ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಸಿ. ರಾಯ್


 ಭಾರತರತ್ನ ಬಿಧಾನ್‌ ಚಂದ್ರ ರಾಯ್‌ 


ಭಾರತರತ್ನ ಬಿಧಾನ್‌ ಚಂದ್ರ ರಾಯ್‌ ಮಹಾನ್ ವೈದ್ಯರಾಗಿ, ಸಮಾಜಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಹೆಸರಾಗಿದ್ದಾರೆ.  ಅವರು ಜನಿಸಿದ ಈ ದಿನವನ್ನು ದೇಶದಲ್ಲಿ ವೈದ್ಯರ ದಿನವೆಂದು ಆಚರಿಸಲಾಗುತ್ತಿದೆ.   ಇಂದು ಅವರ ಸಂಸ್ಮರಣಾ ದಿನವೂ ಆಗಿದೆ.  

ಬಿಧಾನ್‌ ಚಂದ್ರರಾಯ್‌ 1882ರ ಜುಲೈ 1ರಂದು ಪಾಟ್ನಾದ ಬಳಿಯ ಬಂಕಿಪುರದಲ್ಲಿ ಜನಿಸಿದರು. ಅವರ ತಂದೆ ಪ್ರಕಾಶಚಂದ್ರ ರಾಯ್ ಸುಂಕಾಧಿಕಾರಿಯಾಗಿದ್ದರು. ಇವರ ತಂದೆ ತಾಯಂದಿರು ಪಾಲಕರು ಎಲ್ಲ ಜನರಲ್ಲೂ ದಯಾಪರನಾಗಿರುವ ಬುದ್ಧಿ ಮೂಡುವಂತೆ ಪ್ರೆರೇಪಣೆ ನೀಡಿದರು. ಇವರು ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ  ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ತಮ್ಮ ಐದು ಮಕ್ಕಳಿಗೆ ತಾವೇ ತಾಯಿಯಾಗಿ ಮತ್ತು ತಂದೆಯಾಗಿ ಕರ್ತವ್ಯ ನಿರ್ವಹಿಸಿದರು. 

ಬಿಧಾನ್‌ ಅವರು ಮೊದಲು ಪಾಟ್ನಾದ ಶಾಲೆಯಲ್ಲಿ ಓದಿದ  ನಂತರ ಬಿ.ಎ ಪದವಿಯನ್ನು ಕೊಲ್ಕತ್ತಾ ಕಾಲೇಜಿನಲ್ಲಿ ಗಣಿತದಲ್ಲಿ ಅಗ್ರಗಣ್ಯರಾಗಿ ಪುರೈಸಿದರು. ಪ್ರವೇಶಕ್ಕಾಗಿ ಬೆಂಗಾಲ್‌ ಇಂಜಿನಿಯರಿಂಗ್‌ ಕಾಲೇಜ್‌ ಮತ್ತು ಕೊಲ್ಕತ್ತಾ ವೈದ್ಯಕೀಯ ಕಾಲೇಜು ಎರಡಕ್ಕೂಅರ್ಜಿ ಸಲ್ಲಿಸಿ ಆಯ್ಕೆಯಾದರು. ಆದರೆ ವೈದ್ಯಕೀಯ ಕಾಲೇಜಿಗೆ ಹೋಗುವ ಆಯ್ಕೆ ಮಾಡಿಕೊಂಡು 1901 ಜೂನ್‌ ತಿಂಗಳಲ್ಲಿ ಕೊಲ್ಕತ್ತಾಗೆ ಆಗಮಿಸಿದರು. ಅಲ್ಲಿ ಬರೆದಿದ್ದ "Whatever thy hands findeth to do, do it with thy might" ಎಂಬ ವಾಕ್ಯದಿಂದ ತುಂಬಾ ಪ್ರಭಾವಿತರಾದರು.

ಬಿಧಾನ್‌ ಅವರು ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವಾಗಿನ ಜೀವನವು ಅತ್ಯಂತ ಪರಿಶ್ರಮದಯಕವಾಗಿತ್ತು. ತಂದೆಯವರು ನಿವೃತ್ತರಾಗಿ ಬಿಧಾನ್‌ ಅವರಿಗೆ ಬಹಳ ದಿನಗಳ ಕಾಲ ಹಣವನ್ನು ಕಳುಹಿಸಿಕೊಡಲು ಅಶಕ್ತರಾದರು. ಬಿಧಾನ್‌ ಅವರು ತಮಗೆ ಬರುತ್ತಿದ್ದ ವಿದ್ಯಾರ್ಥಿ ವೇತನದಿಂದ  ತಮ್ಮ ಖರ್ಚುವೆಚ್ಚಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದರು.

