ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾತಂತ್ರ್ಯ ನೋಟ - 6

 

ಸ್ವಾತಂತ್ರ್ಯ ನೋಟ - 6

1857 ಜೂನ್‍ರಲ್ಲಿ ರೂಢಿಗೆ ತಂದ ಎನ್‍ಫಿಲ್ಡ್ ಬಂದೂಕುಗಳಿಗೆ ಹಂದಿ ಇಲ್ಲವೆ ಹಸುವಿನ ಕೊಬ್ಬು ಹಚ್ಚಿದ ಕಾಡಕತೂಸುಗಳನ್ನು ಬಳಸಬೇಕಾಗಿದ್ದು ಅದನ್ನು ಬಾಯಿಯಿಂದ ಕಚ್ಚಿ ತೆಗೆಯಬೇಕೆಂಬ ನಿಯಮ ಮಾಡಲಾಗಿದ್ದುದ್ದರಿಂದ ಹಿಂದೂಗಳ ಮತ್ತು ಮುಸಲ್ಮಾನರ ಭಾವನೆಗಳಿಗೆ ತೀವ್ರವಾಗಿ ನೋವಾಯಿತು. ಬಾಯಿಯಿಂದ ಕಚ್ಚಿ ತೆರೆಯಬೇಕೆಂಬ ನಿಯಮವನ್ನು ಹಿಂದೆಗೆದರೂ ಆ ಕಾಡತೂಸುಗಳನ್ನೇ ಬಳಕೆಯಿಂದ ಹಿಂದೆಗೆದರೂ ಸಿಪಾಯಿಗಳಲ್ಲಿಯ ಅಸಮಾಧಾನ ಕುಂದಲಿಲ್ಲ.

ಇದಲ್ಲದೆ ಕ್ರಿಮಿಯಾ ಯುದ್ಧದಲ್ಲಿ ಬ್ರಿಟಿಷರಿಗೆ ಗೆಲುವಾಗಿದೆಯೆಂಬುದು ಸುಳ್ಳು. ಈ ಯುದ್ಧದಿಂದ ಬ್ರಿಟನ್ ತೀರ ದುರ್ಬಲವಾಗಿದೆ. ಈಗ ಬಂಡೆದ್ದರೆ ಜಯ ಖಚಿತ ಎಂಬ ಭಾವನೆ ಭಾರತದ ಹಲವು ವರ್ಗಗಳಲ್ಲಿ ಬೆಳೆದಿತ್ತು. ಅಲ್ಲದೆ ಭಾರತದಲ್ಲಿ ಆಂಗ್ಲರಿಗಿಂತ ಭಾರತೀಯ ಸಿಪಾಯಿಗಳ ಸಂಖ್ಯೆ ಹೆಚ್ಚಿತ್ತು. 1856ರಲ್ಲಿ ಬಂಗಾಲದಲ್ಲಿ 45,322 ಬಿಳಿಯ ಸೈನ್ಯಕ್ಕೆ ಹೋಲಿಸಿದರೆ 2,33,000 ಭಾರತೀಯ ಸಿಪಾಯಿಗಳಿದ್ದು ದೆಹಲಿ, ಅಲಹಾಬಾದ್ ಮುಂತಾದೆಡೆ ಬಿಳಿಯರು ತೀರ ಅಲ್ಪ ಸಂಖ್ಯಾತರಾಗಿದ್ದರು. ಸ್ವಾತಂತ್ರ್ಯ ಹೋರಾಟ ಮೇ 10ರಂದು ಮೇರಟ್ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾಗಿ ಎರಡೂ ಕಡೆಯ ಸಿಪಾಯಿಗಳು ಅಲ್ಲಿಯ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ದೆಹಲಿಗೆ ಸಾಗಿದರು. ಮಾರೋ ಪರಂಗಿಕೊ (ಬಿಳಿಯರನ್ನು ಕೊಲ್ಲಿ) ಎಂಬುದು ಅವರ ಘೋಷಣೆಯಾಗಿತ್ತು. ದೆಹಲಿಗೆ ಬಂದ ಸಿಪಾಯಿಗಳು ಬಹಾದೂರ್ ಷಾನನ್ನು ಭಾರತದ ಚಕ್ರವರ್ತಿಯೆಂದು ಸಾರಿದರು. ಮೂರು ವಾರಗಳ ಬಳಿಕ ಪೂರ್ವ ಯೋಜನೆಯಂತೆ ಬರೇಲಿ, ಕಾನ್‍ಪುರ, ಲಕ್ನೋ, ವಾರಾಣಾಸಿ, ಝಾನ್ಸಿ, ಜಗದೀಶಪುರ, ರಾಜಸ್ಥಾನದ ನಸೀರಾಬಾದ್ ಇಲ್ಲೆಲ್ಲ ಬಂಡಾಯವಾಗಿ, ಆಂಗ್ಲ ಅಧಿಕಾರಿಗಳ ಕೊಲೆಯಾಯಿತು. ಇದೆಲ್ಲ ಜೂನ್‍ನಲ್ಲಿ ನಡೆದರೆ ಲಕ್ನೋದಲ್ಲಿ ಜುಲೈಯಿಂದ ನವೆಂಬರ್ ತನಕ ಲಾರೆನ್ ಎಂಬ ಅಧಿಕಾರಿ ಸಿಪಾಯಿಗಳಿಂದ ಸುತ್ತುವರಿಯಲ್ಪಟ್ಟ. ಜೂನ್ 8ರಿಂದ ದೆಹಲಿಯನ್ನು ಮತ್ತೆ ಗೆಲ್ಲುವ ಯತ್ನ ನಡೆದು ಸೆಪ್ಟೆಂಬರ್ 14ರಂದು ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಲಕ್ನೋವನ್ನು 1858 ಮಾರ್ಚ್ 21ರಲ್ಲೂ ಬರೇಲಿಯನ್ನು ಮೇ ತಿಂಗಳಲ್ಲೂ ವಶಪಡಿಸಿಕೊಂಡರು. 

