ಮಹಾಬಲ ಹೆಗಡೆ
ಕೆರೆಮನೆ ಮಹಾಬಲ ಹೆಗಡೆ
ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದವರು ಮಹಾಬಲ ಹೆಗಡೆ.
ಮಹಾಬಲರು 1927ರ ಜೂನ್ 30ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಶ್ರೀರಾಮ ಹೆಗಡೆ. ತಾಯಿ ಮಾದೇವಿ.
ಮಹಾಬಲರು ಚಿತ್ರಾಪುರದ ಶ್ರೀಪಾದರಾಯರಿಂದ ಹಿಂದೂಸ್ಥಾನಿ ಸಂಗೀತದ ಪ್ರಾರಂಭಿಕ ಅಭ್ಯಾಸ ನಡೆಸಿದ ನಂತರದಲ್ಲಿ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಸಂಗೀತ ಶಿಕ್ಷಣ ಪಡೆದರು. ಶಾಲೆಯಲ್ಲಿ ಕಲಿತದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ. ಅಪ್ಪಟ ತುಂಟನಾಗಿ, ಪುಂಡಾಟದಲ್ಲಿದ್ದ. ಆದರೆ ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರಿಗೆ ‘ಮಾಣಿ ಫಟಿಂಗನಾದರೆ ಕಷ್ಟ’ ಎಂದು ಕಂಡದ್ದೇ ಮಹಾಬಲನಿಗೆ 14ನೇ ವರ್ಷದಲ್ಲಿ ಬಂಕಿಕೊಂಡ್ಲ ಎಂಬ ಊರಲ್ಲಿ ‘ವೃಷಸೇನ’ ವೇಷ ಹಾಕಿಸಿದರು. ಹೀಗೆ, ರಂಗಕ್ಕೆ ಪ್ರವೇಶಿಸಿದ ಮಹಾಬಲರು ನಂತರ ಶರಧಿ ಗಂಭೀರ. ಕೊನೆಗೆ, 60ಕ್ಕೂ ಅಧಿಕ ವರ್ಷ ರಂಗದ ಜೊತೆಗಿನ ಅವಿನಾಭಾವ ಸಂಬಂಧದ ಅನಂತರ ವೇಷ ಕಳಚಿ ರಂಗದಿಂದ ನಿವೃತ್ತರಾದುದು 75ರ ಹರೆಯದಲ್ಲಿ.
ಮಹಾಬಲ ಹೆಗಡೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಅಂದಿನ ಪ್ರಸಿದ್ಧ ಕಲಾವಿದರೆಲ್ಲರೊಂದಿಗೂ ಪಾತ್ರ ಹಾಕಿ ಕುಣಿದಿದ್ದರು. 1982ರಲ್ಲಿ ಭಾರತ ಸರ್ಕಾರದ ಸಾಂಸ್ಕೃತಿಕ ತಂಡದಲ್ಲಿ ಯಕ್ಷಗಾನವನ್ನು ಪ್ರತಿನಿಧಿಸಿ ಯುರೋಪ್ ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಹಾಗಂತ ಮಹಾಬಲರನ್ನ ಯಕ್ಷಗಾನಕ್ಕೇ ಸೀಮಿತಗೊಳಿಸಿದರೆ ಅಪರಾಧವಾದೀತು. ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದವರು ಮಹಾಬಲರು. ಸಂಗೀತ, ಸಾಹಿತ್ಯ, ನಾಟಕ, ಭಜನೆ, ಮದ್ದಳೆವಾದನ, ಹೀಗೆ ಎಲ್ಲದರಲ್ಲೂ ಅವರು ಮಹಾಬಲರೆ! ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ, ಮನೆಯಲ್ಲಿ ಕುಳಿತು ಶ್ರುತಿಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ!
ಮಹಾಬಲರು ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿದವರು. ಶಾಸ್ತ್ರೀಯ ಸಂಗೀತವನ್ನು ಕಲಿತರೂ ಅಲ್ಲಿ ಅವರ ಹುಡುಕಾಟ ಯಕ್ಷಗಾನಗಳಲ್ಲಿನ ಶಾಸ್ತ್ರೀಯತೆಯನ್ನು ಹುಡುಕುವುದಾಗಿತ್ತು. ಭಾಗವತಿಕೆಯಲ್ಲಿ ಅವರು ರಾಗದ ಖಚಿತತೆ ಬಯಸುತ್ತಿದ್ದರು. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗೆ ಸಿದ್ಧಿಸಿತ್ತು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು. ಮೊಟ್ಟ ಮೊದಲು ಬಡಗಿನ ಚೆಂಡೆಗೆ ಶೃತಿಯನ್ನು ಅಳವಡಿಸಿದ್ದೂ ಮಹಾಬಲರೇ!
