ಕಮಲಾ ನೆಹರು
ಕಮಲಾ ನೆಹರು
ಕಮಲಾ ನೆಹರು ಅವರು ಜವಹರಲಾಲ್ ನೆಹರು ಅವರ ಪತ್ನಿಯಾಗಿ ಹಾಗೂ ತಾವೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾತ್ರ ನಿರ್ವಹಿಸಿದವರಾಗಿ ಹೆಸರಾಗಿದ್ದಾರೆ.
ಕಮಲಾ ನೆಹರು 1899ರ ಆಗಸ್ಟ್ 1ರಂದು ಜನಿಸಿದರು. ತಂದೆ ದೆಹಲಿಯಲ್ಲಿ ಪ್ರಸಿದ್ಧ ವರ್ತಕರಾಗಿದ್ದ ಜವಹರ್ಲಾಲ್ ಕೌಲ್. 1916ರ ವಸಂತ ಪಂಚಮಿಯಂದು ಕಮಲಾ ಜವಹರರ ಕೈಹಿಡಿದರು. ಆಗ ಈಕೆಯ ವಯಸ್ಸು 16. ನೋಡಲು ತುಂಬ ಸುಂದರಿಯಾಗಿದ್ದ ಈಕೆ ತುಸು ತೆಳ್ಳಗೆ, ಉದ್ದವಾಗಿದ್ದರು. ತುಂಬ ಸೌಮ್ಯಸ್ವಭಾವದ ಈಕೆಯಲ್ಲಿ ಸೌಂದರ್ಯ, ಮಾಧುರ್ಯಗಳ ಜೊತೆಗೆ ಆರೋಗ್ಯದ ಕಾಂತಿಯೂ ಮೇಳವಿಸಿತ್ತು. ಸಂಪ್ರದಾಯಸ್ಥ ಮನೆತನದಿಂದ ಬಂದ ಕಮಲಾ ಅಲ್ಪಸ್ವಲ್ಪ ಶಾಲೆಯ ವಿದ್ಯಾಭ್ಯಾಸವನ್ನು ಬಿಟ್ಟರೆ ಹೆಚ್ಚು ಓದಿರಲಿಲ್ಲ. ಪಾಶ್ಚಾತ್ಯ ರೀತಿಯಲ್ಲಿ ನಡೆಯುತ್ತಿದ್ದ ನೆಹರು ಕುಟುಂಬಕ್ಕೆ ಹೊಂದಿಕೊಳ್ಳಲು ಮೊದಮೊದಲು ಕಷ್ಟವಾದರೂ ಬಹುಬೇಗನೆ ಎಲ್ಲವನ್ನು ಕಲಿತುಕೊಂಡರು.
ಕಮಲಾ ಜವಹರಲಾಲ್ ನೆಹರು ಅವರು ಮದುವೆಯಾದ ಮರುವರ್ಷವೇ ಅಂದರೆ 1917ರಲ್ಲಿ ಇವರ ಒಬ್ಬಳೇ ಮಗಳು ಇಂದಿರಾ ಹುಟ್ಟಿದಳು. ಭಾರತದ ರಾಜಕೀಯದಲ್ಲಿ ಉತ್ಕ್ರಾಂತಿಯ ಕಾವೇರುತ್ತಿದ್ದ ಕಾಲದಲ್ಲಿ ಕಮಲಾ ಜವಹರರ ಕೈಹಿಡಿದರು. ಹೋಂ ರೂಲ್ ಚಳವಳಿ, ಪಂಜಾಬಿನ ಮಾರ್ಷಲ್ ಲಾ, ಅಸಹಕಾರ ಮುಂತಾದ ಘಟನಾಪರಂಪರೆಗಳ ಕಾಲವದು. ಆಗ ಜವಹರರು ಸಂಪುರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಆಂದೋಲನದಲ್ಲಿ ಮುಳುಗಿ ಹೋಗಿದ್ದರು. ಇದರಿಂದ ಕಮಲಾ ಮದುವೆಯಾದ ಕೆಲದಿನಗಳಲ್ಲಿಯೇ ಪತಿಯಿಂದ ಅಗಲಿರಬೇಕಾಯಿತು. ಪ್ರತಿ ಹೆಂಗಳೆಯೂ ನಿರೀಕ್ಷಿಸಬಹುದಾದ ವೈವಾಹಿಕಜೀವನದ ಸುಖ ಸಂತೋಷಗಳಿಂದ ಕಮಲಾ ವಂಚಿತರಾದರೂ ತಾಳ್ಮೆಗೆಡದೆ ಎಲ್ಲವನ್ನೂ ಸಹಿಸಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವ ಅವಕಾಶ ದೊರೆತಾಗ ಕಮಲಾ ತಾವೂ ಸಂತೋಷದಿಂದ ಮುನ್ನುಗ್ಗಿದರು. ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿದ್ದ ಅವರು ಸ್ವಯಂಸೇವಕಿಯರ ತಂಡವನ್ನು ಕಟ್ಟಿ,
ಹಳ್ಳಿಹಳ್ಳಿಗಳನ್ನು ಸುತ್ತಿ ವಿದೇಶೀ ವಸ್ತ್ರಬಹಿಷ್ಕಾರ, ಮದ್ಯಪಾನನಿರೋಧ ಮುಂತಾದ ವಿಷಯಗಳ ಬಗ್ಗೆ ಭಾಷಣ ಮಾಡಿದರು. ಮಾವ ಮತ್ತು ಪತಿ ಇಬ್ಬರೂ ಸೆರೆಗೆ ಹೋದಾಗ ಅವರ ಸ್ಥಾನದಲ್ಲಿ ನಿಂತು ಚಳವಳಿಯನ್ನು ಮುಂದುವರಿಸಿದರು. ಅನಾರೋಗ್ಯದಿಂದ ನರಳುತ್ತಿದ್ದರೂ ಲೆಕ್ಕಿಸದೆ ಸುಡುಬಿಸಿಲಿನಲ್ಲಿ ಅಂಗಡಿಗಳ ಮುಂದೆ ನಿಂತು ವಿದೇಶೀ ವಸ್ತ್ರಬಹಿಷ್ಕಾರದ ಪ್ರಚಾರ ಕೈಗೊಂಡರು. ಸಹಸ್ರಾರು ಜನರನ್ನು ಸಂಘಟಿಸಿ ಮೆರವಣಿಗೆಯಲ್ಲಿ ಕರೆದೊಯ್ದು ಸರ್ಕಾರವನ್ನು ಪ್ರತಿಭಟಿಸಿದರು. ಕೆಲವು ಕಾಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕೆಲಸಗಳನ್ನೆಲ್ಲ ದಕ್ಷತೆಯಿಂದ ನಿರ್ವಹಿಸಿದರು. ತಮ್ಮ ಧೈರ್ಯ, ಸಾಹಸ, ಸಂಘಟನಾ ಶಕ್ತಿಗಳಿಂದ ಅಲಹಾಬಾದಿನಲ್ಲಿ ಜನಪ್ರಿಯ ನಾಯಕಿಯಾದರು. ಇವರ ಅಸಾಧಾರಣ ಕಾರ್ಯಶಕ್ತಿಯನ್ನು ನೋಡಿ ಪತಿ ಮತ್ತು ಮಾವಂದಿರೇ ನಿಬ್ಬೆರಗಾದರು. ಚಳವಳಿಯಲ್ಲಿ ಗಾಯಗೊಂಡವರಿಗಾಗಿ ಆನಂದಭವನದ ಒಂದು ದೊಡ್ಡ ಕೋಣೆಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸಹಸ್ರಾರು ಜನರಿಗೆ ಶುಶ್ರೂಷೆ ನೀಡಿದರು. ಈ ಎಲ್ಲ ಚಟುವಟಿಕೆಗಳಿಗಾಗಿ 1931 ಜನವರಿ 1ರಂದು ಸರ್ಕಾರ ಈಕೆಯನ್ನು ಬಂಧಿಸಿತು.