ಈ ವೇಳೆಗೆ 20,000 ಸೈನಿಕರೊಡನೆ ಯಮುನಾ ನದಿಯನ್ನು ದಾಟಿ ತಾಂತ್ಯ ಟೋಪಿ ಝಾನ್ಸಿ ರಾಣಿಯನ್ನು ಸೇರಿಕೊಂಡು ಮೇ 22ರಂದು ಕಾಲ್ಪಿಯಲ್ಲಿ ಬ್ರಿಟಿಷರ ವಿರುದ್ಧ ಮುಖಾಮುಖಿ ಯುದ್ಧ ಮಾಡಿ ಸೋತ. ಅಲ್ಲಿಂದ ಆತ ಗ್ವಾಲಿಯರ್‍ಗೆ ಹೋದಾಗ ಗ್ವಾಲಿಯರ್‍ನ ಸಿಂಧ್ಯ ಆಗ್ರಾಕ್ಕೆ ಓಡಿಹೋದ. ಗ್ವಾಲಿಯರ್ ತಾಂತ್ಯನ ವಶವಾಯಿತು. ಝಾನ್ಸಿರಾಣಿ ಜೂನ್ 17ರಂದು ಯದ್ಧದಲ್ಲಿ ಮಡಿದಳು. ತನ್ನ ಸೈನಿಕರನ್ನು ಕಳೆದುಕೊಂಡು ತಾಂತ್ಯಟೋಪೆ 1859 ಏಪ್ರಿಲ್‍ನಲ್ಲಿ ಬಂಧಿತನಾಗಿ ಮುಂದೆ ಪಾಶಿಗೇರಿಸಲ್ಪಟ್ಟ. ನಾನಾಸಾಹೇಬ ಅವಧ್‍ನ ಹಜರತ್ ಮಹಲ್ ಬೇಗಮಳೊಡನೆ ನೇಪಾಲಕ್ಕೆ ಪಲಾಯನ ಮಾಡಿದ. 

ಇದೇ ಕಾಲಕ್ಕೆ ಕರ್ನಾಟಕದಲ್ಲಿ ಹಲಗಲಿಯ ಬೇಡರು ಸುರಪುರದ ವೆಂಕಟಪ್ಪನಾಯಕ ನರಗುಂದದ ಬಾಬಾ ಸಾಹೇಬ ಮುಂಡರಿಗಿಯ ಭೀಮರಾಯ ಇವರೆಲ್ಲ 1857-58ರ ಅವಧಿಯಲ್ಲಿ ಬಂಡು ಹೂಡಿದರು. ಉತ್ತರ ಕನ್ನಡದ ಸೂಪಾ ತಾಲ್ಲೂಕಿನಲ್ಲಿ ಸಾವಂತ್ ಸೋದರರು ಹಾಗೂ ಫಡ್ನೀಸ್ ಸೋದರರು 1858-59ರಲ್ಲಿ ಬಂಡು ಹೂಡಿದರು. 1857ರ ಬಂಡಾಯ ವಿಫಲವಾಗಿ ಬ್ರಿಟಿಷರಿಗೆ ಜಯಲಭಿಸಲು ಅನೇಕ ಕಾರಣಗಳುಂಟು. ಅವುಗಳಲ್ಲಿ ಬಂಡಾಯಗಾರರಲ್ಲಿಯ ಸಾಧನ ಸಲಕರಣೆಗಳು ಕೆಳದರ್ಜೆಯವಾಗಿದ್ದು ಬ್ರಿಟಿಷರು ಬಳಸಿದ್ದು ಉತ್ತಮ ಮಟ್ಟದವುಗಳಾಗಿದ್ದುವು. ಬ್ರಿಟಿಷರು ತಮ್ಮ ಕಾರ್ಯಾಚರಣೆಯಲ್ಲಿ ಏಕಸೂತ್ರತೆ ವೇಗ ಸಾಧಿಸಲು ಅಂಚೆತಂತಿ ಸಾಧನಗಳನ್ನು ಬಳಸಿಕೊಂಡರು. ಬಂಡಾಯವನ್ನು ಇನ್ನೂ ವ್ಯಾಪಕವಾಗಿ ಸಂಘಟಿಸುವ ಅವಶ್ಯಕತೆ ಇತ್ತು. ಅಂಬಾಲಾ, ಮೆರಟ್‍ಗಳಲ್ಲಿ ಪೂರ್ವ ತಯಾರಿಗೆ ಮೊದಲೇ ಬಂಡಾಯವಾಯಿತು. ಹೀಗೆ ಹಲವು ಕಾರಣಗಳಿಂದ ಈ ಸ್ವಾತಂತ್ರ್ಯ ಸಂಗ್ರಾಮ ವಿಫಲವಾದರೂ ಬ್ರಿಟಿಷ್ ವಿರೋಧಿ ಚಟುವಟಿಕೆಗಳೇನೂ ನಿಲ್ಲಲಿಲ್ಲ.