ಬಿಧಾನ್‌ ಅವರು ಕಾಲೇಜಿನಲ್ಲಿರುವಾಗಲೇ ಬಂಗಾಳ ವಿಭಜನೆಯನ್ನು ಘೋಷಿಸಲಾಯಿತು. ಬಂಗಾಳ ವಿಭಜನೆಯ ವಿರುದ್ಧ ರಾಷ್ಟ್ರೀಯ ನಾಯಕರಾದ ಲಾಲಾ ಲಜಪತ್‌ರಾಯ್‌, ಅರವಿಂದ ಘೋಷ್‌, ತಿಲಕ್ ಮತ್ತು ಬಿಪಿನ್‌ ಚಂದ್ರಪಾಲ್‌ ಮುಂದಾಳತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಬಿಧಾನ್‌ ಅವರಿಗೆ  ಪೂರ್ಣ ಪ್ರಮಾಣದಲ್ಲಿ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ಮನಸ್ಸಾದರೂ ತಮ್ಮ ಆವೇಶವನ್ನು ಹಿಡಿತದಲ್ಲಿಟ್ಟುಕೊಂಡು ತಾನು ಕಲಿತು ತನ್ನ ಉದ್ಯೋಗದ ಮೂಲಕ ತನ್ನ ದೇಶವನ್ನು ಇನ್ನೂ  ಒಳ್ಳೆಯ ರೀತಿಯಲ್ಲಿ ಸೇವೆ ಮಾಡುವ ಮನಸ್ಸು ಮಾಡಬಹುದು ಎಂದು ತಮ್ಮ ಅಭ್ಯಾಸದಲ್ಲಿ ಮನಸ್ಸನ್ನು ಕೆಂದ್ರೀಕರಿಸಿದರು.

ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ, ಬಿ.ಸಿ. ರಾಯ್‌ ಪ್ರಾಂತೀಯ ಆರೋಗ್ಯ ಸೇವಾ ಕೇಂದ್ರವನ್ನು ಸೇರಿಕೊಂಡರು. ಔಷಧಗಳನ್ನು ಶಿಫಾರಸು ಮಾಡುವುದನ್ನು ಕಲಿತರು.  ಕೆಲವು ವೇಳೆ ಅವಶ್ಯಕತೆ ಇದ್ದಾಗ ತಾವೇ  ದಾದಿಯರಂತೆ ಸೇವೆ ಸಲ್ಲಿಸಲು ಹೋಗುತ್ತಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಸ್ವತಂತ್ರರಾಗಿ ಸೇವೆ ಸಲ್ಲಿಸುತ್ತಿದ್ದರು.

ಬಿಧಾನ್‌ 1909ರ ಫೆಬ್ರುವರಿಯಲ್ಲಿ ಇಂಗ್ಲೆಂಡಿನ ಸೆಂಟ್‌ ಬಾರ್ಥೊಲೊಮೆವ್ಸ್‌ ಆಸ್ಪತ್ರೆಗೆ ಮುಂದಿನ ಶಿಕ್ಷಣಕ್ಕಾಗಿ ತಮ್ಮ ಹೆಸರನ್ನು ನೊಂದಾಯಿಸಲು ತೆರಳಿದರು. ಅಲ್ಲಿನ ಮುಖ್ಯಸ್ಥರು ಏಷ್ಯಾದಿಂದ ಬಂದ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡದಿರುವ ನಿರ್ಧಾರದಿಂದ ಬಿಧಾನ್‌ ಅವರ ಅರ್ಜಿಯನ್ನು ತಿರಸ್ಕರಿಸಿದರು. ಡಾ.ರಾಯ್‌ ಧೃತಿಗೆಡಲಿಲ್ಲ. ಮೇಲಿಂದ ಮೇಲೆ ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮುಖ್ಯಾಧಿಕಾರಿಯವರು ಬಿಧಾನ್‌ ಅವರನ್ನು ಕಾಲೇಜಿಗೆ ವಿಧ್ಯಾರ್ಥಿಯಾಗಿ ತೆಗೆದುಕೊಳ್ಳಲೇ ಬೇಕಾಯಿತು. ಕೇವಲ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ M.R.C.P. ಮತ್ತು F.R.C.S. ಪೂರೈಸಿ ಇಂಗ್ಲೆಂಡ್‌ನಿಂದ 1911ರಲ್ಲಿ ಸ್ವದೇಶಕ್ಕೆ ವಾಪಸಾದರು. ಸ್ವದೇಶಕ್ಕೆ ವಾಪಸಾದ ನಂತರ ಕೆಲಕಾಲ ಕ್ಯಾಂಪ್‌ಬೆಲ್‌ ಮೆಡಿಕಲ್‌ ಸ್ಕೂಲ್ನಲ್ಲಿ ಕಾರ್ಯನಿರ್ವಹಿಸಿ ನಂತರ ಕಾರ್ಮಿಕಲ್‌ ಮೆಡಿಕಲ್‌ ಕಾಲೇಜಿನಲ್ಲಿ ಕಲಿಸುವ ವೃತ್ತಿಯನ್ನು ಪ್ರಾರಂಭಿಸಿದರು.

