ಕುಮಾರಸಂಭವ
ಕುಮಾರಸಂಭವ ಮತ್ತು ಕಾರ್ತಿಕೇಯ
ಪಾರ್ವತೀಪುತ್ರನಾದ ಕುಮಾರಸ್ವಾಮಿ. ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.
ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಕುರುಂಜಿಯಾಂಡವನ್, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು ಅತ್ಯುಚ್ಚಸ್ಥಾನ, ಪೂಜೆ ಸಲ್ಲುತ್ತದೆ.
ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸನ ಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ.
ಪ್ರಸಿದ್ಧವಾದ ಕುಮಾರಸಂಭವವನ್ನು ಒಂದಿನಿತು ಮೆಲುಕುಹಾಕೋಣ.
ಕುಮಾರಸಂಭವ:
ಕಾಳಿದಾಸನಿಗೆ ಸಂಸ್ಕೃತ ಮಹಾಕವಿಗಳಲ್ಲಿ ಅಗ್ರಸ್ಥಾನವನ್ನು ದೊರಕಿಸಿದ ಕೃತಿಗಳಲ್ಲಿ ಕುಮಾರಸಂಭವವೂ ಪ್ರಮುಖವಾದುದು.
ಇಲ್ಲಿ ಜಗತ್ತಿಗೆ ತಾಯ್ತಂದೆಗಳಾದ . ಪಾರ್ವತೀಪರಮೇಶ್ವರರ ವಿವಾಹ ಹಾಗೂ ಪುತ್ರಪ್ರಾಪ್ತಿಯ ಏಕೈಕ ವಸ್ತುವಿದೆ; ಶೃಂಗಾರವೊಂದೇ ಪ್ರಧಾನರಸವಾಗಿದೆ.
ಪಾರ್ವತಿಪರಮೇಶ್ವರರ ಈ ಕಥೆ ರಾಮಾಯಣದಲ್ಲೂ ಶಿವಸ್ಕಾಂದ ಮುಂತಾದ ಪುರಾಣಗಳಲ್ಲೂ ಸಂಗ್ರಹವಾಗಿ ಇಲ್ಲವೆ ವಿಸ್ತಾರವಾಗಿ ಬಂದಿದೆ. ಅಶ್ವಘೋಷನಿಗೂ ಇದರ ಪರಿಚಯವಿತ್ತು. ಕಾಳಿದಾಸ ಯಾವುದೇ ಮೂಲದಿಂದ ಕಥೆಯನ್ನು ಆಯ್ದಿರಲಿ, ತನ್ನದೇ ಆದ ಪ್ರತಿಭೆಯಿಂದ ಈ ಮಹಾಕಾವ್ಯವನ್ನು ನೆಯ್ದಿದ್ದಾನೆ. ವಟುವೇಷದ ಶಿವನಿಗೂ ಪಾರ್ವತಿಗೂ ನಡೆಯುವ ಸಂವಾದ, ಮನ್ಮಥನ ಪ್ರತಾಪ, ರತಿವಿಲಾಪ, ಶಿವಪಾರ್ವತೀವಿಲಾಸ ಇತ್ಯಾದಿ ವರ್ಣನೆಗಳೆಲ್ಲ ಕವಿಪ್ರತಿಭೆಯೇ ಕಲ್ಪಿಸಿರುವ ಕುಸುಮಗಳಾಗಿವೆ.
ಒಂದನೇ ಸರ್ಗದಲ್ಲಿ ಉಮೆಯ ಮುಖದ ಮೇಲೆ ಲೀಲೆಯಿಂದಿಳಿದ ಲಾವಣ್ಯದೇವತೆಗೆ ಪದ್ಮದ ಪರಿಮಳವೂ ಚಂದ್ರನ ಕಾಂತಿಯೂ ಒಟ್ಟಿಗೇ ಲಭಿಸಿದುದಂತೆ. ನಾರದನಿಂದ ಈಕೆ ಶಿವನ ಕೈ ಹಿಡಿಯುವಳೆಂಬುದನ್ನರಿತು ಹಿಮವಂತ ಪಾರ್ವತಿಯನ್ನು ಅಲ್ಲಿಯೇ ತಪಗೈಯುತ್ತಿದ್ದ ಶಿವನ ಶುಶ್ರೂಷೆಗೆ ನೇಮಿಸುತ್ತಾನೆ.