1924ರಲ್ಲಿ ಕಮಲಾ ಒಂದು ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ಉಳಿಯಲಿಲ್ಲ. ಅಂದಿನಿಂದ ಅವರ ಆರೋಗ್ಯ ಕ್ಷೀಣಿಸುತ್ತ ಬಂತು. ವೈದ್ಯರು ಕ್ಷಯವೆಂದರು. 1926ರಲ್ಲಿ ಕಾಯಿಲೆ ಉಲ್ಬಣಿಸಿದಾಗ ವೈದ್ಯರ ಸಲಹೆಯಂತೆ ಪತಿ ಮತ್ತು ಪುತ್ರಿಯರೊಂದಿಗೆ ಸ್ವಿಟ್ಸರ್ಲೆಂಡಿಗೆ ತೆರಳಿದರು. 1927ರ ಹೊತ್ತಿಗೆ ಆರೋಗ್ಯ ತುಸು ಸುಧಾರಿಸಿತು. ಆ ಸಮಯದಲ್ಲಿ ಪತಿಯೊಂದಿಗೆ ಪ್ಯಾರಿಸ್, ಬರ್ಲಿನ್, ಮಾಸ್ಕೊ ಮುಂತಾದೆಡೆಗಳಲ್ಲಿ ಸಂಚರಿಸಿ ತಾಯ್ನಾಡಿಗೆ ಹಿಂತಿರುಗಿದರು. ಅನಾರೋಗ್ಯವನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಚಳವಳಿಯಲ್ಲಿ ಮೈಮರೆತು ದುಡಿದರು. ಇದರಿಂದ ಮತ್ತೊಮ್ಮೆ ಹಾಸಿಗೆ ಹಿಡಿಯಬೇಕಾಯಿತು. ಆಗಲೂ ಚಳವಳಿಯಲ್ಲಿ ಭಾಗವಹಿಸಲಾಗದುದಕ್ಕಾಗಿ ಚಡಪಡಿಸುತ್ತಿದ್ದರು.
1934ರ ಹೊತ್ತಿಗೆ ಕಮಲಾ ಅವರ ರೋಗ ವಿಷಮಿಸಿತು. ಆ ಸಮಯದಲ್ಲಿ ಜವಹರರು ಎರಡು ವರ್ಷ ಕಾರಾಗೃಹವಾಸದಲ್ಲಿದ್ದರು. ಕಾಯಿಲೆ ಮತ್ತಷ್ಟು ಉಲ್ಬಣಿಸಿದಾಗ ವೈದ್ಯರ ಸಲಹೆಯಂತೆ ಕಮಲಾ ಜರ್ಮನಿಯ ಬೇಡನ್ವೇಲರ್ಗೆ ತೆರಳಬೇಕಾಯಿತು. ಆಗ ಇಂದಿರಾ ಇವರ ಜೊತೆಗಿದ್ದಳು. ಮೂರುನಾಲ್ಕು ತಿಂಗಳಾದರೂ ಸ್ಥಿತಿ ಉತ್ತಮವಾಗಲಿಲ್ಲ. ಇವರ ತೀವ್ರಪರಿಸ್ಥಿತಿಯನ್ನು ಗಮನಿಸಿ 1935 ಸೆಪ್ಟೆಂಬರ್ 4ರಂದು ಜವಹರರನ್ನು ಬಿಡುಗಡೆ ಮಾಡಿದರು. ಐದು ದಿನಗಳಲ್ಲಿಯೇ ಅವರು ಮಡದಿಯ ಬಳಿ ಸೇರಿದರು. ಎಂದಿನಂತೆ ಧೈರ್ಯ ತುಂಬಿದ ಮುಗುಳ್ನಗೆಯಿಂದ ಪತ್ನಿ ಪತಿಯನ್ನು ಸ್ವಾಗತಿಸಿದರು. ಪತಿಯ ಸಾನ್ನಿಧ್ಯದಿಂದ ಸಮಾಧಾನಗೊಂಡಂತೆ ತೋರಿತು. ಆದರೂ ಆರೋಗ್ಯ ಮರಳಲಿಲ್ಲ. 1936 ಜನವರಿ 30ರಂದು ಕಮಲಾ ಅವರನ್ನು ಸ್ವಿಟ್ಸರ್ಲೆಂಡಿನ ಲಾಸೆನ್ನಿಗೆ ಕರೆದೊಯ್ಯಲಾಯಿತು. ಫೆಬ್ರವರಿ 28ರ ಮುಂಜಾನೆ ನಿಧನರಾದರು.