ಸ್ವರಾಜ್ಯ ಕಲ್ಪನೆಯು ಸಾಕಾರವಾಗಲು ಪ್ರಜೆಗಳಲ್ಲಿ ಮಾನಸಿಕವಾದ ಮತ್ತು ದೈಹಿಕ ದೃಢತೆ ಅವಶ್ಯಕ ಎಂದು ಭಿಧಾನ್ ನಂಬಿದ್ದರು. ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಈ ನಿಟ್ಟಿನಲ್ಲಿ ಅವರು ತಮ್ಮ ಅಪಾರ ಕೊಡುಗೆ ನೀಡಿದರು. ಜಾದವಪುರ ಟಿ.ಬಿ ಆಸ್ಪತ್ರೆ, ಚಿತ್ತರಂಜನ್‌ ಸೇವಾ ಸದನ್‌, ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು. ಕಮಲಾ ನೆಹರು ಆಸ್ಪತ್ರೆ, ವಿಕ್ಟೊರಿಯಾ ಸಂಸ್ಥೆ, ಮತ್ತು ಚಿತ್ತರಂಜನ್‌ ಕ್ಯಾನ್ಸರ್‌ ಆಸ್ಪತ್ರೆಗಳನ್ನು ಕಟ್ಟಿಸಿದರು. ಚಿತ್ತರಂಜನ್‌ ಸೇವಾ ಸದನ್‌ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ 1926ರಲ್ಲಿ ಪ್ರಾರಂಭವಾಯಿತು. ಹೆಂಗಸರು ಮೊದಮೊದಲು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್‌ ಮತ್ತು  ತಂಡದವರ ಪ್ರಯತ್ನದಿಂದ ಎಲ್ಲ ವರ್ಗಗಳ ಮತ್ತು ಜನಾಂಗದ ಮಹಿಳೆಯರು ಆಸ್ಟತ್ರೆಗೆ ಬರತೊಡಗಿದರು. ಅವರು ಮಹಿಳೆಯರಿಗಾಗಿ ನರ್ಸಿಂಗ್‌ ಮತ್ತು ಸಾಮಾಜಿಕ ಸೇವೆಗಳಿಗಾಗಿನ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಿದರು.

1942ರಲ್ಲಿ ರಂಗೂನ್ ಜಪಾನಿಯರ ಬಾಂಬ್‌ ದಾಳಿಗೆ ತುತ್ತಾಯಿತು.  ಕೊಲ್ಕತ್ತಾವು ಜಪಾನಿಯ ದಂಗೆಯಿಂದ ಸಂಪೂರ್ಣ ನಿರ್ನಾಮವಾಗಬಹುದೆಂಬ ಭಯಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ಡಾ.ರಾಯ್‌ ಕೊಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶ್ವವಿದ್ಯಾಲಯದಲ್ಲಿ ಕಲಿಸಲು ಮತ್ತು ಕಲಿಯಲು ತೊಂದರೆಯಾಗದಂತೆ ಮಾಡುವ ಉದ್ದೇಶದಿಂದ ವೈಮಾನಿಕ ದಾಳಿಗಳಿಂದ ರಕ್ಷಿಸಿಕೊಳ್ಳಬಲ್ಲ ಮೇಲ್ಚಾವಣಿಗಳನ್ನು ರೂಪಿಸುವಂತೆ ಯೋಜನೆಯನ್ನು ಹಾಕಿಕೊಟ್ಟರು. 

