ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿ. ಮ. ನಾಗಯ್ಯ


 ಹಿ. ಮ. ನಾಗಯ್ಯ

ಹಿ. ಮ. ನಾಗಯ್ಯ ಅವರು ಕವಿ, ಪತ್ರಕರ್ತ, ಸಮಾಜಸೇವಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು.

ಹಿ.ಮ. ನಾಗಯ್ಯನವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ 1925ರ ಜುಲೈ 1ರಂದು ಜನಿಸಿದರು.  ತಂದೆ ಮಠದ ದೊಡ್ಡ ಬಸವಯ್ಯ, ತಾಯಿ ದೊಡ್ಡ ಬಸವಮ್ಮ. 

ನಾಗಯ್ಯನವರು ಇಂಟರ್ಮೀಡಿಯೆಟ್‌ವರೆಗೆ ಓದಿದ್ದು ಕೊಟ್ಟೂರಿನಲ್ಲಿ. ಆಗ ದೇಶದ ಎಲ್ಲೆಡೆ ಸ್ವಾತಂತ್ರ್ಯ ಹೋರಾಟದ ಬಿಸಿ. ಗಾಂಧೀಜಿಯವರ ಕರೆಯಂತೆ ವಿದ್ಯಾರ್ಥಿಗಳು ಶಾಲಾ , ಕಾಲೇಜು ತೊರೆದು ಚಳುವಳಿಯಲ್ಲಿ ಭಾಗಿಯಾಗುತ್ತಿದ್ದ ಸಮಯ. ನಾಗಯ್ಯನವರೂ ಶಾಲೆ ತೊರೆದು ಬಂದಾಗ, ಇವರ ಗುರುಗಳೊಬ್ಬರು ‘ಓದುವ ಕಡೆ ಗಮನ ಕೊಡು, ಓದು ಮುಗಿದ ನಂತರ ದೇಶ ಸೇವೆ’ ಎಂದು ಉಪದೇಶಿಸಿದಾಗ ಪುನಃ ಶಾಲೆಗೆ ಹೋಗಿ ಇಂಟರ್ಮೀಡಿಯೆಟ್‌ವರೆಗೆ ಓದಿದರು. 
ಕಾಲೇಜು ಕಲಿಯುತ್ತಿದ್ದಾಗಲೇ ಇವರ ಅನೇಕ ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡವು.  ಬೆಂಗಳೂರಿನ ಬ್ರದರ್ ಅಂಡ್‌ ಬ್ರದರ್ ಪ್ರಕಾಶನ ಸಂಸ್ಥೆಯವರು ನಾಗಯ್ಯನವರನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ‘ಬಳ್ಳಾರಿ ಬೆಳಕು’ (1948) ಕವನಗಳ ಸಂಕಲನವನ್ನು ಪ್ರಕಟಿಸಿದರು. 

ನಾಗಯ್ಯನವರು ಜೀವನ ನಿರ್ವಹಣೆಗಾಗಿ ಆಯ್ದುಕೊಂಡದ್ದು ಪತ್ರಿಕೋದ್ಯಮ. 'ತಾಯಿನಾಡು' ಪತ್ರಿಕೆಗೆ  ವರದಿಗಾರರಾಗಿ ಸೇರಿ ಎರಡು ದಶಕಗಳ ಸೇವೆ ಸಲ್ಲಿಸಿದ ಅವರಿಗೆ ಪ್ರಧಾನ ವರದಿಗಾರರ ಹುದ್ದೆ ದೊರೆಯಿತು. ನಂತರ ವಿಶ್ವಕರ್ನಾಟಕ ಉಪಸಂಪಾದಕರಾಗಿ, ಕೀರ್ತಿಕಿರಣ ಮಾಸ ಪತ್ರಿಕೆಯ ಸಂಪಾದಕರಾಗಿ, ಕನ್ನಡ ಕೇಸರಿ ವಾರಪತ್ರಿಕೆ ಮಾಲೀಕರಾಗಿ ಹಾಗೂ ಸಂಪಾದಕರಾಗಿ,  ತಮ್ಮ ಸ್ವಂತ ಪತ್ರಿಕೋದ್ಯಮದಡಿಯಲ್ಲಿ ‘ಹಿಮಾಲಯ’ ಎಂಬ ಸಂಜೆ ದಿನ ಪತ್ರಿಕೆಯನ್ನೂ ಹೊರಡಿಸಿದರು. ಹೀಗೆ ಸಂಜೆ ದಿನ ಪತ್ರಿಕೆಯನ್ನು ಹೊರಡಿಸಿದವರಲ್ಲಿ ಇವರೇ ಮೊದಲಿಗರು. ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡನುಡಿ’ ಸಂಪಾದಕರಾಗಿ ಮತ್ತು ಲೋಕವಾಣಿ ದಿನ ಪತ್ರಿಕೆಯ ಸಂಪಾದಕರಾಗಿಯೂ ದುಡಿದರು. ಆಗಾಗ್ಗೆ ಪ್ರಜಾಮತ ವಾರಪತ್ರಿಕೆಗೂ ಲೇಖನಗಳನ್ನೂ ಬರೆಯತೊಡಗಿದ್ದು, ಅನೇಕ ಮೌಲಿಕ ಲೇಖನಗಳು ಪ್ರಕಟಗೊಂಡವು. 