ತಾರಕಾಸುರ ಬ್ರಹ್ಮನ ವರಗಳಿಂದ ಕೊಬ್ಬಿ ಇಂದ್ರಾದಿ ದೇವತೆಗಳಿಗೆ ಕೊಡುತ್ತಿದ್ದ ಹಿಂಸೆಯ ವರ್ಣನೆ ಎರಡನೆಯ ಸರ್ಗದ ವಸ್ತು. ಬೃಹಸ್ಪತಿಯ ನೇತೃತ್ವದಲ್ಲಿ ದೇವತೆಗಳೇ ಬ್ರಹ್ಮನ ಬಳಿಗೆ ಬಂದು ಗೋಳಿಡುತ್ತಾರೆ. ದೇವತೆಗಳ ಶಕ್ತಿಯೆಲ್ಲ ತಾರಕಾಸುರನ ಮುಂದೆ ಉಡುಗಿಹೋಗಿ ಅವರು ನಿಸ್ಸಹಾಯರಾಗಿದ್ದಾರೆ. ವಿಷ್ಣು ಚಕ್ರವನ್ನು ಬಿಟ್ಟರೆ ಅದು ರಕ್ಕಸನ ಕೊರಳ ಹಾರವಾಯಿತಂತೆ.
ಶಿವಪಾರ್ವತಿಯರಿಗೆ ವಿವಾಹವಾದರೆ ಅವರ ಮಗನಿಂದ ತಾರಕವಧೆಯಾಗುವುದೆಂದು ಬ್ರಹ್ಮ ದೇವತೆಗಳನ್ನು ಸಂತೈಸಿ ಕಳುಹುತ್ತಾನೆ.
ಈ ಕಾರ್ಯಕ್ಕೆ ಮನ್ಮಥನೇ ಯೋಗ್ಯನೆಂದು ಇಂದ್ರ ಅವನಿಗೆ ಮರ್ಯಾದೆ ಮಾಡಿ ಶಿವನ ಮನಸ್ಸನ್ನು ಪಾರ್ವತಿ ಅಪಹರಿಸುವಂತೆ ಮಾಡಬೇಕೆಂದು ನೇಮಿಸುತ್ತಾನೆ. ಮನ್ಮಥನ ಮಿತ್ರನಾದ ವಸಂತನ ಆಗಮನದಿಂದ ಆಶ್ರಮದ ಗಿಡಮರಬಳ್ಳಿಗಳಲ್ಲಿ ಪಶುಪಕ್ಷಿಗಳಲ್ಲಿ ಕೂಡ ಕಾಮವಿಕಾರಗಳು ಅಂಕುರಿಸುವುವು.
ಮೂರನೆಯ ಸರ್ಗದ ಈ ಪ್ರಕೃತಿವರ್ಣನೆ ಪಾರ್ವತಿಯ ದಿವ್ಯಸೌಂದರ್ಯದ ವರ್ಣನೆಗೆ ಹಿನ್ನೆಲೆಯಾಗಿ ಬಂದಿದ್ದು ಸಂಸ್ಕೃತ ಸಾಹಿತ್ಯದಲ್ಲಿಯೇ ಅತ್ಯಂತ ರಸಮಯವಾಗಿದೆ. ಸಮಯ ಸಾಧಿಸಿ ಕಾಮ ತನ್ನ ಸಮ್ಮೋಹನಾಸ್ತ್ರವನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ. ಒಂದು ಕ್ಷಣ ಅವನ ಮನಸ್ಸೂ ಚಂಚಲವಾಗುತ್ತದೆ. ಮರುಕ್ಷಣವೇ ಅವನ ನೇತ್ರಾಗ್ನಿ ಕಾಮನನ್ನು ಸುಟ್ಟು ಬೂದಿ ಮಾಡುತ್ತದೆ.
ನಾಲ್ಕನೆಯ ಸರ್ಗದ ತುಂಬ ರತಿಯ ಪ್ರಲಾಪ ವರ್ಣಿತವಾಗಿದೆ. ಕರುಣರಸ ಇಲ್ಲಿ ಹೊನಲಾಗಿ ಹರಿದಿದೆ. ಶೃಂಗಾರದಂತೆ ಕರುಣ ರಸಪ್ರತಿಪಾದನೆಯಲ್ಲೂ ಕಾಳಿದಾಸನಿಗಿರುವ ನೈಪುಣ್ಯವನ್ನಿಲ್ಲಿ ಕಾಣಬಹುದು.