1944ರಲ್ಲಿ ರಾಯ್ ಅವರಿಗೆ ಡಾಕ್ಟರೇಟ್‌ ಆಫ್‌ ಸೈನ್ಸ್‌ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು. ಯುವಕರು ಹಿಂದಿನದನ್ನು ಅನುಸರಿಸುತ್ತಾ ಕೂರದೆ ಮತ್ತು ದೊಂಬಿ ಗಲಾಟೆಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದು ಅವರು ಆಶಿಸುತ್ತಿದ್ದರು.  1956ರ ಡಿಸೆಂಬರ್ 15ರಂದು  ಲಕ್ನೋ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದಲ್ಲಿ ಅವರು "ನನ್ನ ಯುವ ಮಿತ್ರರೇ, ನೀವು ಸ್ವತಂತ್ರ ಹೋರಾಟದ ಸೈನಿಕರಾಗಿದ್ದೀರಿ. ಹೋರಾಟವು ಬೇಡಿಕೆಗಾಗಿ, ಹೆದರಿಕೆಗೆ, ಕೀಳರಿಮೆ ಮತ್ತು ಹತಾಶೆಗಳನ್ನು ಹೋಗಲಾಡಿಸುವುದಕ್ಕಾಗಿದೆ. ಪರಿಶ್ರವಿಲ್ಲದೆ ಫಲವಿಲ್ಲ, ದೇಶಕ್ಕಾಗಿ ಸ್ವಾರ್ಥವನ್ನು ತ್ಯಜಿಸಿ ಹೋರಾಡೊಣ, ನೀವು ದೃಢವಾದ ವಿಶ್ವಾಸ ಮತ್ತು ದೈರ್ಯದಿಂದ ಮುನ್ನುಗ್ಗುತ್ತಿರೆಂದು ನಂಬಿದ್ದೇನೆ..." ಎಂದು ಹೇಳಿದ್ದಾರೆ. 

ಡಾ. ರಾಯ್‌ ಗಾಂಧೀಜಿಯವರಿಗೆ ಮಿತ್ರರೂ ಮತ್ತು ವೈದ್ಯರೂ ಆಗಿದ್ದರು. ಗಾಂಧೀಜಿಯವರು 1933ರಲ್ಲಿ ಪೂನಾದಲ್ಲಿ ಪರ್ಣಕುಟಿವಿನ್‌ನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾಗ ಡಾ. ರಾಯ್‌ ಅವರೇ ಅವರನ್ನು ಆರೈಕೆ ಮಾಡುತ್ತಿದ್ದರು. ಆದರೆ ಗಾಂಧೀಜಿಯವರು ಆ ಔಷಧಗಳು ವಿದೇಶದಲ್ಲಿ ತಯಾರಾದವುಗಳಾಗಿದ್ದರಿಂದ ತೆಗೆದುಕೊಳ್ಳಲು ನಿರಾಕರಿಸಿದರು. ಗಾಂಧೀಜಿಯವರು ಡಾ.ರಾಯ್‌ ಅವರನ್ನುದ್ದೇಶಿಸಿ "ಡಾ. ರಾಯ್‌ ಅವರೇ ನಾನೇಕೆ ನಿಮ್ಮ ಸೇವೆಯನ್ನು ಸ್ವೀಕರಿಸಬೇಕು? ನನ್ನ ದೇಶವಾಸಿಗಳಾದ ನಲವತ್ತು ಕೋಟಿ ಜನರಿಗೆ ನಿಮ್ಮಿಂದ ಉಚಿತವಾಗಿ ಸೇವೆ ನೀಡಲು ಸಾಧ್ಯವೇ?" ಎಂದು ಕೇಳಿದರು. ಅದಕ್ಕೆ ಡಾ. ರಾಯ್‌ ಅವರು ಉತ್ತರಿಸುತ್ತಾ “ಇಲ್ಲ ಗಾಂಧೀಜಿಯವರೇ ನಾನು ಮೋಹನದಾಸ ಕರಮಚಂದ ಗಾಂಧಿಯನ್ನು ಉಪಚರಿಸಲು ಬರಲಿಲ್ಲ.  ನನ್ನಿಂದ ನಾಲ್ಕು ನಲವತ್ತು ಕೋಟಿ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲೂ ಸಾಧ್ಯವೂ ಇಲ್ಲ. ನಾನು ನಲವತ್ತು ಕೋಟಿ ಜನರ ಮುಖಂಡನನ್ನು ಉಪಚರಿಸಲು ಬಂದಿದ್ದೇನೆ ಅಷ್ಟೇ" ಎಂದು ನುಡಿದರು. ಗಾಂಧೀಜಿ ನಸುನಗೆಯಿಂದ ತಲೆದೂಗಿ ಅವರ ಸೇವೆಯನ್ನೂ ಸ್ವೀಕರಿಸಿದರು.

