ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಈಡಾ ಸ್ಕಡರ್


 ಈಡಾ ಸೋಫಿಯಾ ಸ್ಕಡರ್


ಡಾ. ಈಡಾ ಸೋಫಿಯಾ ಸ್ಕಡರ್ ಮಹಿಳೆಯರು ಆಪ್ತ ವೈದ್ಯಕೀಯ ಶುಶ್ರೂಷೆ ಇಲ್ಲದೆ ಅಸುನೀಗುತ್ತಿದ್ದುದನ್ನು ಕಂಡು, ಮರುಗಿ ಅದಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ದಿವ್ಯಚೇತನ.  1918ರಲ್ಲಿ, ಅವರು ಪ್ರಸಿದ್ಧ ವೆಲ್ಲೂರಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಿದರು. 

ಈಡಾ ಸೋಫಿಯಾ ಸ್ಕಡರ್ 1870ರ ಡಿಸೆಂಬರ್ 9ರಂದು ರಾಣಿಪೇಟ್ ಎಂಬಲ್ಲಿ ಜನಿಸಿದರು. ತಂದೆ ಡಾ. ಜಾನ್ ಸ್ಕಡರ್. ತಾಯಿ  ಸೋಫಿಯಾ ನೀ ವೆಲ್ಡ್.  ಅವರ ಅಜ್ಜ ರೆವರೆಂಡ್ ಡಾ. ಜಾನ್ ಸ್ಕಡರ್ ಸೀನಿಯರ್  ಅಮೆರಿಕದ ಸುಧಾರಿತ ಚರ್ಚ್‌ನ ಸದಸ್ಯರಾಗಿದ್ದರು. 

ಹುಟ್ಟಿನಿಂದ ಭಾರತದಲ್ಲಿ ಬೆಳೆದ ಈಡಾ ಕ್ಷಾಮ, ಬಡತನ ಮತ್ತು ರೋಗಗಳಿಗೆ ಸಾಕ್ಷಿಯಾಗಿದ್ದರು. ಡ್ವೈಟ್ ಮೂಡಿ ಅವರು ಮ್ಯಾಸಚೂಸೆಟ್ಸ್‌ನಲ್ಲಿರುವ ತಮ್ಮ ನಾರ್ತ್‌ಫೀಲ್ಡ್ ಸೆಮಿನರಿಯಲ್ಲಿ ಅಧ್ಯಯನ ಮಾಡಲು ಈಕೆಯನ್ನು ಆಹ್ವಾನಿಸಿದರು. ಅಲ್ಲಿ ಈಕೆ ತಮಾಷೆ ಮಾತಿಗೆ ಖ್ಯಾತರಾಗಿದ್ದರು.  

ಈಡಾ ಮದುವೆಯಾಗಿ ಅಮೆರಿಕದಲ್ಲಿ ಸಂಸಾರಸ್ಥರಾಗಿ ಸುಖಬದುಕನ್ನು ನಡೆಸುವ ಆಶಯ ಹೊಂದಿದ್ದರು.  1890ರಲ್ಲಿ, ಈಡಾ ತನ್ನ ತಾಯಿ ಮದ್ರಾಸ್ ಪ್ರಾಂತ್ಯದ ತಿಂಡಿವನಂನಲ್ಲಿರುವ ಮಿಷನ್ ಬಂಗಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ,  ಭಾರತಕ್ಕೆ ಬರಬೇಕಾಯಿತು. ಒಂದು ದಿನ ಈಡಾ, ಒಂದೇ ರಾತ್ರಿ ಮೂವರು ಮಹಿಳೆಯರು ಸಾವಿಗೆ ಈಡಾಗಿದ್ದನ್ನು ಕಂಡರು.  ಈ ಘಟನೆ ಆಕೆಯ ಜೀವನದ ಕುರಿತಾದ ಚಿಂತನೆಯ ದಿಕ್ಕನ್ನೇ  ಬದಲಿಸಿತು.  

ಅಂದಿನ ದಿನಗಳಲ್ಲಿ ಮಹಿಳೆಯರು ಹೆರಿಗೆಯ ಸಮಯದಲ್ಲಿ ಉಂಟಾಗುವ ವೈದ್ಯಕೀಯ ಸಮಸ್ಯೆಗಳಿಗೆ ಸಿಲುಕಿ ಸಾವನ್ನಪ್ಪುವುದು ಸರ್ವೇ ಸಾಮಾನ್ಯವಾಗಿ ಹೋಗಿತ್ತು.  ವಿಧಿಯ ಬರಹವಿದು ಎಂದು ಒಪ್ಪಿಕೊಂಡು ಬದುಕುವ ಅನಿವಾರ್ಯತೆ ಸ್ತ್ರೀಯರದಾಗಿತ್ತು. 