1857ರ ಅನಂತರ ಆದ ಬಂಡಾಯಗಳಲ್ಲಿ ವಾಸುದೇವ ಬಳವಂತ ಫಡಕೆಯ ಉತ್ಥಾನ ಉಲ್ಲೇಖನೀಯ. ರಾಮೋಶಿಗಳೆಂಬ ಬೇಡರನ್ನು ಪುಣೆಯ ಪರಿಸರದಲ್ಲಿ ಸಂಘಟಿಸಿ 1879ರಲ್ಲಿ ಬಂಡಾಯ ಹೂಡಿದ ಅವನು ಹೈದರಾಬಾದ್ ಸಂಸ್ಥಾನ ಪ್ರವೇಶಿಸಿ ಗಾಣಗಾಪುರದಿಂದ ರೋಹಿಲರನ್ನು ಸಂಘಟಿಸಲು ಯತ್ನಿಸಿದ. ಆದರೆ ಬಿಜಾಪುರ ಜಿಲ್ಲೆಯ ದೇವರನಾವಗಿಯಲ್ಲಿ ಬಂಧಿತನಾಗಿ ಏಡನ್ ದ್ವೀಪಾಂತರವಾಸಕ್ಕೆ ಕಳುಹಿಸಲ್ಪಟ್ಟ.

18ನೆಯ ಶತಮಾನದ ಮಧ್ಯದಲ್ಲಿ ಸಿಖ್ಖರಲ್ಲಿ ಆರಂಭವಾದ ಒಂದು ಸುಧಾರಣಾ ಚಳವಳಿ ಮುಂದೆ ರಾಜಕೀಯ ಸ್ವಾತಂತ್ರ್ಯಕ್ಕೆ ಯತ್ನಿಸಿತು. ಇದೇ ತೂಕಾ ಚಳವಳಿ, ರಾಮಸಿಂಗ್ ತೂಕಾ ಇವರ ನಾಯಕನಾದ. ಗೋಹತ್ಯೆ ಪ್ರತಿಬಂಧಿಸಬೇಕೆಂದು ಒತ್ತಾಯಿಸಿ ಗೋಹಂತಕರ ಕೊಲೆಯನ್ನು 1871ರಲ್ಲಿ ಆರಂಭಿಸಿದರು. ಇದಕ್ಕಾಗಿ ಒಂಬತ್ತುಮಂದಿ ತೂಕಾಗಳಿಗೆ ಪಾಶಿ, ಇಬ್ಬರಿಗೆ ದ್ವೀಪಾಂತರವಾಸದ ಶಿಕ್ಷೆ ಆಯಿತು. ಇದರಿಂದ 150ತೂಕಾಗಳು ಸಿಟ್ಟೆದ್ದು ರಾಮ ಸಿಂಗನ ಮಾತನ್ನೂ ಕೇಳದೆ ಫಡಿಯಾಲಾ ಮತ್ತು ಕೋಟ್ಲಾ ಸಂಸ್ಥಾನಗಳಲ್ಲಿ ಗೊಂದಲವೆಬ್ಬಿಸಲು 68 ಜನ ಬಂಧಿತರಾದರು, 49 ಜನರನ್ನು ಫಿರಂಗಿ ಹಾರಿಸಿ ಕೊಲ್ಲಲಾಯಿತು. 1872ರಲ್ಲಿ ರಾಮಸಿಂಗನನ್ನು ರಂಗೂನಿಗೆ ಗಡೀಪಾರು ಮಾಡಿದರು. ಈ ಎರಡು ಪ್ರಕರಣಗಳು ದೇಶಭಕ್ತರ ಮೇಲೆ ಅಪಾರ ಪ್ರಭಾವ ಬೀರಿದುವು. 1857ರ ವಿಫಲ ಬಂಡಾಯ ಮತ್ತು ಈ ಪ್ರಕರಣಗಳ ಹಿನ್ನೆಲೆಯಲ್ಲಿ ಮುಂದೆ ಕ್ರಾಂತಿಕಾರೀ ಚಟುವಟಿಕೆಗಳು ಬೆಳೆದುವು.

ನಾಳೆ ಮುಂದುವರೆಸೋಣ

(ಮಾಹಿತಿ ಆಧಾರ:. ಮೈಸೂರು ವಿಶ್ವಕೋಶ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