು ಕಳೆದ ವರ್ಷದ ಕರೋನಾ ಲಾಕ್ಡೌನ್ ಸಮಯದಲ್ಲಿ. ಆಗ 'sallapa.com'ಗೆ ಒಂದಷ್ಟು ಅಭಿವೃದ್ಧಿ ತಂದೆ. ಈ ಬದಲಾವಣೆಯ ಕಾಲಕ್ಕೆ ಮುಂಚೆ ಇದ್ದ 'sallapa.com’ ಗಳಿಸಿದ್ದ ಸುಮಾರು ಏಳೂವರೆ ವರ್ಷಕಾಲದಲ್ಲಿ ಪಡೆದಿದ್ದ ಒಟ್ಟಾರೆ ಭೇಟಿಗಳು ಸುಮಾರು 5 ಲಕ್ಷ 25 ಸಾವಿರ. ಅಂದರೆ ಕಳೆದ ಹದಿನೈದು ತಿಂಗಳಲ್ಲಿ 'sallapa.com’ಗಳಿಸಿದ ಭೇಟಿಗಳು ಅದರ ಎರಡರಷ್ಟಾಗಿ ಇಂದು ಹತ್ತು ಲಕ್ಷ ದಾಟಿವೆ.
ಸಲ್ಲಾಪ.comನಲ್ಲಿ 2000ಕ್ಕೂ ಹೆಚ್ಚು ವ್ಯಕ್ತಿಚಿತ್ರಗಳು, ಹಲವು ಇತರ ಬರಹಗಳು, ಗೀತೆಗಳು ಇತ್ಯಾದಿ ಸೇರಿ ಸುಮಾರು 3000ಕ್ಕೂ ಹೆಚ್ಚು ಪೋಸ್ಟುಗಳಿವೆ. (ನಿಖರವಾಗಿ ಒಟ್ಟು 4438 ಪೋಸ್ಟುಗಳಿವೆ. ಸುಮಾರು 1200 ಪೋಸ್ಟುಗಳನ್ನು ತಾಂತ್ರಿಕ ಉಪಯಕ್ತತೆಯ ಕಾರಣಗಳಿಗಾಗಿ ನಾನು ಎರಡು ಬಾರಿ ಮಾಡಿಕೊಂಡಿದ್ದೇನೆ).
ಒಂದು ಕಾಲದಲ್ಲಿ ನೂರು, ಸಾವಿರ ಅಂದರೆ ತುಂಬಾ ಬೆಲೆ ಇತ್ತು. ಲಕ್ಷ, ದಶಲಕ್ಷ, ಕೋಟಿ, ಬಿಲಿಯನ್ ಇವುಗಳೆಲ್ಲ ಇಷ್ಟೇನಾ ಅನ್ನುವಂತಾಗಿವೆ. ಜೀವನದಲ್ಲಿ ಒಂದು ರೀತಿಯಲ್ಲಿ ಯಾವುದಕ್ಕೂ ಬೆಲೆಯಿಲ್ಲ. ಬೆಲೆ ಇರುವುದು ನಾವು ಮೆಲುಕು ಹಾಕಲು ಬಯಸುವ ಒಂದು ಸವಿನೆನಪಿಗೆ ಮಾತ್ರಾ. ನನಗೆ ಈ ಹತ್ತುಲಕ್ಷ ಭೇಟಿಗಳಾಗಿವೆ ಎಂದಾಗ ಮೂಡಿದ್ದು ನಿಜಕ್ಕೂ 'ಮಿಲಿಯನ್ ಮೆಮೊರಿಸ್'. ಕಾರಣ ಇಲ್ಲಿ ಕಡೇಪಕ್ಷ ನನ್ನ ಅಂತರಂಗದ ಅಷ್ಟು ಬಡಿತಗಳು ಖಂಡಿತವಾಗಿ ಇಲ್ಲಿ ಮಿಡಿದಿವೆ. ಈ ನನ್ನ ಮಿಡಿತಗಳನ್ನು ಸ್ಪಂದಿಸಿದ ತಮಂತಹ ಲಕ್ಷಾಂತರ ಹೃದಯಗಳಿಗೆ ಹೃದಯಪೂರ್ವಕ ನಮಸ್ಕಾರ.
ಸಾಧ್ಯವಾದಾಗಲೆಲ್ಲ www.sallapa.com ತಾಣಕ್ಕೆ ಬರುತ್ತಿರಿ.
Million memories on my blog www.sallapa.com reaching 'A million hits'
ಕಾಮೆಂಟ್ಗಳು