ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಲಕ್ಷ್ಮೀ


 ಜಯಲಕ್ಷ್ಮೀ ಶ್ರೀನಿವಾಸನ್


ಜಯಲಕ್ಷ್ಮೀ ಶ್ರೀನಿವಾಸನ್ ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಮಧ್ಯೆ ಸೇತುವೆಯಾಗಿ ಎರಡೂ ಭಾಷಿಗರಿಗೆ ಅಪಾರ ಸಾಹಿತ್ಯ ಮತ್ತು ಸಾಹಿತ್ಯ ವಿನಿಮಯವನ್ನು ತಂದವರು. 

ಜಯಲಕ್ಷ್ಮಿಯವರು ಕರೂರು ಜಿಲ್ಲೆಯ ವಾರಂಗಲ್ಲಲ್ಲಿ 1911ರ ಡಿಸೆಂಬರ್ 12ರಂದು ಜನಿಸಿದರು. ತಂದೆ ರಾಜಮಂತ್ರ ಪ್ರವೀಣ ಎ.ವಿ. ರಾಮನಾಥನ್ ಮೈಸೂರು ಸಂಸ್ಥಾನದ ಮೆಂಬರ್ ಆಫ್ ಕೌನ್ಸಿಲ್ ಆಗಿದ್ದವರು. ತಾಯಿ ಸೀತಾಲಕ್ಷ್ಮೀ.  ಇವರ ಮನೆಮಾತು ತಮಿಳಾದ್ದರಿಂದ ಮನೆಯಲ್ಲಿ ತರಿಸುತ್ತಿದ್ದ ತಮಿಳು ಪತ್ರಿಕೆಗಳಿಂದ ತಮಿಳು ಹಗೂ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಕಲಿತು ಪ್ರಾವೀಣ್ಯತೆ ಪಡೆದರು. 

ಜಯಲಕ್ಷ್ಮಿಯವರು ಚಿಕ್ಕ ವಯಸ್ಸಿನಲ್ಲಿಯೇ ಚಿಕ್ಕ ಚಿಕ್ಕ ಪದ್ಯಗಳನ್ನು, ಕಥೆಗಳನ್ನು ರಚಿಸತೊಡಗಿದ್ದು ತಮ್ಮ ಸಾಹಿತ್ಯಾಭಿಲಾಷೆಯನ್ನು ಪ್ರಕಟಿಸಿದ್ದರಿಂದ ತಂದೆ ತಾಯಿಯರು ಮಗಳಿಗೆ ಉತ್ತೇಜನ ನೀಡತೊಡಗಿದರು. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮದುವೆಯಾದದ್ದು ಐ.ಎ.ಎಸ್. ಅಧಿಕಾರಿಯಾಗಿ ಮೈಸೂರು ಸಂಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ. ಶ್ರೀನಿವಾಸನ್ ಅವರನ್ನು. ಪತಿಯ ಮನೆಯಲ್ಲಿಯೂ ಸಾಹಿತ್ಯ ಕೃಷಿಗೆ ದೊರೆತ ಪ್ರೋತ್ಸಾಹದಿಂದ ಬರವಣಿಗೆಯನ್ನು ಮುಂದುವರೆಸಿದರು. 

ಜಯಲಕ್ಷ್ಮಿ ಶ್ರೀನಿವಾಸನ್ ಅವರು ರಚಿಸಿದ ‘ಗ್ರಾಮೋದ್ಧಾರಕ ರಾಮಚಂದ್ರ’ ಎಂಬ ಕಾದಂಬರಿಯು ಹನುಮಂತೇಗೌಡ ಎಂಬುವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ‘ಅರ್ಥಸಾಧಕ ಪತ್ರಿಕೆ’ಯಲ್ಲಿ 1929ರಲ್ಲಿ ಪ್ರಕಟಗೊಂಡಿತು. ಇದಲ್ಲದೆ ಬೋಳಾರ ವಿಠಲರಾವ್ ಮತ್ತು ಹುರುಳಿ ಭೀಮರಾವ್‌ರವರು ಪ್ರಕಟಿಸುತ್ತಿದ್ದ ‘ಕಂಠೀರವ’ ಪತ್ರಿಕೆಯಲ್ಲಿ ಎರಡು ಕಾದಂಬರಿಗಳು ಹಾಗೂ ಹಲವಾರು ಸಣ್ಣ ಕಥೆಗಳು ಪ್ರಕಟಗೊಂಡವು. ಜೊತೆಗೆ ಪ್ರಜಾಮತ, ಜನವಾಣಿ, ಸುಬೋಧ, ಜೀವನ, ಸರಸ್ವತಿ, ಕೊರವಂಜಿ, ನಗುವನಂದ ಮುಂತಾದ ಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟವಾಗತೊಡಗಿದವು. 

ಜಯಲಕ್ಷ್ಮಿ ಶ್ರೀನಿವಾಸನ್ ಅವರಿಗೆ ತಮಿಳು ಭಾಷೆಯಲ್ಲೂ ಒಳ್ಳೆಯ ಪಾಂಡಿತ್ಯವಿದ್ದುದರಿಂದ ಕೆ.ಎಸ್. ವೆಂಕಟರಮಣಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಭಾರತರಮಣ’ ಹಾಗೂ ಕಲ್ಕಿ, ಆನಂದ ವಿಗಡನ್, ವಸಂತಂ, ಭಾರತ, ದೇವಿ, ಚಿಂತಾಮಣಿ, ಜಗನ್ಮೋಹಿನಿ, ಮಂಗೈ, ಕಲೈಮಗಳ್, ಉದಯ, ಕಾವೇರಿ, ಸ್ವದೇಶಿ ಮಿತ್ರನ್ ಮೊದಲಾದ ತಮಿಳು ಪತ್ರಿಕೆಗಳಿಗೂ ಬರೆಯತೊಡಗಿದರು. 

ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ 
ಕೊಂಡಿಯಾಗಿ ಸಾಹಿತ್ಯ ರಚನೆ ಮಾಡಿದ ಜಯಲಕ್ಷ್ಮಿಯವರು ಸಿ.ಕೆ. ವೆಂಕಟರಾಮಯ್ಯ, ಅ.ನ.ಕೃ., ಮಾಸ್ತಿ, ದೇವುಡು, ಜಿ.ಪಿ.ರಾಜರತ್ನಂ ಮುಂತಾದವರ ಕಥೆ, ಲೇಖನ, ಕಾದಂಬರಿಗಳನ್ನು ತಮಿಳಿಗೆ ಅನುವಾದಿಸಿ ಪ್ರಕಟಿಸಿದಂತೆ ತಮಿಳಿನಿಂದ ‘ಕಲಾವಿದನ ತ್ಯಾಗ’, 'ಬೇವಿನ ಮರದ ಬಂಗಲೆ' ಮತ್ತು ರಾಜಾಜಿಯವರ ಸಣ್ಣಕಥೆಗಳನ್ನು ಕನ್ನಡಕ್ಕೆ ತಂದರು. ಜೊತೆಗೆ ಇವರದೇ ಕೃತಿ ಗ್ರಾಮೋದ್ಧಾರಕ ರಾಮಚಂದ್ರ, ತಮಿಳಿನ ‘ರಾಮಚಂದ್ರನ್ ರುಕ್ಮಿಣಿ’ಯಾಗಿ ಮತ್ತು ‘ಪುಷ್ಪಹಾರ’ ಕಾದಂಬರಿಯು ತಮಿಳು ಹಾಗೂ ಕನ್ನಡದಲ್ಲೂ ಪ್ರಕಟಗೊಂಡಿವೆ. 

ಜಯಲಕ್ಷ್ಮಿಯವರು ರಚಿಸಿದ ಮಕ್ಕಳ ನಾಟಕಗಳನ್ನು ‘ಮಕ್ಕಳ ಮಂಟಪ’ದ ಸಂಪಾದಕರಾದ ಬಿ.ಎಸ್. ಪಾಂಡುರಂಗರಾವ್ ಮತ್ತು ‘ಸರಸ್ವತಿ’ ಪತ್ರಿಕೆಯ ಸಂಪಾದಕಿಯಾದ ಆರ್. ಕಲ್ಯಾಣಮ್ಮನವರು ಪ್ರಕಟಿಸಿದರು. ಇದನ್ನು ಓದಿದ ಬಿ.ಎಂ.ಶ್ರೀ. ಮತ್ತು ಗರಳಪುರಿ ಶಾಸ್ತ್ರಿ ಮುಂತಾದವರು ಮೆಚ್ಚಿ ಪ್ರೋತ್ಸಾಹ ನೀಡಿದರು. ಚಂಚಲೆ, ಸುಲೋಚನ, ಪರಿಣಯ, ಮೊಗ್ಗುವಾತ್ಸಲ್ಯ, ಪರಿಮಳೆ, ಪುಷ್ಪಹಾರ, ವಿಜಯಾ, ಪ್ರತಿಫಲ, ಗ್ರಾಮೋದ್ಧಾರಕ ರಾಮಚಂದ್ರ ಮೊದಲಾದ ಕಾದಂಬರಿಗಳು, ‘ಪರಿಣಯ’, ‘ಕುಮುದಿನಿ ಕೃಪಾಶಂಕರ’ ಎಂಬ ಎರಡು ನೀಳ್ಗತೆಗಳೂ, ‘ದೀಪಾವಳಿ ಮತ್ತು ಇತರ ಕಥೆಗಳು’ ಎಂಬ ಕಥಾಸಂಕಲನ; ‘ಸುಶೀಲೆ ಹಾಗೂ ಶಿಶು ಸಂರಕ್ಷಣೆ’ ಎಂಬ ಆರೋಗ್ಯ ಕುರಿತ ಪುಸ್ತಕ (ಇಂಡಿಯನ್ ರೆಡ್‌ಕ್ರಾಸ್‌ನಿಂದ ಪ್ರಕಟಿತ); ಮೂರು ಮುತ್ತುಗಳು, ಮಿಠಾಯಿ, ಮೋಹನ್, ಐಸ್‌ಕ್ರೀಂ, ಲೇಡಿ ಬೇಡನ್ ಪೊವೆಲ್ ಎಂಬ ಮಕ್ಕಳ ಕಥಾ ಸಂಕಲನಗಳು ಮತ್ತು ಯುರೋಪ್, ಅಮೆರಿಕಾ ಪ್ರವಾಸಾನುಭವದ ಅಮೆರಿಕ ಪ್ರವಾಸ ಮತ್ತು ನಾಕಂಡ ಜರ್ಮನಿ ಎಂಬ ಕೃತಿಗಳನ್ನು ಪ್ರಕಟಿಸಿದ್ದರು. ಅ.ನ.ಕೃ. ರವರ ಸಂಧ್ಯಾರಾಗ, ಮಂಗಳ ಸೂತ್ರ, ತಾಯಿ ಕರುಳು, ಕಣ್ಣೀರು, ಸಾಹಿತ್ಯ ಪತ್ನಿ ಮತ್ತು ಗೃಹಲಕ್ಷ್ಮಿ ಇವುಗಳನ್ನು ತಮಿಳಿಗೆ ಅನುವಾದಿಸಿದರು. ಇದಲ್ಲದೆ ಮಕ್ಕಳಿಗಾಗಿಯೇ ಹಲವಾರು ಕಥೆಗಳನ್ನು ಬರೆದು ಪ್ರಕಟಿಸಿದರು. 

