ವೆಂಕಟೇಶ್ ಕುಮಾರ್
ಎಂ. ವೆಂಕಟೇಶ್ ಕುಮಾರ್
ಪಂಡಿತ್ ಎಂ. ವೆಂಕಟೇಶ್ ಕುಮಾರ್ ಕನ್ನಡದ ವಿಶಿಷ್ಟ ಸಂಗೀತಗಾರರು. ಅವರನ್ನು ಕನ್ನಡದ ವಿಶಿಷ್ಟ ಸಂಗೀತಗಾರರು ಎಂದು ಹೇಳುವಲ್ಲಿ ನನಗೆ ಅಪಾರ ಅಕ್ಕರೆಯಿದೆ. ಅವರಂತೆ ಸಂಗೀತದಲ್ಲಿ ಕನ್ನಡವನ್ನು ಅಕ್ಕರೆಯಿಂದ ಹೆಚ್ಚು ಬಳಸಿದವರು, ಅದರಲ್ಲೂ ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿ ಬಳಸಿದವರು ತುಂಬಾ ಕಡಿಮೆ. ಹಾಗಾಗಿ ಅವರು ಕನ್ನಡದ ಮಹಾನ್ ಸಂಗೀತಗಾರರು ಎಂದು ಹೇಳಿಕೊಳ್ಳುವುದರಲ್ಲಿ, ನನ್ನಂತ ಕನ್ನಡದ ಹೃದಯಗಳಿಗಂತೂ ಬಲು ಹೆಮ್ಮೆಯ ಸಂಗತಿ. ಅವರ ಧ್ವನಿಯಲ್ಲಿ ಮೂಡುವ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಪದೇ ಪದೇ ಸವಿಯುತ್ತಲೇ ಇರಬೇಕೆನಿಸುವಷ್ಟು ಸ್ವಾದಿಷ್ಟ. ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಎಂಬುದು ಅವರ ಬಹು ಜನಪ್ರಿಯ ಗಾಯನ. ಅಂತೆಯೇ ಅವರ ಸಂಗೀತವನ್ನು ಕನ್ನಡ ಸಂಗೀತ ಪ್ರೇಮಿಗಳಿಗೆ ಬಿಟ್ಟಿರಲಾಗದಂತಹ ಸವಿಜೇನು.
ಇನ್ನು ಸಂಗೀತ ವಿಶ್ವವಿಶಾಲತೆಯಲ್ಲಿ
ಪಂಡಿತ್ ವೆಂಕಟೇಶ ಕುಮಾರ್ ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರು.
ಪಂಡಿತ್ ವೆಂಕಟೇಶ್ ಕುಮಾರ್ 1953ರ ಜುಲೈ 1ರಂದು ಜನಿಸಿದರು. ಬಳ್ಳಾರಿ ಹತ್ತಿರದ ಲಕ್ಷ್ಮೀಪುರ ಇವರು ಜನಿಸಿದ ಗ್ರಾಮ. ಇವರ ತಂದೆ ಹುಲೆಪ್ಪ ಅವರು ಜಾನಪದ ಗಾಯಕರೂ ಮತ್ತು ತೊಗಲುಬೊಂಬೆಯಾಟದ ಕಲಾವಿದರೂ ಆಗಿದ್ದರು. ತಮ್ಮ ಗಾಯನದ ಮೇಲೆ ತಮ್ಮ ತಂದೆಯವರ ಜಾನಪದ ಶೈಲಿಯ ಛಾಪಿದೆ ಎಂದು ಇವರು ಹೇಳುತ್ತಾರೆ.
ವೆಂಕಟೇಶ ಕುಮಾರ್ 15ರ ಬಾಲಕರಾಗಿದ್ದಾಗ ಇವರ ಚಿಕ್ಕಪ್ಪನವರಾದ ಬೆಳಗಲ್ಲು ವೀರಣ್ಣ ಅವರು, ಹಿಂದೂಸ್ಥಾನಿ ಸಂಗೀತದ ಮೇರು ಶಿಖರರಾದ ಗದಗದ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮಕ್ಕೆ ಇವರನ್ನು ಕರೆತಂದರು. ಮುಂದಿನ 12 ವರ್ಷಗಳ ಕಾಲ ವೆಂಕಟೇಶ ಕುಮಾರ್ ಅವರು ಪುಟ್ಟರಾಜ ಗವಾಯಿಗಳ ಬಳಿ ಗ್ವಾಲಿಯರ್ ಘರಾಣ ಮತ್ತು ಕಿರಾಣಾ ಘರಾಣದ ಸಂಗೀತ ಸೂಕ್ಷ್ಮಗಳೆಲ್ಲವನ್ನೂ ಅನುಭಾವಿಸಿ ಅಂತರ್ಗತವಾಗಿಸಿಕೊಂಡರು. ವೆಂಕಟೇಶ ಕುಮಾರ್ ಅವರ ಸಂಗೀತ ಪ್ರಸ್ತುತಿಗಳಲ್ಲಿ ಈ ಘರಾಣೆಗಳ ಆಚೆಗಿನ ಬಡೇ ಗುಲಾಮ್ ಅಲಿ ಖಾನ್ ಅವರ ಪಾಟಿಯಾಲ ಘರಾಣದ ಛಾಪೂ ಇದೆ. ಅವರ ಸರಗಮ್ ಪ್ರಸ್ತುತಿಯ ಮಾದರಿಗಳಲ್ಲಿ ಕರ್ನಾಟಕ ಸಂಗೀತ ಪದ್ಧತಿಯ ಅಭಿವ್ಯಕ್ತಿಗಳೂ ಕೇಳುಗನ ಹೃದಯಕ್ಕೆ ಗೋಚರಿಸುವಂತಿವೆ.
ಪಂಡಿತ್ ವೆಂಕಟೇಶ್ ಕುಮಾರ್ 1988ರ ವೇಳೆಗೆ ಆಕಾಶವಾಣಿಯ 'ಎ' ಶ್ರೇಣಿಯ ಕಲಾವಿದರಾಗಿ ಪರಿಗಣಿತರಾದರು. ಆದಾಗ್ಯೂ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಮೊದಲ ಪ್ರಮುಖ ಅವಕಾಶ ಸಿಕ್ಕಿದ್ದು ಅವರು ವೀರೇಶ್ವರ ಪುಣ್ಯಾಶ್ರಮದಲ್ಲಿ ಸಾಧನೆ ಮಾಡಿ ಬಂದ ಹದಿನಾಲ್ಕು ವರ್ಷಗಳ ನಂತರವೇ. 1993ರಲ್ಲಿ ಪಂಡಿತ್ ಭೀಮಸೇನ್ ಜೋಶಿ ಅವರು ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪುಣೆಯಲ್ಲಿನ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸಿದರು. ಹಾಗಿದ್ದರೂ ರಾಷ್ಟ್ರೀಯ ಮಟ್ಟದಲ್ಲಿನ ನಿರಂತರ ಗಾಯಕರಾಗುವುದಕ್ಕೆ ಅವರು ಮುಂದೆ ಇನ್ನೂ ಹತ್ತು ವರ್ಷ ಕಾಯಬೇಕಾಯಿತು. ಮುಂದೆ ಅವರ ಕಾರ್ಯಕ್ರಮಗಳು ಎಲ್ಲ ಪ್ರತಿಷ್ಟಿತ ಉತ್ಸವಗಳು ಮತ್ತು ವೇದಿಕೆಗಳಲ್ಲಿ ನಿರಂತರವಾಗಿ ಹರಿಯುತ್ತಿವೆ.
ಭಕ್ತಿ ಸಂಗೀತದಲ್ಲಂತೂ ಪಂಡಿತ್ ವೆಂಕಟೇಶ ಕುಮಾರ್ ಅವರದು ಪ್ರಮುಖ ಹೆಸರು. ಕನ್ನಡ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿನ ಅವರ ಗಾಯನಗಳು ವಿಶ್ವದಾದ್ಯಂತ ಜನಪ್ರಿಯಗೊಂಡಿವೆ. ಅವರ ಅನೇಕ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತದ ಆಲ್ಬಮ್ಗಳು ಅಪಾರ ಜನಪ್ರಿಯತೆ ಗಳಿಸಿವೆ.
ಪಂಡಿತ್ ವೆಂಕಟೇಶ್ ಕುಮಾರ್ ಗಂಧರ್ವ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಅವರು ಗದಗದ ಬಳಿಯ ವಿಜಯ ಮಹಾಂತೇಶ ಕಲಾ ಕಾಲೇಜಿನಲ್ಲಿ ಒಂದೂವರೆ ವರ್ಷಗಳ ಕಾಲ ಬೋಧಕರಾಗಿದ್ದರು. ಉಡುಪಿಯ ಮುಕುಂದ ಕೃಪಾದಲ್ಲಿಯೂ ಕೆಲಕಾಲ ಬೋಧಿಸಿದ್ದರು. ಧಾರವಾಡ ವಿಶ್ವವಿದ್ಯಾಲಯದ ಸಂಗೀತ ಕಾಲೇಜಿನಲ್ಲಿ 33 ವರ್ಷಗಳ ಕಾಲ ಬೋಧಿಸಿ 2015ರಲ್ಲಿ ನಿವೃತ್ತರಾದರು. ಇವರು ರಚಿಸಿದ ಸಂಗೀತ ಕೃತಿಗಳು ಪಠ್ಯಪುಸ್ತಕಗಳಾಗಿವೆ.
ಪಂಡಿತ್ ವೆಂಕಟೇಶ ಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ವತ್ಸಲ ಭೀಮಸೇನ ಜೋಶಿ ಪ್ರಶಸ್ತಿ, ಕೃಷ್ಣ ಹಾನಗಲ್ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಭಾರತ ಸರ್ಕಾರದ ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
Our great vocalist Pandit Venkatesh Kumar
ಕಾಮೆಂಟ್‌ಗಳು