ಹಿ. ಮ. ನಾಗಯ್ಯನವರ ಪತ್ರಿಕೋದ್ಯಮದ ಸೇವೆಯನ್ನು ಗುರುತಿಸಿ ಕರ್ನಾಟಕ ಪತ್ರಿಕೋದ್ಯೋಗಿಗಳ ಸಂಘವು ಅಧ್ಯಕ್ಷರನ್ನಾಗಿ (1968-70) ಆಯ್ಕೆಮಾಡಿ ಗೌರವಿಸಿತು. ಪ್ರತಿಭಾಸಂಪನ್ನರಾದ ನಾಗಯ್ಯನವರಿಗೆ ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ ಮುಂತಾದ ಸಾಹಿತ್ಯ ದಿಗ್ಗಜರುಗಳ ಒಡನಾಟವಿತ್ತು. 

‘ಬಳ್ಳಾರಿ ಬೆಳಗು’ ಕವನ ಸಂಕಲನದ ಪ್ರಕಟಣೆಯ ನಂತರ ಗಾಂಧೀಜಿ ಕುರಿತ ನೀಳ್ಗವಿತೆ ಮತ್ತು ಇತರ ಕವನಗಳ ಸಂಕಲನ ‘ಕಾಣಿಕೆ’ (1949), ‘ಅಮೃತಧಾರೆ’  (ಭಾವಗೀತೆಗಳು) ,   'ಚಂಪಕ’ (ಪ್ರೇಮಗೀತೆಗಳು) (1973), 'ನೀವೆಲ್ಲರೂ ನಮ್ಮವರೆ' (1976, 79), ‘ತುಂಬು ಅರಳಿದ ಬೇವು’ (1985), ನಿನಗೊಂದು ತಿಳಿಮಾತು (1992), ಇಂಗ್ಲಿಷ್‌ ಪದ್ಯ ಸಂಗ್ರಹ ‘ನೆಕ್ಟರ್ ಆಫ್‌ ನೀಮ್‌’ (1982) ಮುಂತಾದ ಕವನ ಸಂಕಲನಗಳು ಪ್ರಕಟಗೊಂಡವು. 

ಕಾವ್ಯಕ್ಷೇತ್ರಕ್ಕೆ ನಾಗಯ್ಯ ಅವರು ನೀಡಿದ ಬೃಹತ್‌ ಕೃತಿ ‘ಭವ್ಯ ಭಾರತ ಭಾಗ್ಯೋದಯ’. ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆದ ಕಾವ್ಯ ಇದಾಗಿದ್ದು 2871 ಪದ್ಯಗಳಿಂದ ಕೂಡಿದ್ದು ನಾಲ್ಕು ಅಧ್ಯಾಯಗಳಾಗಿ 1089 ಪುಟಗಳಿಂದ   ಮೂಡಿಬಂದಿದೆ. ಅವರಿಗೆ 90,೦೦೦ ಸಾಲುಗಳಿಂದ ಕೂಡಿದ ಸುಮರು 3000 ಪುಟಗಳ ಮಹಾಕಾವ್ಯ ರಚನೆಯ ಉದ್ದೇಶವಿತ್ತಂತೆ. ಆದರೆ ಈ ಮಹಾಕೃತಿ ಪೂರ್ಣಗೊಳ್ಳುವ ಮೊದಲೇ ನಿಧನರಾದರು.   ಅವರ ಕುಟುಂಬದವರ ಸಂಕಲ್ಪದಿಂದ ಈ ಕೃತಿಯು 1993ರಲ್ಲಿ ಪ್ರಕಟಗೊಂಡಿತು. 