ಹೆರಿಗೆ ಸಮಯದಲ್ಲಿ ಆಘಾತಕ್ಕೆ ಸಿಲುಕುತ್ತಿದ್ದ ತಮ್ಮಂತಹ ಮಹಿಳೆಯರಿಗೆ ಸಹಾಯ ಮಾಡಲು ಸಾಧ್ಯವಾಗದೆ ವೇದನೆ ಅನುಭವಿಸುತ್ತಾ,  ತಾವೂ ಭಯಭೀತರಾಗಿ ಬದುಕುತ್ತಿದ್ದ ಅಂದಿನ ಮಹಿಳೆಯರ ಸ್ಥಿತಿ ಈಡಾ ಅವರನ್ನು ದಂಗುಬಡಿಸಿತು.  ಈ ಮಹಿಳೆಯರಾದರೋ ತಮ್ಮ ಸಾಂಪ್ರದಾಯಿಕ ಪದ್ಧತಿಗಳಿಂದಾಗಿ ಪುರುಷ ವೈದ್ಯರಿಂದ ಚಿಕಿತ್ಸೆ ಪಡೆಯಲು ಬಯಸುತ್ತಿರಲಿಲ್ಲ.  ಅಥವಾ ಅಂದಿನ ಸಮಾಜಕ್ಕೆ ಅದು ಸಹ್ಯವಾಗಿರಲಿಲ್ಲ ಎಂದರೂ ಸರಿಯೇ. ಅಂತಹ ಪರಿಸ್ಥಿತಿಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲು ಮಹಿಳಾ ಸ್ತ್ರೀರೋಗ ತಜ್ಞರಿರಲಿ, ಸಾಮಾನ್ಯ ಮಹಿಳಾ ವೈದ್ಯರೂ ಇಲ್ಲದಿದ್ದ ಕಾಲದಲ್ಲಿ, ತೊಂದರೆಗೊಳಗಾದ  ಮಹಿಳೆಯರು ಸರಿಯಾಗಿ ಚಿಕಿತ್ಸೆ ಸಾಧ್ಯವೇ ಇಲ್ಲದೆ ಸಾವನ್ನಪ್ಪುತ್ತಿದ್ದರು. 

ಮಹಿಳಾ ವೈದ್ಯರ ಕೊರತೆಯಿಂದ ತನ್ನ ಕಣ್ಣೆದುರಲ್ಲೇ ಮಹಿಳೆಯರು ಸಾವಿಗೀಡಾಗುತ್ತಿದ್ದುದನ್ನು ನೋಡಿ ನೊಂದ  ಈಡಾ ಸೋಫಿಯಾ ಸ್ಕಡರ್ ಅವರ ಆಂತರ್ಯದಲ್ಲಿ, ಭಾರತದ ಮಹಿಳೆಯರಿಗೆ ಸಹಾಯ ಮಾಡಲೆಂದೇ ದೇವರು ತನ್ನನ್ನು ಮಹಿಳಾ ವೈದ್ಯೆಯಾಗಬೇಕೆಂದು ಬಯಸುತ್ತಿದ್ದಾನೆ ಎಂಬ ಭಾವ ಮೂಡಿತು. ಈ ದೆಸೆಯಿಂದಾಗಿ ಆಕೆ ಎಂದಿಗೂ ಮದುವೆಯಾಗದೆ,  ತಮ್ಮ ಧ್ಯೇಯವನ್ನು ಪೂರೈಸಲು ಜೀವನದುದ್ದಕ್ಕೂ ಒಂಟಿಯಾಗೇ ನಡೆದರು.