ಡಾ.ರಾಯ್‌ 1925ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಬಂಗಾಳದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಾರಕ್‌ಪುರ್ ಕ್ಷೇತ್ರದಲ್ಲಿನ ಚುನಾವಣೆಯಲ್ಲಿ ಬಂಗಾಳದ ಅತ್ಯಂತ ಹಿರಿಯ "ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್"ಎಂಬ ಖ್ಯಾತಿಯ ಸುರೇಂದ್ರನಾಥ ಬ್ಯಾನರ್ಜಿ ಅವರನ್ನು ಸೋಲಿಸಿದರು.

1925ನಂತರ ರಾಯ್‌ ಅವರು ಹೂಗ್ಲಿ ನದಿಯಲ್ಲಿ ಉಂಟಾಗುತ್ತಿದ್ದ ಮಾಲಿನ್ಯಗಳನ್ನು ತಡೆಗಟ್ಟುವ ವಿಧಾನಗಳನ್ನು ಮಂಡಿಸಿದರು.
ಡಾ. ರಾಯ್‌ 1928ರಲ್ಲಿ ಆಲ್‌ ಇಂಡಿಯಾ ಕಾಂಗ್ರೆಸ್‌ ಸಮಿತಿಗೆ ಆಯ್ಕೆಯಾದರು. ಇನ್ನೂ ಮೇಲೆ ಮೇಲೆ ಹೋಗಬೇಕೆಂಬ ಪ್ರಯತ್ನಗಳಿಂದ ದೂರ ಉಳಿದರು. 

1929ರಲ್ಲಿ ಡಾ.ರಾಯ್‌ ಬಂಗಾಳದಲ್ಲಿ ಅಸಹಕಾರ ಆಂದೋಲನವನ್ನು ಸಮರ್ಥವಾಗಿ ನಿರ್ವಹಿಸಿದರು.   ಇದರಿಂದ ಸಂತಸಗೊಂಡ ಪಂಡಿತ್‌ ಮೊತಿಲಾಲ್‌ ನೆಹರು 1930ರಲ್ಲಿ ರಾಯ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಮಂಡಳಿಗೆ ನೇಮಕ ಮಾಡಿದರು. ಸಿ.ಡಬ್ಲೂ.ಸಿ.ಯನ್ನು ಕಾನೂನು ಬಾಹಿರವೆಂದು ಘೋಷಿಸಿದಾಗ ಇತರ ಸದಸ್ಯರ ಜೊತೆಯಲ್ಲಿ ಡಾ.ರಾಯ್‌ ಅವರೂ 1930ರ ಅಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿ ಸೆಂಟ್ರಲ್‌ ಅಲಿಪುರ್‌ ಕಾರಾಗೃಹಕ್ಕೆ ತಳ್ಳಲ್ಪಟ್ಟರು.