ಪೆಂಪೆಸೆದ ಅಮರ ಸಿರಿ ಭೂವಲಯಕೆರಗುವೆನು ಸಂಪನ್ನ ಭಾರತಿಗೆ ಭಕುತಿಯಲಿ ಬಾಗುವೆನು ಕಂಪೆಸೆದ ಕಸ್ತೂರಿ ಕನ್ನಡಕೆ ನಮಿಸುವೆನು ಇಂಪೊಗೆಯಲೀಯೆನ್ನ ಕಾವ್ಯಕಾನತನಹೆನು (ನಾಂದಿಪದ್ಯ)

ಇವರು ರಚಿಸಿದ ಗದ್ಯಕೃತಿಗಳೆಂದರೆ ‘ಒಲಿದು ಬಂದ ಸರಸ್ವತಿ’ (1952) ಕಥಾಸಂಗ್ರಹ; ಗಾಂಧೀಜಿ, ನೆಹರು, ವಿವೇಕಾನಂದ, ಠಾಕೂರ್ ಮುಂತಾದವರ ವ್ಯಕ್ತಿ ಚಿತ್ರಗಳ ವಿದ್ಯಾರ್ಥಿ ರತ್ನಗಳು (1954); ಶಾಂತವೇರಿ ಗೋಪಾಲಗೌಡರ ಜೀವನಚರಿತ್ರೆ (1981); ಪಂಚಾಕ್ಷರಿ ಗವಾಯಿಗಳ ‘ಗಾನಯೋಗಿ’ (1988) ಮತ್ತು ಕನ್ನಡ ಸಾಹಿತ್ಯ ಪರಿಷತ್‌ಗಾಗಿ ಸಂಪಾದಿಸಿದ ಕೃತಿ ‘ಪುಸ್ತಕ ಭಾಗ್ಯ’(1972); ಇತರ ಲೇಖಕರು ಇವರ ಕಾವ್ಯ ಸಮೀಕ್ಷೆ ನಡೆಸಿ ಪ್ರಕಟಿಸಿದ ಕೃತಿ ‘ಹಿ.ಮ.ನಾ. ಕಾವ್ಯ ಸಮೀಕ್ಷೆ’. 

ಹಿ. ಮ. ನಾಗಯ್ಯ ಅವರು ಆಕಾಶವಾಣಿ, ದೂರದರ್ಶನದ ವಾಹಿನಿಗಳಿಗಾಗಿ ಅನೇಕ ಸಂದರ್ಶನ, ಚಿಂತನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹಿಸಿ ಸಾಹಿತ್ಯಾಸಕ್ತಿ ಬೆಳೆಯುವಂತೆ ಮಾಡಿದ್ದರು. ಅಂತಾರಾಷ್ಟ್ರೀಯ ಕವಿಗಳ ಸಂಘ, ಬಿ.ಎಚ್‌.ಇ.ಎಲ್‌.  ಮತ್ತು ಇ.ಪಿ.ಡಿ ಕಾರ್ಖಾನೆಗಳ ಕನ್ನಡ ಸಂಘಗಳ ಅಧ್ಯಕ್ಷರಾಗಿ, ಉದಯಭಾನು ಕಲಾಸಂಘ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಮತ್ತು ಗಮಕ ಕಲಾ ಪರಿಷತ್‌ ಮುಂತಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 

ನಾಗಯ್ಯ ಅವರು ಬೆಂಗಳೂರು ನಗರ ಜನತಾದಳದ ಉಪಾಧ್ಯಕ್ಷರಾಗಿದ್ದರು.  ಬೆಂಗಳೂರು ನಗರ ಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದರು (1983-88) ಈ ಅವಧಿಯಲ್ಲಿ ಬೆಂಗಳೂರು ನಗರ ಸಭೆ ತೆರಿಗೆ ಅಪೀಲು ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ನಿಧನಾನಂತರ ಜಯನಗರದ ಒಂಬತ್ತನೆಯ ಬ್ಲಾಕಿನ 26ನೆಯ ಮುಖ್ಯರಸ್ತೆಗೆ ಹಿ.ಮ.ನಾಗಯ್ಯ ರಸ್ತೆ ಎಂದೇ ನಾಮಕರಣ ಮಾಡಿ ಗೌರವ ತೋರಿದ್ದಾರೆ. ನಾಗಯ್ಯನವರನ್ನು ಸೊಂಡೂರಿನಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗಿತ್ತು. 

ಹಿ. ಮ. ನಾಗಯ್ಯ ಅವರು 1992ರ  ಜುಲೈ 25ರಂದು ನಿಧನರಾದರು.

Writer and social worker H. M. Nagaiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