ತಮ್ಮ ಉದ್ದೇಶ ಈಡೇರಿಕೆಗಾಗಿ ನ್ಯೂಯಾರ್ಕ್ ನಗರದ ಕಾರ್ನೆಲ್ ವೈದ್ಯಕೀಯ ಕಾಲೇಜಿಗೆ ಸೇರಿದ ಈಡಾ ಸೋಫಿಯಾ ಸ್ಕಡರ್ 1899ರಲ್ಲಿ ವೈದ್ಯಕೀಯ ಪದವಿ ಗಳಿಸಿದರು. ಅಲ್ಲಿಯೂ ತನ್ನ ವಿದ್ಯಾರ್ಥಿಗಳ ಮೊದಲ ತಂಡದಲ್ಲಿ ಮಹಿಳೆಯರನ್ನೇ  ವೈದ್ಯಕೀಯ ವಿದ್ಯಾರ್ಥಿಗಳಾಗಿ ಆರಿಸಿಕೊಂಡರು. ನಂತರ ಭಾರತಕ್ಕೆ ಹಿಂತಿರುಗಿದ ಆಕೆ ಮ್ಯಾನ್‌ಹ್ಯಾಟನ್‌ನ ಬ್ಯಾಂಕರ್ ಶ್ರೀ ಷೆಲ್‌ ಎಂಬಾತ ತನ್ನ ಹೆಂಡತಿಯ ಸ್ಮರಣಾರ್ಥವಾಗಿ ನೀಡಿದ 10,000 ಪೌಂಡುಗಳ ದಾನವನ್ನು ಪಡೆದುಕೊಂಡರು.  ಈ ಹಣದಿಂದ ಮದ್ರಾಸ್‌ನಿಂದ 75 ಮೈಲು ದೂರದಲ್ಲಿರುವ ವೆಲ್ಲೂರಿನಲ್ಲಿ ಮಹಿಳೆಯರಿಗಾಗಿ ಒಂದು ಪುಟ್ಟ ವೈದ್ಯಕೀಯ ಔಷಧಾಲಯ ಮತ್ತು ಕ್ಲಿನಿಕ್ ಅನ್ನು ಪ್ರಾರಂಭಿಸಿದರು. 1900 ವರ್ಷದಲ್ಲಿ ಆಕೆ ಭಾರತಕ್ಕೆ ಬಂದ ಸ್ವಲ್ಪ ಸಮಯದಲ್ಲೇ ಆಕೆಯ ತಂದೆ ನಿಧನರಾದರು. ಎರಡು ವರ್ಷಗಳ ಅವಧಿಯಲ್ಲಿ  ಈಡಾ ಸುಮಾರು 5,000 ರೋಗಿಗಳಿಗೆ ಚಿಕಿತ್ಸೆ ನೀಡಿದರು.

ಈಡಾ 1902ರಲ್ಲಿ ಮೇರಿ ಟೇಬರ್ ಶೆಲ್ ಆಸ್ಪತ್ರೆಯನ್ನು ತೆರೆದರು. ಮಹಿಳೆಯರಿಗೆ ಉತ್ತಮ ಆರೋಗ್ಯವನ್ನು ತರಲು ತಮ್ಮ ಇಚ್ಛೆಯಲ್ಲಿ ದೃಢ ಹೆಜ್ಜೆ ಇಡಲು ಬಯಸಿದ ಹುಡುಗಿಯರಿಗೆ ಮಾತ್ರ ವೈದ್ಯಕೀಯ ಶಾಲೆಯನ್ನು ತೆರೆಯಲು ಈಕೆ ನಿರ್ಧರಿಸಿದರು. ಈಕೆ  ಹೆಚ್ಚಂದರೆ ಮೂರು ಮಹಿಳಾ ಅರ್ಜಿದಾರರನ್ನು ಪಡೆದರೆ ಹೆಚ್ಚು ಎಂದು ಕುಹಕವಾಡಿದವರು ಸಹಸ್ರಾರು ಮಂದಿ. ಇದಕ್ಕೆ ವ್ಯತಿರಿಕ್ತವಾಗಿ, ಈಡಾ  1918ರ ಮೊದಲ ವರ್ಷವೇ 151 ಅರ್ಜಿಗಳನ್ನು ಪಡೆದರು. ಮುಂದೆ ಬರುತ್ತಿದ್ದ ಅನೇಕ ಅರ್ಜಿಗಳನ್ನು ಪರಿಗಣಿಸುವುದೇ ಕಷ್ಟಸಾಧ್ಯ ಎಂಬ ವಾತಾವರಣ ನಿರ್ಮಾಣಗೊಂಡಿತು. ಮೊದಲಿಗೆ, ಅಮೆರಿಕಾದಲ್ಲಿನ ರಿಫಾರ್ಮ್ಡ್ ಚರ್ಚ್ ಮಾತ್ರಾ ಈಡಾ ಅವರ ವೆಲ್ಲೂರ್ ಶಾಲೆಗೆ ಬೆಂಬಲವಾಗಿತ್ತು.  ಈಡಾ ಅವರು ಸಹಶಿಕ್ಷಣ ಜಾರಿಗೆ ತರಲು ಒಪ್ಪಿಕೊಂಡ ನಂತರ, 40 ಮಿಷನ್‌ಗಳು ಇದಕ್ಕೆ ಬೆಂಬಲವನ್ನು ನೀಡಿದವು.