1931ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಕೋಲ್ಕತ್ತಾ ಸಂಘಟನೆಯ ಹಲವಾರು ಕಾರ್ಯಕರ್ತರು ಜೈಲು ಸೇರಿದರು. ಕಾಂಗ್ರೆಸ್‌ ಡಾ. ರಾಯ್‌ ಅವರನ್ನು ಜೈಲಿಗೆ ಹೋಗದೆ,  ಹೊರಗುಳಿದು ಸಂಘದ ಕಾರ್ಯಗಳನ್ನು ನೋಡಿಕೊಳ್ಳುವಂತೆ ಸೂಚಿಸಿತು. ಅವರು 1930-31ರಲ್ಲಿ ಪುರಪ್ರಮುಖರಾಗಿ ಕಾರ್ಯನಿರ್ವಹಿಸಿದರು.  1933ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಳ್ವಿಕೆಯಲ್ಲಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ತೆ, ರಸ್ತೆ ಸೌಲಭ್ಯ, ವಿದ್ಯುತ್‌ ವ್ಯವಸ್ತೆ, ಮತ್ತು ನೀರು ಸರಬರಾಜುಗಳು ಉತ್ತಮಗೊಂಡವು. ಅವರು ಆಸ್ಪತ್ರೆಗಳಿಗೆ ಮತ್ತು ಉಳಿದ ಸೇವಾ ಉದ್ದೇಶಗಳಿಗೆ ಮಾಡಬೇಕಾದ ಹಣದ ಹಂಚಿಕೆಯ ಯೋಜನೆಗಳನ್ನು ರೂಪಿಸುತ್ತಿದ್ದರು ಮತ್ತು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಮುಂದೆ ಕಾಂಗ್ರೆಸ್‌ ಡಾ.ರಾಯ್‌ ಅವರ ಹೆಸರನ್ನು ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿತು. ಡಾ.ರಾಯ್‌ ತಮ್ಮ ವೃತ್ತಿಯಲ್ಲೇ ಮುಂದುವರಿಯಲು ಆಶಿಸುತ್ತಿದ್ದರು. ಆದರೆ ಗಾಂಧೀಜಿಯವರ ಸಲಹೆಯ ಮೇರೆಗೆ 1948ರ ಜನವರಿ 23ರಂದು ಅವರು ಮುಖ್ಯಮಂತ್ರಿ ಹುದ್ದೆಯನ್ನಲಂಕರಿಸಿದರು. ಬಂಗಾಳವು ಆ ಸಂದರ್ಭದಲ್ಲಿ ಕೋಮುಗಲಭೆಗಳು, ಆಹಾರ ಕೊರತೆ, ನಿರುದ್ಯೋಗ, ಮತ್ತು ಪೂರ್ವ ಪಾಕಿಸ್ತಾನದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಸಮಸ್ಯೆಗಳಿಂದ ತುಂಬಿ ಹೋಗಿತ್ತು. ಡಾ.ರಾಯ್‌ ತಮ್ಮ ಪಕ್ಷದಲ್ಲಿ ಏಕತೆ ಮತ್ತು ಶಿಸ್ತನ್ನು ತಂದರು. ಶಿಸ್ತಿನಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಾ ಸಾಗಿದರು. ಕಾನೂನು ಮತ್ತು ಶಿಸ್ತುಗಳಲ್ಲಿ ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೆ ಜನರು ಸಕ್ರಿಯವಾಗಿ ಮತ್ತು ಸಂಯಮದಿಂದ ವರ್ತಿಸುವಂತೆ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.

1961ರಲ್ಲಿ ದೇಶವು ಬಿಧಾನ್‌ ಚಂದ್ರ ರಾಯ್‌ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು. 1962ರ ಜುಲೈ 1ರಂದು ಬೆಳಿಗ್ಗೆ ತಮ್ಮ ರೋಗಿಗಳನ್ನು ಶುಶ್ರೂಷೆ ಮಾಡಿ, ರಾಜ್ಯಾಡಳಿತಕ್ಕೆ ಸಂಬಂಧಿಸಿದ ಅವಶ್ಯಕ ಕೆಲಸಗಳನ್ನು ಗಮನಿಸಿ "ಬ್ರಹ್ಮೋ ಗೀತ್‌"ದ ಪ್ರತಿಯನ್ನು ಓದುತ್ತಾ ಅದರಲ್ಲಿರುವ ಶಾಂತಿ ಸಂದೇಶವನ್ನು ಪಠಿಸತೊಡಗಿದರು. ಅದಾದ ಹನ್ನೊಂದು ಗಂಟೆಯಲ್ಲಿ ಡಾ.ರಾಯ್‌ ಅವರು ಇಹಲೋಕವನ್ನು ತ್ಯಜಿಸಿದರು. 

1967ರಲ್ಲಿ ನವದೆಹಲಿಯಲ್ಲಿ ಡಾ.ಬಿ.ಸಿ.ರಾಯ್‌ ಮೆಮೊರಿಯಲ್‌ ಲೈಬ್ರರಿ ಮತ್ತು ಚಿಕ್ಕ ಮಕ್ಕಳಿಗಾಗಿನ ಓದುವ ಕೊಟಡಿಯನ್ನು ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ನಡಿಯಲ್ಲಿ ಪ್ರಾರಂಭಮಾಡಲಾಯಿತು.

1976ರಲ್ಲಿ ವೈದ್ಯಕೀಯ, ರಾಜಕೀಯ, ವಿಜ್ಞಾನ, ಮನಃಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಬಿ.ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.

On the birth anniversary of Bharathratna Dr. Bidhan Chandra Roy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