ಜಯಲಕ್ಷ್ಮಿಯವರು ತಮಿಳು ಪತ್ರಿಕೆಗಳಾದ ಮಂಗೈ, ಚಿಂತಾಮಣಿ, ಜಗನ್ಮೋಹಿನಿ, ಪತ್ರಿಕೆಗಳ ಸಂಪಾದಕರುಗಳ ಅಪೇಕ್ಷೆಯ ಮೇರೆಗೆ ಮಹಿಳೆಯರಿಗಾಗಿಯೇ ನಳಪಾಕ, ಗೃಹ ನಿರ್ವಹಣೆ, ವೈಭವದ ಮನೆ ಮುಂತಾದ ಕೃತಿಗಳ ಜೊತೆಗೆ ಆರೋಗ್ಯದ ಬಗೆಗೂ ಕೃತಿ ರಚಿಸಿದರು. ವೈಭವದ ಮನೆ ಮುಂತಾದ ಕೃತಿಗಳ ಜೊತೆಗೆ ಆರೋಗ್ಯದ ಬಗೆಗೂ ಕೃತಿ ರಚಿಸಿದರು.

ಜಯಲಕ್ಷ್ಮೀ ಶ್ರೀನಿವಾಸನ್‌ರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಅತ್ಯುತ್ತಮ ಲೇಖಕಿ’ ಸನ್ಮಾನ, 1971ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಗೌರವ ಪ್ರಶಸ್ತಿ, ಮದರಾಸಿನ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ‘ಉತ್ತಮ ಮಹಿಳಾ ಸಾಹಿತಿ’ ಎಂಬ ಸನ್ಮಾನ, ಬೆಂಗಳೂರು ಆಕಾಶವಾಣಿಯಿಂದ ‘ಉತ್ತಮ ಲೇಖಕಿ’ ಸನ್ಮಾನ, 1994ರಲ್ಲಿ ಲಿಪಿ ಪ್ರತಿಷ್ಠಾನದಿಂದ ‘ಲಿಪಿ ಪ್ರಾಜ್ಞೆ ಪ್ರಶಸ್ತಿ’, ಹೈದರಾಬಾದಿನ ಅಖಿಲ ಭಾರತ ಮಕ್ಕಳ ಸಮ್ಮೇಳನದಲ್ಲಿ ಸನ್ಮಾನ, ತಿರುಕೋಯಿಲೂರ್ ತಪೋವನದ ಜ್ಞಾನಾನಂದ ಸ್ವಾಮಿಗಳಿಂದ ಸನ್ಮಾನ ಮತ್ತು ‘ವಿದ್ಯಾರತ್ನ’ ಬಿರುದು, 2000ದ ನವಂಬರ್‌ನಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ದಾನ ಚಿಂತಾಮಣಿ ಅತ್ತಿಮಬ್ಬೆ’ ಪ್ರಶಸ್ತಿ ಮುಂತಾದ ಹಲವಾರು ಗೌರವ, ಸನ್ಮಾನಗಳು ಸಂದಿದ್ದವು. 

ಜಯಲಕ್ಷ್ಮೀ ಶ್ರೀನಿವಾಸನ್ ಅವರು 2001ರ ಮಾರ್ಚ್ 3ರಂದು ಈ ಲೋಕವನ್ನಗಲಿದರು. 

On the birth anniversary of great writer Jayalakshmi Srinivasan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