1928ರಲ್ಲಿ, ವೆಲ್ಲೂರಿನ ಬಗಾಯಂನಲ್ಲಿ 200 ಎಕರೆಗಳಲ್ಲಿ "ಹಿಲ್‌ಸೈಟ್" ಮೆಡಿಕಲ್ ಸ್ಕೂಲ್ ಕ್ಯಾಂಪಸ್‌ ನಿರ್ಮಾಣಕ್ಕೆ ಆರಂಭ ದೊರಕಿತು. ಮಹಾತ್ಮ ಗಾಂಧಿ ಅವರೂ ಇವರ ವೈದ್ಯಕೀಯ ಶಾಲೆಗೆ ಭೇಟಿ ನೀಡಿದರು. ಕಾಲೇಜು ಮತ್ತು ಆಸ್ಪತ್ರೆಗಾಗಿ ನಿಧಿಯನ್ನು ಸಂಗ್ರಹಿಸಲು ಈಡಾ  ಹಲವಾರು ಬಾರಿ ಅಮೆರಿಕಕ್ಕೆ ಪ್ರಯಾಣಿಸಿದರು. 1945ರಲ್ಲಿ ಕಾಲೇಜನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ತೆರೆಯಲಾಯಿತು. 

2003ರ ವೇಳೆಗೆ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಸೆಂಟರ್ 2000 ಹಾಸಿಗೆಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಆಸ್ಪತ್ರೆ ಎನಿಸಿತು.  ಅದು ಭಾರತದ ಪ್ರಧಾನ ವೈದ್ಯಕೀಯ ಕಾಲೇಜುಗಳಲ್ಲಿ ಒಂದೆನಿಸಿದೆ.

ಈಡಾ ಸ್ಕಡರ್ 1953ರಲ್ಲಿ ತಮ್ಮ 82ನೇ  ವಯಸ್ಸಿನಲ್ಲಿ ಒಂದು ದಿನ ಕೊಡೈಕೆನಾಲ್‌ನಲ್ಲಿನ ತಮ್ಮ "ಹಿಲ್‌ಟಾಪ್" ಬಂಗಲೆಯಲ್ಲಿ  ತಮಗೆ ಬಂದಿದ್ದ ಪತ್ರಗಳು ಮತ್ತು ಟೆಲಿಗ್ರಾಮ್‌ಗಳ ರಾಶಿಯನ್ನು ನೋಡುತ್ತಿದ್ದರು. ಆಕೆಯ ಹೆಸರು ಭಾರತದಲ್ಲಿ ಎಷ್ಟು ಪ್ರಸಿದ್ಧವಾಗಿತ್ತು ಅಂದರೆ, ಕೇವಲ "ಡಾ. ಈಡಾ, ಇಂಡಿಯಾ" ಎಂದು ಸಂಬೋಧಿಸಿದ ಪತ್ರವೂ ಸಹಾ ಅವರನ್ನು ತಲುಪಿತ್ತು. 1952ರಲ್ಲಿ ಐದು ಅತ್ಯುತ್ತಮ ಮಹಿಳಾ ವೈದ್ಯರಲ್ಲಿ ಒಬ್ಬರಾಗಿ ನ್ಯೂಯಾರ್ಕ್ ಐ ಮತ್ತು ಇಯರ್ ಇನ್‌ಫರ್ಮರಿಯಿಂದ ಎಲಿಜಬೆತ್ ಬ್ಲ್ಯಾಕ್‌ವೆಲ್ ಗೌರವವನ್ನು ಗಳಿಸಿದ್ದಕ್ಕಾಗಿ ಪ್ರಪಂಚದಾದ್ಯಂತದ ಸ್ನೇಹಿತರು ಅವಳನ್ನು ಅಭಿನಂದಿಸುತ್ತಿದ್ದರಿಂದ ಅವರ ಆ ಸಮಯದ  ಅಂಚೆ ಸಾಮಾನ್ಯಕ್ಕಿಂತ ಹೆಚ್ಚು ಭಾರವಾಗಿತ್ತು.

ಈಡಾ ಸ್ಕಡರ್ 1960ರ ಮೇ 23ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. 

On the birth anniversary of great human beingDr. Ida Sophia Scudder

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