ಜವಾಹರರು ಅನಂತರ ಬರೆದು ಮುಗಿಸಿದ ತಮ್ಮ ಆತ್ಮಕಥೆಯನ್ನು ಅಗಲಿದ ತಮ್ಮ ಧರ್ಮಪತ್ನಿಗೆ ಅರ್ಪಿಸಿದರು. ಅದರಲ್ಲಿ ಅವರು ಕಮಲಾರವರನ್ನು ಕುರಿತು ಹೀಗೆ ಹೇಳುತ್ತಾರೆ:
"ಆಕೆಯದು ಸರಳ ಹಾಗೂ ನಿಷ್ಕಪಟ ಮನೋಭಾವ. ಅವಳಲ್ಲಿದ್ದ ಕನ್ಯಾಸಹಜ ಮುಗ್ಧತೆ, ಪಾವಿತ್ರ್ಯಗಳು ಕೊನೆಯವರೆಗೂ ಮಾಸಲಿಲ್ಲ. ಅವಳು ಗೃಹಿಣಿಯಾಗಿ ಬೆಳೆದಂತೆ ಅವಳ ಕಣ್ಣುಗಳಲ್ಲಿ ಗಾಂಭೀರ್ಯ, ಓಜಸ್ಸುಗಳು ತುಳುಕುತ್ತಿದ್ದವು. ಅವು ಮೇಲುನೋಟಕ್ಕೆ ನಿಶ್ಚಲವಾದ ಕೊಳಗಳಂತಿದ್ದರೂ ಹಿಂದೆ ಬಿರುಗಾಳಿಯ ಮೊರೆತವಿತ್ತು. ಅಪರಿಚಿತರೊಡನೆ ಬಿಗಿಯಾಗಿ ವರ್ತಿಸುತ್ತಿದ್ದರೂ ಪರಿಚಿತರೊಡನೆ ತುಂಬ ಸಲುಗೆಯಿಂದ, ಉಲ್ಲಾಸದಿಂದ ವರ್ತಿಸುತ್ತಿದ್ದಳು. ಸೂಕ್ಷ್ಮಗ್ರಾಹಿಯಾದ ಅವಳಲ್ಲಿ ಅದ್ಭುತವಾದ ಆತ್ಮಗೌರವವಿತ್ತು. ಅವಳೆಂದೂ ನನ್ನ ಸಹಾಯವನ್ನಪೇಕ್ಷಿಸಿದವಳಲ್ಲ; ತನ್ನ ಆತ್ಮ ಒಪ್ಪುವಂತೆ, ಜನ ಮೆಚ್ಚುವಂತೆ ನಡೆಯ ಬೇಕೆಂದಾಶಿಸಿದಳು. ತನಗವಕಾಶ ದೊರೆತಾಗ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ತನ್ನ ಶಕ್ತಿಯನ್ನು ತೋರಿದಳು. ಮದುವೆಯಾದ ಮೊದಲ ವರ್ಷಗಳಲ್ಲಿ ನಮ್ಮ ನಡುವೆ ವಯಸ್ಸಿನ ಅಂತರಕ್ಕಿಂತ ಮಿಗಿಲಾಗಿ ಮಾನಸಿಕ ಅಂತರ ಹಿರಿದಾಗಿತ್ತು. ಇದರಿಂದ ನಮ್ಮಲ್ಲಿ ಸಣ್ಣಪುಟ್ಟ ಜಗಳಗಳಾಗುತ್ತಿದ್ದರೂ ಬಹುಬೇಗ ರಾಜಿಯಾಗುತ್ತಿದ್ದೆವು. ಬರಬರುತ್ತ ನಾನವಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಇದರಿಂದ ಒಬ್ಬರನ್ನೊಬ್ಬರು ಹೆಚ್ಚು ಹೆಚ್ಚಾಗಿ ಅರಿತುಕೊಂಡೆವು. ನಾವಿಬ್ಬರೂ ಪರಸ್ಪರ ಹತ್ತಿರಬಂದ ಕಾಲದಲ್ಲಿಯೇ ವಿಧಿ ಅವಳನ್ನು ನನ್ನಿಂದಗಲಿಸಿತು. ಮದುವೆಯಾದ ಹೊಸತರಲ್ಲಿ ನನ್ನಿಂದಾಕೆ ಯಾವ ಸುಖಸಂತೋಷಗಳನ್ನು ನಿರೀಕ್ಷಿಸಬಹುದಾಗಿದ್ದಿತೋ ಅವನ್ನು ನಾನು ನೀಡಲಿಲ್ಲ. ಆಗ ನನ್ನೆಲ್ಲ ಆಸಕ್ತಿಯೂ ಬೇರೆಡೆಗೆ ಕೇಂದ್ರೀಕೃತವಾಗಿತ್ತು. ನಮ್ಮ ಬಾಳು ಬಹುಪಾಲು ಅಗಲಿಕೆಯಲ್ಲಿಯೇ ಕಳೆಯಿತು.ಇದರಿಂದಾಕೆ ತುಂಬ ನೊಂದಿರಬೇಕು. ಆದರೆ ನಾನವಳನ್ನು ಸಂಪುರ್ಣವಾಗಿ ಮರೆಯಲಿಲ್ಲ. ದಣಿದ ನನ್ನ ಚೇತನ ಅವಳ ಆಶ್ರಯವನ್ನು ಮತ್ತೆ ಮತ್ತೆ ಬಯಸುತ್ತಿತ್ತು. ಅವಳಿಂದ ದೂರವಿದ್ದಾಗ ಅವಳ ನೆನಪೇ ನನ್ನ ಮನಸ್ಸಿಗೇ ತಂಪೀಯುತ್ತಿತ್ತು. ಅವಳು ಬಳಲಿದ ನನ್ನ ಮೈಮನಗಳಿಗೆ ಸಾಂತ್ವನ ನೀಡಿ ಮುಂದಿನ ಕೆಲಸಕ್ಕೆ ಶಕ್ತ್ಯುತ್ಸಾಹಗಳನ್ನು ತುಂಬದಿರುತ್ತಿದ್ದರೆ ನಾನೇನು ತಾನೆ ಸಾಧಿಸುತ್ತಿದ್ದೆ? ಅವಳಿಂದ ನಾನು ಬೇಕಾದಷ್ಟು ಪಡೆದೆ ನಿಜ, ಆದರೆ ನಾನವಳಿಗೆ ಕೊಟ್ಟಿದ್ದೇನು?. . . ಕಮಲಾ ಸಾಮಾನ್ಯರಂತೆ ಏನನ್ನೂ ನಿರೀಕ್ಷಿಸಲಿಲ್ಲ. ಆಕೆಯದು ಯಾವ ಪ್ರತಿಫಲವನ್ನೂ ಅಪೇಕ್ಷಿಸದ ಅನನ್ಯ ತ್ಯಾಗ. ಆ ತ್ಯಾಗ ಭಾರತೀಯ ಮಹಿಳೆಯ ಉಚ್ಚ ಆದರ್ಶದ ಪ್ರತೀಕ."
On the birth anniversary of Kamala Nehru
ಕಾಮೆಂಟ್‌ಗಳು