ಶಿವನನ್ನು ತನ್ನ ಚೆಲುವಿನಿಂದ ಒಲಿಸಲಾಗದ ಪಾರ್ವತಿ ಉಗ್ರತಪವನ್ನು ಕೈಗೊಳ್ಳುತ್ತಾಳೆ. ಅದರ ವಿಸ್ತಾರವಾದ ವರ್ಣನೆ ಐದನೆಯ ಸರ್ಗದಲ್ಲಿ ಬರುತ್ತದೆ. ಮಹಾ ಮಹಾ ಋಷಿಗಳ ತಪಸ್ಸನ್ನೂ ಅವಳ ದೃಢ ವ್ರತ ಮೀರಿಸಿದೆ. ಕಡೆಗೆ ಶಿವನೇ ಅವಳ ಮನಃಶುದ್ಧಿಯನ್ನು ಪರೀಕ್ಷಿಸಲೆಂದು ವಟುವೇಷದಲ್ಲಿ ಬರುತ್ತಾನೆ. ಶಿವನ ಅಕಟವಿಕಟ ಸ್ವರೂಪವನ್ನೂ ಮನಬಂದಂತೆ ತೆಗಳುತ್ತಾನೆ. ಎಷ್ಟಾದರೂ ಪಾರ್ವತಿಯ ಮನೋನಿರ್ಧಾರ ಅಚಲವೇ ಎಂಬುದನ್ನು ಮನಗಂಡು ತನ್ನ ನಿಜರೂಪವನ್ನು ತೋರಿಸಿ ಅವಳನ್ನು ವರಿಸಲು ಹೊರಡುತ್ತಾನೆ. ಪಾರ್ವತಿಯ ಮನದಾಸೆ ಕೈಗೂಡುತ್ತದೆ.
ಲೋಕರೀತಿಯಂತೆ ಗುರುಹಿರಿಯರ ಆಶೀರ್ವಾದ ಪಡೆದು ಶಿವಪಾರ್ವತಿಯರು ವಿವಾಹವಾಗುವ ವರ್ಣನೆ ಆರು ಮತ್ತು ಏಳನೆಯ ಸರ್ಗಗಳ ವಿಷಯ. ಗೃಹಸ್ಥ ಜೀವನದ ಆದರ್ಶ ಮೌಲ್ಯಗಳನ್ನೆಲ್ಲ ಇಲ್ಲಿ ಕಾಳಿದಾಸ ಸುಂದರವಾಗಿ ಕಾವ್ಯರೂಪದಿಂದ ಚಿತ್ರಿಸಿದ್ದಾನೆ. ಈ ಭಾಗ ಕೂಡ ಅವನ ಪ್ರತಿಭೆಯ ನಿರ್ಮಾಣ ಕ್ಷಮತ್ವಕ್ಕೆ ಸೂಚಕವಾಗಿದೆ. ನಾಚುವ ನವವಧು, ಆಶೀರ್ವದಿಸುವ ಮುತ್ತೈದೆಯರು, ಎಲ್ಲರೂ ಮೆಚ್ಚುವ ವಿವಾಹ ವಿಧಿಕಲಾಪಗಳು-ಇವು ಇಂದೂ ನಮ್ಮ ಮನಸ್ಸನ್ನು ಸೆಳೆಯಬಲ್ಲವು.
ಶಯ್ಯಾಗೃಹದಲ್ಲಿ ನವಪ್ರಣಯಿಗಳ ಸುರತವಿಲಾಸದ ವರ್ಣನೆಗೆ ಇಡಿಯ ಎಂಟನೆ ಸರ್ಗ ಮೀಸಲಾಗಿದೆ. ದೇವತೆಗಳ ಶೃಂಗಾರವನ್ನೂ ಲೌಕಿಕ ಕಾಮಶಾಸ್ತ್ರಾನುಸಾರ ಇಲ್ಲಿ ವರ್ಣಿಸಲಾಗಿದ್ದು ಉಜ್ಜ್ವಲ ಅಲಂಕಾರಗಳ ಪ್ರಭೆಯಿಂದ ಅವನ್ನು ಬೆಳಗಿಸಲಾಗಿದೆ. ಹಿಂದಿನ ಲಾಕ್ಷಣಿಕರಲ್ಲಿ ಕೆಲವರು ಇದನ್ನು ಅಸಭ್ಯ ದೋಷವೆಂದು ಕುಂದಿಟ್ಟರೂ ಕಾಳಿದಾಸನ ಪ್ರತಿಭಾತಿಶಯದಿಂದ ದೋಷ ಮರೆಯಾಗಿದೆಯೆನ್ನಲು ಮರೆತಿಲ್ಲ.