ಮಹಾಬಲ ಹೆಗಡೆಯವರ ಪಾತ್ರಗಳು ಶಾಸ್ತ್ರದ ಆಧಾರದಿಂದ ಸೃಜನಶೀಲವಾಗಿ ಹೊಸ ನಾಯಕತ್ವದ ಆಯಾಮಕ್ಕೆ ಕಾರಣವಾಯಿತು. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದ ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಅನುಪಮ. ಜೊತೆಗೆ ಪಾತ್ರದ ವ್ಯಕ್ತಿತ್ವವನ್ನು ಸಮಕಾಲೀನ ಸಂದರ್ಭಕ್ಕೆ ಬೆಸೆಯುತ್ತಾ; ಪ್ರೇಕ್ಷಕವರ್ಗದಲ್ಲಿ ಜಾಗೃತಿ, ಚಿಂತನೆ ತರುತ್ತಿದ್ದ ಅವರ ವಾಕ್ಪಟುತ್ವ ಅಪ್ರತಿಮವಾದದ್ದು. ಪಾತ್ರಕ್ಕೆ ತಕ್ಕುದಾದ ಕಂಠ, ಭಾವಾಭಿನಯ, ಸೂಕ್ತವಾದ ನಡೆ-ನುಡಿ ಮತ್ತು ನೃತ್ಯಾಭಿನಯ, ಲಯಬದ್ಧ ಕುಣಿತ ಅವರದ್ದು. ವಿಶಿಷ್ಟವಾದ ಚೌತಾಳರ ಕುಣಿತ ಮಹಾಬಲರದ್ದೇ. ನಾಟ್ಯಶಾಸ್ತ್ರದಲ್ಲಿ ಬರುವ ಸಾತ್ವತೀ ಮತ್ತು ಆರಭಟೀ ವೃತ್ತಿಗೆ ಮಾದರಿಯಾಗಬಲ್ಲ ಪಾತ್ರವನ್ನು ಕಟ್ಟಿಕೊಟ್ಟವರು ಮಹಾಬಲರು.
ಮಹಾಬಲರದ್ದು ವಿಪುಲವಾದ ಸಾಹಿತ್ಯದ ಅಧ್ಯಯನದಿಂದ ಅರಿವು ಪಡೆದು ಸಂಸ್ಕಾರಗೊಂಡ ಭಾಷೆ. ನೇರ ತೂಕ ತಪ್ಪದ ಗತ್ತಿನ ಮಾತು. ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ, ಪ್ರಸಿದ್ಧಿ ಗಳಿಸಿದ್ದರು.ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರೆನಿಸಿದವರು ಹೆಗಡೆ.
ಖ್ಯಾತ ವಿದ್ವಾಂಸ ದಿ| ಕು.ಶಿ. ಹರಿದಾಸಭಟ್ಟರು ತಮ್ಮ ಅಂಕಣ ‘ಲೋಕಾಭಿರಾಮ’ದಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ, ಆ ಕಾಲದಲ್ಲಿ ಇಡೀ ದೇಶವನ್ನೇ ಬೆರಗುಗೊಳಿಸಿದ ಮಹಾಭಾರತ ಸರಣಿಯ ಬಗೆಗೆ ಬರೆಯುತ್ತಾ, ಭೀಷ್ಮನ ಪಾತ್ರಧಾರಿಯ ಮುಕೇಶ್ ಖನ್ನಾನನ್ನು ಕುರಿತು ಹೊಗಳುವಾಗ ಮಹಾಬಲ ಹೆಗಡೆಯವರ ಭೀಷ್ಮನನ್ನು ಹೊರತುಪಡಿಸಿ ಎಂದು ವಿವರಿಸಿದ್ದರು.
ಮಹಾಬಲರ ಭೀಷ್ಮ ಮಾತ್ರವಲ್ಲ, ಅವರು ನಿರ್ವಹಿಸಿ ಹೆಸರು ಪಡೆದ ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವ, ಹಾಸ್ಯಪಾತ್ರ, ಸ್ತ್ರೀಪಾತ್ರಗಳು ಹೀಗೆ ಮಹಾಬಲರ ಪಾತ್ರ ಸಾಕ್ಷಾತ್ಕಾರದಲ್ಲಿ ದೈವೀಸಿದ್ಧಿಯನ್ನು ನಾಟ್ಯಧರ್ಮಿಯತೆಯಲ್ಲಿ ಮಿಳಿತ ಮಾಡುವುದನ್ನು ಪ್ರೇಕ್ಷಕ ಅನುಭವಿಸಿದ್ದಾನೆ. ಒಂದರ್ಥದಲ್ಲಿ ಮಹಾಬಲರು ಯಕ್ಷಗಾನದ ಸವ್ಯಸಾಚಿ ಅಂದರೆ ಅತಿಶಯವಲ್ಲ!
ಮಹಾಬಲರು ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮೇಳಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1991), ಚೆನ್ನೈನ ಶ್ರುತಿ ಸಂಸ್ಥೆ, ಬೆಂಗಳೂರಿನ ಗಾನಕಲಾ ಪರಿಷತ್, ಕರ್ನಾಟಕ ಜನಪದ-ಯಕ್ಷಗಾನ ಅಕಾಡೆಮಿಯ ಜೀವನ ಸಾಧನೆ ಪ್ರಶಸ್ತಿ (2005), ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (2009) ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿದ್ದವು. ಮಹಾಬಲರು 2009ರ ಅಕ್ಟೋಬರ್ 29ರಂದು
ತಮ್ಮ 82ನೆಯ ವಯಸ್ಸಿನಲ್ಲಿ ನಿಧನರಾದರು.
(ಆಧಾರ: ‘ನೂಪುರ ಭ್ರಮರಿ’ಯಲ್ಲಿನ ಸಂಪಾದಕರ ಲೇಖನ)
On the birth anniversary of great Yakshagana artiste Keremane Mahabala Hegde
ಕಾಮೆಂಟ್‌ಗಳು