ಬೆನಗಲ್ ರಾಮ ರಾವ್
ಬೆನಗಲ್ ರಾಮ ರಾವ್
ಸರ್ ಬೆನಗಲ್ ರಾಮ ರಾವ್ ಸ್ವತಂತ್ರ ಭಾರತದ ಪ್ರಥಮ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಪ್ರಖ್ಯಾತರಾಗಿದ್ದಾರೆ.
ಬೆನಗಲ್ ರಾಮ ರಾವ್ 1889ರ ಜುಲೈ 1ರಂದು ಜನಿಸಿದರು. ಮೂಲತಃ ಚಿತ್ರಾಪುರ ಸಾರಸ್ವತ ಕುಟುಂಬಕ್ಕೆ ಸೇರಿದ್ದ ಬೆನಗಲ್ ರಾಮ ರಾವ್ ಅವರ ಮಾತೃ ಭಾಷೆ ಕೊಂಕಣಿ. ಅವರ ತಂದೆ ಬಿ. ರಾಘವೇಂದ್ರರಾವ್ ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರು. ತಾಯಿ ರಾಧಾಬಾಯಿ.
ಬ್ರಿಟಿಷ್ ಆಡಳಿತದ ಸಮಯದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1934ರಲ್ಲಿ ಆರಂಭಗೊಂಡಿತು. ಬ್ರಿಟಿಷರಾದ ಸರ್ ಒಸಬೋಮ್ ಸ್ಮಿತ್ 1935-37 ಅವಧಿಯಲ್ಲಿ, ಹಾಗೂ ಸರ್ ಜೇಮ್ಸ್ ಬ್ರೈಡ್ ಟೇಲರ್ ಅವರು 1937-43 ಅವಧಿಯಲ್ಲಿ ಗೌರ್ನರ್ ಹುದ್ದೆಯನ್ನು ಅಲಂಕರಿಸಿದ್ದರು. 1943ರಿಂದ 1949ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಥಮ ಭಾರತೀಯ ಗೌರ್ನರ್ ಆಗಿ ಸಿ.ಡಿ. ದೇಶ್ಮುಖ್ ಅವರು ಕಾರ್ಯನಿರ್ವಹಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಈ ಸಂಸ್ಥೆ ಬಂಡವಾಳ ಹೂಡಿಕೆದಾರರ ಒಂದು ಬ್ಯಾಂಕ್ ಆಗಿತ್ತು.
ಸ್ವಾತಂತ್ರ್ಯ ದೊರೆತು ದೇಶ ವಿಭಜನೆಯಾದ ನಂತರದಲ್ಲಿ 1949ರ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಕರಣಗೊಂಡಿತು. ಆ ಸಂದರ್ಭದಲ್ಲಿ ಅಧಿಕಾರವಹಿಸಿಕೊಂಡ ರಾಮ ರಾವ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ 1949ರಿಂದ 1957ರ ಅವಧಿಯವರೆಗೆ ಅತೀ ಹೆಚ್ಚು ಕಾಲ ಆಡಳಿತದಲ್ಲಿದ್ದವರು. ಅವರು ತಮ್ಮ ಎರಡನೆಯ ಅವಧಿಯ ಹಲವು ಕಾಲ ಬಾಕಿ ಇರುವಾಗಲೇ ಅಂದಿನ ಹಣಕಾಸು ಮಂತ್ರಿಗಳೊಡನೆ ಉಂಟಾದ ಭಿನ್ನಾಭಿಪ್ರಾಯದಿಂದ ಅಧಿಕಾರದಿಂದ ಹೊರಬಂದರು.
ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು ಮತ್ತು ಕೆಂಬ್ರಿಡ್ಜಿನಲ್ಲಿ ಉನ್ನತ ವ್ಯಾಸಂಗ ನಡೆಸಿದ ಬೆನಗಲ್ ರಾಮ ರಾವ್, ಇಂಡಿಯನ್ ಸಿವಿಲ್ ಸರ್ವಿಸ್ ಸೇರಿದರು. ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಬರುವ ಮೊದಲು ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ರಾಮ ರಾವ್ ಅವರು ಸ್ವಾತಂತ್ರ್ಯಾನಂತರದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಜಪಾನ್ ದೇಶಗಳ ರಾಯಭಾರಿಗಳಾಗಿ ಸಹಾ ಕೆಲಸಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಲಂಡನ್, ಆಫ್ರಿಕಾ ಪ್ರದೇಶಗಳಲ್ಲಿ ಉನ್ನತ ಕಮಿಷನರ್ ಹುದ್ದೆಗಳಲ್ಲಿ ಸಹಾ ಕೆಲಸ ಮಾಡಿದ್ದರು.
ರಾಮ ರಾವ್ ಅವರ ಸಹೋದರರೂ ಪ್ರಖ್ಯಾತರೇ. ಬೆನಗಲ್ ಸಂಜೀವರಾವ್ ಖ್ಯಾತ ಶಿಕ್ಷಣ ತಜ್ಞರು. ಬೆನಗಲ್ ನರಸಿಂಹ ರಾವ್ ಅಂತರರಾಷ್ಟ್ರೀಯ ನ್ಯಾಯಾಲಯದವರೆಗೆ ನ್ಯಾಯಾಧೀಶ ಹುದ್ಧೆಗಳನ್ನು ಅಲಂಕರಿಸಿದವರು. ಬೆನಗಲ್ ಶಿವರಾಮ್ ಖ್ಯಾತ ಪತ್ರಿಕೋದ್ಯಮಿಗಳು, ಗ್ರಂಥಕರ್ತರು. ಇವರು, ಬೆನಗಲ್ ನರಸಿಂಗರಾಯರ ಬರಹಗಳನ್ನೆಲ್ಲಾ “India’s constitution in the making”
ಎಂಬ ಹೆಸರಿನಡಿ ಸಂಪಾದಿಸಿ ಪ್ರಕಟಿಸಿದ್ದಾರೆ.
ಬೆನಗಲ್ ರಾಮ ರಾವ್ 1969ರ ಡಿಸೆಂಬರ್ 13, ರಂದು ನಿಧನರಾದರು. ಆಡಳಿತದಲ್ಲಿ ಅಪರಿಮಿತ ಹೆಸರು ಮಾಡಿದ್ದ ಅವರಿಗೆ 1936ರಲ್ಲಿ ಬ್ರಿಟಿಶ್ ಸರ್ಕಾರದ ನೈಟ್ ಹುಡ್ ಗೌರವ ಪ್ರಾಪ್ತವಾಗಿತ್ತು.
On the birth anniversary of our first Governor of Reserve Bank of India after indendence, Sir Benagal Rama Rau.... 🌷🙏🌷
ಕಾಮೆಂಟ್ಗಳು