ಶೃಂಗಾರರಸ ನಿರೂಪಣೆಯಲ್ಲಿ ಕಾಳಿದಾಸ ಎತ್ತಿದ ಕೈಯೆಂದು ಖ್ಯಾತಿಯಾಂತಿದ್ದಾನೆ. ಅವನ ಈ ವಿಖ್ಯಾತಿಗೆ ಕುಮಾರಸಂಭವ ಕೂಡ ಆಧಾರವಾಗಿದೆ. ದಿವ್ಯ ಸೌಂದರ್ಯದ ನಖಶಿಖಾಂತ ವರ್ಣನೆ, ಶೃಂಗಾರದ ವಿಪ್ರಲಂಭ ಹಾಗು ಸಂಭೋಗ ಮುಖಗಳ ಹೃದಯಸ್ಪರ್ಶಿಯಾದ ನಿರೂಪಣೆ, ತಪಸ್ಸೌಂದರ್ಯದ ಹಾಗು ಪರಮಾತ್ಮನ ಯೋಗಾನುಷ್ಠಾನದ ಮಾರ್ಮಿಕ ಪ್ರತಿಪಾದನೆ; ಹಾಗು ಎಲ್ಲಕ್ಕೂ ಮೇಲೆ ತಪಸ್ಸೌಂದರ್ಯದ, ಕಾಮದಹನದ ಸಾಂಕೇತಿಕಾರ್ಥಧ್ವನಿ, ಭಾರತೀಯ ಸಂಸ್ಕೃತಿಯ ತಿರುಳಾದ ಪುರುಷಾರ್ಥಗಳ ಉಜ್ಜ್ವಲ ಸಮನ್ವಯ ದೃಷ್ಟಿ, ಸಂವಾದಗಳಲ್ಲಿ ತಿಳಿಹಾಸ್ಯ ತಪ್ಪದ ನಾಟಕೀಯತೆ, ಪ್ರಕೃತಿಯ ವಿವಿಧ ಮುಖಗಳ ಭವ್ಯಶಬ್ದ ಚಿತ್ರ ರಚನೆ, ಉತ್ತಮ ಜೀವನದ ಮೀಮಂಸೆ, ಉಪಮೋತ್ಪ್ರೇಕ್ಷಾದಿಗಳ ಸಮುಚಿತ ಚಮತ್ಕಾರ-ಇವೆಲ್ಲವುಗಳಿಂದ ಭರಿತವಾಗಿರುವ ಕುಮಾರಸಂಭವ ಇಂದಿಗೂ ಓದುಗರನ್ನು ಆಕರ್ಷಿಸುತ್ತಿದೆಯೆಂದರೆ ಅತಿಶಯೋಕ್ತಿಯಾಗಲಾರದು.
ಕುಮಾರಸಂಭವದಲ್ಲಿ ಹದಿನೇಳು ಸರ್ಗಗಳು ಅಚ್ಚಾಗಿದ್ದರೂ ಮಲ್ಲಿನಾಥನೇ ಮೊದಲಾದ ಹಿಂದಿನವರ ವ್ಯಾಖ್ಯಾನಗಳು ಸಿಕ್ಕುವುದು ಮೊದಲ ಎಂಟು ಸರ್ಗಗಳಿಗೆ ಮಾತ್ರ. ಸಂಸ್ಕೃತ ಲಕ್ಷಣಕಾರರು ಕೂಡ 9ರಿಂದ 17ರ ವರೆಗಿನ ಸರ್ಗಗಳಿಂದ ಒಂದು ಉದಾಹರಣೆಯನ್ನು ಕೂಡ ಎತ್ತಿಕೊಂಡಿಲ್ಲ. ಇವನ್ನು ನೋಡಿದರೆ ಕಾಳಿದಾಸ ಮೊದಲ ಎಂಟು ಸರ್ಗಗಳನ್ನು ಮಾತ್ರ ಬರೆದಿರಬೇಕೆಂದು ಊಹಿಸಲಾಗಿದೆ. ಎಂಟನೆಯ ಸರ್ಗದಲ್ಲಿ ಪಾರ್ವತೀಪರಮೇಶ್ವರರ ಸಂಭೋಗ ವರ್ಣನೆ ಮಾತ್ರ ಇರುವುದರಿಂದ ಕುಮಾರಸ್ವಾಮಿಯ ಪ್ರತಾಪರ್ಣನೆಯನ್ನು ತಾರಕಾಸುರನ ವಧೆಯವರೆಗೆ ಮುಂದಿನ ಅಜ್ಞಾತ ಕವಿಯೊಬ್ಬ ಬರೆದು ಸೇರಿಸಿದಂತಿದೆ ಎಂಬುದು ವಿದ್ವಜ್ಜನರ ಅಭಿಪ್ರಾಯ
ಮಾಹಿತಿ ಆಧಾರ: ವಿಶ್ವಕೋಶ
Karthikeya
ಕಾಮೆಂಟ್ಗಳು